ಕನ್ನಡ ಸುದ್ದಿ  /  Lifestyle  /  World Parkinson's Day 2023: Parkinson's Problems On Youth; Symptoms And Treatment -Rst

World Parkinson's Day 2023: ಯುವಕರನ್ನೂ ಕಾಡುವ ಪಾರ್ಕಿನ್ಸನ್ಸ್‌; ಇದರ ರೋಗಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆ ಇಲ್ಲಿದೆ ಮಾಹಿತಿ

ಪಾರ್ಕಿನ್ಸನ್ಸ್‌ ಸಮಸ್ಯೆ 50ವರ್ಷಕ್ಕಿಂತ ಕಡಿಮೆ ಇರುವವರಲ್ಲೂ ಕಾಣಿಸುತ್ತಿದೆ. ಆದರೆ ರೋಗಿಗಳ ಪ್ರಮಾಣ ಕಡಿಮೆ ಇದೆ. ಹಾಗಾದರೆ ಯುವಜನರಲ್ಲಿ ಈ ಸಮಸ್ಯೆ ಕಾಣಿಸಲು ಕಾರಣವೇನು? ರೋಗಲಕ್ಷಣಗಳನ್ನು ಅರಿಯುವುದು ಹೇಗೆ? ಚಿಕಿತ್ಸಾ ಮಾರ್ಗವೇನು? ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಯುವಕರನ್ನು ಕಾಡುವ ಪಾರ್ಕಿನ್ಸನ್ಸ್‌
ಯುವಕರನ್ನು ಕಾಡುವ ಪಾರ್ಕಿನ್ಸನ್ಸ್‌

ಪಾರ್ಕಿನ್ಸನ್ಸ್‌ ಸಮಸ್ಯೆ ಸಾಮಾನ್ಯವಾಗಿ ವಯಸ್ಕರಲ್ಲಿ ಕಾಣಿಸುತ್ತದೆ. ಈ ಸಮಸ್ಯೆಯು 60 ವರ್ಷ ಮೇಲ್ಪಟ್ಟವರನ್ನು ಹೆಚ್ಚು ಬಾಧಿಸುತ್ತದೆ ಎನ್ನಲಾಗುತ್ತದೆ. ನಡುಕ, ಕಂಪಿಸುವುದು, ನಡೆದಾಡಲು ಕಷ್ಟವಾಗುವುದು, ಸಂವಹನದ ಸಮಸ್ಯೆಯಂತಹ ರೋಗಲಕ್ಷಣಗಳು ವಯಸ್ಸಾದ ಮೆದುಳಿನ ಸಂಕೇತಗಳು ಎಂದು ಪರಿಗಣಿಸಲಾಗುತ್ತದೆ.

ಆದರೆ 50ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲೂ ಕಾಣಿಸಬಹುದು. ಅಲ್ಲದೆ ಅಂತಹವರಲ್ಲಿ ಆರಂಭಿಕ ರೋಗಲಕ್ಷಣಗಳು ಇರಬಹುದು. ಪಾರ್ಕಿನ್ಸನ್ಸ್‌ ಸಮಸ್ಯೆ ಇರುವ ಯುವಕರಲ್ಲಿ ವಯಸ್ಸಾದವರಲ್ಲಿ ಕಾಣಿಸುವ ನಡವಳಿಕೆಯ ಬದಲಾವಣೆ ಹಾಗೂ ನೆನಪಿನ ಶಕ್ತಿ ಕುಂಠಿತವಾಗುವುದು ಇಂತಹ ಸಮಸ್ಯೆ ಇರುವುದಿಲ್ಲ. ನಡುಕ, ಚಲನೆಯಲ್ಲಿ ನಿಧಾನವಾಗುವುದು, ಕಂಪಿಸುವುದು, ಮುಖಭಾವದಲ್ಲಿನ ವ್ಯತ್ಯಾಸ ಹಾಗೂ ಮಾತಿನ ಬದಲಾವಣೆಗಳು ಯುವಜನರಲ್ಲಿ ಕಾಣಿಸುವ ಪಾರ್ಕಿನ್ಸನ್ಸ್‌ ರೋಗ ಲಕ್ಷಣಗಳಾಗಿವೆ.

ಏನಿದು ಪಾರ್ಕಿನ್ಸನ್ಸ್‌ ಸಮಸ್ಯೆ ಹಾಗೂ ಇದು ಯುವಜನರ ಮೇಲೆ ಯಾವ ಕಾರಣಕ್ಕೆ ಪರಿಣಾಮ ಬೀರುತ್ತಿದೆ?

ʼಪಾರ್ಕಿನ್ಸನ್ಸ್‌ ಎನ್ನುವುದು ವಯಸ್ಸಾದಂತೆ ಕಾಣಿಸುವ ಮೆದುಳಿಗೆ ಸಂಬಂಧಿಸಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು 50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಲ್ಲೂ ಕಾಣಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಪಾರ್ಕಿನ್ಸನ್ಸ್‌ ಸಮಸ್ಯೆ ಎದುರಿಸುತ್ತಿರುವ ಯುವಕರ ಅಥವಾ 50ವರ್ಷಕ್ಕಿಂತ ಕಡಿಮೆ ಇರುವವರ ಸಂಖ್ಯೆ ಶೇ 10ಕ್ಕಿಂತಲೂ ಕಡಿಮೆ ಇದೆ. ಇವರಲ್ಲಿ ಕೆಲವರಲ್ಲಿ ಅನುವಂಶಿಕ ಸಂಬಂಧ ಇರಬಹುದು. ಆದರೂ ಹೆಚ್ಚಿನ ರೋಗಿಗಳು ತಮ್ಮ ರೋಗಲಕ್ಷಣಗಳಿಗೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ಹೊಂದಿಲ್ಲದೇ ಇರಬಹುದು, ಇದನ್ನು ʼಇಡಿಯೋಪಥಿಕ್‌ʼ ಎಂದು ಕರೆಯಲಾಗುತ್ತದೆʼ ಎನ್ನುತ್ತಾರೆ ನೋಯ್ಡಾದ ಫೋರ್ಟಿಸ್‌ ಆಸ್ಪತ್ರೆಯ ನರರೋಗ ವಿಭಾಗದ ಮುಖ್ಯಸ್ಥ ಡಾ. ಕಪಿಲ್‌ ಸಿಂಘಾಲ್‌.

ʼಪಾರ್ಕಿನ್ಸನ್ಸ್‌ ಎನ್ನುವುದು ನರಕ್ಕೆ ಸಂಬಂಧಿತ ಸಮಸ್ಯೆಯಾಗಿದ್ದು ಇದು ಯಾವುದೇ ಕ್ಷಣದಲ್ಲಿ ಹಾಗೂ ಯಾವುದೇ ವಯಸ್ಸಿನಲ್ಲಿ ಕಾಣಿಸಬಹುದು. ಅದಾಗ್ಯೂ ಈ ಸಮಸ್ಯೆ ವಯಸ್ಸಾದವರಲ್ಲಿ ಕಾಣಿಸುವುದು ಹೆಚ್ಚು. 50ವರ್ಷಕ್ಕಿಂತ ಕಡಿಮೆ ಇರುವವರಲ್ಲಿ ಸುಮಾರು ಶೇ 4ರಷ್ಟು ಮಂದಿಯಲ್ಲಿ ಪಾರ್ಕಿನ್ಸನ್ಸ್‌ ರೋಗನಿರ್ಣಯವಾಗಿದೆʼ ಎನ್ನುತ್ತಾರೆ ಮುಂಬೈನ ಅಪೋಲೊ ಆಸ್ಪತ್ರೆಯ ನರರೋಗತಜ್ಞ ಡಾ. ವಿಶಾಲ್‌ ಚಾಪೆಲ್.‌

ಯುವ ಜನರಲ್ಲಿ ಬಾಧಿಸುವ ಪಾರ್ಕಿನ್ಸನ್ಸ್ ಸಮಸ್ಯೆಯ ಲಕ್ಷಣಗಳು

ಸಾಮಾನ್ಯವಾಗಿ ಪಾರ್ಕಿನ್ಸನ್ಸ್‌ ಸಮಸ್ಯೆ ಇರುವವರಲ್ಲಿ ಕಂಪನ ಹಾಗೂ ಕೈ ನಡುಕದಿಂದ ಆರಂಭವಾಗುತ್ತದೆ. ನಂತರ ಸ್ವರದಲ್ಲಿನ ವ್ಯತ್ಯಾಸ, ದೈಹಿಕ ಚಟುವಟಿಕೆಗಳಲ್ಲಿ ನಿಧಾನವಾಗುವುದನ್ನು ಗಮನಿಸಬಹುದು.

ವ್ಯಕ್ತಿಯೊಬ್ಬ ದಿನದಲ್ಲಿ ಹಲವು ಬಾರಿ ಸ್ನಾನ, ಬಟ್ಟೆ ಬದಲಿಸುವುದು, ತಿನ್ನುವುದು, ನಡಿಗೆಯಲ್ಲಿ ನಿಧಾನವಾಗುವುದು, ನಡೆಯುವಾಗ ಕಾಲು ಎಳೆಯುವುದು ಹಾಗೂ ಸಮತೋಲನವಿಲ್ಲದಿರುವುದು ಕೂಡ ಈ ರೋಗಲಕ್ಷಣದ ಸಂಕೇತಗಳಾಗಿವೆ.

ʼದೇಹವು ಆರೋಗ್ಯದಿಂದಿದ್ದು, ವ್ಯಕ್ತಿ ಹಾಸಿಗೆಯಲ್ಲಿ ಮಲಗಿದ್ದಾಗ ತಿರುಗಲು ಕಷ್ಟವಾಗುವಂತಹ ತೊಂದರೆಗಳನ್ನು ಎದುರಿಸಬಹುದು. ಕ್ರಮೇಣ ರೋಗ ಉಲ್ಬಣಗೊಳ್ಳುತ್ತಿದ್ದಂತೆ, ರೋಗಲಕ್ಷಣಗಳು ದೇಹದ ಎರಡೂ ಬದಿಗಳಲ್ಲಿ ಕಾಣಬಹುದಾಗಿದೆʼ ಎನ್ನುತ್ತಾರೆ ಡಾ. ಸಿಂಘಾಲ್‌.

ಡಾ. ವಿಶಾಲ್‌ ಚಾಫೆಲ್‌ ವಯಸ್ಕರಲ್ಲಿ ಕಾಣಿಸುವ ಪಾರ್ಕಿನ್ಸನ್ಸ್‌ ರೋಗಲಕ್ಷಣಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ನಡುಕ: ಇದು ಪಾರ್ಕಿನ್ಸನ್ಸ್‌ ಸಮಸ್ಯೆಯ ಆರಂಭಿಕ ಲಕ್ಷಣ. ಇದು ಮೊದಲು ಕೈ ಅಥವಾ ಕಾಲಿನಿಂದ ಆರಂಭವಾಗುತ್ತದೆ. ಅಂಗಾಂಗವು ವಿಶ್ರಾಂತಿಯಲ್ಲಿದ್ದಾಗಲೂ ಇವು ಹೆಚ್ಚು ಗಮನಕ್ಕೆ ಬರುತ್ತವೆ.

ಚಲನೆಯಲ್ಲಿ ನಿಧಾನವಾಗುವುದು: ಇದನ್ನು ಬ್ರಾಡಿಕಿನೇಶಿಯಾ ಎಂದೂ ಕರೆಯುತ್ತಾರೆ. ಉಡುಪು ಧರಿಸುವಾಗ ಹಾಗೂ ಹಲ್ಲುಜ್ಜುವಾಗ ಬಹಳ ಸಮಯ ತೆಗೆದುಕೊಳ್ಳುವುದು ಈ ಸಮಸ್ಯೆಯ ಲಕ್ಷಣಗಳಾಗಿರಬಹುದು.

ಬಿಗಿ ಹಿಡಿದಂತಾಗುವುದು: ಪಾರ್ಕಿನ್ಸನ್ಸ್‌ ಸಮಸ್ಯೆಯಿಂದ ಸ್ನಾಯುಗಳ ಬಿಗಿತ ಉಂಟಾಗಬಹುದು. ವಿಶೇಷವಾಗಿ ತೋಳುಗಳು, ಕಾಲುಗಳು ಮತ್ತು ಕುತ್ತಿಗೆಯಲ್ಲಿ ಬಿಗಿತ ಉಂಟಾಗಬಹುದು.

ಭಂಗಿ ಅಸ್ಥಿರತೆ: ಇದು ಸಮತೋಲನ ಮತ್ತು ಸಮನ್ವಯದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಬೀಳದಂತೆ ನಡೆಯಲು ಹಾಗೂ ನಿಲ್ಲಲ್ಲು ಕಷ್ಟವಾಗುತ್ತದೆ.

ಮುಖಭಾವದಲ್ಲಿನ ಬದಲಾವಣೆ: ಈ ಸಮಸ್ಯೆಯು ಮುಖಭಾವದಲ್ಲಿನ ಬದಲಾವಣೆಗೂ ಕಾರಣವಾಗಬಹುದು. ನಮ್ಮ ಭಾವನೆಗಳನ್ನು ತೋರ್ಪಡಿಸಲು ಕಷ್ಟವಾಗಬಹುದು.

ಮಾತಿನಲ್ಲಿ ವ್ಯತ್ಯಯ: ಪಾರ್ಕಿನ್ಸನ್ಸ್‌ ಸಮಸ್ಯೆಯಿಂದ ಮಾತಿನಲ್ಲಿ ವ್ಯತ್ಯಾಸ ಉಂಟಾಗಬಹುದು. ಅಸ್ಪಷ್ಟ, ಹಿಂಜರಿಕೆಯ ಮಾತು ಅಥವಾ ಧ್ವನಿ ಮೃದುವಾಗುವುದು.

ಮೈಕ್ರೋಗ್ರಾಫಿಯಾ: ಕೈಬರಹದಲ್ಲಿ ಬದಲಾವಣೆಯಾಗುವುದೂ ಕೂಡ ಈ ರೋಗದ ಲಕ್ಷಣವಾಗಿದೆ.

ಯುವಕರಲ್ಲಿ ಕಾಣಿಸುವ ಪಾರ್ಕಿನ್ಸನ್ಸ್‌ ಸಮಸ್ಯೆಗೆ ಚಿಕಿತ್ಸೆ

ಪಾರ್ಕಿನನ್ಸ್‌ ರೋಗಕ್ಕೆ ತುತ್ತಾದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡುವ ಚಿಕಿತ್ಸಾ ವಿಧಾನವೂ ಭಿನ್ನವಾಗಿದೆ. ಆದರೆ ಇದು ಪರಿಣಾಮಕಾರಿಯಾಗಿದೆ. ಡೋಪಮೈನ್‌ ಅನ್ನು ಬದಲಿಸುವ ಔಷಧಿಗಳು (ಮೌಖಿಕ) ಚಿಕಿತ್ಸೆಯ ಮುಖ್ಯ ಆಧಾರವಾಗಿದೆ ಹಾಗೂ ರೋಗಿ ಅವಶ್ಯಕತೆಗೆ ಅನುಗುಣವಾಗಿ ಚಿಕಿತ್ಸೆಯನ್ನು ವಿನ್ಯಾಸಗೊಳಿಸಲಾಗಿದೆ.

ಚಲನೆ ಮತ್ತು ಚಟುವಟಿಕೆಯನ್ನು ಸುಧಾರಿಸಲು ಯುವ ರೋಗಿಗಳಲ್ಲಿ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಯ ಪಾತ್ರವು ಹೆಚ್ಚು ಮುಖ್ಯವಾಗಿದೆ. ಪಾರ್ಕಿನ್ಸನ್ ರೋಗಿಗಳಿಗೆ ಮ್ಯಾರಥಾನ್ ಓಡಲು, ಕ್ರೀಡಾ ಚಟುವಟಿಕೆಗಳಲ್ಲಿ ಮತ್ತು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಪಾರ್ಕಿನ್ಸನ್ಸ್‌ ಪ್ರಗತಿಶೀಲ ಕಾಯಿಲೆಯಾಗಿದೆ. ಔಷಧಿಯಲ್ಲಿನ ಪ್ರಗತಿಗಳು, ಆಯ್ದ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ಆಯ್ಕೆಗಳು (ಬ್ರೈನ್ ಪೇಸ್‌ಮೇಕರ್) ಮತ್ತು ರೋಗದ ತಿಳುವಳಿಕೆಯೊಂದಿಗೆ ರೋಗಿಗಳಲ್ಲಿ ಸಾಮಾನ್ಯ ಜೀವನವನ್ನು ಸಾಧಿಸಬಹುದು ಎನ್ನುತ್ತಾರೆ ಡಾ. ಸಿಂಘಾಲ್‌.

ʼಜೀವನಶೈಲಿ ಬದಲಾವಣೆಯೂ ಎಲ್ಲಾ ವಯೋಮಾನದವರಲ್ಲೂ ನಿಧಾನವಾಗಿ ಪಾರ್ಕಿನ್ಸನ್ಸ್‌ ಸಮಸ್ಯೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಡಯೆಟ್‌, ವ್ಯಾಯಾಮ ಹಾಗೂ ಧ್ಯಾನ ಹೀಗೆ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಹಣ್ಣುಗಳು, ತರಕಾರಿಗಳು ಮತ್ತು ಮೀನುಗಳಲ್ಲಿ ಸಮೃದ್ಧವಾಗಿರುವ ಆಹಾರವು ಪಾರ್ಕಿನನ್ಸ್‌ ರೋಗಿಗಳಿಗೆ ನರರೋಗ ಪರಿಣಾಮಗಳನ್ನು ಒದಗಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ. ಆಹ್ಲಾದಕರ ಮನಸ್ಸು ಹಾಗೂ ಧ್ಯಾನದ ಅಭ್ಯಾಸಗಳು ಈ ಸಮಸ್ಯೆಯ ತೀವ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಯೋಗದಿಂದ ಸಮತೋಲನ ಹಾಗೂ ಮಾನಸಿಕ ಯೋಗಕ್ಷೇಮ ಹೆಚ್ಚಿಸಲು ಸಾಧ್ಯ ಎಂಬುದು ಕಂಡುಬಂದಿದೆ ಎನ್ನುತ್ತಾರೆʼ ವೈದ್ಯರು.

ವಿಭಾಗ