World Photography Day: ಇಂದು ವಿಶ್ವ ಛಾಯಾಗ್ರಹಣ ದಿನ; ವಿಶೇಷ ದಿನದ ಮಹತ್ವ, ಹಿನ್ನೆಲೆ ತಿಳ್ಕೊಳಿ
World Photography Day 2023: ಕೈಯಲ್ಲಿ ಡಿಜಿಟಲ್ ಕ್ಯಾಮರಾ ಹಿಡಿದು ಫೋಟೋಗ್ರಫಿ ಆಸಕ್ತಿ ಬೆಳೆಸಿಕೊಂಡರೂ, ವಿಶ್ವ ಛಾಯಾಗ್ರಹಣ ದಿನ ಇತಿಹಾಸ ಹಾಗೂ ಮಹತ್ವವನ್ನು ನೀವು ತಿಳಿದುಕೊಳ್ಳಬೇಕು.
ಫೋಟೋಗ್ರಫಿ (Photography) ಅಥವಾ ಛಾಯಾಗ್ರಹಣವು ಒಂದು ಕಲೆ. ಚಿತ್ರವನ್ನು ಸೆರೆಹಿಡಿಯಲು ಒಂದೊಳ್ಳೆ ಕ್ಯಾಮರಾ ಇದ್ದರೆ ಸಾಲದು. ಆ ಚಿತ್ರವನ್ನು ಕ್ಯಾಮರಾ ಕಣ್ಣೊಳಗೆ ಸೆರೆಹಿಡಿಯುವ ಕಲೆಯೂ ಇರಬೇಕು. ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಕಲೆಯೇ ಸರ್ವಸ್ವ. ಹೀಗೆ ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಒಂದು ವಿಶೇಷ ದಿನವನ್ನು ಮೀಸಲಿರಿಸಲಾಗಿದೆ. ಆ ಬಗ್ಗೆ ಇಲ್ಲಿ ತಿಳಿಯೋಣ.
ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಹಣ ದಿನ (World Photography Day)ವನ್ನು ಆಚರಿಸಲಾಗುತ್ತದೆ. 1837ರಲ್ಲಿ ಲೂಯಿಸ್ ಡಾಗುರ್ರೆ (Louis Daguerre) ಎಂಬವರು ಫೋಟೋಗ್ರಫಿಗೆ ಬೇಕಾದ ಪರಿಕರವಾದ ಡಾಗ್ಯುರೋಟೈಪ್(daguerreotype) ಅನ್ನು ಆವಿಷ್ಕರಿಸಿದರು. ಡಾಗ್ಯುರೋಟೈಪ್ ಎಂಬುದು ಫೋಟೋಗ್ರಫಿಗೆ ಬೇಕಾದ ಪ್ರಮುಖ ಪ್ರಕ್ರಿಯೆ. ಹೀಗಾಗಿ ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ ದಿನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 19ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದು ಛಾಯಾಗ್ರಹಣದ ಇತಿಹಾಸದಲ್ಲಿಯೇ ಮಹತ್ವದ ಮೈಲಿಗಲ್ಲಾಗಿದೆ. ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಫೋಟೋಗ್ರಫಿ ಎಂಬುದು ಒಂದು ಉದ್ದಿಮೆಯಾಗಿ ಬೆಳೆದಿದೆ. ಆದರೆ, ಫೋಟೋಗ್ರಫಿ ಎಂಬ ಕಲೆ ಹುಟ್ಟಿಕೊಂಡ ಈ ದಿನವನ್ನು ಇಂದಿಗೂ ಸ್ಮರಿಸಲಾಗುತ್ತಿದೆ.
ದಿನಾಂಕ
ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ.
ಇತಿಹಾಸ
ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ (French Academy of Sciences) 1839ರ ಆಗಸ್ಟ್ 19ರಂದು ಡಾಗ್ಯುರೋಟೈಪ್ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ಘೋಷಿಸಿದ ದಿನವನ್ನು ವಿಶ್ವ ಛಾಯಾಗ್ರಹಣ ದಿನವಾಗಿ ಆಚರಿಸಲಾಗುತ್ತದೆ. ಬೆಳಕಿನ ಸೂಕ್ಷ್ಮ ಮೇಲ್ಮೈಯಲ್ಲಿ ಶಾಶ್ವತ ಚಿತ್ರಗಳನ್ನು ಸೆರೆಹಿಡಿಯುವ ಆರಂಭಿಕ ವಿಧಾನಗಳಲ್ಲಿ ಡಾಗ್ಯುರೋಟೈಪ್ ಪ್ರಕ್ರಿಯೆಯು ಒಂದಾಗಿದೆ.
1837ರಲ್ಲಿ ಮೊದಲ ಬಾರಿಗೆ ಛಾಯಾಗ್ರಹಣ ಪ್ರಕ್ರಿಯೆ ನಡೆಯಿತು. 'ಡಾಗೆರೊಟೈಪ್' ಅನ್ನು ಫ್ರೆಂಚ್‌ನ ಲೂಯಿಸ್ ಡಾಗುರ್ರೆ ಮತ್ತು ಜೋಸೆಫ್ ನೈಸ್‌ಫೋರ್ ನೀಪ್ಸ್ ಅಭಿವೃದ್ಧಿಪಡಿಸಿದರು. 1839ರ ಜನವರಿ 9ರಂದು, ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಈ ಪ್ರಕ್ರಿಯೆಯನ್ನು ಘೋಷಿಸಿತು. ಆ ಬಳಿಕ ಅದೇ ವರ್ಷದಲ್ಲಿ, ಫ್ರೆಂಚ್ ಸರ್ಕಾರವು ಈ ಆವಿಷ್ಕಾರದ ಪೇಟೆಂಟ್ ಅನ್ನು ಖರೀದಿಸಿತು. ವಿಶೇಷವೆಂದರೆ, ಆ ಪೇಟೆಂಟ್ ಅನ್ನು ‘ಜಗತ್ತಿಗೆ ಉಚಿತ ಉಡುಗೊರೆ’ಯಾಗಿ ನೀಡಿತು.
ಮೊದಲ ಬಾಳಿಕೆ ಬರುವ ಬಣ್ಣದ ಛಾಯಾಚಿತ್ರವನ್ನು 1861ರಲ್ಲಿ ತೆಗೆಯಲಾಯಿತು. ಈ ನಡುವೆ ಮೊದಲ ಡಿಜಿಟಲ್ ಕ್ಯಾಮರಾದ ಆವಿಷ್ಕಾರಕ್ಕೂ 20 ವರ್ಷಗಳಿಗಿಂತ ಮುಂಚೆ, ಅಂದರೆ 1957ರಲ್ಲಿ ಮೊದಲ ಡಿಜಿಟಲ್ ಛಾಯಾಚಿತ್ರವನ್ನು ಕಂಡುಹಿಡಿಯಲಾಯಿತು ಎಂಬ ಅಭಿಪ್ರಾಯವೂ ಇದೆ.
ಛಾಯಾಗ್ರಹಣ ದಿನದ ಮಹತ್ವ
ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣವೆಂಬುದು ಒಂದು ಕಲೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಭಿನ್ನ ತಂತ್ರ, ಸಂಯೋಜನೆ, ಕ್ರೀಯಾಶೀಲತೆ ಮತ್ತು ತಮ್ಮದೇ ಆದ ವಿಭಿನ್ನ ಶೈಲಿಗಳೊಂದಿಗೆ ಫೋಟೋಗ್ರಫಿಯ ಪ್ರಯೋಗಕ್ಕೆ ಛಾಯಾಗ್ರಾಹಕರನ್ನು ಈ ದಿನ ಪ್ರೋತ್ಸಾಹಿಸುತ್ತದೆ. ಒಂದು ಫೋಟೋ ಕೇವಲ ಒಂದು ಚಿತ್ರ ಮಾತ್ರವಲ್ಲ. ಅದರಲ್ಲಿ ಆ ಛಾಯಾಗ್ರಾಹಕನ ಭಾವ ಅಡಕವಾಗಿರುತ್ತದೆ. ಆತನ ಕಥೆಗಳನ್ನು ಚಿತ್ರರೂಪದಲ್ಲಿ ಸೆರೆಹಿಡಿದಿರುತ್ತಾನೆ. ತನ್ನ ಭಾವನೆಗಳನ್ನು ಸೆರೆಹಿಡಿಯಲು ಮತ್ತು ನೆನಪುಗಳನ್ನು ಚಿತ್ರರೂಪಕ್ಕೆ ಇಳಿಸಲು ಛಾಯಾಗ್ರಹಣದ ಶಕ್ತಿಯನ್ನು ಪ್ರಶಂಸಿಸಲು ಈ ದಿನವು ಪ್ರೋತ್ಸಾಹಿಸುತ್ತದೆ.
ಇಂದು ಛಾಯಾಗ್ರಹಣವು ಒಂದು ಉದ್ದಿಮೆಯಾಗಿ ಬೆಳೆದಿದೆ. ಸಾಕಷ್ಟು ವೃತ್ತಿಪರ ಫೋಟೋಗ್ರಾಫರ್‌ಗಳು ಹುಟ್ಟಿಕೊಂಡಿದ್ದಾರೆ. ಈ ವಿಶೇಷ ದಿನದಂದು ಛಾಯಾಗ್ರಾಹಕರು ತಮ್ಮ ತಮ್ಮ ಸೃಜನಶೀಲ ಪ್ರಕ್ರಿಯೆಯ ಒಳನೋಟಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಛಾಯಾಗ್ರಹಣದ ತಾಂತ್ರಿಕ ಅಂಶಗಳು, ಆಸಕ್ತಿ ಹಾಗೂ ಛಾಯಾಗ್ರಹಣದ ತಂತ್ರಗಳ ವಿಕಸನದ ಕುರಿತು ಚರ್ಚಿಸಲು ಈ ದಿನ ಹೇಳಿ ಮಾಡಿಸಿದ್ದು.
ಆಚರಣೆ
ಒಬ್ಬ ಛಾಯಾಗ್ರಾಹಕನಿಗೆ ಪ್ರತಿದಿನವೂ ವಿಶೇಷ ಆಚರಣೆಯೇ. ಫೋಟೋಗ್ರಫಿಯೇ ಆತನಿಗೆ ಹಸಿವು ಮತ್ತು ಉಸಿರು. ಆದರೂ ಈ ವಿಶೇಷ ದಿನದಂದು ಪ್ರಪಂಚದಾದ್ಯಂತ ಇರುವ ಛಾಯಾಗ್ರಾಹಕರು ತಮ್ಮ ಆಸಕ್ತಿಯ ಅನುಸಾರ ಫೋಟೋಗಳನ್ನು ಕ್ಲಿಕ್ ಮಾಡುವ ಮೂಲಕ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವುಗಳನ್ನು ಹಂಚಿಕೊಳ್ಳುವ ಮೂಲಕ ಆಚರಿಸುತ್ತಾರೆ. ಫೋಟೋಗ್ರಫಿಗೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ವಿಶ್ವ ಛಾಯಾಗ್ರಹಣ ದಿನದಂದು ಅನೇಕ ಛಾಯಾಗ್ರಹಣ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.