World Soil Day: ಮಣ್ಣಿದ್ದರೆ ಬದುಕು, ಮಣ್ಣೆಂದರೆ ಭವಿಷ್ಯ; ವಿಶ್ವ ಮಣ್ಣಿನ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಜಗತ್ತಿನ ಬೇರೆಲ್ಲವೂ ಕಲುಷಿತವಾದಂತೆ ಮಣ್ಣು ಕೂಡ ಕಲುಷಿತವಾಗುತ್ತಿದೆ. ಅತಿಯಾದ ಕಾಡಿನ ನಾಶವು ಮಣ್ಣಿನ ಸವಕಳಿಗೆ ಕಾರಣವಾಗುತ್ತಿದೆ. ಆ ಕಾರಣಗಳಿಂದ ಆಗಾಗ ಗುಡ್ಡ ಕುಸಿತದಂತಹ ಸಮಸ್ಯೆಗಳು ತಲೆದೋರುತ್ತಲೇ ಇವೆ. ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 5ಕ್ಕೆ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.
ನಮ್ಮಿಡಿ ಭೂಮಿ ನಿಂತಿರುವುದು ಮಣ್ಣಿನ ಮೇಲೆ ಎಂಬುದನ್ನು ನಾವು ತಳ್ಳಿ ಹಾಕಲು ಸಾಧ್ಯವಿಲ್ಲ. ಜಗತ್ತಿನ ಸಕಲ ಪ್ರಾಣಿಗಳಿಗೂ ಆಹಾರ ಸಿಗುತ್ತಿರುವುದು ಕೂಡ ಮಣ್ಣಿನ ಮೂಲಗಳಿಂದಲೇ. ಮನುಷ್ಯ, ಕಟ್ಟಡಗಳು, ಪ್ರಾಣಿ ಪಕ್ಷಿಗಳು, ಕಾಡು, ಪರಿಸರ ಈ ಎಲ್ಲದರ ಭಾರವನ್ನು ಹೊತ್ತು ನಿಂತವಳು ನಮ್ಮ ಧರಣಿ. ಮಣ್ಣೆಂದರೆ ನಮಗೆ ಬದುಕು ಹೌದು, ಭವಿಷ್ಯವೂ ಹೌದು. ಆದರೆ ಇತ್ತೀಚೆಗೆ ಮಣ್ಣಿನ ಮಹತ್ವ ಕಡಿಮೆಯಾಗುತ್ತಿದೆ.
ಪರಿಸರ ನಾಶ, ಭೂಮಿಗೆ ರಾಸಾಯನಿಕ ಸಿಂಪಡಣೆ, ಭೂಮಿಯಾಳವನ್ನು ಕೊರೆಯುವುದು ಸೇರಿದಂತೆ ಮನುಷ್ಯ ಮಾಡುವ ಹಲವು ತಪ್ಪುಗಳು ಮಣ್ಣಿನ ಸವಕಳಿಗೆ ಕಾರಣವಾಗಿದೆ. ಈ ಕಾರಣಕ್ಕೆ ಗುಡ್ಡ ಕುಸಿತದಂತಹ ಅಪಾಯಗಳನ್ನ ಮನುಷ್ಯನೇ ಎದುರಿಸುವಂತಾಗಿದೆ. ಆದರೂ ಬಹುತೇಕರಿಗೆ ಮಣ್ಣಿನ ಮಹತ್ವವೇನು ಎಂಬುದು ಇಂದಿಗೂ ಅರಿವಿಲ್ಲ. ಮಣ್ಣಿಲ್ಲ ಎಂದರೆ ಹೊತ್ತಿನ ತುತ್ತು ಕೂಡ ಸಿಗುವುದಿಲ್ಲ. ಹೀಗೆ ಮಣ್ಣಿನ ಮಹತ್ವವನ್ನ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಣ್ಣಿನ ದಿನ ಯಾವಾಗ?
ಪ್ರತಿವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಗುರುವಾರ ಅಂದರೆ ಇಂದು ವಿಶ್ವ ಮಣ್ಣಿನ ದಿನ ಆಚರಣೆ ಇದೆ.
ವಿಶ್ವ ಮಣ್ಣಿನ ದಿನ ಆಚರಣೆಯ ಇತಿಹಾಸ
ಇಂಟರ್‌ನ್ಯಾಷನಲ್ ಯೂನಿಯನ್ ಆಫ್ ಸೋಲ್ ಸೈನ್ಸಸ್ (IUSS) 2002ರಲ್ಲಿ ವಿಶ್ವ ಮಣ್ಣಿನ ದಿನದ ಆಚರಣೆಯನ್ನು ಪ್ರಾರಂಭಿಸಿತು. 2013ರಿಂದ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಆರಂಭದಲ್ಲಿ ಥಾಯ್ಲೆಂಡ್ ದೇಶವು ಮಣ್ಣಿನ ದಿನದ ನಾಯಕತ್ವ ವಹಿಸಿಕೊಂಡಿತು. 2013ರ ವಿಶ್ವಸಂಸ್ಥೆಯ ಅಂಗೀಕಾರದ ನಂತರ 2014 ಡಿಸೆಂಬರ್ 5 ರಿಂದ ಪ್ರತಿವರ್ಷ ಅಧಿಕೃತವಾಗಿ ಮಣ್ಣಿನ ದಿನ ಆಚರಿಸಲು ಪ್ರಾರಂಭಿಸಲಾಗಿದೆ.
ವಿಶ್ವ ಮಣ್ಣಿನ ದಿನ ಮಹತ್ವ
ಕೃಷಿ, ಪರಿಸರ ವ್ಯವಸ್ಥೆ ಹಾಗೂ ಹವಾಮಾನ ನಿಯಂತ್ರಣದಲ್ಲಿ ಮಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಇದು ನೈಸರ್ಗಿಕ ಫಿಲ್ಟರ್ ರೂಪದಲ್ಲಿ ಕೆಲಸ ಮಾಡುತ್ತದೆ. ಮಣ್ಣು ಜೀವವೈವಿಧ್ಯವನ್ನು ಬೆಂಬಲಿಸುತ್ತದೆ. ಇಂಗಾಲದ ಪ್ರಮಾಣವನ್ನು ತಗ್ಗಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನ ಸಕಲಕ್ಕೂ ಕಂಟಕ ಬಂದಂತೆ ಮಣ್ಣಿಗೂ ಕಂಟಕ ಶುರುವಾಗಿದೆ. ಅರಣ್ಯನಾಶ, ನಗರ ವಿಸ್ತರಣೆ, ಸಮರ್ಥನೀಯವಲ್ಲದ ಕೃಷಿ ಚಟುವಟಿಕೆ, ಗಣಿಗಾರಿಕೆಗಳಿಂದ ಉಂಟಾಗುವ ಮಣ್ಣಿನ ಅವನತಿಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಇದು ಗಮನ ಸೆಳೆಯುತ್ತದೆ. ಭವಿಷ್ಯದ ಪೀಳಿಗೆಗೆ ಈ ನಿರ್ಣಾಯಕ ಸಂಪನ್ಮೂಲವನ್ನು ಸಂರಕ್ಷಿಸಲು ಸುಸ್ಥಿರ ಮಣ್ಣಿನ ನಿರ್ವಹಣೆ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಈ ದಿನವು ಒತ್ತಿ ಹೇಳುತ್ತದೆ.
ಮಣ್ಣಿನ ಸವಕಳಿಯಿಂದ ಪ್ರತಿ ಬಾರಿ ಮಳೆಗಾಲದಲ್ಲೂ ಆಗುವ ಅವಾಂತರಗಳ ಬಗ್ಗೆ ನೀವೂ ಕೇಳಿರಬಹುದು, ನೋಡಿರಬಹುದು. ಮಣ್ಣಿನ ಸವಕಳಿ ತಪ್ಪಿಸಿ ಮಣ್ಣು, ಭೂಮಿಯೊಂದಿಗೆ ನಮ್ಮ ಭವಿಷ್ಯವನ್ನೂ ಉಳಿಸಬೇಕು ಎಂದರೆ ಪ್ರತಿಯೊಬ್ಬರು ಮಣ್ಣಿನ ರಕ್ಷಣೆಯ ಬಗ್ಗೆ ಗಮನ ಹರಿಸಬೇಕು. ಅರಣ್ಯ ನಾಶ, ಕಾಡು ಕಡಿಯುವುದನ್ನು ತಪ್ಪಿಸಬೇಕು. ಭೂಮಿಯನ್ನು ಅಗೆಯುವುದು, ಗಣಿಗಾರಿಕೆಯಂತಹ ಅಕ್ರಮಗಳನ್ನು ತಪ್ಪಿಸಬೇಕು. ಗಿಡ ನೆಡುವುದು, ಒಡ್ಡುಗಳನ್ನು ನಿರ್ಮಿಸುವುದು, ಸಹಜ ಕೃಷಿಗೆ ಹೆಚ್ಚು ಒತ್ತು ನೀಡುವುದು ಈ ಮೂಲಕ ಮಣ್ಣಿನ ರಕ್ಷಣೆ ಮಾಡಬೇಕು.