ಕಣ್ಣಿಗಷ್ಟೇ ಅಲ್ಲ ಬೆನ್ನುಮೂಳೆಗೂ ಅಪಾಯ ಅತಿಯಾದ ಸ್ಕ್ರೀನ್‌ಟೈಮ್‌, ಗ್ಯಾಜೆಟ್ ಬಳಕೆ; ಇದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಣ್ಣಿಗಷ್ಟೇ ಅಲ್ಲ ಬೆನ್ನುಮೂಳೆಗೂ ಅಪಾಯ ಅತಿಯಾದ ಸ್ಕ್ರೀನ್‌ಟೈಮ್‌, ಗ್ಯಾಜೆಟ್ ಬಳಕೆ; ಇದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ

ಕಣ್ಣಿಗಷ್ಟೇ ಅಲ್ಲ ಬೆನ್ನುಮೂಳೆಗೂ ಅಪಾಯ ಅತಿಯಾದ ಸ್ಕ್ರೀನ್‌ಟೈಮ್‌, ಗ್ಯಾಜೆಟ್ ಬಳಕೆ; ಇದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ

ಬೆನ್ನುಮೂಳೆಯ ಆರೋಗ್ಯದ ಮಹತ್ವ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವ ಬೆನ್ನು ಮೂಳೆ ದಿನವನ್ನು ಆಚರಿಸಲಾಗುತ್ತದೆ. ಇಂದು ವಿಶ್ವ ಬೆನ್ನು ಮೂಳೆ ದಿನವಿದ್ದು ಬೆನ್ನುಮೂಳೆಯ ಆರೋಗ್ಯ ಹದಗೆಡಲು ಅತಿಯಾದ ಸ್ಕ್ರೀನ್ ಹಾಗೂ ಗ್ಯಾಜೆಟ್‌ಗಳು ಹೇಗೆ ಕಾರಣವಾಗುತ್ತವೆ, ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ತಜ್ಞರ ನೀಡಿರುವ ಸಲಹೆ ಇಲ್ಲಿದೆ.

ಬೆನ್ನುಮೂಳೆಗೂ ಅಪಾಯ ಅತಿಯಾದ ಸ್ಕ್ರೀನ್‌ಟೈಮ್‌, ಗ್ಯಾಜೆಟ್ ಬಳಕೆ
ಬೆನ್ನುಮೂಳೆಗೂ ಅಪಾಯ ಅತಿಯಾದ ಸ್ಕ್ರೀನ್‌ಟೈಮ್‌, ಗ್ಯಾಜೆಟ್ ಬಳಕೆ (PC: Canva)

ಇಂದಿನ ಡಿಜಿಟಲ್ ಯುಗದಲ್ಲಿ, ತಂತ್ರಜ್ಞಾನದ (ನಿರ್ದಿಷ್ಟವಾಗಿ ಹೇಳುವುದಾದರೆ - ದೀರ್ಘ ಸಮಯದ ಸ್ಕ್ರೀನ್ ಟೈಮ್) ವ್ಯಾಪಕ ಬಳಕೆಯು ಬೆನ್ನುಮೂಳೆಯ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳಿಂದ ದೀರ್ಘಾವಧಿಯ ಸ್ಕ್ರೀನ್ ಸಮಯವು ಜಡತ್ವ, ಬದಲಾದ ದೈಹಿಕ ಭಂಗಿ ಒಳಗೊಂಡಂತೆ, ವಿವಿಧ ಬೆನ್ನುಮೂಳೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೆನ್ನುಮೂಳೆಯ ಮೇಲೆ ತಂತ್ರಜ್ಞಾನದ ಪ್ರಭಾವ

ಭಂಗಿಯಲ್ಲಿ ಬದಲಾವಣೆ: ಅತಿಯಾದ ಸ್ಕ್ರೀನ್ ಬಳಕೆಯ ನೇರ ಪರಿಣಾಮವೆಂದರೆ ಕಳಪೆ ಭಂಗಿಯಲ್ಲಿ ಕುಳಿತುಕೊಳ್ಳುವುದು. ಸ್ಕ್ರೀನ್ ಬಳಸುವಾಗ ಜನರು, ಸಾಮಾನ್ಯವಾಗಿ ಕತ್ತನ್ನು ಮುಂದಕ್ಕೆ ಬಗ್ಗಿಸಿ, ಬಾಗಿದ ಭಂಗಿಯಲ್ಲಿ ಕುಳಿತಿರುತ್ತಾರೆ. ಇದು ಬೆನ್ನುಮೂಳೆಯ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ. ಇದು ‘ಟೆಕ್ ನೆಕ್‘ ಗೆ ಕಾರಣವಾಗಬಹುದು ಮತ್ತು ಸ್ನಾಯುವಿನ ಒತ್ತಡ, ಅಸ್ವಸ್ಥತೆ, ಕುತ್ತಿಗೆ, ಭುಜಗಳು ಮತ್ತು ಕೆಳ ಬೆನ್ನಿನಲ್ಲಿ ದೀರ್ಘಕಾಲದ ನೋವಿಗೆ ಕಾರಣವಾಗಬಹುದು. ಕಾಲಾನಂತರದಲ್ಲಿ, ಈ ಭಂಗಿ ಅಭ್ಯಾಸಗಳು ಬೆನ್ನುಮೂಳೆಯಲ್ಲಿ ಕ್ಷೀಣಗೊಳ್ಳುವ ಬದಲಾವಣೆಗಳನ್ನು ಉಂಟುಮಾಡಬಹುದು, ಉದಾಹರಣೆಗೆ ಹರ್ನಿಯೇಟೆಡ್ ಡಿಸ್ಕ್‌ಗಳು ​​ಮತ್ತು ಕತ್ತಿನ ಭಾಗದ ಮೂಳೆಗಳ ಸ್ಪಾಂಡಿಲೋಸಿಸ್, ದೀರ್ಘಾವಧಿಯ ನೋವು, ಮತ್ತು ಚಲನಶೀಲತೆಯ ಸಮಸ್ಯೆಗಳು ಉಂಟಾಗಬಹುದು.

ಜಡ ಜೀವನಶೈಲಿ (ಸೆಡೆಂಟರಿ ಲೈಫ್‌ಸ್ಟೈಲ್): ಸ್ಕ್ರೀನ್‌ಟೈಮ್‌ನ ಹೆಚ್ಚಳವು ಜಡ ಜೀವನಶೈಲಿಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ಇದು ಬೆನ್ನುಮೂಳೆಯನ್ನು ಬೆಂಬಲಿಸುವ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಸ್ನಾಯುವಿನ ಅಸಮತೋಲನಕ್ಕೆ ಕಾರಣವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಬೆನ್ನುಮೂಳೆಯ ಸ್ಥಿರತೆಗೆ ರಾಜಿ ಮಾಡಿಕೊಳ್ಳಲು, ಕೆಲವು ಸ್ನಾಯುಗಳು ಅಧಿಕವಾಗಿ ಸಕ್ರಿಯಗೊಂಡರೆ ಇನ್ನು ಕೆಲವು ಸ್ನಾಯು ಗುಂಪುಗಳು ದುರ್ಬಲವಾಗುತ್ತವೆ, ಇದನ್ನು ಬೆನ್ನು ಮೂಳೆಯ ಡಿಕಂಡಿಷನಿಂಗ್ ಎನ್ನಲಾಗುತ್ತದೆ. ಈ ಡಿಕಂಡಿಷನಿಂಗ್ ಬೆನ್ನು ನೋವನ್ನು ಉಲ್ಬಣಗೊಳಿಸಬಹುದು ಮತ್ತು ಕ್ಷೀಣಗೊಳ್ಳುವ ಡಿಸ್ಕ್ ಕಾಯಿಲೆ ಸೇರಿದಂತೆ ಮತ್ತಷ್ಟು ತೊಡಕುಗಳಿಗೆ ಕಾರಣವಾಗಬಹುದು.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮಗಳು: ಅತಿಯಾದ ಸ್ಕ್ರೀನ್ ಟೈಮ್, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಹ ಸಂಬಂಧಿಸಿದೆ. ಇದು ನೋವಿನ ಗ್ರಹಿಕೆಯನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡವು ಸ್ನಾಯುಗಳ ವಿಶೇಷವಾಗಿ ಬೆನ್ನು ಮತ್ತು ಕುತ್ತಿಗೆಯ ಸ್ನಾಯುಗಳ ಆರೋಗ್ಯವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

ಬೆನ್ನುಮೂಳೆಯ ಮೇಲೆ ಗ್ಯಾಜೆಟ್‌ಗಳ ಪರಿಣಾಮಗಳನ್ನು ತಗ್ಗಿಸಲು ಉಪಯುಕ್ತ ಸಲಹೆ 

ಕೆಲಸ ಮಾಡುವ ಸ್ಥಳಗಳಲ್ಲಿ ಭಂಗಿ ಮತ್ತು ದೃಷ್ಟಿ ಕಾಪಾಡಿಕೊಳ್ಳಲು ಎರ್ಗೊನೊಮಿಕ್ ಹೊಂದಾಣಿಕೆಗಳು: ಕಾರ್ಯಸ್ಥಳಗಳನ್ನು ಎರ್ಗೊನೊಮಿಕ್ ಆಗಿ ವಿನ್ಯಾಸಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಸ್ಕ್ರೀನ್‌ಗಳು ಕಣ್ಣಿನ ಮಟ್ಟದಲ್ಲಿರಬೇಕು ಮತ್ತು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕುರ್ಚಿಗಳು ಸರಿಯಾದ ಭಂಗಿಯನ್ನು ಬೆಂಬಲಿಸಬೇಕು.

ಡಾ. ಎಸ್. ವಿದ್ಯಾಧರ (ಎಡಚಿತ್ರ)
ಡಾ. ಎಸ್. ವಿದ್ಯಾಧರ (ಎಡಚಿತ್ರ)

ನಿಯಮಿತ ವಿರಾಮ: 20-20-20 ನಿಯಮವನ್ನು ಅಳವಡಿಸಿಕೊಳ್ಳಿ: ಪ್ರತಿ 20 ನಿಮಿಷಗಳಿಗೊಮ್ಮೆ, 20 ಅಡಿ ದೂರದಲ್ಲಿರುವ ಯಾವುದಾರೂ ವಸ್ತು ನೋಡಲು 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ. ಇದು ಕಣ್ಣಿನ ಆಯಾಸವನ್ನು ನಿವಾರಿಸಲು ಮತ್ತು ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ವ್ಯಾಯಾಮ ಮತ್ತು ಸ್ಟ್ರೆಚಿಂಗ್: ಕೋರ್ ಸ್ನಾಯುಗಳನ್ನು ಬಲಪಡಿಸಲು, ನಮ್ಯತೆ (ಫ್ಲೆಕ್ಸಿಬಿಲಿಟಿ) ಯನ್ನು ಸುಧಾರಿಸಲು, ಮತ್ತು ಬೆನ್ನುಮೂಳೆಯ ಸ್ಥಿರತೆಯನ್ನು ಹೆಚ್ಚಿಸಲು ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಿ.

ಸ್ಕ್ರೀನ್ ಟೈಮ್ ಕಡಿಮೆ ಮಾಡಿ: ಸ್ಕ್ರೀನ್ ಬಳಕೆಗೆ ಗಡಿಗಳನ್ನು ಹೊಂದಿಸಿ ಮತ್ತು ಹೆಚ್ಚು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸಲು ವಾಕಿಂಗ್ ಅಥವಾ ಪುಸ್ತಕಗಳನ್ನು ಓದುವಂತಹ ಪರದೆಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ಭಂಗಿಯ ಮೇಲೆ ಗಮನ ಹರಿಸಿ: ಸಾಧನಗಳನ್ನು ಬಳಸುವಾಗ ಭಂಗಿಯ ಬಗ್ಗೆ ಜಾಗೃತರಾಗಿರಿ. ನೇರವಾಗಿ ಕುಳಿತುಕೊಳ್ಳುವುದು, ಭುಜಗಳನ್ನು ಸಡಿಲಗೊಳಿಸುವುದು ಮತ್ತು ಪಾದಗಳು ನೆಲದ ಮೇಲೆ ಚಪ್ಪಟೆಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಬೆನ್ನುಮೂಳೆಯ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ತಂತ್ರಜ್ಞಾನದ ಬಳಕೆ ಮತ್ತು ಬೆನ್ನುಮೂಳೆಯ ಆರೋಗ್ಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಮೂಲಕ, ವ್ಯಕ್ತಿಗಳು ಅದರ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬಹುದು, ಹೆಚ್ಚುತ್ತಿರುವ ಗ್ಯಾಜೆಟ್ ಕೇಂದ್ರಿತ ಜಗತ್ತಿನಲ್ಲಿ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಬಹುದು.

(ಲೇಖನ: ಡಾ. ಎಸ್. ವಿದ್ಯಾಧರ, ಅಧ್ಯಕ್ಷರು ಮತ್ತು ಎಚ್‌ಒಡಿ - ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ಕನ್ಸಲ್ಟೆಂಟ್ - ರೋಬೋಟಿಕ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು)

Whats_app_banner