ಅಚ್ಚರಿಯಾದರೂ ಸತ್ಯ; ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಮರುಭೂಮಿಗಳಲ್ಲಿ ಹಿಮಪಾತ; ಇಲ್ಲಿವೆ ರಸ್ತೆಗಳ ವೈರಲ್ ದೃಶ್ಯಗಳು
ಗಲ್ಫ್ ದೇಶಗಳು ಎಂದರೆ ಸುತ್ತಲೂ ಮರುಭೂಮಿಯಿಂದ ಕೂಡಿರುವ ಪ್ರದೇಶ. ಆದರೆ ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಸೌದಿ ಅರೇಬಿಯಾದ ಮರುಭೂಮಿಗಳಲ್ಲಿ ಹಿಮಪಾತವಾಗಿದೆ. ಇದು ವಿಚಿತ್ರ ಎನ್ನಿಸಿದರೂ ಸತ್ಯ. ಇಲ್ಲಿನ ಮರಭೂಮಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಹಿಮ ಬೀಳುತ್ತಿರುವ ಸುಂದರ ದೃಶ್ಯಾವಳಿಯ ಫೋಟೊ, ವಿಡಿಯೊಗಳು ಈಗ ವೈರಲ್ ಆಗಿವೆ.
ದುಬೈ, ಸೌದಿ ಅರೇಬಿಯಾ, ಮಸ್ಕತ್‌ನಂತಹ ಅರಬ್ ರಾಷ್ಟ್ರಗಳು ಸುತ್ತಲೂ ಮರುಭೂಮಿಯಿಂದ ಕೂಡಿರುತ್ತವೆ. ಈ ದೇಶಗಳಲ್ಲಿ ಮಳೆ ಬರುವುದೇ ಅಪರೂಪ. ಆದರೆ ಇತ್ತೀಚಿಗೆ ವೈರಲ್ ಆದ ವಿಡಿಯೊ, ಫೋಟೊಗಳು ಇಲ್ಲಿ ವಿಪರೀತ ಹಿಮಪಾತವಾಗಿರುವುದನ್ನ ತೋರಿಸುತ್ತಿವೆ. ಈ ವಿಡಿಯೊ, ಫೋಟೊಗಳನ್ನು ನೋಡಿದ್ರೆ ಹಿಮಾಲಯ ಪರ್ವತದ ಸಾಲುಗಳಲ್ಲಿ ಹಿಮ ಬಿದ್ದಿರುವುದು ಕಂಡಂತೆ ನಿಮಗೆ ಭಾಸವಾಗುತ್ತದೆ.
ಇದೇನಪ್ಪಾ ಇದು ಸೌದಿ ಅರೇಬಿಯಾದಲ್ಲಿ ಹಿಮಪಾತವಾಗಲು ಸಾಧ್ಯನಾ ಅಂತ ಹುಬ್ಬೇರಿಸಬೇಡಿ. ಈಗ ಹಿಮಪಾತವಾಗಿರುವುದು ಮಾತ್ರವಲ್ಲ ಕೆಲವು ಭಾಗಗಳಲ್ಲಿ ಭಾರಿ ಮಳೆ ಕೂಡ ಬಂದಿದೆ. ವರದಿಗಳ ಪ್ರಕಾರ, ಅಲ್-ಜಾವ್ಫ್ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದೆ. ಈ ಪ್ರದೇಶವು ಸದಾ ಶುಷ್ಕ ವಾತಾವರಣವಿರುವ ಜಾಗವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಹಿಮ ಸುರಿದಿದ್ದು, ಇಲ್ಲಿನ ಸ್ಥಳೀಯರು ಅಚ್ಛರಿಗೊಂಡಿದ್ದಾರೆ.
ಸೌದಿ ಪ್ರೆಸ್ ಏಜೆನ್ಸಿಯ ಪ್ರಕಾರ ಇತ್ತೀಚಿನ ಕೆಲವು ದಿನಗಳಲ್ಲಿ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ಹಿಮಪಾತದ ಜೊತೆಗೆ ಜಲಪಾತಗಳನ್ನೂ ಸೃಷ್ಟಿಸಿದೆ. ಇಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆಲಿಕಲ್ಲು ಕೂಡ ಬೀಳಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಅದೇನೇ ಇರ್ಲಿ ನಮ್ಮೂರಲ್ಲಿ ಇದೇ ಮೊದಲ ಬಾರಿಗೆ ಹಿಮ ಬಿದಿದ್ದೆ ಕಣ್ರಿ ಅಂತ ಖುಷಿಯಾದ ಜನ ವಿಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
‘ಇಂದು ಜಗತ್ತಿಗೆ ಒಂದು ಅಚ್ಚರಿ ಕಾದಿದೆ. ಸೌದಿ ಅರೇಬಿಯಾದ ಅಲ್-ಜಾವ್ಫ್ ಪ್ರದೇಶದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಮ ಬಿದಿದ್ದೆ. ಯಾವಾಗಲೂ ಒಣ ಭೂಮಿಯಾಗಿದ್ದ ಈ ಪ್ರದೇಶವು ಈಗ ಚಳಿಗಾಲದ ವಂಡರ್‌ಲ್ಯಾಂಡ್ ಆಗಿ ಬದಲಾಗಿದೆ. ಅಭೂತಪೂರ್ವ ಹಿಮ ಬೀಳುವ ಪ್ರದೇಶ, ಭಾರಿ ಮಳೆಯಿಂದಾಗಿ ಈ ಜಾಗವು ಅದ್ಭುತವಾಗಿ ಕಾಣುತ್ತಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಫೋಟೊ ಹಂಚಿಕೊಂಡು ಬರೆದುಕೊಂಡಿದ್ದಾರೆ.
‘ಸೌದಿ ಅರೇಬಿಯಾದ ಉತ್ತರ ಪ್ರದೇಶಗಳಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಹಿಮ ಬಿದ್ದಿದೆ. ಅಲ್-ಜೌಫ್ ನ ಉತ್ತರ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಇದನ್ನು ಖಲೀಜ್ ಟೈಮ್ಸ್ ಪ್ರಕಟಣೆಯು ವರದಿ ಮಾಡಿದೆ‘ ಎಂದು ಫೋಟೊಗಳನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ @Kamran_khan_3 ಎನ್ನುವ ಎಕ್ಸ್ ಬಳಕೆದಾರರು.
ಈ ರೀತಿ ವಿಭಿನ್ನ ಹವಾಮಾನ ಎದುರಿಸುತ್ತಿರುವ ದೇಶ ಸೌದಿ ಅರೇಬಿಯಾ ಮಾತ್ರವಲ್ಲ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸಹ ಇಂತಹ ಹವಾಮಾನ ವೈಪರೀತ್ಯಕ್ಕೆ ಸಾಕ್ಷಿಯಾಗಿದೆ.