ಓದುಗರಿಗೆ ಉಪಯುಕ್ತ ಕೈಪಿಡಿ ವೀರಪ್ಪ ಮೊಯ್ಲಿ ಅವರ ವಿಶ್ವ ಸಂಸ್ಕೃತಿಯ ಮಹಾಯಾನ ಕೃತಿ: ಪುರುಷೋತ್ತಮ ಬಿಳಿಮಲೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಓದುಗರಿಗೆ ಉಪಯುಕ್ತ ಕೈಪಿಡಿ ವೀರಪ್ಪ ಮೊಯ್ಲಿ ಅವರ ವಿಶ್ವ ಸಂಸ್ಕೃತಿಯ ಮಹಾಯಾನ ಕೃತಿ: ಪುರುಷೋತ್ತಮ ಬಿಳಿಮಲೆ ಬರಹ

ಓದುಗರಿಗೆ ಉಪಯುಕ್ತ ಕೈಪಿಡಿ ವೀರಪ್ಪ ಮೊಯ್ಲಿ ಅವರ ವಿಶ್ವ ಸಂಸ್ಕೃತಿಯ ಮಹಾಯಾನ ಕೃತಿ: ಪುರುಷೋತ್ತಮ ಬಿಳಿಮಲೆ ಬರಹ

Vishwasamskritiya Mahayana: ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ರಾಜಕಾರಣಿ ಮಾತ್ರವಲ್ಲ, ಅದ್ಭುತ ಬರಹಗಾರರೂ ಹೌದು. ಅವರ ‘ವಿಶ್ವ ಸಂಸ್ಕೃತಿಯ ಮಹಾಯಾನ’ ಕೃತಿಯ ಬಗ್ಗೆ ಬರಹಗಾರ ಪುರುಷೋತ್ತಮ ಬಿಳಿಮಲೆ ಅವರ ಫೇಸ್​ಬುಕ್​​ ಪೋಸ್ಟ್​ ಅನ್ನು 'ಎಚ್​​ಟಿ ಕನ್ನಡ'ದಲ್ಲಿ ಮರುಪ್ರಕಟಿಸಲಾಗಿದೆ.

ವೀರಪ್ಪ ಮೊಯ್ಲಿ (ಎಡಚಿತ್ರ), ಪುರುಷೋತ್ತಮ ಬಿಳಿಮಲೆ (ಬಲಚಿತ್ರ)
ವೀರಪ್ಪ ಮೊಯ್ಲಿ (ಎಡಚಿತ್ರ), ಪುರುಷೋತ್ತಮ ಬಿಳಿಮಲೆ (ಬಲಚಿತ್ರ)

ಭೂಮಿಯ ಹುಟ್ಟು ಮತ್ತು ವಿಕಾಸದಿಂದ ಆರಂಭಗೊಂಡು ವಿಶ್ವದ ಅನೇಕ ಸಂಸ್ಕೃತಿಗಳನ್ನು ನಮಗೆ ಪರಿಚಯಿಸುವ, ಖಂಡವೊಂದರ ನಡುವೆಯೇ ನಡೆದ ಆಂತರಿಕ ಚಲನೆಗಳ ಬಗ್ಗೆಯೂ ಬೆಳಕು ಚೆಲ್ಲುವ ಕೃತಿ ‘ವಿಶ್ವ ಸಂಸ್ಕೃತಿಯ ಮಹಾಯಾನ’. ಇವತ್ತು ಇಡೀ ವಿಶ್ವ ಆಕ್ರಮಣಕಾರಿಯಾಗಿ ಹಿಂಸೆಯ ಕಡೆ ಚಲಿಸುತ್ತಿರುವ ಕುರಿತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಬರಹಗಾರ ಪುರುಷೋತ್ತಮ ಬಿಳಿಮಲೆ ಅವರ ಫೇಸ್​ಬುಕ್​​ ಪೋಸ್ಟ್​ ಇಲ್ಲಿದೆ..

ಶ್ರೀ ವೀರಪ್ಪ ಮೊಯ್ಲಿ ಅವರ ವಿಶ್ವ ಸಂಸ್ಕೃತಿಯ ಮಹಾಯಾನ ಸಂಪುಟ 1:

84 ವರ್ಷದ ಶ್ರೀ ವೀರಪ್ಪ ಮೊಯ್ಲಿ ಅವರು ಕರ್ನಾಟಕ ಮರೆಯಬಾರದ ರಾಜಕಾರಣಿ . ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಕೆಲವು ಸುಧಾರಣಾ ( ಉದಾಹರಣೆಗೆ CET) ಕಾರ್ಯಗಳು ಬಹಳ ಮಹತ್ವದ್ದಾಗಿದ್ದವು. ಅವರು ಆಡಳಿತ ಸುಧಾರಣೆಗಾಗಿ ಸಲ್ಲಿಸಿದ್ದ ಶಿಫಾರಸುಗಳನ್ನು ಕಾಂಗ್ರೆಸ್ಸೂ ಸೇರಿದಂತೆ ಯಾವ ಪಕ್ಷಗಳೂ ಜಾರಿಗೆ ತರಲಿಲ್ಲ. ಅವರು ಸಿದ್ಧಪಡಿಸಿದ Judiciary accountability bill ಕೂಡಾ ಯಾಕೋ ಮೂಲೆ ಸೇರಿತು.

ತಮ್ಮ ರಾಜಕಾರಣದ ನಡುವೆ ಮೊಯಿಲಿಯವರು ಒಬ್ಬ ಬರಹಗಾರನಾಗಿ ಬೆಳೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದ್ದಾರೆ. 'ಮತ್ತೆ ನಡೆಯಲಿ ಸಮರ' (1985) ದಿಂದ ಆರಂಭವಾಗಿ ಈಚಿನ 'ವಿಶ್ವ ಸಂಸ್ಕೃತಿಯ ಮಹಾಯಾನ'ದ ವರೆಗೆ ಅವರು ಒಟ್ಟು 48 ಕೃತಿಗಳನ್ನು ಬರೆದಿದ್ದಾರೆ. ನನ್ನ ಬೊಗಸೆಯ ಆಕಾಶ ಅವರ ಆತ್ಮಕತೆ.

ವಿಶ್ವ ಸಂಸ್ಕೃತಿಯ ಮಹಾಯಾನ ಕೃತಿಯಲ್ಲಿ 20 ಅಧ್ಯಾಯಗಳಿವೆ. ಸಂವಾದ ರೂಪದಲ್ಲಿ ಬೆಳೆಯುವ ಈ ಗ್ರಂಥವು ಭೂಮಿಯ ಹುಟ್ಟು ಮತ್ತು ವಿಕಾಸದಿಂದ ಆರಂಭಗೊಂಡು ವಿಶ್ವದ ಅನೇಕ ಸಂಸ್ಕೃತಿಗಳನ್ನು ನಮಗೆ ಪರಿಚಯಿಸುತ್ತದೆ. ವಿಶೇಷ ಎಂದರೆ ಮೊಯ್ಲಿಯವರು ಭೂಮಿಯ ಹುಟ್ಟಿನ ಕತೆಯನ್ನು ದೇವಿ ಮಹಾತ್ಮೆಯ ಆರಂಭದಲ್ಲಿ ಬರುವ ತ್ರಿಮೂರ್ತಿಗಳ ಸಂವಾದದಿಂದ ಆರಂಭಿಸುತ್ತಾರೆ. ಭೂಮಿಯ ವಿಕಾಸದ ಕತೆಯನ್ನು ಕೊರಗರ ಹಬಾಷಿಕನ ಕತೆಗೆ ಜೋಡಿಸುತ್ತಾರೆ. ಮುಂದೆ ಡಾರ್ವಿನ್‌ನ ಸಿದ್ದಾಂತ, ವೇದ, ಉಪನಿಷತ್ತುಗಳು, ಪುರಾಣಗಳು, ಭಗವದ್ಗೀತೆ , ಧರ್ಮ ಶಾಸ್ತ್ರ ನ್ಯಾಯ ಶಾಸ್ತ್ರ, ಸಾಂಖ್ಯ, ಯೋಗ , ಮಹಾಕಾವ್ಯಗಳು, ನಾಟಕಗಳು, ಇತ್ಯಾದಿಗಳ ಬಗ್ಗೆ ಸಂಕ್ಷಿಪ್ತ ವಿವರ ನೀಡಿ ಭಾರತ, ಗ್ರೀಕ್‌, ಮಾಯಾ, ಚೀನಾ, ಜಪಾನ್‌, ಮಧ್ಯ ಪ್ರಾಚ್ಯ ದೇಶಗಳ ಚರಿತ್ರೆಯ ಬೆಳವಣಿಗೆ ಮತ್ತು ಅವುಗಳ ಪತನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಚೀನಾದ ತ್ಸೌ ಯೆನ್‌ ಹೇಳಿದ ʼಚಕ್ರಾಧಿಪತ್ಯಗಳು ಶಾಶ್ವತ ಅಲ್ಲʼ ಎಂಬ ಮಾತನ್ನು ಲೇಖಕರು ಮತ್ತೆ ಮತ್ತೆ ಉಲ್ಲೇಖಿಸುತ್ತಾರೆ. ವಿಶ್ವದ ಚರಿತ್ರೆಯನ್ನು ಬರೆಯುವವರು ಸಾಮಾನ್ಯವಾಗಿ ಮರೆತು ಬಿಡುವ ಜಾನಪದ ಪರಂಪರೆಯ ಬಗ್ಗೆಯೂ ಇಲ್ಲೊಂದು ಅಧ್ಯಾಯವಿದೆ.

ಹೀಗೆ ಬರೆಯುವಾಗ ಮೊಯ್ಲಿಯವರಿಗೆ ವಿಶ್ವದ ವಿವಿಧ ಖಂಡಗಳ ನಡುವೆ ಚಾರಿತ್ರಿಕವಾಗಿ ಬೆಳೆದ ಸಂಬಂಧಗಳ ಬಗೆಗೆಯೂ, ಖಂಡವೊಂದರ ನಡುವೆಯೇ ನಡೆದ ಆಂತರಿಕ ಚಲನೆಗಳ ಬಗ್ಗೆಯೂ ಬೆಳಕು ಚೆಲ್ಲಲು ಸಾಧ್ಯ ಆಗಿದೆ. ಉದಾಹರಣೆಗೆ, ನ್ಯಾಯಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ಕೃತಿಯಲ್ಲಿ ನಡೆದ ಚರ್ಚೆಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ. ಅದು ಹಮ್ಮೂರಾಬಿ, ಪ್ಲೇಟೋ, ಅರಿಸ್ಟಾಟಲ್‌, ಕನ್ಫ್ಯೂಸಿಯಸ್‌, ಕೌಟಿಲ್ಯ ಮೊದಲಾದವರನ್ನು ಒಳಗೊಂಡು ವಿಸ್ತಾರವಾಗಿದೆ. ಸ್ವತ: ವಕೀಲರಾಗಿರುವ ಮೊಯ್ಲಿಯವರಿಗೆ ಈ ನಿಟ್ಟಿನಲ್ಲಿ ಅನೇಕ ಒಳನೋಟಗಳನ್ನು ಕೊಡಲು ಸಾಧ್ಯ ಆಗಿದೆ.

ಇವತ್ತು ಇಡೀ ವಿಶ್ವ ಆಕ್ರಮಣಕಾರಿಯಾಗಿ ಹಿಂಸೆಯ ಕಡೆ ಚಲಿಸುತ್ತಿದೆ. ನೈತಿಕ ಪತನಕ್ಕೆ ಎಲ್ಲೆಯೇ ಇಲ್ಲ. ಇದನ್ನು ಗಮನಿಸುವ ಮೊಯ್ಲಿಯವರು ಈ ಗ್ರಂಥದ ಮುಖ್ಯ ಪಾತ್ರ ಗಿರಿಧರನ ಬಾಯಲ್ಲಿ ಈ ಮುಂದಿನ ಮಾತುಗಳನ್ನು ಹೇಳಿಸುತ್ತಾರೆ- ʼಅನೇಕಾನೇಕ ರಾಷ್ಟ್ರಗಳು ಸೋತ ರಾಷ್ಟ್ರಗಳಾಗಿ ಹತಾಶೆಗೊಂಡಿವೆ. ಆ ರಾಷ್ಟ್ರಗಳ ಒಡಲಲ್ಲಿ ಅಸಂತೃಪ್ತಿಯ ಸಿಡಿಯುಂಡೆಗಳು ಸಿದ್ಧವಾಗಿ ನಿಂತಿವೆ, ಅರಾಜಕತೆ ಅಸಂತೃಪ್ತಿ, ಅಸಂತುಷ್ಟಿ, ಅಶಾಂತಿಯ ಅಲೆಗಳ ಗರ್ಜನೆ ಕಿವಿಗಡಚುತ್ತಿದೆ. ಭೀಕರ ಜಾಗತಿಕ ಸಂಘರ್ಷಗಳಿಗೆ ಸಿದ್ಧವಾಗಿ ನಿಂತಿರುವ ವಿವಿಧ ನಾಗರಿಕತೆಗಳ ಪರಾಮರ್ಶೆ ಅಂತಾರಾಷ್ಟ್ರೀಯ ಮಟ್ಟದ ಸಂವಾದ ಮಗದೊಮ್ಮೆ ಆಗಬೇಕಾಗಿದೆʼ.

ವಿಶ್ವದ ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿದ ವಿದ್ವಾಂಸರಿಗೆ ಈ ಗ್ರಂಥವು ಅಷ್ಟೇನೂ ಮಹತ್ವದ್ದಾಗಿ ಕಾಣಿಸಲಾರದು. ಆದರೆ ಹೊಸ ಓದುಗರಿಗೆ ಇದೊಂದು ಉಪಯುಕ್ತ ಕೈಪಿಡಿ.

-ಪುರುಷೋತ್ತಮ ಬಿಳಿಮಲೆ

Whats_app_banner