Facebook Post: ಬೆಂಗಳೂರಲ್ಲಿ ಶುರುವಾಯ್ತು ತಂಬುಳಿ ಮನೆ; 30 ಕ್ಕೂ ಅಧಿಕ ಮಲೆನಾಡಿನ ತಂಬುಳಿ ರುಚಿ ಸವಿಯೋಕೆ ಬನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Facebook Post: ಬೆಂಗಳೂರಲ್ಲಿ ಶುರುವಾಯ್ತು ತಂಬುಳಿ ಮನೆ; 30 ಕ್ಕೂ ಅಧಿಕ ಮಲೆನಾಡಿನ ತಂಬುಳಿ ರುಚಿ ಸವಿಯೋಕೆ ಬನ್ನಿ

Facebook Post: ಬೆಂಗಳೂರಲ್ಲಿ ಶುರುವಾಯ್ತು ತಂಬುಳಿ ಮನೆ; 30 ಕ್ಕೂ ಅಧಿಕ ಮಲೆನಾಡಿನ ತಂಬುಳಿ ರುಚಿ ಸವಿಯೋಕೆ ಬನ್ನಿ

Facebook Post: ಬೇಸಿಗೆ, ಮಳೆ, ಚಳಿಗಾಲ ಯಾವುದೇ ಸಮಯದಲ್ಲಾದರೂ ಸವಿಯಬಹುದಾದ ತಂಬುಳಿ ರುಚಿಗೆ ಮಾರು ಹೋದವರಿಲ್ಲ. ಬೆಂಗಳೂರಿನ ಜೆಪಿ ನಗರದಲ್ಲಿ ಹೊಸದಾಗಿ ತಂಬುಳಿ ಮನೆ ತೆರೆದಿದ್ದು ಈ ಬಗ್ಗೆ ಬರಹಗಾರ ರಾಜೀವ್‌ ಹೆಗ್ಡೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ( ಮಾಹಿತಿ ಕೃಪೆ: ರಾಜೀವ್‌ ಹೆಗ್ಡೆ, ಬರಹಗಾರ).

ಬೆಂಗಳೂರಿನ ಜೆಪಿ ನಗರದಲ್ಲಿ ಹೊಸದಾಗಿ ಆರಂಭವಾಗಿದೆ ತಂಬುಳಿ ಮನೆ ಬಗ್ಗೆ ರಾಜೀವ್‌ ಹೆಗ್ಡೆ ಬರಹ.
ಬೆಂಗಳೂರಿನ ಜೆಪಿ ನಗರದಲ್ಲಿ ಹೊಸದಾಗಿ ಆರಂಭವಾಗಿದೆ ತಂಬುಳಿ ಮನೆ ಬಗ್ಗೆ ರಾಜೀವ್‌ ಹೆಗ್ಡೆ ಬರಹ. (PC: Rajeev Hegde )

Facebook Post: ನೈಸರ್ಗಿವಾಗಿ ದೊರೆಯುವ ಸೊಪ್ಪು, ಗಿಡಮೂಲಿಕೆಗಳು, ಬೇರುಗಳ ಜೊತೆ ಸಾಂಬಾರು ಪದಾರ್ಥಗಳಿಂದ ತಯಾರಿಸುವ ತಂಬುಳಿಗೆ ಅದ್ದರದ್ದೇ ಆದ ರುಚಿ, ವೈಶಿಷ್ಟ್ಯವಿದೆ. ಬೇಸಿಗೆ ಇರಲಿ, ಚಳಿ ಇರಲಿ ಅಥವಾ ಮಳೆ ಇರಲಿ ಯಾವ ಸಮಯದಲ್ಲಾದರೂ ತಂಬುಳಿಯನ್ನು ತಯಾರಿಸಿ ಸೇವಿಸಬಹುದು. ಇಂಥ ತಂಬುಳಿ ಬಗ್ಗೆ ಬರಹಗಾರ ರಾಜೀವ್‌ ಹೆಗ್ಡೆ ಒಂದು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮಲೆನಾಡು ತಂಬುಳಿ

ಮಲೆನಾಡಿನ ಅಡುಗೆ ಪದಾರ್ಥಗಳ ರುಚಿಯನ್ನು ಸವಿದವರು ಎಂದೂ ಅದನ್ನು ಮರೆಯುವುದಿಲ್ಲ. ನಮ್ಮ ಊರಿನ ವಿಶೇಷತೆ ಏನೆಂದರೆ ಊರಿನ ಸುತ್ತಮುತ್ತಲಿನ ತೋಟ, ಕಾಡಿನಲ್ಲೇ ನಮ್ಮ ಪದಾರ್ಥಗಳಿಗೆ ಬೇಕಾದ ಸೊಪ್ಪು, ಗಡ್ಡೆಗಳನ್ನು ಹುಡುಕಿಕೊಂಡಿರುತ್ತೇವೆ. ಹಿಂದೊಮ್ಮೆ ರವಿ ಬೆಳಗೆರೆ ಹೀಗೆ ಹೇಳಿದ್ದರು, ಈ ಹವ್ಯಕರು ಕಾಡು-ಮೇಡಿನಲ್ಲಿರುವ ಯಾವ ಸೊಪ್ಪನ್ನು ಬಿಡದೇ ತಂಬುಳಿ ಮಾಡುತ್ತಾರೆ. ಹೌದು, ನಮ್ಮೂರು ಮಲೆನಾಡು ತಂಬುಳಿಗೆ ಹೆಸರುವಾಸಿ. ಅಪ್ಪೆಹುಳಿಯಿಂದ ಹಿಡಿದು, ನಮ್ಮ ಸುತ್ತಲು ಇರುವ ಎಲ್ಲ ಆರೋಗ್ಯ ಸ್ನೇಹಿ ಸೊಪ್ಪುಗಳ ತಂಬುಳಿ ಮಾಡುತ್ತೇವೆ. ಪ್ರತಿಯೊಂದು ತಂಬುಳಿಗೂ ಅದರದ್ದೇ ಆದ ಆರೋಗ್ಯ ಸ್ನೇಹಿ ಗುಣದ ಜತೆಗೆ, ವಿಶೇಷವಾದ ರುಚಿಯನ್ನು ಹೊಂದಿದೆ. ಹಾಗೆ ನೋಡಿದರೆ ಜಗತ್ತಿನ ಯಾವುದೇ ಸ್ಟಾರ್‌ ಹೋಟೆಲ್‌ಗಳಲ್ಲಿ ಸಿಗುವ ಸೂಪ್‌ಗಳ ವೆರೈಟಿಗಿಂತ ವಿವಿಧ ತಂಬುಳಿಗಳು ಮಲೆನಾಡಿಗರ ಮನೆಯಲ್ಲಿ ಸಿಗುತ್ತವೆ.

ಹೀಗೆ ವಿಶೇಷವಾದ ಅಡುಗೆ, ಪದಾರ್ಥ, ತಿನಿಸುಗಳಿಗೆ ಹೆಸರುವಾಸಿಯಾದ ನಮ್ಮೂರಿನವರು, ಉದ್ಯಮಕ್ಕೆ ಬರುವುದು ವಿರಳ. ಆದರೆ ನಮ್ಮ ಪಕ್ಕದ ಊರಿನ ಹಾಗೂ ಸಂಬಂಧಿಯಾದ ಪ್ರಶಾಂತ್‌ ಹಾಗೂ ಕಾರ್ತಿಕ್‌ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ನಮ್ಮೂರಿಗೆ ಬಂದಾಗ ನೀವು ಸವಿದು, ನೆನಪಿಟ್ಟುಕೊಳ್ಳುತ್ತಿದ್ದ ತಂಬುಳಿಯು ಬೆಂಗಳೂರಿಗರಿಗೆ ಪ್ರತಿದಿನ ಸಿಗುವಂತೆ ಮಾಡಲಾಗಿದೆ. ಜೆ.ಪಿ ನಗರ 6ನೇ ಹಂತದಲ್ಲಿ ತಂಬುಳಿ ಮನೆ (Tambuli Mane) ಎನ್ನುವ ಮಳಿಗೆ ಆರಂಭಿಸಲಾಗಿದೆ. ಇದರ ಮೊದಲ ಮಳಿಗೆಯು ಈಗಾಗಲೇ ಸಾಗರದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗ ಬೆಂಗಳೂರಿಗೆ ತಂಬುಳಿ ರುಚಿಯನ್ನು ಪ್ರತಿನಿತ್ಯ ನೀಡಲು ಮಲೆನಾಡಿನ ಇಬ್ಬರು ಮೊಮ್ಮಕ್ಕಳು ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ಬೆಂಗಳೂರಿನಲ್ಲಿರುವ ತಂಬುಳಿ ಮನೆ

ಅಂದ ಹಾಗೆ ಈ ತಂಬುಳಿ ಮನೆಗೆ ನಮ್ಮಜ್ಜಿ ಹೇಳ್ಕೊಟ್ಟಿದ್ದು ಎನ್ನುವ ಟ್ಯಾಗ್‌ಲೈನ್‌ ಇಡಲಾಗಿದೆ. ನಮ್ಮ ಹಳೆಯ ಕಾಲದ ಜನರು ಮಾಡುತ್ತಿದ್ದ ಅದೇ ರುಚಿಕಟ್ಟಾದ ತಂಬುಳಿಯನ್ನು ಇಂದಿನ ಜನರಿಗೆ ಕೊಡುವ ಕನಸಿನಲ್ಲೇ ಇಂತಹದೊಂದು ಆಕರ್ಷಕ ಟ್ಯಾಗ್‌ಲೈನ್‌ ಬಳಸಲಾಗಿದೆ. ನಿಮ್ಮ ಬಿಡುವಿನಲ್ಲಿ ನಮ್ಮೂರಿನ ತಂಬುಳಿ ರುಚಿಯನ್ನು ತಪ್ಪದೇ ಸವಿಯಿರಿ. ಒಂದೇ ಸಲಕ್ಕೆ ಎಲ್ಲ ತಂಬುಳಿ ಕುಡಿಯಲು ಜಾಗವಿರದೇ ಮತ್ತೆ ಮತ್ತೆ ಕರೆಯಿಸಿಕೊಳ್ಳಲಿದೆ ಎನ್ನುವುದು ಮಾತ್ರ ಖಾತ್ರಿ. ಏಕೆಂದರೆ ಅಲ್ಲಿ 30ಕ್ಕೂ ಅಧಿಕ ಬಗೆಯ ತಂಬುಳಿಗಳು ಲಭ್ಯವಿವೆ.

ಇಲ್ಲಿ ಸಿಗುವ ವಿವಿಧ ತಂಬುಳಿಗಳು: ಅಂಬೆ ಶುಂಠಿ, ನುಗ್ಗೆ ಸೊಪ್ಪು, ವಾಯು ವಿಳಂಗ, ಅಪ್ಪೆಕಾಯಿ, ಒಂದೆಲಗ, ಬಾಳೆ ದಿಂಡು, ಶ್ರೀಗಂಧ ಸೊಪ್ಪು, ಅರಿಶಿನ ಕೊಂಬು, ಬಸಳೆ ಸೊಪ್ಪು, ಜೀರಿಗೆ, ಮಜ್ಜಿಗೆ ಹುಲ್ಲು, ಹುಸಿ ಜಾಯಿಕಾಯಿ, ಸ್ವಾರ್ಲೆ ಸೊಪ್ಪು, ದೊಡ್ಡ ಪತ್ರೆ, ಮಸಾಲಾ ಮಜ್ಜಿಗೆ, ಕ್ಲೋವರ್‌ ಸೊಪ್ಪು, ಬಲಗಣೆ ಚಕ್ಕೆ, ಬಲಗಣೆ ಚಕ್ಕೆ, ಕಂಚಿಹುಳಿ, ಹುಣಸೆ ಹಣ್ಣು, ನೆಲ ನೆಲ್ಲಿ, ಪಾಲಕ್‌ ಸೊಪ್ಪು, ಸಬ್ಬಸಿಗೆ ಸೊಪ್ಪು, ಶುಂಟಿ, ಸಾಸಿವೆ, ಓಂಕಾಳು, ಓಂಕಾಳು ಜೀರಿಗೆ, ಮೆಂತೆ, ದಾಸವಾಳ ಹೂವು, ಕಾಕೆ ಸೊಪ್ಪು, ಕರಿಬೇವು, ಚಕ್ರಮುನಿ, ಶಂಖಪುಷ್ಪ, ಮಡಿಕೆ ಕಾಳಿನ ಸಲಾಡ್‌, ಕೋಕಮ್‌ ಟೀ. ಇದರ ಜತೆಗೆ ಮಲೆನಾಡಿಗ ಆಯ್ದ ತಿನಿಸು ಹಾಗೂ ಇತರ ವಸ್ತುಗಳು

ವಿಳಾಸ: ತಂಬುಳಿ ಮನೆ: ನೆಲ ಮಹಡಿ, ನಂಬರ್ 313, 24 ನೇ ಮುಖ್ಯ ರಸ್ತೆ, 6 ಫೇಸ್, ಜೆಪಿ ನಗರ, ಬೆಂಗಳೂರು - 78

Tambuli Mane: #313, Ground floor, 24th main road, 6thnface, JP Nagar, Bengaluru -560078

ನಮ್ಮೂರಿನ ರುಚಿಯನ್ನು ಬೆಂಗಳೂರಿನಲ್ಲಿ ಸವಿಯಲು ಮರೆಯದಿರಿ

ಎಂದು ರಾಜೀವ್‌ ಹೆಗ್ಡೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Whats_app_banner