ವರ್ಷಕ್ಕೆ ವಿದಾಯ, ನೆನಪಿಗಲ್ಲ; 2023ರಲ್ಲಿ ನನಗಿಷ್ಪವಾದ 10 ಸಂಗತಿಗಳಿವು
Happy New year 2024: ಹೊಸ ವರ್ಷವನ್ನು ಸ್ವಾಗತಿಸುವ ಭರದಲ್ಲಿ ಹಳೆ ವರ್ಷದ ನೆನಪುಗಳನ್ನು ಮರೆತರೆ ಹೇಗೆ? ಖುಷಿಯನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡಾಗಲೇ ಅದಕ್ಕೊಂದು ಮೌಲ್ಯ. 2023ಕ್ಕೆ ಗುಡ್ ಬಾಯ್ ಹೇಳೋ ಮುನ್ನ, ಈ ವರ್ಷ ನನಗೆ ಇಷ್ಟವಾದ 10 ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
2023ಕ್ಕೆ ವಿದಾಯ ಹೇಳುವ ಸಮಯ. ಮಾನವ ಬದುಕಿನಲ್ಲಿ ಪ್ರತಿ ಕ್ಷಣ, ಪ್ರತಿ ದಿನ, ಪ್ರತಿ ವರ್ಷವೂ ಸಿಹಿ-ಕಹಿಗಳ ಸಮ್ಮಿಶ್ರಣ. ಬದುಕಿನಲ್ಲಿ ಖುಷಿ ಮಾತ್ರ ಎದುರಾದ್ರೆ ಅದರಲ್ಲಿ ವಿಶೇಷಗಳೇನೂ ಇಲ್ಲ. ನೋವು, ಸವಾಲುಗಳನ್ನು ಕೊಡುವ ಭಗವಂತ ನಮ್ಮ ದಿನಚರಿಯಲ್ಲಿ ಖುಷಿಯ ದಿನಗಳನ್ನು ಕೂಡಾ ಬರೆದಿರ್ತಾನೆ. ಆಗ ಆ ಖುಷಿ, ನಲಿವು ದುಪ್ಪಟ್ಟಾಗುತ್ತದೆ. ನನ್ನ ಪಾಲಿಗೆ 2023ರ ವರ್ಷ ಖುಷಿ ಕೊಟ್ಟಿದ್ದಕ್ಕಿಂತ ನಾಲ್ಕು ಪಾಲು ಕಿತ್ತುಕೊಂಡಿತು. ಹಾಗಂತ ವರ್ಷವನ್ನು ದೂರಲಾದೀತೇ? ಖಂಡಿತಾ ಇಲ್ಲ. ಒಂದಷ್ಟು ಹರುಷದ ನೆನಪುಗಳೂ ಇವೆ. ನನ್ನ ಈ ವರ್ಷದ ಸಿಹಿನೆನಪುಗಳ ಬುತ್ತಿಯನ್ನು ನಿಮಗೆ ಕೊಡುತ್ತಿದ್ದೇನೆ. ಬೇಗನೆ ಬಾಯ್ತೆರೆದು ತಿನ್ನೋಕೆ ಹೋಗ್ಬೇಡಿ. ಓದಿಕೊಂಡು ಹೋಗಿ...
ನನಗೆ ಇಷ್ಟವಾದ ಪುಸ್ತಕ
ಈ ವರ್ಷ ನಾನು ಓದಿದ ಪುಸ್ತಕಗಳ ಸಂಖ್ಯೆ ಕಡಿಮೆ. ಅವುಗಳಲ್ಲಿ ನನಗೆ ಮೆಚ್ಚುಗೆಯಾದ ಒಂದು ಪುಸ್ತಕವನ್ನು ಹೇಳುವುದಾದರೆ, ರಾಜಮಣಿ ರಾಮಕುಂಜ ಅವರ 'ತಿರುಗುಬಾಣ'. ಕೊರೊನಾ ಕಾಲದಲ್ಲಿ ಲೇಖಕರು ಬರೆದ ಹನಿಲೇಖನಗಳು ಪುಸ್ತಕವಾಗಿ ರೂಪುಗೊಂಡಿದೆ. ಭೂತಕಾಲ, ವರ್ತಮಾನ ಹಾಗೂ ಭವಿಷ್ಯತ್ಕಾಲಗಳನ್ನು ಬೆಸೆದು ಸಮಯದ ಮೌಲ್ಯದ ಅರಿವು ಮೂಡಿಸಿದ್ದಾರೆ. ಹಿಂದೆ ಹೇಗಿತ್ತು? ಈಗ ಹೇಗಿದೆ? ಮುಂದೆ ಹೇಗಿರಬೇಕು? ಎಂಬುದಾಗಿ ಲೇಖಕರು ಓದುಗನಿಗೆ ಸುಲಭವಾಗಿ ತಮ್ಮ ನಿಲುವನ್ನು ಉಣಬಡಿಸಿದ್ದಾರೆ.
ನನಗೆ ಇಷ್ಟವಾದ ಸಿನಿಮಾ
ವಿಜಯ್ ನಟನೆಯ ತಮಿಳು ಸಿನಿಮಾ ವಾರಿಸು, ನನಗಿಷ್ಟವಾಗಿದ್ದು ಸಣ್ಣ ಸಣ್ಣ ಕಾರಣಗಳಿಗೆ. ನನಗೆ ಸಿನಿಮಾಗಳು ರುಚಿಸುವುದು ಕಡಿಮೆ. ತೀರಾ ಅಪರೂಪಕ್ಕೆ ಮಾತ್ರ ನೋಡುವ ಅಭ್ಯಾಸ. ಈ ಸಿನಿಮಾವನ್ನು ನಾನು ವೀಕ್ಷಿಸಿದ ಸಂದರ್ಭಕ್ಕೂ ಸಿನಿಮಾಗೂ ಒಂದಷ್ಟು ನಂಟಿದೆ. ಮನಸಲ್ಲಿ ನೂರ್ಕಾಲ ಅಲ್ಲದಿದ್ದರೂ ಕೆಲಕಾಲ ಈ ಚಿತ್ರ ಕಣ್ಣ ಮುಂದೆ ಬಂದೇ ಬರುತ್ತದೆ. ಅಮ್ಮ-ಮಗನ ಭಾವುಕ ಸಂಭಾಷಣೆಗಳು ಮನಮುಟ್ಟುತ್ತವೆ. ಅದರಲ್ಲೂ No family is perfect, But we have one family (ಯಾವ ಮನೆಯೂ ನೂರಕ್ಕೆ ನೂರರಷ್ಟು ಪರಿಪೂರ್ಣವಲ್ಲ. ಆದರೆ ನಮಗಿರೋದು ಒಂದೇ ಕುಟುಂಬ) ಎಂಬ ವಾಕ್ಯ ಈಗಲೂ ನನ್ನ ಕರ್ಣಗಳಿಗೆ ಬಡಿಯುತ್ತಿದೆ. ಕೆಎಸ್ ಚಿತ್ರ ಅವರ ಹಿನ್ನೆಲೆಗಾಯನ ಮನಸ್ಸು ಮತ್ತು ಹೊಟ್ಟೆಯನ್ನೂ ತಣ್ಣಗಾಗಿಸುತ್ತದೆ.
ನನಗೆ ಇಷ್ಟವಾದ ಕ್ರಿಕೆಟ್ ಆಟಗಾರ
ಮೊಹಮ್ಮದ್ ಶಮಿ. ಶಮಿ ಅಂದ್ರೆ ಮೊದಲೇ ಅಭಿಮಾನ. ಈ ಬಾರಿ ಈತನ ಬಗೆಗಿನ ಅಭಿಮಾನ, ಮೆಚ್ಚುಗೆ ದುಪ್ಪಟ್ಟಾಯ್ತು. ವಿಶ್ವಕಪ್‌ನಲ್ಲಿ ಸತತ ನಾಲ್ಕು ಪಂದ್ಯಗಳಿಂದ ಹೊರಗುಳಿದು, ಆ ಬಳಿಕ ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದರು ಎಂಬ ಕಾರಣಕ್ಕೆ ಮಾತ್ರವಲ್ಲ. ಸಂಪೂರ್ಣ ದೇಶವೇ ಅವರ ಆಟವನ್ನು ಕೊಂಡಾಡುವಾಗ ಈತನ ಮನಸ್ಸಿನಲ್ಲಿದ್ದ ನೋವು ಅಷ್ಟಿಷ್ಟಲ್ಲ. ದೇಹದಲ್ಲಿ ಗಾಯದ ನೋವು, ಪತ್ನಿಯಿಂದ ಅವಮಾನ, ಮನಸ್ಸಲ್ಲಿ ಒಂದಷ್ಟು ಯಾತನೆಗಳನ್ನು ಹೃದಯದೊಳಗೆ ಅದುಮಿಟ್ಟು ಈತ ಆಡಿದ ಪರಿಗೆ ಸಲಾಂ.
ಇಷ್ಟವಾದ ಆಟಗಾರ
ಆರ್ ಪ್ರಜ್ಞಾನಂದ. ಕೇವಲ 18 ವರ್ಷ ವಯಸ್ಸಿಗೆ ಚೆಸ್ ವಿಶ್ವಕಪ್ ಫೈನಲ್ ಪ್ರವೇಶಿಸಿದ ಈತನ ಸಾಧನೆ ಸಣ್ಣದಲ್ಲ. ವಿಶ್ವದ ಚಾಂಪಿಯನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಫೈನಲ್‌ನಲ್ಲಿ ಸೋತರೂ ಟಫ್ ಫೈಟ್ ಕೊಟ್ಟ ಭಾರತೀಯನ ಬೋಲ್ಡ್ ಆಟಕ್ಕೆ ಜಗತ್ತೇ ಸೆಲ್ಯೂಟ್ ಹೊಡೆಯಿತು. ಈತನ ಪ್ರಬುದ್ಧ ಮಾತುಗಳಂತೂ ಕೇಳೋದೆ ಚಂದ. ಸಣ್ಣ ವಯಸ್ಸಿಗೆ ಗ್ರ್ಯಾಂಡ್ ಮಾಸ್ಟರ್ ಆದ ಪ್ರಜ್ಞಾನಂದ ವಿಶ್ವಕಪ್ ಗೆಲ್ಲೋದಕ್ಕೆ ಕಾಯುತ್ತಿದ್ದೇನೆ. ಆ ದಿನ ಬೇಗ ಬರಲಿ.
ಇಷ್ಟವಾದ ಸ್ಥಳ
ಈ ವರ್ಷ ಪ್ರವಾಸ ಮಾಡಿದ್ದು ಕಡಿಮೆ. ಸಣ್ಣ ಅಂತರಾಜ್ಯ ಪ್ರವಾಸದಲ್ಲಿ ಎರಡು ದಿನ ಅರಬ್ಬೀ ಸಮುದ್ರದ ರಾಣಿ ಕೊಚ್ಚಿಗೆ ಸ್ನೇಹಿತನೊಂದಿಗೆ ತೆರಳಿದ್ದೆ. ನಗರಕ್ಕೆ ಎಂಟ್ರಿಯಾಗುತ್ತಿದ್ದಂತೆ ವರುಣನ ಹಗುರ ಹನಿಗಳ ಸಿಂಚನದ ಅದ್ಧೂರಿ ಸ್ವಾಗತ ಕೊಟ್ಟಿತು. ಮುಗುಳ್ನಕ್ಕು ಮಾತನಾಡುವ ಜನರು ನಮ್ಮೋರೆ ಆಗಿಬಿಟ್ಟರು. ತರಹೇವಾರಿ ಖಾದ್ಯ ರುಚಿ ಮಾತ್ರವಲ್ಲ, ವಾಲೆಟ್ ದುಡ್ಡನ್ನೂ ಉಳಿಸಿತು. ಕೊಚ್ಚಿನ್‌ನಲ್ಲಿ ನನಗಿಷ್ಟವಾದ ಎರಡು ಅಂಶಗಳೆಂದರೆ, ಒಂದು ರಸ್ತೆಯಲ್ಲಿ ಹಾರ್ನ್ ಶಬ್ದ ತುಂಬಾ ಕಡಿಮೆ. ಇಲ್ಲಿನ ಜನರು ಆ ಶಿಸ್ತು ಇಷ್ಟ ಆಯ್ತು. ಮತ್ತೊಂದು ವಾಟರ್ ಮೆಟ್ರೋ.
ಇಷ್ಟವಾದ ಕ್ಷಣ
ಸೋದರಳಿಯನ ಜನನ. ವರ್ಷದ ಕೊನೆಯಲ್ಲಿ ಸೋದರಳಿಯ ಅಕ್ಕನ ಮಡಿಲಿಗೆ ಮಗುವಾಗಿ ಬಂದ. ವರ್ಷದಲ್ಲಿ ಅನುಭವಿಸಿದ ಎಲ್ಲಾ ನೋವು ಬಹುತೇಕ ಮರೆಯಾದವು.
ಇಷ್ಟವಾದ ಸಂದರ್ಭ(ಗಳು)
ವರ್ಕ್ ಫ್ರಂ ಹೋಮ್ ಬದುಕಿನಲ್ಲಿ ಸಹೋದ್ಯೋಗಿಗಳನ್ನು ನಿತ್ಯ ಭೇಟಿಯಾಗೊ ಪರಿಪಾಠವಿಲ್ಲ. ನಿತ್ಯ ಆನ್‌ಲೈನ್ ಮಾತುಕತೆ ನಡೆದರೂ ಆಫ್‌ಲೈನ್ ಭೇಟಿ ಭಾಗ್ಯ ಸಿಗಲ್ಲ. ಹಾಗಂತ ಭೇಟಿ ಆಗದೆ ಇರೋಕೆ ಸಾಧ್ಯವೇ. ಖಂಡಿತಾ ಇಲ್ಲ. ಹಂಗೇ ಕೊಪ್ಪಳ, ಹುಬ್ಬಳ್ಳಿ ಕಡೆ ಹೋದಾಗ ನಮ್ಮ ಸಹೋದ್ಯೋಗಿ ಮಂಜಣ್ಣ ಮನೆಗೆ ಹೋಗಿ ಖಾರ ಮಂಡಕ್ಕಿ, ಮಾವಿನಕಾಯಿ ಸೀಕರಣೆ, ಬಿಸಿ ಬಿಸಿ ಬಿರಿಯಾನಿ ಸವಿದೆ. ಮತ್ತೆ ಬೆಂಗಳೂರು ಹೋದಾಗ ಪ್ರವೀಣ್ ಅವರನ್ನೂ ಭೇಟಿಯಾದೆ. ಕರಾವಳಿ ಶೈಲಿಯ ಊಟ ಸವಿದು ಹೊಟ್ಟೆ ತಂಪಾಯ್ತು. ಆ ಮೇಲೆ ಹಿರಿಯ ಸಹೋದ್ಯೋಗಿ ಉಮೇಶ್ ಶಿಮ್ಲಡ್ಕ ಅವರ ಭೇಟಿ ಅಚಾನಕ್ ಆಗಿ ಆಗೋಯ್ತು. ಆದ್ರೂ ಅವರ ಮನೆಯೂಟ ತಿಂದ ಕೈ ಪರಿಮಳ, ಸ್ವಾದ ಇನ್ನೂ ಹೋಗಿಲ್ಲ. ಹಂಗೇ ಮೈಸೂರು ಕಡೆ ಹೋದಾಗ ಪ್ರಕೃತಿಯನ್ನು ಅತಿಯಾಗಿ ಪ್ರೀತಿಸುವ ಹಿರಿಯ ಸಹೋದ್ಯೋಗಿ ಉಮೇಶ್ ಭಟ್ಟ ಅವರನ್ನು ಭೇಟಿಯಾದ ಕ್ಷಣ ತುಂಬಾ ಖುಷಿ ಕೊಟ್ಟಿತು. ಸದ್ಯ ಇನ್ನಷ್ಟು ಸಹೋದ್ಯೋಗಿಗಳ ಮೊದಲ ಭೇಟಿಗೆ ದಿನ ಎಣಿಸುತ್ತಿದ್ದೇನೆ.
ಇಷ್ಟವಾದ ಆಪ್ (ಅಪ್ಲಿಕೇಶನ್)
ಸ್ಪಾಟಿಫೈ (Spotify)
ಇಷ್ಟವಾದ ಆಹಾರ
ಮಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ವೈಬ್ರೆಂಟ್ ಗ್ರೀನ್ ಬೇಸಿಲ್ ಪೆಸ್ಟೋ (Vibrant Green Basil Pesto) ಸವಿದಿದ್ದು ಸ್ಮರಣೀಯ ಅನುಭವ. ಬ್ರೋಕನ್ ಬಾಟಲ್ ಸರ್ವಿಂಗ್ ಬೌಲ್‌ನಲ್ಲಿ ಭಿನ್ನವಾಗಿ ಸರ್ವ್ ಮಾಡೊ ಈ ಆಹಾರ ರುಚಿಯಿಂದ ಮಾತ್ರವಲ್ಲ, ಸರ್ವಿಂಗ್‌ನಲ್ಲೇ ಇಷ್ಟ ಆಗೋಯ್ತು.
ಇಷ್ಟವಾದ ಟೆಲಿವಿಷನ್ ಶೋ
ಮಾಸ್ಟರ್‌ಶೆಫ್ ಇಂಡಿಯಾ(8). ರಾಷ್ಟ್ರಮಟ್ಟದ ಟಿವಿ ಶೋನಲ್ಲಿ ಮಂಗಳೂರಿನ ಯುವಕ (ಆಶಿಕ್) ಗೆದ್ದಿರುವುದು ಮತ್ತಷ್ಟು ಖುಷಿಕೊಟ್ಟಿತು.