Rewind 2023: ಕಂಬಳ, ಪಾಲಕ್ ಇಡ್ಲಿಯಿಂದ ಸುಭಾಷಿತ ಕ್ಯಾಲೆಂಡರ್‌ವರೆಗೆ 2023 ನನಗಾಗಿ ಬಿಟ್ಟು ಹೋದ ಅಮೂಲ್ಯ ನೆನಪುಗಳಿವು
2023ರ ಕೊನೆಯ ದಿನ ಇಂದು. ಹೌದು ಇದು 2023 ಮುಗಿಯುವ ಹೊತ್ತು. ನೆನಪಿನ ಬುತ್ತಿ ತೆರೆದಾಗ ಕಂಡ 10 ತುತ್ತುಗಳಿವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬಹಳ ಬೇಗ ಕ್ಯಾಲೆಂಡರ್ ವರ್ಷ ಉರುಳಿ ಹೋಯಿತು. ಡಿಜಿಟಲ್ ಯುಗದ ವೇಗಕ್ಕೆ ಒಗ್ಗಿಕೊಳ್ಳುವ ಧಾವಂತದಲ್ಲಿ ದಿನದ 24 ಗಂಟೆ, ವಾರದ 7 ದಿನದ ವರ್ಷದ 365 ದಿನ ಸಾಕಾಗುವುದಿಲ್ಲ ಎಂದು ಪದೇಪದೆ ಹೇಳುತ್ತಿರುವಾಗಲೇ 2023 ಮುಗಿಯಿತು. ಹೌದು, ಕಳೆದ 365 ದಿನಗಳಲ್ಲಿ ನಿತ್ಯ ಬದುಕಿನಲ್ಲೂ ನೂರಾರು ಸಣ್ಣಪುಟ್ಟ ಸನ್ನಿವೇಶಗಳು ಬಂದು ಹೋಗಿವೆ. ಸಾಮಾಜಿಕ ಬದುಕಿನಲ್ಲೂ ಅನೇಕಾನೇಕ ಘಟನೆಗಳಾಗಿವೆ. ಉತ್ತಮ ಫಲಿತಾಂಶದ್ದೂ ಇವೆ, ಕೆಟ್ಟ ಪರಿಣಾಮದ್ದೂ ಇವೆ. ಆದರೆ, 2023 ಕ್ಯಾಲೆಂಡರ್ ವರ್ಷವನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು?
ವೈಯಕ್ತಿಕವಾಗಿ ಹೇಳುವುದಾದರೆ, ಧನಾತ್ಮಕ ಚಿಂತನೆಗಳೊಂದಿಗೆ ಮುನ್ನಡೆಯಬೇಕೇ ಹೊರತು, ಋಣಾತ್ಮಕ ಚಿಂತನೆಗಳೊಂದಿಗೆ ಕುಸಿದುಬಿಡಬಾರದು. ನಮ್ಮ ಬದುಕಿಗೆ ಶಕ್ತಿ ತುಂಬಬಲ್ಲ ಘಟನೆಗಳು, ವಿದ್ಯಮಾನಗಳನ್ನು, ಓದಿದ ಅಂಶಗಳನ್ನು ನೆನಪಿನ ಬುತ್ತಿಯೊಳಗೆ ತುಂಬಿಕೊಳ್ಳುತ್ತ ಸಾಗಬೇಕು. ಅದು ಹೊಸ ವರ್ಷದ ಬದುಕಿನ ಪ್ರಯಾಣಕ್ಕೆ ಇಂಧನ.
ಈ ವರ್ಷದ ಕೊನೆಯ ದಿನ ಇಂದು. ಇದು 2023 ಮುಗಿಯುವ ಹೊತ್ತು. ನೆನಪಿನ ಬುತ್ತಿ ತೆರೆದಾಗ ನನಗೆ ಕಂಡ 10 ತುತ್ತುಗಳಿವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
2023 ಮುಗಿಯುವ ಹೊತ್ತು ನೆನಪಿನ ಬುತ್ತಿಯೊಳಗೆ ಕಂಡ 10 ತುತ್ತು
1. HT ಕನ್ನಡ ಸಹೋದ್ಯೋಗಿ ಸ್ನೇಹಿತರೆಲ್ಲರ ನಿಯತ ಅಂಕಣಗಳು: ಹೊಸ ಹೊಸ ವಿಷಯಗಳನ್ನು ಎತ್ತಿಕೊಂಡು ಒಂದಷ್ಟು ಮಾಹಿತಿ ಸಂಗ್ರಹಿಸಿ, ಅಧ್ಯಯನ ನಡೆಸಿ ಅವುಗಳನ್ನೆಲ್ಲ ಅಂದವಾಗಿ, ಸರಳವಾಗಿ ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ನಿರೂಪಿಸುವುದು ಸುಲಭದ ಕೆಲಸವೇನಲ್ಲ. ಹಲವರು ಕ್ಷೇತ್ರಕಾರ್ಯ ಮಾಡಿ ಅಂಕಣ ಬರೆಯುತ್ತಿದ್ದಾರೆ. ಉಳಿದವರು ಅಧ್ಯಯನ ಮಾಡಿಕೊಂಡು ಅಂಕಣ ಬರೆಯುತ್ತಿದ್ದಾರೆ. ಇಡೀ ತಂಡ ಈ ರೀತಿ ಪ್ರದರ್ಶನ ನೀಡುವುದು ಪ್ರೇರಣಾದಾಯಿ. ನಮ್ಮೆಲ್ಲರ ಅಂಕಣಗಳನ್ನು ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಬಹುದು.
2. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ): 2022ರ ನವೆಂಬರ್ 30 ರಂದು ಚಾಟ್‌ಜಿಪಿಟಿ ಸಾರ್ವಜನಿಕ ಬಳಕೆಗೆ ಬಂತಾದರೂ, 2023ರಲ್ಲಿ ಅಂದರೆ ಇದೇ ವರ್ಷ ಹೆಚ್ಚು ಜನಪ್ರಿಯವಾಯಿತು. ಎಲ್ಲರಂತೆ ಕುತೂಹಲಕ್ಕೆಂದು ಒಂದಿಷ್ಟು ಪ್ರಯೋಗವನ್ನು ಮಾಡಿದೆ. ಡಿಜಿಟಲ್ ಪತ್ರಿಕೋದ್ಯಮದ ಕೆಲಸದಲ್ಲಿರುವ ಕಾರಣ, ಸರ್ಚ್ ಇಂಜಿನ್ ಆಪ್ಟಿಮೈಸೇಶನ್‌ಗೆ ಸಂಬಂಧಿಸಿದ ನೆರವು ಪಡೆಯಲು ಪ್ರಯತ್ನಿಸಿದೆ. ಅದರ ಕೆಲಸ ಖುಷಿಕೊಟ್ಟಿತು. ಅಂದ ಹಾಗೆ ನಮ್ಮ HTಕನ್ನಡದಲ್ಲಿ ಚಾಟ್‌ಜಿಪಿಟಿ ಕುರಿತ ಸುದ್ದಿ, ಲೇಖನಗಳು ಪ್ರಕಟವಾಗಿವೆ.
3. ಇಮೋಷನಲ್ ಇಂಟೆಲಿಜೆನ್ಸ್ (ಇಕ್ಯೂ): ಹೀಗಂದರೆ ಭಾವನಾತ್ಮಕ ಬುದ್ಧಿವಂತಿಕೆ. ಹೀಗೊಂದು ಅಧ್ಯಯನ ವಿಷಯ ಇದೆ. ಮತ್ತು ನಿತ್ಯ ಬದುಕಿನಲ್ಲಿ ಇದನ್ನು ಅಳವಡಿಸಿ ನಾವು ಬದಲಾಗಬೇಕಾದ ಅಗತ್ಯ ಮನವರಿಕೆಯಾಯಿತು. ಹುಟ್ಟಿನಿಂದ ಸಾವಿನ ತನಕದ ನಮ್ಮ ಬದುಕು, ಮೊಗ್ಗು ಹೂವಾಗಿ, ಹೂವು ಕಾಯಿಯಾಗಿ, ಕಾಯಿ ಹಣ್ಣಾಗುವಂತೆ ಮಾಗಬೇಕಾದುದು. ಅನುಭವಗಳು ನಮ್ಮ ಬದುಕಿನ ಪಾಠಗಳು ನಿಜ. ಆದರೆ ಬದುಕಿಗೆ ಅಗತ್ಯವಾದ ವಿಷಯಗಳ ಓದುವಿಕೆ ಇದೆಯಲ್ಲ ಅದು ನಿಜಕ್ಕೂ ನಮ್ಮನ್ನು ಮಾಗಿಸಿಬಿಡುತ್ತದೆ. ಭಾವನಾತ್ಮಕ ಬುದ್ಧಿವಂತಿಕೆ ಇದೆಯಲ್ಲ ಅದು ಹೆಚ್ಚಾಗಿ ಬಳಕೆಯಲ್ಲಿರುವುದು ಕೆಲಸದ ಸ್ಥಳದಲ್ಲಿ. ಇದರಲ್ಲಿ ಸ್ವಯಂ ಅರಿವು, ಸ್ವ ನಿಯಂತ್ರಣ, ಪರರ ಕುರಿತಾದ ಸಹಾನುಭೂತಿ, ಸಾಮಾಜಿಕ ಕೌಶಲಗಳು ಎಂಬ 4 ಮುಖ್ಯ ಅಂಶಗಳ ಕುರಿತಾಗಿ ನಾವು ತಿಳಿದುಕೊಂಡಿರಬೇಕು.
4. ಬದಲಾಗುತ್ತಿವೆ ಸಾಮಾಜಿಕ ಮೌಲ್ಯಗಳು: ನಮ್ಮ ಆಲೋಚನೆಗಳು ಬದಲಾಗಬೇಕಾಗಿವೆ. ಕಳೆದ ಒಂದು ದಶಕದ ಅವಧಿಯನ್ನು ಒಮ್ಮೆ ಅವಲೋಕಿಸಿ ನೋಡಿ. ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರತಿಯೊಂದು ವಿಚಾರದಲ್ಲೂ ಅಪವಾದಗಳಿವೆ. ಕುಟುಂಬಗಳಲ್ಲಿ, ಸಮಾಜದಲ್ಲಿ, ಕೆಲಸದ ಸ್ಥಳಗಳಲ್ಲಿ, ಎಲ್ಲದಕ್ಕೂ ಮಿಗಿಲಾಗಿ ಸೇನೆಯ ನೇಮಕಾತಿಯಲ್ಲೂ ಹೆಣ್ಮಕ್ಕಳಿಗೆ ಪ್ರಾಶಸ್ತ್ಯ ಸಿಗಲಾರಂಭಿಸಿದ್ದು ಖುಷಿಯ ವಿಚಾರ.
5. ಕೌಟುಂಬಿಕ ಮೌಲ್ಯಗಳಲ್ಲೂ ಬದಲಾವಣೆ: ತಲೆಮಾರು ಕಳೆದಂತೆಲ್ಲ ಆಲೋಚನೆಗಳು ಬದಲಾಗಬೇಕು ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಕೆಲವು ಸಿನಿಮಾಗಳಲ್ಲಿ ಇದು ಬಿಂಬಿತವಾಗಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ. ಯುವ ತಲೆಮಾರನ್ನು, ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳದ ಹಳೆತಲೆಮಾರು. ತಮ್ಮದು ಶಿಸ್ತಿನ ಜೀವನ, ಬದುಕು ಎನ್ನುತ್ತ ತಾವು ವಿಧಿಸಿಕೊಂಡ ಚೌಕಟ್ಟಿನೊಳಗೆ ಕುಟುಂಬದ ಸದಸ್ಯರೆಲ್ಲರನ್ನೂ ಕೂರಿಸುವ ಪ್ರಯತ್ನ. ಅದನ್ನು ಹಿರಿಯರಿಗೆ ಅರ್ಥಮಾಡಿಸಿಕೊಡುವ ಪ್ರಯತ್ನದಲ್ಲಿ ಹತಾಶೆ, ನೋವು ಸಂಕಟಗಳನ್ನು ಅನುಭವಿಸುವ ಯುವ ಪೀಳಿಗೆ. ಈ ಸಿನಿಮಾ ಯಾಕೋ ಮನಸ್ಸಿಗೆ ಬಹಳ ತಟ್ಟಿದೆ.
6. ಮೊದಲ ಬಾರಿಗೆ ಬೆಂಗಳೂರಲ್ಲಿ ಕರಾವಳಿಯ ಕಂಬಳ: ಕಾಂತಾರ ಸಿನಿಮಾದಲ್ಲಿ ಕಂಬಳದ ದೃಶ್ಯ ಒಂದು ಕ್ರೇಜ್ ಅನ್ನು ಹುಟ್ಟುಹಾಕಿತ್ತು. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಪ್ರತೀಕವಾಗಿರುವ ಕಂಬಳ ನವೆಂಬರ್ ಕೊನೆಯಲ್ಲಿ ನಡೆಯಿತು. ಇದು ಐತಿಹಾಸಿಕ ವಿದ್ಯಮಾನವಾಗಿದ್ದು ಸದಾ ನೆನಪಿನಲ್ಲಿ ಉಳಿಯುವಂಥದ್ದು. ಇದರ ವರದಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಮಾಡಿತ್ತು.
7. ‘ಡಂಕಿ’ ಸಿನಿಮಾ ಮತ್ತು ಡಾಂಕಿ ರೂಟ್: ಅಮೆರಿಕಕ್ಕೆ ಹೋಗುವ ಕನಸನ್ನು ನನಸು ಮಾಡಲು ಅಪಾಯಕಾರಿ ಪ್ರಯಾಣದ ಕಥೆ ಮನಸ್ಸನ್ನು ಬಹುವಾಗಿ ಬಾಧಿಸಿತು. ಡಂಕಿ ಸಿನಿಮಾವನ್ನು ಹಾಸ್ಯ ಲೇಪದೊಂದಿಗೆ ನೀಡಲಾಗಿದೆ. ಮನರಂಜನೆ ದೃಷ್ಟಿಯಿಂದ ಓಕೆ. ಆದರೆ ನಿಜ ಜೀವನದ ಡಾಂಕಿ ರೂಟ್, ಡಾಂಕಿ ಫ್ಲೈಟ್ ವಿದ್ಯಮಾನಗಳು ಭಯ ಹುಟ್ಟಿಸುವಂತವು. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ತಡೆ ಹಿಡಿಯಲ್ಪಟ್ಟ ವಿಮಾನದಲ್ಲಿದ್ದ 300ರಷ್ಟು ಭಾರತೀಯರದ್ದು ಇದೇ ಕಥೆ- ವ್ಯಥೆ. ಕುತೂಹಲವಿದ್ದರೆ “ಅಪಾಯಕಾರಿ ಅಮೆರಿಕನ್ ಡ್ರೀಮ್‌ಗೆ ಡಾಂಕಿ ರೂಟ್, ಡಾಂಕಿ ಫ್ಲೈಟ್ ಹಿಡಿದ 96,917 ಭಾರತೀಯರು ಅಮೆರಿಕದಲ್ಲಿ ಸೆರೆ” ಎಕ್ಸ್‌ಪ್ಲೇನರ್ ಅನ್ನು ನೀವು ಓದಬಹುದು.
8. ಲೀಲಮ್ಮನ ಬದುಕು: ಸಂಕಷ್ಟದಲ್ಲೇ ಕಳೆದ ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಅವರ ಬದುಕು, ಬವಣೆಗಳ ನಡುವೆ ಅವರ ಸಾಮಾಜಿಕ ಕಳಕಳಿ ಆದರ್ಶಪ್ರಾಯವಾದುದು. ಎಷ್ಟೇ ಕಷ್ಟ ಇದ್ದರೂ ನುಂಗಿ, ನಗುತ್ತಿರಬೇಕು ಎನ್ನುವ ತತ್ತ್ವ ಪಾಲಿಸಿದವರು. ಆಸ್ಪತ್ರೆ ಕಟ್ಟಿಸಿ, ಕಲಾವಿದರಿಗೆ ಗೌರವ ಸಿಗಬೇಕು ಎನ್ನುತ್ತ ತಮ್ಮದೇ ಆದ ರೀತಿಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದವರು ಲೀಲಮ್ಮ. ಲೀಲಾ ಕಿರಣ್ ಎಂಬ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದವರು ಲೀಲಾವತಿಯಾಗಿ ಬದುಕು ಕಟ್ಟಿಕೊಂಡ ರೀತಿ ಸಾಹಸಮಯವಾದುದು. ಸಂಕಷ್ಟದಲ್ಲೂ ಧನಾತ್ಮಕ ಆಲೋಚನೆಗಳೊಂದಿಗೆ ಮುನ್ನಡೆಯಲು ಪ್ರೇರಣೆ ಅವರು.
9. ಪಾಲಾಕ್ ಇಡ್ಲಿ: ನನಗೆ ಇಡ್ಲಿ ಅಂದರೆ ಪಂಚಪ್ರಾಣ. ಮೂರು ಹೊತ್ತು ಕೂಡ ಇಡ್ಲಿ ತಿಂದು ಬದುಕಬಲ್ಲೆ. ಇಡ್ಲಿಯಲ್ಲಿ ವೈರಟಿ ಪ್ರಯತ್ನಿಸುವುದು ಕೂಡ ಖುಷಿ. ಈ ವರ್ಷ ಪಾಲಾಕ್ ಇಡ್ಲಿ ತಿಂದೆ. ಕೆಲವು ಕಡೆ ಹೆಸರುಬೇಳೆ ಬಳಸಿ ಇಡ್ಲಿ ಮಾಡ್ತಾರೆ. ಅದು ಅಷ್ಟು ರುಚಿಸಲ್ಲ ನನಗೆ. ಹೀಗಾಗಿ ಉದ್ದಿನ ಇಡ್ಲಿಯೇ ಖುಷಿ. ಆದರೂ ಪಾಲಕ್ ಇಡ್ಲಿ ಟೇಸ್ಟ್ ಚೆನ್ನಾಗಿದೆ. ನೀವು ಟ್ರೈ ಮಾಡ್ತೀರಾದರೆ ಇಲ್ಲಿದೆ ರೆಸಿಪಿ - ನಾಲಗೆಗೂ ರುಚಿ, ಆರೋಗ್ಯಕ್ಕೂ ಹಿತ ಪಾಲಕ್ ಇಡ್ಲಿ; ತಯಾರಿಸುವ ವಿಧಾನ ಹೀಗಿದೆ
10. ಸುಭಾಷಿತಗಳ ಕ್ಯಾಲೆಂಡರ್: 2023ರ ನೆನಪಿನ ಬುತ್ತಿಯ ಕೊನೆಯ ತುತ್ತು ಇದು. ಸ್ಮರಣೀಯವಾಗಬೇಕು ಎಂದು ಆಲೋಚಿಸುತ್ತಿರುವಾಗಲೇ ಹೊಳೆದ ಚಿಂತನೆ ಇದು. ನಾವು ಪ್ರತಿದಿನ ಪೋಸ್ಟ್ ಮಾಡುವ ಸುಭಾಷಿತಗಳನ್ನು ಹಲವರು ಆಸಕ್ತಿಯಿಂದ ಗಮನಿಸುತ್ತಾರೆ. ಈ ಸಲ ಕೆಲ ಸುಭಾಷಿಗಳನ್ನೇ ಬಳಸಿಕೊಂಡು ಕ್ಯಾಲೆಂಡರ್ ಮಾಡಿದೆವು. ಅದು ಹೀಗಿದೆ ನೋಡಿ - 'HT ಕನ್ನಡ' ಓದುಗರಿಗೆ ಇಲ್ಲಿದೆ 12 ನುಡಿಮುತ್ತುಗಳಿರುವ ಸೊಗಸಾದ ಕ್ಯಾಲೆಂಡರ್