Yoga for Winters- ಚಳಿಗೆ ಬೇಗ ಎದ್ದೇಳಲು ಆಗುತ್ತಿಲ್ಲವೇ: ಆಲಸ್ಯವನ್ನು ಸೋಲಿಸುವ ಯೋಗಾಸನಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Yoga For Winters- ಚಳಿಗೆ ಬೇಗ ಎದ್ದೇಳಲು ಆಗುತ್ತಿಲ್ಲವೇ: ಆಲಸ್ಯವನ್ನು ಸೋಲಿಸುವ ಯೋಗಾಸನಗಳಿವು

Yoga for Winters- ಚಳಿಗೆ ಬೇಗ ಎದ್ದೇಳಲು ಆಗುತ್ತಿಲ್ಲವೇ: ಆಲಸ್ಯವನ್ನು ಸೋಲಿಸುವ ಯೋಗಾಸನಗಳಿವು

ಈ ಚಳಿಗೆ ಬೆಳಗ್ಗೆ ಬೇಗ ಎದ್ದೇಳಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಕೀಲುನೋವು ಇತ್ಯಾದಿ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಯೋಗದಿಂದ ಪರಿಹಾರ ಪಡೆಯಬಹುದು. ಶೀತ ಹವಾಮಾನದಲ್ಲಿ, ಸೂರ್ಯನ ಬೆಳಕು ಅಷ್ಟಾಗಿ ಬೀಳುವುದಿಲ್ಲವಾದ್ದರಿಂದ ಸ್ನಾಯುಗಳಲ್ಲಿ ನೋವುಂಟಾಗಲು ಕಾರಣವಾಗುತ್ತದೆ. ಹೀಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Yoga for Winters- ಚಳಿಗೆ ಬೇಗ ಎದ್ದೇಳಲು ಆಗುತ್ತಿಲ್ಲವೇ: ಆಲಸ್ಯವನ್ನು ಸೋಲಿಸುವ ಯೋಗಾಸನಗಳಿವು
Yoga for Winters- ಚಳಿಗೆ ಬೇಗ ಎದ್ದೇಳಲು ಆಗುತ್ತಿಲ್ಲವೇ: ಆಲಸ್ಯವನ್ನು ಸೋಲಿಸುವ ಯೋಗಾಸನಗಳಿವು (Pexel)

ಚಳಿಯಲ್ಲಿ ಬೆಳಗ್ಗೆ ಬೇಗ ಎದ್ದೇಳಲು ಸಾಧ್ಯವಾಗುವುದಿಲ್ಲ. ಹೊದಿಕೆ ಹೊದ್ದುಕೊಂಡು ಹಾಯಾಗಿ ಮಲಗಿಬಿಡೋಣ ಎಂದೆನಿಸುತ್ತದೆ. ಇನ್ನೂ ವ್ಯಾಯಾಮ ಅಥವಾ ಯೋಗಾಸನ ಮಾಡುವುದು ದೂರದ ಮಾತು. ಆದರೆ, ಪ್ರತಿದಿನ ಯೋಗಾಸನ ಮಾಡುತ್ತಿದ್ದರೂ ಚಳಿಗಾಲದಲ್ಲಿ ಬೆಳಗೆದ್ದಾಗ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರಬಹುದು. ಈ ಶೀತ ಹವಾಮಾನವು ಕೆಲವೊಮ್ಮೆ ಕೀಲುನೋವಿನಿಂದ ಬಳಲುತ್ತಿರುವವರಿಗೆ ಬಹಳ ಕಷ್ಟಕರವಾಗಿದೆ. ಶೀತ ಹವಾಮಾನದಲ್ಲಿ, ಸೂರ್ಯನ ಬೆಳಕು ಅಷ್ಟಾಗಿ ಬೀಳುವುದಿಲ್ಲವಾದ್ದರಿಂದ ಸ್ನಾಯುಗಳಲ್ಲಿ ನೋವುಂಟಾಗಲು ಕಾರಣವಾಗುತ್ತದೆ.

ದೇಹದಲ್ಲಿ ಶಾಖವನ್ನು ಉತ್ಪಾದಿಸಲು ದೇಹವು ಸ್ನಾಯುಗಳನ್ನು ಸಂಕುಚಿತಗೊಳಿಸಲು ಪ್ರಾರಂಭಿಸುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದಾಗಿ ಚಳಿಗಾಲದಲ್ಲಿ ನಿಷ್ಕ್ರಿಯತೆಯು ಹೆಚ್ಚಾಗುತ್ತದೆ. ಹವಾಮಾನವು ನಮ್ಮ ದೇಹದ ಚಕ್ರದಲ್ಲಿ ಬದಲಾವಣೆಯನ್ನು ತರುತ್ತದೆ. ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹವಾಮಾನವು ಸಿರ್ಕಾಡಿಯನ್ ಚಕ್ರದಲ್ಲಿ ಬದಲಾವಣೆಯನ್ನು ತರುತ್ತದೆ. ಇದು ಹೈಪೋಥಾಲಮಸ್ ಗ್ರಂಥಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ನಮ್ಮ ದೇಹದ ಉಷ್ಣತೆ ಮತ್ತು ನಿದ್ರೆಯ ಚಕ್ರಗಳನ್ನು ನಿಯಂತ್ರಿಸುತ್ತದೆ. ಇದಕ್ಕಾಗಿ ಈ ಯೋಗಾಸಾನಗಳನ್ನು ಅಭ್ಯಾಸ ಮಾಡಿದರೆ ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಹಾಗೆಯೇ ಆಲಸ್ಯವನ್ನು ಕೂಡ ದೂರಮಾಡಬಹುದು. ಬನ್ನಿ ಆಲಸ್ಯ ದೂರ ಮಾಡುವ ಹಾಗೂ ಸಮಸ್ಯೆ ನಿವಾರಿಸುವ ಯೋಗಾಸನಗಳನ್ನು ಇಲ್ಲಿ ತಿಳಿದುಕೊಳ್ಳೋಣ.

ಚಳಿಗಾಲಕ್ಕೆ ಸೂಕ್ತವಾದ ಯೋಗಾಸನಗಳು ಇಲ್ಲಿವೆ

ತ್ರಿಕೋನಾಸನ (ತ್ರಿಕೋನ ಭಂಗಿ): ತ್ರಿಕೋನಾಸನ ಅಥವಾ ತ್ರಿಕೋನ ಭಂಗಿಯು ನಿಂತಿರುವ ಆಸನವಾಗಿದೆ ಮತ್ತು ಇದನ್ನು ಎಡ ಮತ್ತು ಬಲ ಎರಡೂ ಬದಿಗಳಿಂದ ಮಾಡಲಾಗುತ್ತದೆ. ವ್ಯಕ್ತಿಯು ನಿಂತಿರುವ ಭಂಗಿಯಲ್ಲಿ ಈ ಆಸನವನ್ನು ಮಾಡಲು ಪ್ರಾರಂಭಿಸಬಹುದು. ನೇರವಾಗಿ ನಿಂತು, ಕಾಲುಗಳನ್ನು ಅಗಲವಾಗಿ ಇರಿಸಬೇಕು. ಬಲ ಪಾದಲನ್ನು 90 ಡಿಗ್ರಿಗಳಲ್ಲಿ ಇರಿಸಿ. ಎಡ ಪಾದವನ್ನು 15 ಡಿಗ್ರಿಗಳಲ್ಲಿ ಇರಿಸಿ. ತೋಳುಗಳನ್ನು ಎರಡೂ ಬದಿಗಳಲ್ಲಿ ಅಗಲವಾಗಿ ಇರಿಸಿ. ಎರಡೂ ಕಾಲುಗಳಿಗೂ ಸಮಾನ ಭಾರ ಹಾಕಿರಬೇಕು. ಆಳವಾಗಿ ಉಸಿರಾಡುತ್ತಾ, ದೇಹವನ್ನು ಬಲಭಾಗಕ್ಕೆ ಸೊಂಟದಿಂದ ಕೆಳಕ್ಕೆ ಬಗ್ಗಿಸಬೇಕು. ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲಕ್ಕೆ ತೆಗೆದುಕೊಳ್ಳಬೇಕು. ಸೊಂಟವನ್ನು ನೇರವಾಗಿ ಇರಿಸಬೇಕು. ಬಲಗೈಯನ್ನು ಕಾಲ್ಬೆರಳುಗಳ ಮೇಲೆ ಇರಿಸಿ, ಎಡಗೈಯನ್ನು ಮೇಲಕ್ಕೆ ಇರಿಸಬೇಕು. ಈ ರೀತಿ ಎರಡೂ ಕಡೆ ಮಾಡಬೇಕು.

ಪ್ರಯೋಜನಗಳು: ತ್ರಿಕೋನಾಸನದ ಪ್ರಯೋಜನಗಳು ಅದ್ಭುತವಾಗಿದೆ. ಇದು ಬೆನ್ನು ನೋವಿನಿಂದ ಪರಿಹಾರ ನೀಡುವಲ್ಲಿ ಸಹಕಾರಿಯಾಗಿದೆ. ಒತ್ತಡ ಮತ್ತು ಆತಂಕವನ್ನು ಸಹ ಕಡಿಮೆ ಮಾಡುತ್ತದೆ.

ಮತ್ಸ್ಯಾಸನ (ಮೀನಿನ ಭಂಗಿ): ಮತ್ಸ್ಯ ಎಂದರೆ ಮೀನು ಎಂದರ್ಥ. ಮತ್ಸ್ಯದ ಸ್ಥಿತಿಯನ್ನು ಹೋಲುವುದರಿಂದ ಆಸನಕ್ಕೆ ಈ ಹೆಸರು ಬಂದಿದೆ. ಪದ್ಮಾಸನದ ಸ್ಥಿತಿಯಲ್ಲಿ ಕುಳಿತುಕೊಂಡ ನಂತರ ಸುಪ್ತ ಪದ್ಮಾಸನದ ಸ್ಥಿತಿಗೆ ಬರಬೇಕು. ಎರಡೂ ಕೈಗಳನ್ನು ಭುಜದ ಹತ್ತಿರ ತೆಗೆದುಕೊಂಡು ಬಂದು ಬೆನ್ನನ್ನು ಹಾಗೂ ಎದೆಯನ್ನು ಮೇಲಕ್ಕೆ ಎತ್ತಬೇಕು. ತಲೆಯನ್ನು ನೆಲಕ್ಕೆ ಹಿಂದಿನಿಂದ ತಾಗಿಸಬೇಕು. ಎರಡು ಕೈಗಳಿಂದ ಕಾಲ್ಬೆರಳುಗಳನ್ನು ಹಿಡಿದುಕೊಳ್ಳಬೇಕು.

ಪ್ರಯೋಜನಗಳು: ಮತ್ಸ್ಯಾಸನವು ಹೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಈ ಆಸನವನ್ನು ಎಲ್ಲಾ ರೋಗಗಳ ನಾಶಕ ಎಂದು ಕರೆಯಲಾಗುತ್ತದೆ. ಈ ಆಸನ ಮಾಡುವುದರಿಂದ ಎದೆಯ ಭಾಗ ಹಿಗ್ಗಲ್ಪಡುತ್ತದೆ. ಥೈರಾಯ್ಡ್, ಅಸ್ತಮಾ, ಹೃದಯ ಸಮಸ್ಯೆ ಇತ್ಯಾದಿಗಳಿಗೆ ಇದು ಪರಿಹಾರ ನೀಡುತ್ತದೆ.

ಉತ್ತಾನಾಸನ: ಇದು ನಿಂತಿರುವ ಆಸನ, ಒಂದು ರೀತಿಯ ಮುಂದಕ್ಕೆ ಬಾಗಿದ ಭಂಗಿ. ಮೊದಲು ನೇರವಾಗಿ ನಿಂತುಕೊಳ್ಳಬೇಕು. ಎರಡೂ ಪಾದಗಳ ಅಂತರ ಅರ್ಧ ಅಡಿಯಷ್ಟಿರಲಿ. ಎರಡೂ ಮಂಡಿಗಳನ್ನು ಮಡಚಿ ಕುಕ್ಕರು ಕಾಲಿನಲ್ಲಿ ಕುಳಿತು ಪಾದಗಳನ್ನು ಹಿಡಿದುಕೊಳ್ಳಿ. ನಂತರ ನಿಧಾನವಾಗಿ ಕಾಲುಗಳನ್ನು ನೇರ ಮಾಡುತ್ತಾ ಮೇಲೆ ಬರಬೇಕು. ಮಂಡಿಗಳು ಬಿಗಿಯಾಗಿರಲಿ. ಕೈಗಳು ನೇರವಾಗಿರಲಿ.

ಪ್ರಯೋಜನಗಳು: ಈ ಆಸನವು ಯಕೃತ್ತು, ಮೂತ್ರಪಿಂಡದ ಕಾರ್ಯಗಳನ್ನು ನಿರ್ವಹಿಸುತ್ತದೆ. ಅಸಿಡಿಟಿ, ಡಯಾಬಿಟಿಸ್‌ಗೂ ಇದು ಉತ್ತಮ ಆಸನ. ಅಲ್ಲದೆ ಹೊಟ್ಟೆಯ ಕೊಬ್ಬು ಕರಗಲು ಕೂಡ ಈ ಆಸನ ಸಹಾಯಕವಾಗಿದೆ.

Whats_app_banner