ದಿನಾ ಬೆಳಗ್ಗೆ ಬೇಗ ಏಳಲಾಗದೆ ಸೋಮಾರಿಯಂತೆ ಬಿದ್ದುಕೊಂಡಿದ್ದೀರಾ: ಈ ಐದು ಯೋಗಾಸನಗಳನ್ನು ಅಭ್ಯಾಸ ಮಾಡಿ, ದಿನಪೂರ್ತಿ ಲವಲವಿಕೆಯಿಂದಿರುವಿರಿ
ಯೋಗಾಸನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ದೇಹ ಫಿಟ್ ಆಗಿರಲು ಹಾಗೂ ಆರೋಗ್ಯದಿಂದ ಇರಲು ಸಹಾಯಕವಾಗಿದೆ. ಬೆಳಗ್ಗಿನ ದಿನಚರಿಯಲ್ಲಿ ಈ ಐದು ಯೋಗ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ದಿನಪೂರ್ತಿ ಚೈತನ್ಯದಿಂದಿರುವಿರಿ.
ಬೆಳಗ್ಗೆ ಎದ್ದ ತಕ್ಷಣ ಕೆಲವರು ಕಾಫಿ ಅಥವಾ ಚಹಾ ಹೀರುವ ಮೂಲಕ ದಿನವನ್ನು ಪ್ರಾರಂಭಿಸಿದ್ರೆ, ಇನ್ನು ಕೆಲವರು ಪೇಪರ್ ಓದುವುದು, ವಾಕಿಂಗ್, ವ್ಯಾಯಾಮ ಮಾಡುವುದು ಇತ್ಯಾದಿಗಳ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಇನ್ನೂ ಕೆಲವರು ಅಲಾರಂ ರಿಂಗ್ ಆಗುತ್ತಿದ್ರು ಹಾಸಿಗೆಯಿಂದ ಮೇಲೇಳದೆ ಸೋಮಾರಿಯಂತೆ ಮಲಗಿರುತ್ತಾರೆ. ಯೋಗ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದರಿಂದ ದಿನ ಪೂರ್ತಿ ಲವಲವಿಕೆಯಿಂದ ಇರುವಿರಿ. ಇದು ದೇಹವನ್ನು ಚೈತನ್ಯಗೊಳಿಸಬಹುದು. ನಿಮ್ಮ ದಿನವನ್ನು ತಾಜಾತನ ಮತ್ತು ಚೈತನ್ಯದೊಂದಿಗೆ ಆರಂಭಿಸಲು ಪ್ರತಿದಿನ ಈ ಐದು ಸರಳ ಯೋಗಾಸನ ಭಂಗಿಗಳನ್ನು ಅಭ್ಯಾಸ ಮಾಡಬಹುದು. ಈ ಆಸನಗಳನ್ನು ಮಾಡುವುದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನ ಒದಗಲೂ ಸಹಕಾರಿಯಾಗುತ್ತದೆ.
ಸೂರ್ಯ ನಮಸ್ಕಾರ:ಖಾಲಿ ಹೊಟ್ಟೆಯಲ್ಲಿ ಸೂರ್ಯ ನಮಸ್ಕಾರ ಮಾಡುವುದು ಉತ್ತಮ. ಸೂರ್ಯ ನಮಸ್ಕಾರವು ಹನ್ನೆರಡು ಭಂಗಿಗಳ ಅನುಕ್ರಮವಾಗಿದ್ದು, ಇದು ದೇಹದ ಪ್ರತಿಯೊಂದು ಭಾಗದಲ್ಲೂ ಕೆಲಸ ಮಾಡುತ್ತದೆ. ಸೂರ್ಯ ನಮಸ್ಕಾರಗಳನ್ನು ಅಭ್ಯಾಸ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಿಬಹುದು. ಅಲ್ಲದೆ ದೇಹಕ್ಕೆ ಶಕ್ತಿ, ಚೈತನ್ಯ ಹಾಗೂ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾಗಿದೆ.
ತಾಡಾಸನ (ಪರ್ವತ ಭಂಗಿ): ತಾಡಾಸನವನ್ನು ಪರ್ವತ ಭಂಗಿ ಎಂದೂ ಕರೆಯುತ್ತಾರೆ. ಈ ಭಂಗಿಯನ್ನು ಪ್ರಯತ್ನಿಸುವುದರಿಂದ ರಕ್ತ ಸಂಚಾರ ಸುಗಮವಾಗಿ ಸಾಗಲು ಸಹಾಯಕವಾಗಿದೆ. ಅಲ್ಲದೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಹಾಗೂ ದೇಹದ ಸಮತೋಲನ ಸಮಸ್ಥಿತಿಯಲ್ಲಿಡಲು ಈ ಆಸನ ಸಹಕಾರಿಯಾಗಿದೆ. ತಾಡಾಸನ ಮಾಡುವುದರಿಂದ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಧೋ ಮುಖ ಶ್ವಾನಾಸನಾ: ಹೆಸರೇ ಹೇಳುವಂತೆ ಶ್ವಾನ ಅಂದರೆ ನಾಯಿ. ಅಧೋ ಎಂದರೆ ಮುಂದೆ, ಮುಖ ಅಂದ್ರೆ ಮುಖ, ಶ್ವಾನ ಎಂದರೆ ನಾಯಿ. ಈ ಹೆಸರು ಸಂಸ್ಕೃತದಿಂದ ಬಂದಿದೆ ಅಧೋ ಮುಖ ಶ್ವಾನಾಸನಾ ಅಂದ್ರೆ ನಾಯಿ ಭಂಗಿ ಅಂತಲೂ ಕರೆಯಲಾಗುತ್ತದೆ. ನಾಯಿ ಮುಂದೆ ಬಾಗಿದಾಗ ಹೇಗೆ ಕಾಣಿಸುತ್ತದೆಯೋ ಅದೇ ರೀತಿಯಲ್ಲಿ ಈ ಭಂಗಿಯನ್ನು ಮಾಡಬೇಕಾಗುತ್ತದೆ. ಈ ಆಸನವನ್ನು ಮಾಡುವುದರಿಂದ ಅಧಿಕ ರಕ್ತದೊತ್ತಡ, ಅತಿಸಾರ ಇತ್ಯಾದಿ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಉತ್ಕಟಾಸನ (ಕುರ್ಚಿ ಭಂಗಿ): ಉತ್ಕಟಾಸನವನ್ನು ಕುರ್ಚಿ ಭಂಗಿ ಅಂತಲೂ ಕರೆಯುತ್ತಾರೆ. ಉತ್ಕಟ ಅಂದ್ರೆ ಕುರ್ಚಿ ಎಂಬರ್ಥ ಇರುವುದರಿಂದ ಈ ಹೆಸರಿನಿಂದ ಕರೆಯಲಾಗುತ್ತದೆ. ನಿಂತಿರುವ ಸ್ಥಾನದಿಂದ ಕುರ್ಚಿಯಲ್ಲಿ ಕುಳಿತಂತೆ ಮೊಣಕಾಲುಗಳನ್ನು ಬಗ್ಗಿಸಿ. ತೋಳುಗಳನ್ನು ಮೇಲಕ್ಕೆ ಚಾಚಿ. ಈ ಭಂಗಿಯನ್ನು ಮಾಡುವುದರಿಂದ ಶಕ್ತಿಯ ಮಟ್ಟ ಹೆಚ್ಚುತ್ತದೆ. ಈ ಆಸನವನ್ನು ಪ್ರಯತ್ನಿಸುವುದರಿಂದ ಕಾಲುಗಳು ಬಲಿಷ್ಠಗೊಳ್ಳುವುವು. ಗೂನು ಬೆನ್ನು ಇರುವವರು ಈ ಆಸನವನ್ನು ಪ್ರಯತ್ನಿಸುವುದು ಉತ್ತಮ. ಅಸ್ತಮಾ ಸಮಸ್ಯೆ, ಮಲಬದ್ಧತೆ, ಪೈಲ್ಸ್ ಸಮಸ್ಯೆ ಇತ್ಯಾದಿ ನಿವಾರಿಸಲು ಈ ಆಸನ ಉತ್ತಮ.
ಭುಜಂಗಾಸನ (ಕೋಬ್ರಾ ಭಂಗಿ): ಭುಜಂಗಾಸನವನ್ನು ಕೋಬ್ರಾ ಭಂಗಿ ಅಂತಲೂ ಕರೆಯುತ್ತಾರೆ. ನಾಗರ ಹಾವಿನ ಭಂಗಿಯಂತೆ ಎದೆಯನ್ನೆತ್ತಿ ಈ ಆಸನವನ್ನು ಮಾಡಬೇಕಾಗುತ್ತದೆ. ಹೊಟ್ಟೆಯ ಮೇಲೆ ಮಲಗಿ, ಕೈಗಳನ್ನು ಭುಜಗಳ ಕೆಳಗೆ ಇರಿಸಬೇಕು. ನಂತರ ಎದೆಯನ್ನು ನೆಲದಿಂದ ಮೇಲಕ್ಕೆತ್ತಬೇಕು. ಈ ಭಂಗಿಯನ್ನು ಮಾಡುವುದರಿಂದ ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ ಅಲ್ಲದೆ ಒತ್ತಡವನ್ನು ನಿವಾರಿಸಲು ಕೂಡ ಸಹಕಾರಿಯಾಗಿದೆ.
ಬೆಳಗ್ಗಿನ ದಿನಚರಿಯಲ್ಲಿ ಈ ಐದು ಯೋಗಾಸನಗಳನ್ನು ಮಾಡುವುದರಿಂದ ಶಕ್ತಿ ಹೆಚ್ಚಿಸಲು ಮತ್ತು ಸಕಾರಾತ್ಮಕತೆಯಿಂದ ದಿನವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಈ ಭಂಗಿಯ ನಿಯಮಿತ ಅಭ್ಯಾಸವು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನವನ್ನು ಸಹ ಸುಧಾರಿಸುವಲ್ಲಿ ಸಹಕಾರಿ.