ನಿಮ್ಮ ಮಕ್ಕಳು ಇನ್ನೂ ಅಷ್ಟಾಗಿ ಮಾತಾಡಲು ಕಲ್ತಿಲ್ವ? ಹಾಗಾದ್ರೆ ಅವರ ಹತ್ತಿರ ನೀವು ಈ ಪ್ರಶ್ನೆಗಳನ್ನು ಕೇಳಿ
Parenting: ನಿಮ್ಮ ಮಗು ತಮ್ಮದೇ ಆದ ಭಾಷೆಯಲ್ಲಿ ಏನಾದರೂ ಹೇಳುತ್ತಾ ಇದ್ದರೆ. ನೀವು ಅದನ್ನು ನಿರ್ಲಕ್ಷಿಸಬೇಡಿ. ಅವರ ಮಾತಿಗೆ ನೀವು ಕಿವಿಯಾಗಿ. ನಿಮ್ಮ ಮಗು ಯಾವಾಗ ಮಾತನಾಡಲು ಬಯಸಿದರೂ ನೀವು ಅವರಿಗೆ ಲಭ್ಯವಿರಿ.
ಇಂದಿನ ದಿನಮಾನದಲ್ಲಿ ಮಕ್ಕಳು ಲೇಟಾಗಿ ಮಾತನಾಡಲು ಕಲಿಯುತ್ತಿದ್ದಾರೆ. ಇದಕ್ಕೆ ಕಾರಣ ಮೊಬೈಲ್ ಫೋನ್ ಕೂಡ ಆಗಿರಬಹುದು. ಅಥವಾ ಅಕ್ಕ-ತಮ್ಮ, ಅಣ್ಣ ತಂಗಿ ಹೀಗೆ ಸಹೋದರರು ಅಥವಾ ಸಹೋದರಿಯರು ಇಲ್ಲದೆ ಮನೆಯಲ್ಲಿ ಒಬ್ಬೊಬ್ಬರೇ ಮಕ್ಕಳಾಗಿರುವುದರಿಂದಲೂ ಈ ಸಮಸ್ಯೆ ಆಗುತ್ತಿರಬಹುದು. ಆದರೆ ನೀವು ನಿಮ್ಮ ಮಕ್ಕಳನ್ನು ಮಾತನಾಡುವಂತೆ ಮಾಡುವುದು ತುಂಬಾ ಮುಖ್ಯ. ಇಲ್ಲವಾದರೆ ಅವರು ಮಾತನ್ನು ಕಲಿಯಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ. ನೀವು ಕೂಡ ಈಗಾಗಲೇ ನಿಮ್ಮ ಮಕ್ಕಳನ್ನು ಮಾತನಾಡಿಸಲು ಪ್ರಯತ್ನಿಸಿರಬಹುದು. ಆದರೆ ಯಾವ ರೀತಿ ಅವರು ಮಾತಿಗೆ ಇಳಿಯುವಂತೆ ಮಾಡಬೇಕು ಎಂದು ನಿಮಗೆ ಗೊಂದಲ ಆಗಿರಬಹುದು.
ನೀವು ಅಭಿಪ್ರಾಯ ಕೇಳಿ
ನೀವು ಅವರಿಂದ ಕೆಲವೊಂದು ಅಭಿಪ್ರಾಯಗಳನ್ನು ಕೇಳಿ. ಕಥೆಗಳನ್ನು ಹೇಳಿ. ಕಥೆಯನ್ನು ಹೇಳುತ್ತಾ ನಿನಗೆ ಈ ಕಥೆಯ ಬಗ್ಗೆ ಏನನಿಸಿತು ಎಂದು ಕೇಳಿ. ಆಗ ಅವರು ಆ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅವರಿಗೆ ಯಾರು ಇಷ್ಟ ಎಂದು ಕೇಳಿ ಹಾಗೆ ಅವರು ಯಾಕೆ ಇಷ್ಟ? ಎಂದು ಕೇಳಿ. ಈ ರೀತಿಯಾಗಿ ಕುಟುಂಬದ ಸದಸ್ಯರ ಬಳಿ ಅವರ ಸಂಬಂಧವನ್ನು ಬೆಸೆಯುತ್ತ ಅವರಿಗೆ ಯಾರು ಇಷ್ಟ? ಯಾಕೆ? ಎಂದು ಅರ್ಥ ಮಾಡಿಕೊಳ್ಳುತ್ತಾ ಸಾಗಿ.
ಸಹಾಯ ಕೇಳಿ
ಏನಾದರೂ ಒಂದು ಕೆಲಸ ನೀವು ಮಾಡುತ್ತಿದ್ದರೆ ಅದರ ನಡುವೆ ನಿಮ್ಮ ಮಕ್ಕಳಿಂದ ಸಹಾಯ ಕೇಳಿ. ಯಾವುದಾರು ವಸ್ತುವನ್ನು ತಂದು ಕೊಡು ಎಂದು ಹೇಳಿ. ಆಗ ಅವರು ಅದನ್ನು ಗ್ರಹಿಸಿ ತಂದುಕೊಡುತ್ತಾರೆ. ಅಥವಾ ತಂದು ಕೊಡದೆ ಇದ್ದರೆ ಯಾಕೆ ತಂದು ಕೊಟ್ಟಿಲ್ಲ. ಇದು ನೋಡು ನಾನು ಹೇಳಿದ ವಸ್ತು ಎಂದು ಆ ವಸ್ತುವನ್ನು ಪರಿಚಯಿಸಿಕೊಡಿ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ಆತಂಕ, ಭಯ, ಹಿಂಜರಿಕೆ, ಉಲ್ಲಾಸ ಇವುಗಳೆಲ್ಲ ಯಾವಾಗ ಆಗುತ್ತದೆ ಎಂದು ಕಂಡುಕೊಂಡು ಆ ಸಮಯಕ್ಕೆ ತಕ್ಕಂತೆ ನೀವು ಮಾತನಾಡಿ ಅವರ ಅಭಿಪ್ರಾಯವನ್ನು ಕೇಳಿ. ಅವರಾಗಿ ಮನಸ್ಸನ್ನು ಅರ್ಥಮಾಡಿಕೊಂಡು ಅದಕ್ಕೆ ಸಂಬಂಧಿಸಿದಂತೆ ಏನಾದರೂ ಒಂದು ವಿಷಯವನ್ನು ಹೇಳಬೇಕು.
ಅವರು ಮಾತಾಡುವಾಗ ಗಮನಿಸಿ
ತಮ್ಮದೇ ಆದ ಭಾಷೆಯಲ್ಲಿ ಏನಾದರೂ ಹೇಳುತ್ತಾ ಇದ್ದರೆ. ನೀವು ಅದನ್ನು ನಿರ್ಲಕ್ಷಿಸಬೇಡಿ. ಅವರ ಮಾತಿಗೆ ನೀವು ಕಿವಿಯಾಗಿ. ನಿಮ್ಮ ಮಗು ಯಾವಾಗ ಮಾತನಾಡಲು ಬಯಸಿದರೂ ನೀವು ಅವರಿಗೆ ಲಭ್ಯವಿರಿ. ದಿನವೂ ಮಾತನಾಡಲು ಅಥವಾ ಕಥೆ ಹೇಳಲು ಒಂದು ಸಮಯವನ್ನು ನಿಗದಿ ಮಾಡಿ. ಒಂದು ದಿನ ನಾನು ಕಥೆ ಹೇಳುತ್ತೇನೆ. ಇನ್ನೊಂದು ದಿನ ನೀನು ಕಥೆ ಹೇಳು ಎಂದು ಅವರ ಹತ್ತಿರ ಒಪ್ಪಂದ ಮಾಡಿಕೊಳ್ಳಿ.
ನೀವು ಇಷ್ಟೆಲ್ಲ ಪ್ರಯತ್ನ ಮಾಡಿಯೂ ನಿಮ್ಮ ಮಕ್ಕಳು ಮಾತನಾಡಲು ಅಂಜುತ್ತಿದ್ದರೆ. ಅಥವಾ ಏನು ಮಾತನಾಡಬೇಕು ಎಂದೇ ಅವರಿಗೆ ತೋಚದೆ ಇದ್ದರೆ. ನಿಮ್ಮ ಮಾತುಗಳನ್ನು ಕೇಳಿಯೂ ಅದಕ್ಕೆ ಸ್ಪಂದನೆ ನೀಡದೆ ಇದ್ದರೆ. ಆದಷ್ಟು ಬೇಗ ವೈದ್ಯರನ್ನು ಭೇಟಿಯಾಗಿ.