Maharashtra: ಮಹಾರಾಷ್ಟ್ರದ ಸರ್ಕಾರಿ ಕಾರ್ಯಕ್ರಮದಲ್ಲಿ ತೀವ್ರ ಬಿಸಿಲಿಗೆ 11 ಮಂದಿ ಬಲಿ; ನೂರಾರು ಜನರು ಅಸ್ವಸ್ಥ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra: ಮಹಾರಾಷ್ಟ್ರದ ಸರ್ಕಾರಿ ಕಾರ್ಯಕ್ರಮದಲ್ಲಿ ತೀವ್ರ ಬಿಸಿಲಿಗೆ 11 ಮಂದಿ ಬಲಿ; ನೂರಾರು ಜನರು ಅಸ್ವಸ್ಥ

Maharashtra: ಮಹಾರಾಷ್ಟ್ರದ ಸರ್ಕಾರಿ ಕಾರ್ಯಕ್ರಮದಲ್ಲಿ ತೀವ್ರ ಬಿಸಿಲಿಗೆ 11 ಮಂದಿ ಬಲಿ; ನೂರಾರು ಜನರು ಅಸ್ವಸ್ಥ

ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 11 ಮಂದಿ ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿದ್ದಾರೆ ಎಂದು ಸಿಎಂ ಶಿಂಧೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಭೂಷಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರ (PTI)
ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಹಮ್ಮಿಕೊಂಡಿದ್ದ ಭೂಷಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರ (PTI)

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ (Mumbai) ಮಹಾರಾಷ್ಟ್ರ ಸರ್ಕಾರ (Maharashtra Government) ಹಮ್ಮಿಕೊಂಡಿದ್ದ 'ಮಹಾರಾಷ್ಟ್ರ ಭೂಷಣ' (Maharashtra Bhushan) ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಿಸಿಲಿನ ಹೊಡೆತಕ್ಕೆ (Sunstroke) ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಮುಂಬೈನ ರಾಯಗಡ ಜಿಲ್ಲೆಯ ಖರ್ಘರ್ ಪ್ರದೇಶದಲ್ಲಿ ತೆರೆದ ಮೈದಾನದಲ್ಲಿ ನಿನ್ನೆ (ಏ.16, ಭಾನುವಾರ) ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ತೀವ್ರ ಬಿಸಿಲಿಗೆ ತಾಳಲಾರದೆ ನೂರಾರರು ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ನವಿ ಮುಂಬೈ ಮತ್ತು ಪನ್ವೆಲ್ ನಗರದ ಆಸ್ಪತ್ರೆಗಳಲ್ಲಿ ಒಂದೆರಡು ರೋಗಿಗಳು ವೆಂಟಿಲೇಟರ್ ಸಹಾಯದಲ್ಲಿ ಇದ್ದಾರೆ. ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಲವರು ಚೇತರಿಸಿಕೊಂಡ ನಂತರ ಡಿಸ್ಚಾರ್ಜ್ ಆಗಿದ್ದರೆ, ಇನ್ನೂ ಕೆಲವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಸೂರ್ಯ ನ ಹೊಡೆತದಿಂದ ಕನಿಷ್ಠ 11 ಸಾವುಗಳು ದೃಢಪಟ್ಟಿವೆ ಎಂದು ಮುಖ್ಯಮಂತ್ರಿ ಕಚೇರಿ (CMO) ಭಾನುವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮುಂಬೈನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕನಿಷ್ಠ 50 ಜನರನ್ನ ಇಲ್ಲಿ ದಾಖಲಿಸಲಾಗಿದೆ, ಈ ಪೈಕಿ 24 ಜನರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಪ್ರಾಥಮಿಕ ಚಿಕಿತ್ಸೆಯ ನಂತರ ಬಿಡುಗಡೆಯಾಗಿದ್ದಾರೆ. ಬಿಸಿಲಿನಿಂದ 11 ಮಂದಿ ಮೃತಪಟ್ಟಿರುವುದು ಅತ್ಯಂತ ದುರಾದೃಷ್ಟಕರ ಎಂದು ಹೇಳಿದ್ದಾರೆ.

ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಶಿಂಧೆ ತಿಳಿಸಿದ್ದಾರೆ. ಬಿಸಿಲಿನಿಂದಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಅವರ ಚಿಕಿತ್ಸೆಗೆ ರಾಜ್ಯವು ತನ್ನ ಬೊಕ್ಕಸದಿಂದ ಹಣವನ್ನು ಪಾವತಿಸಲಿದೆ. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದಲ್ಲಿ ರೋಗಿಗಳನ್ನು ವಿಶೇಷ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಂತೆ ಸಿಎಂ ಶಿಂಧೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಿಂಧೆ, ಪ್ರತಿಪಕ್ಷಗಳ ರಾಜಕೀಯ ಆರೋಪಗಳ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಂತ್ರಸ್ತರಿಗೆ ಸರಿಯಾದ ಚಿಕಿತ್ಸೆ ನೀಡುವುದು ತಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

ರೋಗಿಗಳ ಸಂಬಂಧಿಕರು ಮತ್ತು ವೈದ್ಯಕೀಯ ತಂಡಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಸಮಯೋಚಿತ ಚಿಕಿತ್ಸೆ ಹಾಗೂ ಇತರೆ ಕ್ರಮಗಳಿಗಾಗಿ ಪನ್ವೆಲ್ ಮುನ್ಸಿಪಲ್ ಕಾರ್ಪೊರೇಶನ್‌ನ ಡೆಪ್ಯುಟಿ ಮುನ್ಸಿಪಲ್ ಕಮಿಷನರ್ ಶ್ರೇಣಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸಿದ್ದರು. ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಸಮಾರಂಭ ಉತ್ತಮವಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲವರು ಅಸ್ವಸ್ಥಗೊಂಡಿರುವುದು ನೋವಿನ ಸಂಗತಿಯಾಗಿದೆ. ಇದೊಂದು ಅತ್ಯಂತ ದುರಾದೃಷ್ಟಕರ ಪರಿಸ್ಥಿತಿಯಾಗಿದ್ದು, ಇದು ನನಗೆ ತುಂಬಾ ನೋವು ತಂದಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂಬೈನ ರಾಯಗಡ ಜಿಲ್ಲೆಯ ಖರ್ಘರ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಧ್ಯಾತ್ಮಿಕ ಗುರು ಹಾಗೂ ಸಮಾಜ ಸುಧಾರಕ ಅಪ್ಪಾಸಾಹೇಬ್ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದರು. ಸ್ಮರಣಿಕೆ ಹಾಗೂ 25 ಲಕ್ಷ ರೂ.ಗಳ ಚೆಕ್ ನೀಡಿದ್ದರು.

ಘಟನೆಯ ಸ್ಥಳಕ್ಕೆ ಹತ್ತಿರದ ಹವಾಮಾನ ಕೇಂದ್ರವು ಕಾರ್ಯಕ್ರಮ ನಡೆದ ಪ್ರದೇಶದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇತ್ತು ಅಂತ ಮಾಹಿತಿ ನೀಡಿದೆ. ಮುಖ್ಯಮಂತ್ರಿ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಕಪಿಲ್ ಪಾಟೀಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.