Salary Hike: ಎನ್‌ಎಚ್‌ಎಂ ಗುತ್ತಿಗೆ ನೌಕರರ ವೇತನ ಶೇ.15 ರಷ್ಟು ಹೆಚ್ಚಳ, ಹೊರಗುತ್ತಿಗೆ ನೌಕರರಿಗೆ ವೇತನ ಹೆಚ್ಚಳವಿಲ್ಲ
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಿಸಲಾಗಿದೆ.
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಶೇ.15ರಷ್ಟು ವೇತನ ಹೆಚ್ಚಿಸಿ ನಮ್ಮ ಸರ್ಕಾರ ಆದೇಶ ಮಾಡಿದ್ದು, NHM ಗುತ್ತಿಗೆ ನೌಕರರ ಬಹುದಿನದ ಬೇಡಿಕೆ ಈಡೇರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಶ್ರೀ ಪಿ.ಎನ್.ಶ್ರೀನಿವಾಸಾಚಾರಿ ಸಮಿತಿಯ ಶಿಫಾರಸ್ಸಿನನ್ವಯ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಮನವಿಗೆ ಸ್ಪಂದಿಸಿ ವೇತನ ಹೆಚ್ಚಳ ಮಾಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ನೌಕರರ ಪರವಾಗಿ ಕೃತಜ್ಞತೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದೇಶದಲ್ಲೇನಿದೆ?
ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಂದ ಸ್ವೀಕೃತವಾದ ಏಕ ಕಡತದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಪಿಎನ್ ಶ್ರೀನಿವಾಸಚಾರಿ ಸಮಿತಿಯ ಶಿಫಾರಸ್ಸಿನ ಅನ್ವಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಪ್ರಸ್ತುತ ಪಡೆಯುತ್ತಿರುವ ವೇತನಕ್ಕೆ ಶೇಕಡ 15ರಷ್ಟು ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಮುಂದಿನ ಆದೇಶ ನೀಡಿದೆ. ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ಗುತ್ತಿಗೆ ನೌಕರರ ಸಭಾವನೆಯನ್ನು ಶೇಕಡ 15ರಷ್ಟು ಹೆಚ್ಚಿಸಲಾಗಿದೆ. ಇಷ್ಟು ಆದೇಶವನ್ನು ಕನ್ನಡದಲ್ಲಿ ಬರೆದು ಉಳಿದ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇಂಗ್ಲಿಷ್‌ನಲ್ಲಿ ಹೊರಗುತ್ತಿಗೆ ನೌಕರರಿಗೆ ಇದು ಅನ್ವಯವಾಗುವುದಿಲ್ಲ ಎಂಬ ಮಾಹಿತಿ ಇರುವುದನ್ನು ಗಮನಿಸಬೇಕು.
ಎನ್‌ಎಚ್‌ಎಂ ಗುತ್ತಿಗೆ/ಕಾಂಟ್ರಾಕ್ಟ್ ಉದ್ಯೋಗಿಗಳಿಗೆ ಮಾತ್ರ ಈ ವೇತನ ಹೆಚ್ಚಳ ಅನ್ವಯವಾಗಲಿದೆ. ಔಟ್‌ಸೋರ್ಸ್ ಉದ್ಯೋಗಿಗಳಿಗೆ ಈ ವೇತನ ಹೆಚ್ಚಳ ಅನ್ವಯವಾಗುವುದಿಲ್ಲ.
ನೇಮಕವಾಗುವಾಗ ಬೇಸಿಕ್ ವೇತನ 20 ಸಾವಿರ ರೂ.ಗಿಂತ ಕಡಿಮೆ ಇದ್ದವರಿಗೆ ಒಂದು ಬಾರಿ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಲಾಗುತ್ತದೆ.
ಐದು ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಇರುವ ಎಂಬಿಬಿಎಸ್, ಆಯುಷ್, ಆರ್‌ಬಿಎಸ್‌ಕೆ, ಡೆಂಟಲ್ ಸರ್ಜನ್ ಇತ್ಯಾದಿ ಎನ್‌ಎಚ್‌ಎಂ ಗುತ್ತಿಗೆ ಆಧರಿತ ಮೆಡಿಕಲ್ ಆಫೀಸರ್‌ಗಳಿಗೆ ಶೇಕಡ 15 ವೇತನ ಹೆಚ್ಚಳ ಮಾಡಲು ಒಪ್ಪಲಾಗಿದೆ.
ಗುತ್ತಿಗೆ ಆಧರಿತ ಸ್ಪೆಷಲಿಸ್ಟ್‌ಗಳಿಗೆ ವೇತನ ಹೆಚ್ಚಳ ಈ ಮುಂದಿನಂತೆ ಇರುತ್ತದೆ. 3-5 ವರ್ಷ ಸರ್ವೀಸ್ ಮಾಡಿರುವವರಿಗೆ ಶೇಕಡ 5, 5-10 ವರ್ಷ ಸರ್ವೀಸ್ ಮಾಡಿರುವವರಿಗೆ ಶೇಕಡ 10 ಮತ್ತು ಹತ್ತು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದವರಿಗೆ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಲಾಗುತ್ತದೆಎಂದು ಸರಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಅವರು ಆದೇಶ ಹೊರಡಿಸಿದ್ದಾರೆ.