ಕನ್ನಡ ಸುದ್ದಿ  /  Nation And-world  /  17 Year Old Daughter Donated Organ To Her Father In Kerala

Kerala 17 year old organ donor: ನಿನ್ನಂಥ ಮಗಳೂ ಇಲ್ಲ!, ಅಪ್ಪನಿಗೆ ಲಿವರ್‌ ದಾನ ಮಾಡಿದ 17ರ ಬಾಲಕಿ, ಕೋರ್ಟ್‌ ಅನುಮತಿ ಪಡೆದು ದಾನ

ಕೇರಳದ ಹದಿನೇಳರ ಹರೆಯದ ಬಾಲಕಿಯೊಬ್ಬಳು ತನ್ನ ಕಿರಿಯ ವಯಸ್ಸಿನಲ್ಲಿಯೇ ಲಿವರ್‌ ದಾನ ಮಾಡುವ ಮೂಲಕ ಸುದ್ದಿಯಲ್ಲಿದ್ದಾಳೆ. ಹಲವು ವರ್ಷಗಳಿಂದ ಲಿವರ್‌ ತೊಂದರೆಯಿಂದ ಬಳಲುತ್ತಿರುವ ತನ್ನ ತಂದೆಗೆ ಈಕೆ ಯಕೃತ್ತು ದಾನ ಮಾಡಿದ್ದಾಳೆ.

Kerala 17 year old organ donor: ಅಪ್ಪನಿಗೆ ಲಿವರ್‌ ದಾನ ಮಾಡಿದ 17ರ ಬಾಲಕಿ
Kerala 17 year old organ donor: ಅಪ್ಪನಿಗೆ ಲಿವರ್‌ ದಾನ ಮಾಡಿದ 17ರ ಬಾಲಕಿ

ತ್ರಿಶೂರ್‌: ಕೇರಳದ ಹದಿನೇಳರ ಹರೆಯದ ಬಾಲಕಿಯೊಬ್ಬಳು ತನ್ನ ಕಿರಿಯ ವಯಸ್ಸಿನಲ್ಲಿಯೇ ಲಿವರ್‌ ದಾನ ಮಾಡುವ ಮೂಲಕ ಸುದ್ದಿಯಲ್ಲಿದ್ದಾಳೆ. ಹಲವು ವರ್ಷಗಳಿಂದ ಲಿವರ್‌ ತೊಂದರೆಯಿಂದ ಬಳಲುತ್ತಿರುವ ತನ್ನ ತಂದೆಗೆ ಈಕೆ ಯಕೃತ್ತು ದಾನ ಮಾಡಿದ್ದು, ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.

ಭಾರತದ ಕಾನೂನು ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತೆ ಇಲ್ಲ. ಮಕ್ಕಳ ಕಳ್ಳ ಸಾಗಾಣಿಕೆ ಇತ್ಯಾದಿಗಳ ಮೂಲಕ ಮಕ್ಕಳ ದೇಹದ ಅಂಗಾಂಗಳನ್ನು ಹಿಂದೆಲ್ಲ ಕದಿಯಲಾಗುತ್ತಿತ್ತು. ಅಂಗಾಗ ದಾನ ಕುರಿತು ಈಗ ಕಾನೂನು ಹೆಚ್ಚು ಕಠಿಣವಾಗಿದ್ದು, ಅಪ್ರಾಪ್ತರಿಗೆ ಅಂಗಾಂಗ ದಾನ ಮಾಡಲು ಅವಕಾಶ ನೀಡಲಾಗುವುದಿಲ್ಲ.

ಆದರೆ, ಈ ರೀತಿಯ ಕಾನೂನಿನಿಂದ ನನಗೆ ವಿನಾಯಿತಿ ನೀಡಬೇಕು, ನಾನು ನನ್ನ ತಂದೆಗೆ ಲಿವರ್‌ ದಾನ ನೀಡಬೇಕು ಎಂದು ಕೇರಳದ ಹನ್ನೆರಡನೇ ತರಗತಿ ವಿದ್ಯಾರ್ಥಿನಿ ದೇವಾನಂದಾಳು ಕೇರಳ ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಳು.

ವಿಷಯದ ಕುರಿತು ಸಾಕಷ್ಟು ಪರಿಶೀಲನೆ ನಡೆಸಿ, ಹೈಕೋರ್ಟ್‌ ಸಮ್ಮತಿ ನೀಡಿತ್ತು. ಫೆಬ್ರವರಿ 9ರಂದು ಈಕೆ ತನ್ನ ತಂದೆಗೆ ಯಕೃತ್‌ನ ಒಂದು ಭಾಗವನ್ನು ತನ್ನ ತಂದೆಗೆ ದಾನ ನೀಡಿದ್ದಾಳೆ. ತಂದೆ ಪ್ರತೀಶ್‌ಗೆ ಈ ಲಿವರ್‌ ಅನ್ನು ಜೋಡಿಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಒಂದು ವಾರ ಆಸ್ಪತ್ರೆಯಲ್ಲಿದ್ದ ಈಕೆ ಬಿಡುಗಡೆಯಾಗಿದ್ದಾಳೆ. ತನ್ನ ತಂದೆಗೆ ಲಿವರ್‌ ದಾನ ಮಾಡಿರುವುದರಿಂದ ಖುಷಿ, ಹೆಮ್ಮೆಯಾಗಿದೆ ಎಂದಿದ್ದಾಳೆ.

ಈಕೆಯ ತಂದೆ ಪ್ರತೀಶ್‌ ಅವರು ಕೇರಳದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದರು. ಕ್ಯಾನ್ಸರ್‌ಕಾರಕ ಅಂಶದೊಂದಿಗೆ ಯಕೃತ್ತು ಕಾಯಿಲೆ ಕಾಣಿಸಿಕೊಂಡಿತ್ತು. ಇವರ ಜೀವ ಉಳಿಸಲು ಬೇರೊಬ್ಬರಿಂದ ಲಿವರ್‌ ದಾನ ಪಡೆಯುವುದು ಅಗತ್ಯವಿತ್ತು. ಆದರೆ, ಎಲ್ಲೂ ದಾನಿ ಲಿವರ್‌ ದೊರಕಿರಲಿಲ್ಲ. ಕೊನೆಗೆ ತನ್ನ ತಂದೆಗಾಗಿ ಮಗಳೇ ಲಿವರ್‌ ನೀಡಲು ಮುಂದೆ ಬಂದಿದ್ದಳು.

ಆದರೆ, ಅಂಗಾಂಗ ಕಸಿ ಕಾಯಿದೆ ಪ್ರಕಾರ ಹದಿನೇಳನೇ ವಯಸ್ಸಿನ ಈಕೆ ಲಿವರ್‌ ದಾನ ಮಾಡಲು ಒಂದು ವರ್ಷ ಕಾಯಬೇಕಿತ್ತು. ಆಕೆ ಕೋರ್ಟ್‌ ಮೊರೆ ಹೋಗಿ ಅನುಮತಿ ಪಡೆದುಕೊಂಡಳು. ದಾನಕ್ಕೂ ಮೊದಲು ಅತ್ಯುತ್ತಮ ಆರೋಗ್ಯಕಾಗಿ ಈಕೆ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಯಿತು. ಪಥ್ಯ, ಜಿಮ್‌ ಮೂಲಕ ಈಕೆ ಯಕೃತ್‌ ದಾನಕ್ಕೆ ವೈದ್ಯಕೀಯವಾಗಿ ಅರ್ಹತೆ ಪಡೆದುಕೊಂಡಳು.

ತನ್ನ ಚಿಕ್ಕ ವಯಸ್ಸಿನಲ್ಲಿ ತಂದೆಗಾಗಿ ಯಕೃತ್‌ ದಾನ ಮಾಡಿದ ಈಕೆಗೆ ಎಲ್ಲರೂ ಶಹಬ್ಬಾಸ್‌ ಎನ್ನುತ್ತಿದ್ದಾರೆ. ಇದೇ ಸಮಯದಲ್ಲಿ ಆಸ್ಪತ್ರೆಯ ಬಿಲ್‌ ಅನ್ನು ಸಂಪೂರ್ಣ ಮನ್ನ ಮಾಡಿದ ಆಸ್ಪತ್ರೆಯು ಈಕೆಯ ತ್ಯಾಗವನ್ನು ಕೊಂಡಾಡಿದೆ.

IPL_Entry_Point