ಉತ್ತರ ಅಮೆರಿಕದಲ್ಲಿ ಮತ್ತೊಂದು ವಿಮಾನ ದುರಂತ; ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ಲೈನ್ಸ್ ವಿಮಾನ ಅಪಘಾತ, 18 ಮಂದಿಗೆ ಗಾಯ
ಅಪಘಾತದ ಸಮಯದಲ್ಲಿ ವಿಮಾನದಲ್ಲಿ 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಡೆಲ್ಟಾ ಏರ್‌ಲೈನ್ಸ್ ತಿಳಿಸಿದೆ. ಅಪಘಾತದಿಂದ ಮಗು ಸೇರಿದಂತೆ 18 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಅಮೆರಿಕ ವಿಮಾನ ದುರಂತ ಮಾಸುವ ಮುನ್ನವೇ, ಪಕ್ಕದ ಕೆನಡಾದಲ್ಲಿ ಮತ್ತೊಂದು ವೈಮಾನಿಕ ಅಪಘಾತ ಸಂಭವಿಸಿದೆ. ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ಫೆ.18) ಸಂಭವಿಸಿದ ವಿಮಾನ ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದಿಂದ ಮಗು ಸೇರಿದಂತೆ 18 ಜನರು ಗಾಯಗೊಂಡಿದ್ದಾರೆ ಎಂದು ಪೀಲ್ ಪ್ರಾದೇಶಿಕ ಅರೆವೈದ್ಯಕೀಯ ಸೇವೆಗಳು (Peel Regional Paramedic Services.) ತಿಳಿಸಿವೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಲ್ಯಾಂಡಿಂಗ್ ವೇಳೆ ವಿಮಾನ ಪಲ್ಟಿಯಾಗಿದೆ ಎಂದು ಸಿಬಿಸಿ ಟೆಲಿವಿಷನ್ ವರದಿ ಮಾಡಿದೆ. ಮಿನ್ನಿಯಾಪೊಲಿಸ್‌ನಿಂದ ಆಗಮಿಸಿದ ಡೆಲ್ಟಾ ಏರ್‌ಲೈನ್ಸ್ ವಿಮಾನಕ್ಕೆ ಸಂಬಂಧಿಸಿದ ಘಟನೆ ಬಗ್ಗೆ ಮಾಹಿತಿ ಇದೆ ಎಂದು ವಿಮಾನ ನಿಲ್ದಾಣವು ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಿದೆ. “ತುರ್ತು ರಕ್ಷಣಾ ತಂಡಗಳು ಸ್ಪಂದಿಸುತ್ತಿವೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಗಮನ ಹರಿಸಲಾಗುತ್ತಿದೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ನ್ಯೂಸ್ ವರದಿಯ ಪ್ರಕಾರ, ಅಪಘಾತದ ನಂತರ ವಿಮಾನ ನಿಲ್ದಾಣದಲ್ಲಿ ಎಲ್ಲಾ ಆಗಮನ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಿತ್ತು. ಆ ಬಳಿಕ ಮತ್ತೆ ವಿಮಾನ ಹಾರಾಟ ಪುನರಾರಂಭಗೊಂಡಿವೆ.
ಅಪಘಾತದ ಸಮಯದಲ್ಲಿ ವಿಮಾನದಲ್ಲಿ 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ಡೆಲ್ಟಾ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. "ಟೊರೊಂಟೋ ವಿಮಾನ ನಿಲ್ದಾಣ ಅಥವಾ ಅದರ ಮೂಲಕ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಸಂಪರ್ಕ ಸಾಧಿಸಲು ಡೆಲ್ಟಾ ಕೆಲಸ ಮಾಡುತ್ತಿದೆ. ಪ್ರಯಾಣಿಕರು ಫ್ಲೈ ಡೆಲ್ಟಾ ಅಪ್ಲಿಕೇಶನ್ ಮೂಲಕ ತಮ್ಮ ವಿಮಾನದ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬೇಕು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ವಿಮಾನ ಅಪಘಾತ ಸಂಭವಿಸಿದೆ. ಆದರೆ, ಈ ಸಮಯದಲ್ಲಿ ಅದರ ಸುತ್ತಲಿನ ಸಂದರ್ಭಗಳು ನಮಗೆ ತಿಳಿದಿಲ್ಲ” ಎಂದು ಒಂಟಾರಿಯೊದ ಪೀಲ್ ಪ್ರಾದೇಶಿಕ ಪೊಲೀಸ್ ಕಾನ್‌ಸ್ಟೇಬಲ್ ಸಾರಾ ಪ್ಯಾಟನ್ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇತ್ತೀಚೆಗೆ 67 ಜನ ಸಾವನ್ನಪ್ಪಿದ್ದರು
ಉತ್ತರ ಅಮೆರಿಕಾದಲ್ಲಿ ಇತ್ತೀಚೆಗೆ ಮೇಲಿಂದ ಮೇಲೆ ವಿಮಾನ ಅಪಘಾತಗಳು ಸಂಭವಿಸುತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ, ಅಮೆರಿಕನ್ ಏರ್‌ಲೈನ್ಸ್‌ನ ಪ್ರಾದೇಶಿಕ ಜೆಟ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಯುಎಸ್ ಮಿಲಿಟರಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು 67 ಜನರು ಸಾವನ್ನಪ್ಪಿದ್ದರು.
