ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2014 Days Of Modi : ಮೋದಿ ಸರ್ಕಾರ ಬಂದು 9ವರ್ಷ, 2014 ರಲ್ಲಿ ದೇಶದ ಪರಿಸ್ಥಿತಿ ಹೇಗಿತ್ತು; ಆಗ ಜನ ಏನನ್ನು ಬಯಸಿದ್ದರು

2014 Days of Modi : ಮೋದಿ ಸರ್ಕಾರ ಬಂದು 9ವರ್ಷ, 2014 ರಲ್ಲಿ ದೇಶದ ಪರಿಸ್ಥಿತಿ ಹೇಗಿತ್ತು; ಆಗ ಜನ ಏನನ್ನು ಬಯಸಿದ್ದರು

2014 ರಲ್ಲಿ ಜನರಿಗೂ ಬದಲಾವಣೆ ಬೇಕಿತ್ತು. ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ, ಭಾರತವನ್ನು ಮುಂದೆ ತೆಗೆದುಕೊಂಡು ಹೋಗುವ ನೇತಾರನೊಬ್ಬನನ್ನು ಜನ ನೋಡುತಿದ್ದರು. ಈ ವೇಳೆ ಜನ ಕಂಡುಕೊಂಡಿದ್ದು ನರೇಂದ್ರ ಮೋದಿ ಅವರನ್ನು.

ಪ್ರಧಾನಿಯಾಗಿ ಮೊದಲ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ 2014 ರ ಕ್ಷಣ.
ಪ್ರಧಾನಿಯಾಗಿ ಮೊದಲ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ 2014 ರ ಕ್ಷಣ.

ಅದು 2014. ಜನ ಬದಲಾವಣೆ ಬಯಸುತ್ತಿದ್ದ ಕಾಲ. ದೇಶದಲ್ಲಿ ಸತತ ಹತ್ತು ವರ್ಷ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ( ಯುನೈಟೆಡ್‌ ಪ್ರೊಗ್ರೆಸಿವ್‌ ಅಲೈಯನ್ಸ್‌) ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಲೋಕಸಭೆಯ 543 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಡೆದದ್ದು ಬರೀ 44 ಸ್ಥಾನ. ಯುಪಿಎಗೆ ಬಂದಿದ್ದು 59 ಸ್ಥಾನ. 1984ರಲ್ಲಿ ಭಾರೀ ಬಹುಮತ ಪಡೆದಿದ್ದ ಕಾಂಗ್ರೆಸ್‌ ಆನಂತರ ಭಾರೀ ಹಿನ್ನಡೆ ಅನುಭವಿಸಿತ್ತು.

2004ರಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಆಡಳಿತಕ್ಕೆ ಬಂದಿದ್ದ ಕಾಂಗ್ರೆಸ್‌ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿತ್ತು. ಅದರಲ್ಲಿ ಶಿಕ್ಷಣ, ಆರೋಗ್ಯದಂತಹ ಹಕ್ಕುಗಳನ್ನು ಜಾರಿಗೊಳಿಸುವ ಪ್ರಯತ್ನವಾಗಿತ್ತು.

ಇದೇ ಕಾರಣದಿಂದ 2009ರಲ್ಲೂ ಯುಪಿಎ ಮತ್ತೆ ಅಧಿಕಾರಕ್ಕೆ ಬಂದಿತ್ತು. 2ನೇ ಬಾರಿ ಮನಮೋಹನಸಿಂಗ್‌ ಪ್ರಧಾನಿಯಾದರು. ಆದರೆ 2ನೇ ಅವಧಿಯಲ್ಲಿ ಯುಪಿಎ ಕೈಗೊಂಡ ನೀತಿಗಳು, ಸರ್ಕಾರದ ಪ್ರಮುಖರೇ ಭಾಗಿಯಾಗಿದ್ದ ಕೋಟಿ ಕೋಟಿ ಲೆಕ್ಕದ ಹತ್ತಾರು ಹಗರಣಗಳು, ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳ ಮಿತಿ ಮೀರಿದ ವಂಶಪಾರಂಪರ್ಯ ರಾಜಕಾರಣ ಕುರಿತಾದ ಅಪವಾದಗಳು ಕಾಂಗ್ರೆಸ್‌ ಜತೆಗೆ ಯುಪಿಎ ಮೇಲೆ ಜನರಿಗೆ ಇನ್ನಿಲ್ಲದ ಬೇಸರ ತರಿಸಿತ್ತು.

ಆಗ ಇದೇ ವಿಷಯಗಳೇ ಪ್ರಮುಖವೂ ಆಗಿದ್ದವು. ಜನ ಎಲ್ಲೆಡೆ ಚರ್ಚಿಸುತ್ತಿದ್ದರು. ಜನರಿಗೂ ಬದಲಾವಣೆ ಬೇಕಿತ್ತು. ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ, ಭಾರತವನ್ನು ಮುಂದೆ ತೆಗೆದುಕೊಂಡು ಹೋಗುವ ನೇತಾರನೊಬ್ಬನನ್ನು ಜನ ನೋಡುತಿದ್ದರು. ಈ ವೇಳೆ ಜನ ಕಂಡುಕೊಂಡಿದ್ದು ನರೇಂದ್ರ ಮೋದಿ ಅವರನ್ನು.

2001ರಿಂದ ಸತತ ಹದಿಮೂರು ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ವಿವಾದಗಳ ಜತೆಯಲ್ಲಿಯೇ ಅಭಿವೃದ್ದಿಯ ಪಥವನ್ನೂ ಕಂಡುಕೊಂಡಿದ್ದರು ಮೋದಿ. ಬಿಜೆಪಿಯ ರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದ ನರೇಂದ್ರಮೋದಿ ಚುನಾವಣೆಗಳಲ್ಲೂ ನಿಷ್ಣಾತರಾಗಿದ್ದರು. ಇದೇ ಕಾರಣದಿಂದ 2014ರ ಲೋಕಸಭಾ ಚುನಾವಣೆಗೆ ಮೋದಿ ನೇತೃತ್ವವೇ ದೊರೆತಿತ್ತು. ಹಿಂದಿನ ಸರ್ಕಾರದ ವೈಫಲ್ಯಗಳನ್ನು ಒಂದೆಡೆ ಹೇಳುತ್ತಾ, ಗುಜರಾತ್‌ನಲ್ಲಿ ಹದಿಮೂರು ವರ್ಷ ಕೈಗೊಂಡ ಅಭಿವೃದ್ಧಿ- ಆರ್ಥಿಕ ಮಾದರಿಗಳನ್ನು ಬಿಜೆಪಿ ಜನರ ಮುಂದೆ ಇಡುತ್ತಾ ಹೋಯಿತು. ಆ ಚುನಾವಣೆಯಲ್ಲಿ ಬಿಜೆಪಿಗೆ ಬಂದಿದ್ದು ಬರೋಬ್ಬರಿ 282 ಸ್ಥಾನ. ಶೇ.31ರಷ್ಟು ಮತ ಪ್ರಮಾಣ. 1984ರ ಲೋಕಸಭ ಚುನಾವಣೆ ನಂತರ ಒಂದೇ ಪಕ್ಷ ಪಡೆದ ಅತಿ ಹೆಚ್ಚಿನ ಸ್ಥಾನಗಳಿವು. ಕಾಂಗ್ರೆಸ್‌ ಬರೀ 44 ಸ್ಥಾನ ಪಡೆದರೆ, ಯುಪಿಎಗೆ ದಕ್ಕಿದ್ದು 59 ಸ್ಥಾನಗಳು ಮಾತ್ರ. ಎನ್‌ಡಿಎ( ನ್ಯಾಷನಲ್‌ ಡೆಮಾಕ್ರಟಿಕ್‌ ಅಲೈಯನ್ಸ್‌)ಗೆ 336 ಸ್ಥಾನದೊಂದಿಗೆ ಅಧಿಕಾರಕ್ಕೆ ಬಂದಿತು.

ಮುಂದಿನ ಪ್ರಧಾನಿ ಯಾರು ಎನ್ನುವ ಪ್ರಶ್ನೆಗಳಿದ್ದವು. ಬಿಜೆಪಿ ಭೀಷ್ಮಾಚಾರ್ಯ ಎಂದೇ ಗುರುತಿಸಿಕೊಂಡಿದ್ದ ಅಡ್ವಾಣಿ, ಹಿರಿಯರಾದ ಮುರಳಿ ಮನೋಹರ ಜೋಶಿ ಸಹಿತ ಹಲವರಿದ್ದರು. ಸಹಜವಾಗಿಯೇ ಚುನಾವಣೆ ನೇತೃತ್ವ ಹೊತ್ತಿದ್ದ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ಹುದ್ದೆ ಒಲಿದು ಬಂದಿತು.

ಪಕ್ಷದೊಳಗಿನ ವಿರೋಧಗಳ ನಡುವೆಯೂ ಅವರು 2014ರ ಮೇ 26ರಂದು ಪ್ರಧಾನಿ ಸ್ಥಾನಕ್ಕೇರಿದರು. ಚಾಯ್‌ವಾಲ್‌ ಪುತ್ರನೊಬ್ಬ ಪ್ರಧಾನಿ ಹುದ್ದೆಗೇರಿದ್ದೂ 2014ರಲ್ಲಿ ಭಾರೀ ಚರ್ಚಾ ವಿಷಯವೇ ಆಗಿತ್ತು. ಜನರೂ ಕೂಡ ಹೊಸತನ ಬಯಸಿದ್ದರಿಂದ ಮೋದಿ ಅದರತ್ತ ಗಮನ ನೀಡಿದರು. ನೀತಿ ಆಯೋಗ ರಚನೆ, ಆರ್ಥಿಕ ಸುಧಾರಣೆಗೆ ಒತ್ತು ನೀಡುತ್ತಲೇ ಸ್ವಚ್ಛ ಆಂದೋಲನದಂತಹ ಜನಮುಖಿ ಕಾರ್ಯಕ್ರಮಗಳನ್ನೂ ಆರಂಭಿಸಿದರು. ಕಾಲಮಿತಿಯೊಳಗೆ ಯೋಜನೆಗಳ ಜಾರಿ, ಸಚಿವರಿಗೆ ಭಿನ್ನ ಟಾಸ್ಕ್‌, ತಜ್ಞರ ಸಮರ್ಥ ಬಳಕೆ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಯಿತು. 2014ರಲ್ಲಿ ಇದನ್ನೇ ಬಯಸಿ ಜನ ಮತ ನೀಡಿದ್ದರು. 1990ರ ನಂತರ ಹೊಸ ಬದಲಾವಣೆಯತ್ತ ಭಾರತ ಹೆಜ್ಜೆ ಹಾಕತೊಡಗಿದ್ದು 2014ರಲ್ಲಿಯೇ. ಜನರ ನಿರೀಕ್ಷೆಗಳಂತೆಯೇ ಹೊಸತನಕ್ಕೂ ಒತ್ತು ನೀಡಲಾಯಿತು.

IPL_Entry_Point

ವಿಭಾಗ