26/11 ಮುಂಬಯಿ ದಾಳಿ ಸಂಚುಕೋರ ತಹವ್ವುರ್ ಹುಸೇನ್ ರಾಣಾನನ್ನು ಇಂದು ಭಾರತಕ್ಕೆ ಕರೆ ತರುವ ಸಾಧ್ಯತೆ, ಭಾರತೀಯ ತನಿಖಾ ತಂಡಗಳ ಸಿದ್ಧತೆ
Tahawwur Hussain Rana: 26/11 ಮುಂಬಯಿ ದಾಳಿ ಸಂಚುಕೋರ ತಹವ್ವುರ್ ಹುಸೇನ್ ರಾಣಾಹಸ್ತಾಂತರಿಸುವ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಭಾರತೀಯ ತನಿಖಾಧಿಕಾರಿಗಳ ತಂಡ 64 ವರ್ಷದ ತಹವುರ್ ಹುಸೇನ್ ರಾಣಾ ಅವರನ್ನು ಭಾರತಕ್ಕೆ ಇಂದು ಕರೆತರುವ ನಿರೀಕ್ಷೆ ಇದೆ.

Tahawwur Hussain Rana: ಸುದೀರ್ಘ ಗಡೀಪಾರು ಪ್ರಕ್ರಿಯೆಯ ಬಳಿಕ 26/11 ಮುಂಬಯಿ ದಾಳಿ ಸಂಚುಕೋರ ತಹವ್ವುರ್ ಹುಸೇನ್ ರಾಣಾ ಹಸ್ತಾಂತರಿಸುವ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಭಾರತೀಯ ತನಿಖಾಧಿಕಾರಿಗಳ ತಂಡ 64 ವರ್ಷದ ತಹವ್ವುರ್ ಹುಸೇನ್ ರಾಣಾ ಅವರನ್ನು ಭಾರತಕ್ಕೆ ಇಂದು ಕರೆತರುವ ನಿರೀಕ್ಷೆ ಇದೆ. ಇನ್ಸ್‌ಪೆಕ್ಟರ್ ಜನರಲ್ ರ‍್ಯಾಂಕ್‌ನ ಆಫೀಸರ್ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ರಾಣಾ ಅವರನ್ನು ಗುರುವಾರ ವಿಶೇಷ ವಿಮಾನದಲ್ಲಿ ಕರೆತರಲಿದೆ ಎಂದು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಕೆನಡಿಯನ್ ಫಿಸಿಷಿಯನ್ ರಾಣಾ ಗಡೀಪಾರು ಪ್ರಕ್ರಿಯೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಯುಎಸ್ ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್ ಬುಧವಾರ ರಾಣಾ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಕಾರಾಗೃಹದಲ್ಲಿ ಇಲ್ಲ ಎಂಬುದನ್ನು ದೃಢಪಡಿಸಿದೆ.
ತಹವ್ವುರ್ ಹುಸೇನ್ ರಾಣಾನನ್ನು ಇಂದು ಭಾರತಕ್ಕೆ ಕರೆ ತರುವುದಕ್ಕೆ ಸಿದ್ಧತೆ
"ಫೆಬ್ರವರಿ ಎರಡನೇ ವಾರದಲ್ಲಿ ಯುಎಸ್ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಸಹಿ ಮಾಡಿದ ಸರಂಡರ್ ವಾರಂಟ್‌ನ ಆಧಾರದ ಮೇಲೆ ರಾಣಾ ಅವರ ವಶಕ್ಕೆ ತೆಗೆದುಕೊಳ್ಳಲು ಎನ್‌ಐಎಯ ಐಜಿ ಮತ್ತು ಡಿಐಜಿ ಮತ್ತು ಇತರ ಕೆಲವು ಅಧಿಕಾರಿಗಳನ್ನು ಒಳಗೊಂಡ ತಂಡ ಭಾನುವಾರ ಯುಎಸ್‌ಗೆ ಪ್ರಯಾಣಿಸಿತ್ತು. ಅವರನ್ನು ಕರೆತರುವ ತಂಡವು ವಿಶೇಷ ವಿಮಾನದ ಮೂಲಕ ಗುರುವಾರ (ಏ 10) ಭಾರತವನ್ನು ತಲುಪುವ ನಿರೀಕ್ಷೆಯಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪಾಕಿಸ್ತಾನದ ಬೆಂಬಲಿತ ಸ್ಲೀಪರ್ ಸೆಲ್‌ಗಳ ಅಥವಾ ಐಎಸ್ಐನಿಂದ ವೇತನ ಪಡೆಯುವ ಖಲಿಸ್ಟಾನಿ ಭಯೋತ್ಪಾದಕರು ಸಹ ರಾಣಾ ಮೇಲೆ ದಾಳಿ ಮಾಡಲು ಸಂಚು ರೂಪಿಸಿರುವುದು ಗೊತ್ತಾಗಿದೆ. ರಾಣಾ ಬಳಿ ಇರುವ ಮಾಹಿತಿ ಭಾರತಕ್ಕೆ ಸಿಗಬಾರದು ಎಂಬುದು ಅವರ ಕಾಳಜಿ. ಹೀಗಾಗಿ ರಾಣಾ ವಿಚಾರದಲ್ಲಿ ಭಾರತೀಯ ತನಿಖಾ ತಂಡಗಳು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ಎರಡನೇ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿ ವಿವರಿಸಿದೆ.
ತಹವ್ವುರ್ ರಾಣಾ ಭಾರತಕ್ಕೆ ಬಂದ ಕೂಡಲೆ ಬಿಗಿ ಭದ್ರತೆ
ತಹವ್ವುರ್ ಹುಸೇನ್ ರಾಣಾನನ್ನು ಎನ್‌ಐಎ ತಂಡ ಭಾರತಕ್ಕೆ ಕರೆ ತಂದ ಕೂಡಲೇ ಆತನಿಗೆ ಕಮಾಂಡೋ ಪಡೆಗಳ ಭದ್ರತೆ ಸಿಗಲಿದೆ. ರಾಣಾನನ್ನು ಕೋರ್ಟ್‌ಗೆ ಅಥವಾ ನ್ಯಾಯಾಧೀಶರ ಎದುರು ನೇರವಾಗಿ ಹಾಜರುಮಾಡುವ ಸಾಧ್ಯತೆ ಕಡಿಮೆ. ಆತನನ್ನು ಬುಲೆಟ್ ಪ್ರೂಫ್ ವಾಹನದಲ್ಲೇ ಕರೆದೊಯ್ಯಬಹುದು. ದೆಹಲಿಯ ತಿಹಾರ್ ಜೈಲಿನಲ್ಲಿ ಹೈ ರಿಸ್ಕ್ ಕೈದಿ ಕೆಟಗರಿಯಲ್ಲಿ ಎಸ್1 ನಲ್ಲಿ ರಾಣಾನನ್ನು ಬಂಧಿಸಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ತಹವ್ವುರ್ ರಾಣಾ 26/11 ಮುಂಬಯಿ ದಾಳಿಯಲ್ಲಿ 166 ಜನರ ಪ್ರಾಣಹಾನಿಗೆ ಕಾರಣಕರ್ತನಾಗಿದ್ದು, ಭಾರತದಲ್ಲಿ ಪಾಕಿಸ್ತಾನ ಪ್ರಾಯೋಜಿತ ದೊಡ್ಡ ಉಗ್ರ ಕೃತ್ಯ ಅದಾಗಿತ್ತು. ಅಮೆರಿಕದ ಷಿಕಾಗೋದಲ್ಲಿ 2009ರ ಅಕ್ಟೋಬರ್ 18ರಂದು ತಹವುರ್ ರಾಣಾನನ್ನು ಎಫ್‌ಬಿಐ ಬಂಧಿಸಿತ್ತು. ಅಲ್ಲಿ ವಿಚಾರಣೆ ವೇಳೆ ಭಾರತದ ದಾಳಿ ವಿಚಾರವೂ ಪ್ರಸ್ತಾಪವಾಗಿತ್ತು. ಹೀಗಾಗಿ ಭಾರತದ ತನಿಖಾ ಏಜೆನ್ಸಿ ಎನ್‌ಐಎ ಆತನನ್ನು ಗಡೀಪಾರು ಮಾಡಿ ಹಸ್ತಾಂತರಿಸುವಂತೆ ಅಮೆರಿಕಕ್ಕೆ ಮನವಿ ಸಲ್ಲಿಸಿತ್ತು.
