Shopian Encounter: ಶೋಪಿಯಾನ್​ನಲ್ಲಿ ಲಷ್ಕರ್-ಇ-ತೊಯ್ಬಾದ ಮೂವರು ಉಗ್ರರ ಹತ್ಯೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Shopian Encounter: ಶೋಪಿಯಾನ್​ನಲ್ಲಿ ಲಷ್ಕರ್-ಇ-ತೊಯ್ಬಾದ ಮೂವರು ಉಗ್ರರ ಹತ್ಯೆ

Shopian Encounter: ಶೋಪಿಯಾನ್​ನಲ್ಲಿ ಲಷ್ಕರ್-ಇ-ತೊಯ್ಬಾದ ಮೂವರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಸಂಘಟನೆ ಜೊತೆ ನಂಟು ಹೊಂದಿದಗ್ದ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶೋಪಿಯಾನ್ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಸಂಘಟನೆ ಜೊತೆ ನಂಟು ಹೊಂದಿದಗ್ದ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಮೃತ ಮೂವರು ಉಗ್ರರಲ್ಲಿ ಒಬ್ಬ ಕಾಶ್ಮೀರಿ ಪಂಡಿತನ ಹತ್ಯೆಯಲ್ಲಿ ಭಾಗಿಯಾಗಿದ್ದರೆ, ಇನ್ನೊಬ್ಬ ಜಮ್ಮು ಮತ್ತು ಕಾಶ್ಮೀರದಲ್ಲಿ ನೇಪಾಳ ಪ್ರಜೆಯ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಒಂದು ಎಕೆ -47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೋಪಿಯಾನ್‌ನ ಮುಂಜ್ ಮಾಂಗ್ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆಗೆ ಎನ್‌ಕೌಂಟರ್ ಪ್ರಾರಂಭವಾಯಿತು. ಬಾರಾಮುಲ್ಲಾದಲ್ಲಿ ಎಲ್‌ಇಟಿ ಆಪರೇಟಿವ್​ನನ್ನು ಬಂಧಿಸಿದ ಒಂದು ದಿನದ ನಂತರ ಈ ಎನ್​ಕೌಂಟರ್​ ನಡೆದಿದೆ. ಇದು ಪ್ರಮುಖ ದಾಳಿಗಳನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಎನ್​ಕೌಂಟರ್​ನಲ್ಲಿ ಕೊಲ್ಲಲ್ಪಟ್ಟ ಕಮ್ರಾನ್ ಭಾಯ್ ಅಲಿಯಾಸ್ ಹನೀಸ್ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದು, ಈತ ಕುಲ್ಗಾಮ್ ಹಾಗೂ ಶೋಪಿಯಾನ್ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ವಿಜಯ್ ಕುಮಾರ್ ತಿಳಿಸಿದ್ದರು.

ನವೆಂಬರ್​ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿತ್ತು. ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕೆಲವು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಭಾರತೀಯ ಸೇನೆ ಗುರುವಾರ ಗಮನಿಸಿದೆ. ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ನಡೆಸಿದ ಪ್ರತಿ ದಾಳಿಯಲ್ಲಿ ಉಗ್ರರನ್ನು ಹತೈಗೈಯ್ಯಲಾಗಿತ್ತು.

ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್​​ಕೌಂಟರ್​​​ಗಳಲ್ಲಿ ಲಷ್ಕರ್​-ಇ-ತೊಯ್ಬಾ (ಎಲ್​ಇಟಿ) ಕಮಾಂಡರ್ ಮುಖ್ತರ್​ ಭಟ್​​ ಸೇರಿ ನಾಲ್ವರು ಉಗ್ರರನ್ನು ಭದ್ರತಾ ಪಡೆ ಸದೆಬಡಿದಿತ್ತು. ಬಿಜ್​ಬೇಹರ ಪ್ರದೇಶದಲ್ಲಿ ನಡೆದ ಎನ್​​ಕೌಂಟರ್​ನಲ್ಲಿ ಓರ್ವ ಉಗ್ರನನ್ನು ಹಾಗೂ ಅವಂತಿಪೋರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು.

ನಿನ್ನೆಯಷ್ಟೇ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿತ ಘಟನೆಗಳು ಶೇಕಡಾ 168ರಷ್ಟು ಕಡಿಮೆಯಾಗಿದೆ. ಅಲ್ಲದೆ, 2015 ರಿಂದ “ಎಡಪಂಥೀಯ ಉಗ್ರಗಾಮಿ ಘಟನೆಗಳು ಶೇಕಡಾ 265ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ” ಎಂದು ಹೇಳಿದ್ದಾರೆ.

ಮೋದಿ ಸರ್ಕಾರವು “ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ” ಎಂದು ಠಾಕೂರ್ ಒತ್ತಿಹೇಳಿದ್ದಾರೆ. "ಭಯೋತ್ಪಾದನೆಯ ನಿಗ್ರಹಕ್ಕೆ ಸರ್ಕಾರವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದು, ಅದು ನಿರ್ಣಾಯಕ ಫಲಿತಾಂಶಗಳನ್ನು ನೀಡಿದೆ" ಎಂದು ಅವರು ಹೇಳಿದರು.

“2016ರಲ್ಲಿ ಮಾಡಿದ ಸರ್ಜಿಕಲ್ ಸ್ಟ್ರೈಕ್‌ಗಳು ಉರಿ ದಾಳಿಗೆ ಕೊಟ್ಟ ಪ್ರತಿಕ್ರಿಯೆಯಾಗಿವೆ. 2019ರಲ್ಲಿ ಮಾಡಲಾದ ಬಾಲಕೋಟ್ ವೈಮಾನಿಕ ದಾಳಿಯು, ಪುಲ್ವಾಮಾ ಬಾಂಬ್ ದಾಳಿಗೆ ನೀಡಿದ ದಿಟ್ಟ ಪ್ರತಿಕ್ರಿಯೆಯಾಗಿವೆ. ಇಂತಹ ಎಲ್ಲಾ ಕಠಿಣ ಹಾಗೂ ನಿರ್ಣಾಯಕ ಕ್ರಮಗಳು ನಿರ್ಣಾಯಕ ಫಲಿತಾಂಶಗಳನ್ನು ನೀಡಿತು” ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ಮೋದಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ 2014ರಿಂದ, ದಂಗೆಯಿಂದ ಆಗುವ ಹಿಂಸಾಚಾರವು ಶೇಕಡಾ 80ರಷ್ಟು ಕಡಿಮೆಯಾಗಿದೆ. ನಾಗರಿಕರ ಸಾವಿನ ಪ್ರಮಾಣ ಕೂಡಾ ಶೇಕಡಾ 89ರಷ್ಟು ಕಡಿಮೆಯಾಗಿದೆ. ಇದೇ ವೇಳೆ 6,000 ಉಗ್ರಗಾಮಿಗಳು ಶರಣಾಗಿದ್ದಾರೆ ಎಂದು ಅವರು ಹೇಳಿದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.