700 ಅಡಿ ಬೋರ್‌ವೇಲ್‌ನಲ್ಲಿ ಸಿಲುಕಿ 10 ದಿನ ಕಾರ್ಯಾಚರಣೆ ನಂತರ ಬದುಕುಳಿದ 3 ವರ್ಷದ ಮಗು ಕೆಲವೇ ಗಂಟೆಯಲ್ಲೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  700 ಅಡಿ ಬೋರ್‌ವೇಲ್‌ನಲ್ಲಿ ಸಿಲುಕಿ 10 ದಿನ ಕಾರ್ಯಾಚರಣೆ ನಂತರ ಬದುಕುಳಿದ 3 ವರ್ಷದ ಮಗು ಕೆಲವೇ ಗಂಟೆಯಲ್ಲೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿತು

700 ಅಡಿ ಬೋರ್‌ವೇಲ್‌ನಲ್ಲಿ ಸಿಲುಕಿ 10 ದಿನ ಕಾರ್ಯಾಚರಣೆ ನಂತರ ಬದುಕುಳಿದ 3 ವರ್ಷದ ಮಗು ಕೆಲವೇ ಗಂಟೆಯಲ್ಲೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿತು

ರಾಜಸ್ಥಾನದಲ್ಲಿ ಭಾರೀ ಆಳದ ಬೋರ್‌ ವೆಲ್‌ ಗುಂಡಿಗೆ ಬಿದ್ದ ಮಗುವನ್ನು ಸತತ ಹತ್ತು ದಿನ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಲಾಯಿತು. ಆದರೆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಇಡೀ ಕುಟುಂಬದವನ್ನು ದುಃಖದಲ್ಲಿ ಮುಳುಗಿಸಿದ ಘಟನೆ ಇದು.

ರಾಜಸ್ತಾನದಲ್ಲಿ ಆಳದ ಬೋರ್‌ವೆಲ್‌ಗುಂಡಿಗೆ ಬಿದ್ದು ಬದುಕುಳಿದರೂ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿತು.
ರಾಜಸ್ತಾನದಲ್ಲಿ ಆಳದ ಬೋರ್‌ವೆಲ್‌ಗುಂಡಿಗೆ ಬಿದ್ದು ಬದುಕುಳಿದರೂ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿತು.

ದೆಹಲಿ: ಆ ಮಗುವನ್ನು ಎಲ್ಲರೂ ಮೃತ್ಯುಂಜಯ ಎಂದೇ ಕರೆದರು. ಏಕೆಂದರೆ ಅದು ಬಿದ್ದಿದ್ದು ಬರೋಬ್ಬರಿ 700 ಅಡಿ ಆಳದ ಬೋರ್‌ವೆಲ್‌ ಗುಂಡಿಗೆ. ಸತತ 10 ದಿನಗಳ ಕಾಲ ನಿರಂತರ ಕಾರ್ಯಾಚರಣೆಯನ್ನು ರಕ್ಷಣಾ ಸಿಬ್ಬಂದಿ ಚಳಿಯನ್ನೂ ಲೆಕ್ಕಿಸಿದೇ ಕೈಗೊಂಡರು. ಅದೆಷ್ಟೋ ಜನರ ಹಾರೈಕೆಯ ಫಲವೋ ಏನೋ ಆಗುವನ್ನು ಉಳಿಸಿಕೊಂಡು ಜೀವಂತವಾಗಿಯೇ ಮೇಲೆ ತರಲಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯನ್ನೇನೋ ಮಗುವಿಗೆ ನೀಡಲಾಯಿತು. ಕುಟುಂಬದವರು, ಹಿತೈಷಿಗಳು ಮಾತ್ರವಲ್ಲದೇ ರಾಜಸ್ಥಾನದ ಪ್ರತಿಯೊಬ್ಬರ ಆ ಹಾರೈಕೆ ಬಹುಹೊತ್ತು ಉಳಿಯಲೇ ಇಲ್ಲ. ಆದರೆ ಕೆಲವೇ ಹೊತ್ತಿನಲ್ಲಿ ಮಗು ತೀರಿಕೊಂಡು ಬಿಟ್ಟಿತು.

ರಾಜಸ್ಥಾನದಲ್ಲಿ ನಡೆದ ಈ ಘಟನೆ ಇಡೀ ರಾಜ್ಯದ ಜನತೆ ಮರುಗುವಂತೆ ಮಾಡಿತು. ಘಟನೆ ನಡೆದಿದ್ದು ಹತ್ತು ದಿನದ ಹಿಂದೆಯಾದರೂ ಮಗುವನ್ನು ಉಳಿಸಿಕೊಂಡು ಜೀವಂತವಾಗಿ ಹೊರ ಕರೆ ತಂದಿದ್ದು ಹೊಸ ವರ್ಷದ ದಿನವಾದ ಬುಧವಾರ. ಆ ಖುಷಿ ಹೆಚ್ಚು ಹೊತ್ತು ಇರದೇ ಹೋಯಿತು.

10 ದಿನಗಳ ಹಿಂದೆ ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ ಬೋರ್‌ವೆಲ್‌ಗೆ ಬಿದ್ದ ಮೂರು ವರ್ಷದ ಮಗು ರಕ್ಷಿಸಲ್ಪಟ್ಟ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದೆ. ಐದು ವಿಫಲ ಪ್ರಯತ್ನಗಳ ನಂತರ ರಕ್ಷಿಸಲ್ಪಟ್ಟ ಚೇತನಾಳನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತಪಾಸಣೆ ವೇಳೆ ಆಕೆ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಖಚಿತಪಡಿಸಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚೆತನ್ಯ ರಾವತ್ ಹೇಳುವಂತೆ, ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ತಕ್ಷಣ ತುರ್ತುಚಿಕಿತ್ಸಾ ವಿಭಾಗಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಪರೀಕ್ಷೆಗಾಗಿ ವಿಶೇಷ ಹಾಸಿಗೆಯನ್ನು ಸಿದ್ದಪಡಿಸಲಾಗಿತ್ತು. ವೈದ್ಯರ ತಂಡ ಆರಂಭಿಕ ಚಿಕಿತ್ಸಾ ಕ್ರಮಗಳನ್ನು ಪೂರೈಸಿದರು. ಆದರೆ ಅಷ್ಟು ಹೊತ್ತಿಗೆ ಮಗು ಮೃತಪಟ್ಟಿದೆ ಎನ್ನುವುದನ್ನು ಘೋಷಿಸಿದರು. ಇದು ಇಡೀ ಕುಟುಂಬಕ್ಕೆ ಬರಸಿಡಿಲನಂತೆ ಅಪ್ಪಳಿಸಿತು. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತು. ಎಲ್ಲರ ಪ್ರಾರ್ಥನೆಯ ಫಲವಾಗಿ ಮಗು ಜೀವಂತವಾಗಿ ಬಂದಿದೆ. ಬದುಕುಳಿದು ಇನ್ನಷ್ಟು ಆಯುಷ್ಯ ಹೆಚ್ಚಿಸಿಕೊಳ್ಳಲಿದೆ ಎಂದೇ ಮನಸಿನಲ್ಲೇ ಅಂದುಕೊಂಡಿದ್ದರೂ ಅದು ಈಡೇರದ್ದಕ್ಕೆ ಬೇಸರ ಹೊರ ಹಾಕಿದರು.ನಂತರ ಜಿಲ್ಲಾಧಿಕಾರಿಗಳ ಆದೇಶದಂತೆ ಶವಾಗಾರಕ್ಕೆ ವರ್ಗಾಯಿಸಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಡಿಸೆಂಬರ್ 23 ರಂದು ಮಧ್ಯಾಹ್ನ ಆಟವಾಡುತ್ತಿದ್ದಾಗ ಕೊಟ್‌ಪುಟ್ಲಿಯ ಕಿರಾತ್‌ಪುರ ಗ್ರಾಮದ ಬಾಡಿಯಾಲಿ ಕಿ ಧನಿಯಲ್ಲಿ ಚೇತನಾ 700 ಅಡಿ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿದ್ದಳು. ಸುಮಾರು 10 ನಿಮಿಷಗಳ ನಂತರ ಬಾಲಕಿಯ ಅಳುವುದು ಕೇಳಿದ ಮನೆಯವರಿಗೆ ಆಕೆ ಬೋರ್‌ವೆಲ್‌ನಲ್ಲಿ ಸಿಲುಕಿರುವುದು ಕಂಡುಬಂದಿತ್ತು.

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು ವೈದ್ಯಕೀಯ ತಂಡಗಳು ತಕ್ಷಣ ತಲುಪಿದವು ಮತ್ತು ಅವಳನ್ನು ರಕ್ಷಿಸುವ ಪ್ರಯತ್ನಗಳು ನಡೆದವು. ಪೈಪ್ ಮೂಲಕ ಬಾಲಕಿಗೆ ಆಮ್ಲಜನಕವನ್ನು ಪೂರೈಸಲಾಯಿತು ಮತ್ತು ಅವಳನ್ನು ಹೊರ ತರುವ ಆರಂಭಿಕ ಪ್ರಯತ್ನಗಳು ವಿಫಲವಾದ ನಂತರ, ರಕ್ಷಣಾ ತಂಡಗಳು ಭಿನ್ನ ಜಾಗದ ಮೂಲಕ ಭೂಮಿ ಅಗೆಯಲು ಪ್ರಾರಂಭಿಸಿದವು. ಆದರೆ ಅವರು ತೋಡಿದ ಸುರಂಗ ದಾರಿ ತಪ್ಪಿತು. ಅಲ್ಲದೇ ಬೋರ್‌ವೆಲ್‌ ಕೂಡ ವಾಲಿದ್ದರಿಂದ ಆಕೆಯನ್ನು ಹೊರ ತರುವುದು ಕಷ್ಟವಾಯಿತು. ಅಂತಿಮವಾಗಿ, ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ದೆಹಲಿ ಮತ್ತು ಜೈಪುರ ಮೆಟ್ರೋದಿಂದ ತಜ್ಞರನ್ನು ಕರೆಸಲಾಯಿತು.ಆರಂಭದಲ್ಲಿ, ಸುರಂಗಕ್ಕೆ 8-ಅಡಿ ಅಗಲದ ಅಗತ್ಯವಿದೆ ಎಂದು ಅಂದಾಜಿಸಿದರೂ ನಂತರ ಕಾರ್ಯಾಚರಣೆಯನ್ನು ಸುಲಭಗೊಳಿಸಲು 12 ಅಡಿಗಳವರೆಗೂ ಅದ್ನು ವಿಸ್ತರಿಸಲಾಯಿತು. ಹತ್ತು ದಿನದ ಅಂತರದಲ್ಲಿ ಐದು ವಿಫಲ ಯತ್ನಗಳ ನಂತರ ಮಗುವನ್ನು ಹೊರ ತೆಗೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾದವು. ಆದರೆ ಮಗು ಮಾತ್ರ ಬದುಕುಳಿಯಲಿಲ್ಲ.

ದುಖಃದ ನಡುವೆಯೂ ಮಾತನಾಡಿದ ಚೇತನಾ ಅವರ ಅಜ್ಜ ದಯಾರಾಮ್, ಕಠಿಣ ಚಳಿಗಾಲದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡಿದ ಆಡಳಿತ ಮತ್ತು ರಕ್ಷಣಾ ತಂಡಗಳ ಅವಿರತ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ. ರಕ್ಷಣಾ ಸಿಬ್ಬಂದಿ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಹೇಳುವೆ. ಆದರೆ ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದಂತೆ ತೆರೆದ ಬೋರ್‌ವೆಲ್‌ಗಳನ್ನು ಮುಚ್ಚಬೇಕು ಎಂದು ಸಲಹೆ ನೀಡಿದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.