ಲೋಕಸಭೆ ಫಲಿತಾಂಶ ವಿಶ್ಲೇಷಣೆ: ಬಿಜೆಪಿ ಜಯಭೇರಿ ಬಾರಿಸಿದರೂ ಗೆಲುವಿನ ಅಂತರ ಎಷ್ಟು ಮುಖ್ಯ? ಈ ಐದು ಅಂಶಗಳ ಸೂಕ್ಷ್ಮವಾಗಿ ಗಮನಿಸುತ್ತಿದೆ ಪಕ್ಷ
ಲೋಕಸಭಾ ಚುನಾವಣೆ 2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆದ್ದರೂ, ಬಿಜೆಪಿಯು ಕೆಲವೊಂದು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಕ್ಷಕ್ಕೆ ಬಹುಮತದ ಅಂತರ ತುಂಬಾ ಮುಖ್ಯವಾಗಿದ್ದು, ಸ್ಥಾನಗಳಲ್ಲಿ ಸಣ್ಣ ವ್ಯತ್ಯಾಸವಾದರೂ ಪಕ್ಷವು ಅದನ್ನು ವಿಮರ್ಶಿಸಬೇಕಾಗುತ್ತದೆ.
ಲೋಕಸಭಾ ಚುನಾವಣೆ 2024, ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ. ಚುನಾವಣೆಗೂ ಮುನ್ನವೇ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಿ, ಮತಬ್ಯಾಂಕ್ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿ ಕಣಕ್ಕಿಳಿದ ಎನ್‌ಡಿಎ ಮೈತ್ರಿಕೂಟ, ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಭಾರಿ ಪ್ರಮಾಣದಲ್ಲಿ ವಿಜಯಭೇರಿ ಬಾರಿಸಿ ಸರ್ಕಾರ ರಚಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಅದರಂತೆಯೇ, ಮತಎಣಿಕೆಯ ಆರಂಭಿಕ ಟ್ರೆಂಡ್ ಕೂಡಾ ಎನ್‌ಡಿಎ ಮುನ್ನಡೆಯನ್ನು ಸೂಚಿಸಿತ್ತು. ಮತ ಎಣಿಕೆಯು ಸಾಗಿದಂತೆ ಬಿಜೆಪಿಗೆ ನಿರೀಕ್ಷೆಯಷ್ಟು ಸ್ಥಾನಗಳು ಸಿಗುವುದಿಲ್ಲ ಎನ್ನುವುದು ನಿಚ್ಚಳವಾಯಿತು. ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವಾಗಿರುವ ಇಂಡಿಯಾ ಒಕ್ಕೂಟವು (ಜೂನ್ 4, ಸಂಜೆ 4 ಗಂಟೆ) 230 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಬಿಜೆಪಿ ಸರ್ಕಾರವು 'ನಾಲ್ಕು ಜಾತಿ ಗುಂಪುಗಳಿಂದ' ಗುರುತಿಸಲ್ಪಟ್ಟಿದೆ ಮತ್ತು ಅದಕ್ಕಾಗಿ ಬದ್ಧವಾಗಿದೆ ಎಂದು ಮೋದಿ ಒತ್ತಿ ಹೇಳುತ್ತಾ ಬಂದಿದ್ದರು. ಈಗ ಆ ಮಾತು ಮತ್ತೊಮ್ಮೆ ಪ್ರಸ್ತಾಪವಾಗುತ್ತಿದೆ. ಬಿಜೆಪಿ ಹಿನ್ನಡೆಗೆ ಕಾರಣ ಏನು ಎಂಬ ವಿಶ್ಲೇಷಣೆಗಳು ಮುಂದೆ ಬಂದಿವೆ. ಮೋದಿ ಹೇಳುತ್ತಿದ್ದ ನಾಲ್ಕು ಜಾತಿಗಳೆಂದರೆ; ರೈತರು, ಮಹಿಳೆಯರು, ಬಡವರು ಮತ್ತು ಯುವಕರು.
ಭಾರತದಲ್ಲಿ ಕಳೆದೆರಡು ಅವಧಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ ಹಾಗೂ ಅಮಿತ್ ಶಾ. ಒಂದು ವೇಳೆ ಈ ಬಾರಿ ಪಕ್ಷವು ಸಣ್ಣ ಅಂತರದಲ್ಲಿ ಬಹುಮತ ಸಾಬೀತುಪಡಿಸಿದರೆ ಅಥವಾ ಎದುರಾಳಿ ಇಂಡಿಯಾ ಮೈತ್ರಿಕೂಟ ಮೇಲುಗೈ ಸಾಧಿಸಿದರೆ, ನಮೋ-ಅಮಿತ್ ಶಾ ಪ್ರಾಬಲ್ಯದ ಪಕ್ಷದ ಒಳಗೊಳಗೆ ಅಸಮಾಧಾನದ ಅಲೆಗಳು ಏಳುವ ಸಾಧ್ಯತೆಯೂ ಇದೆ. ನಿರೀಕ್ಷೆಯಂತೆಯೇ, ಈ ಬಾರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಯ ಮೈತ್ರಿಕೂಟವು ಭಾರಿ ಅಂತರದಲ್ಲಿ ಗೆದ್ದರೂ, ಪಕ್ಷವು ಕೆಲವೊಂದು ಸಣ್ಣ ಅಂಶಗಳ ಮೇಲೆ ಗಮನಹರಿಸುತ್ತಿದೆ.
1) ಮೋದಿ ಪ್ರಭಾವ
2013ರಲ್ಲಿ ಬಿಜೆಪಿಯಿಂದ ಪ್ರಧಾನ ಮಂತ್ರಿ ಅಭ್ಯರ್ಥಿಯಾದಾಗಿನಿಂದ, ನರೇಂದ್ರ ಮೋದಿ ಅವರು ಪಕ್ಷದ ಮುಖವಾಗಿ ಕೆಲಸ ಮಾಡುತ್ತಾ ಬಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ದೇಶದೆಲ್ಲೆಡೆ ಮಿಂಚಿನ ಸಂಚಾರ ನಡೆಸಿದ ಮೋದಿ ಮತದಾರರನ್ನು ಸೆಳೆದಿದ್ದಾರೆ. 2014 ಹಾಗೂ 2019ರ ಚುನಾವಣೆಯಲ್ಲಿ ಪಕ್ಷ ಪಡೆದ ಭಾರಿ ಬಹುಮತದಲ್ಲಿ ಪ್ರಮುಖ ಪಾಲು ಮೋದಿ ಅವರದ್ದು ಎನ್ನುವುದು ಅಲಿಖಿತ ಸತ್ಯ. ಜಾತಿ ರೇಖೆಗಳನ್ನು ಮೀರಿಸಿ ಭಿನ್ನ ಗುಂಪುಗಳ ಒಗ್ಗೂಡಿಸುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದರು. ದೂರದೃಷ್ಟಿಯೊಂದಿಗೆ ಆರಂಭಿಸಿದ ವಿವಿಧ ಕಲ್ಯಾಣ ಯೋಜನೆಗಳು ಪಕ್ಷದ ಕೈಹಿಡಿಯಿತು. ಆದರೆ, ಕಳೆದ ಎರಡು ಲೋಕಸಭಾ ಚುನಾವಣೆಗಳನ್ನು ಎದುರಿಸಿದ ಸನ್ನಿವೇಶ ಈ ಬಾರಿ ಇರಲಿಲ್ಲ. ಮೋದಿ ಹೆಸರು ಈ ಬಾರಿ ಬಿಜೆಪಿ ಕೈಹಿಡಿದಂತಿಲ್ಲ. ಅಗ್ನಿಪಥ್ ಯೋಜನೆ, ಪ್ರಶ್ನೆ ಪತ್ರಿಕೆ ಸೋರಿಕೆ, ಉದ್ಯೋಗ ಸೃಷ್ಟಿಯಲ್ಲಿ ವಿಫಲ, ರೈತರ ಬಗೆಗಿನ ಸರ್ಕಾರದ ಧೋರಣೆ ಸೇರಿದಂತೆ ಹಲವು ಅಂಶಗಳ ಮೇಲೆ ಯುವಜನರ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಆರ್ಥಿಕವಾಗಿ ಕೆಳವರ್ಗದ ಜನರು ಹಾಗೂ ಯುವಕರ ಆಕ್ರೋಶ ವ್ಯಕ್ತವಾಗಿದೆ. ಅತ್ತ ಜಾತಿ ಗಣತಿ ಕುರಿತು ಧ್ವನಿಯೆತ್ತಿದ ಪ್ರತಿಪಕ್ಷಗಳು ಚಾಣಾಕ್ಷತನದೊಂದಿಗೆ ಪ್ರಚಾರ ನಡೆಸಿತು. ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಮತ್ತು ಮೀಸಲಾತಿಗಳನ್ನು ತೆಗೆದುಹಾಕುತ್ತದೆ ಎಂಬ ಅಂಶವನ್ನೇ ಮತ್ತೆ ಮತ್ತೆ ಹೇಳುತ್ತಾ ಜನರನ್ನು ಎಚ್ಚರಿಸುತ್ತಾ ಬಂತು. ಇದು ಬಿಜೆಪಿ ಬಗೆಹರಿಸಬೇಕಾದ ಸಮಸ್ಯೆಗಳಾಗಿವೆ.
2) ಬಿಜೆಪಿ ಚುನಾವಣಾ ಯಂತ್ರ
ಅಮಿತ್ ಶಾ ಅವರ ನೇತೃತ್ವದಲ್ಲಿ ಪಕ್ಷದ ಚುನಾವಣಾ ಯಂತ್ರವು ದಿನದ 24 ಗಂಟೆಯೂ (24X7) ಕೆಲಸ ಮಾಡುತ್ತಿದೆ ಎಂಬುದು ಸತ್ಯ. ಇಷ್ಟೇ ಅಲ್ಲ, ದಿನ ಕಳೆದಂತೆ ಇದು 24X7X365 ದಿನಗಳಿಗೆ ಹೆಚ್ಚುತ್ತಿದೆ. ಈ ಬಾರಿಯ ಚುನಾವಣೆ ವೇಳೆ ಪ್ರಚಾರದ ಅಬ್ಬರ ಇನ್ನೂ ಜೋರಾಗಿತ್ತು. ಪಕ್ಷದ ನಾಯಕರು ವಿವಿಧ ಹಂತಗಳಲ್ಲಿ ಭೌತಿಕವಾಗಿ ಅಖಾಡಕ್ಕಿಳಿದು ಪ್ರಚಾರ ನಡೆಸದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸರ್ಕಾರದ ಸಂದೇಶವನ್ನು ಒತ್ತಿಹೇಳುತ್ತಾರೆ.
ಈ ನಡುವೆ, ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಮೈತ್ರಿಯ ಒತ್ತಡದಿಂದ ಅಸಮಾಧಾನವು ಹುಟ್ಟಿಕೊಂಡಿರುವುದನ್ನು ಬಿಜೆಪಿಯೇ ಶಮನ ಮಾಡಬೇಕಿದೆ. ಆರ್‌ಎಸ್‌ಎಸ್ ಜೊತೆಗಿನ ಪಕ್ಷದ ಸಂಬಂಧದ ಕುರಿತು ಪಕ್ಷದ ನಡುವೆ ಉದ್ವಿಗ್ನತೆ ಇದೆ ಎಂಬ ಗುಮಾನಿಯನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ದೇಶಾದ್ಯಂತ ಮತದಾರರನ್ನು ಬೂತ್‌ಗಳಿಗೆ ಕರೆತರುವಲ್ಲಿ ಸಂಘದ ಸ್ವಯಂಸೇವಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮುಖಂಡರು ಹೇಳಿಕೊಂಡಿದ್ದಾರೆ. ಇಂದು ಪ್ರಕಟವಾಗುವ ಅಂತಿಮ ಫಲಿತಾಂಶದಲ್ಲಿ ಬಿಜೆಪಿಯ ಗೆಲುವಿನ ಅಂತರ ಏರುಪೇರಾದರೆ, ಅದಕ್ಕೆ ಬಿಜೆಪಿ ಉತ್ತರ ಕೊಡಬೇಕಾಗುತ್ತದೆ.
3) ವಿಧಾನಸಭೆ-ಲೋಕಸಭೆ ಫಲಿತಾಂಶದ ವೈರುಧ್ಯವನ್ನು ಬಿಜೆಪಿ ಹೇಗೆ ಸರಿದೂಗಿಸಬಹುದು?
ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಬಂದಾಗ ಮತದಾರರು ಹೇಗೆ ಭಿನ್ನ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂಬುದಕ್ಕೆ ಇತ್ತೀಚೆಗೆ ಹಲವು ಕ್ಷೇತ್ರಗಳು ಸಾಕ್ಷಿಯಾಗಿವೆ. ಇದಕ್ಕೆ ಹಲವು ಉದಾಹರಣೆಗಳಿವೆ. ಪ್ರಮುಖ ಉದಾಹರಣೆಯೇ ಕರ್ನಾಟಕ. 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಸಂಪೂರ್ಣ ವಿಫಲವಾಯ್ತು. 2019ರಲ್ಲಿ ಒಡಿಶಾ ಲೋಕಸಭೆಯಲ್ಲಿ ದೊಡ್ಡ ಲಾಭ ಗಳಿಸಿದ ಬಿಜೆಪಿ, ವಿಧಾನಸಭೆಯಲ್ಲಿ ಅದೇ ಅಬ್ಬರ ಮುಂದುವರೆಸಲು ವಿಫಲವಾಯ್ತು. ಹೀಗಾಗಿ ಈ ಬಾರಿಯ ಮತದಾನದ ಮಾದರಿ ಕುತೂಹಲ ಮೂಡಿಸಿದೆ. ಇದನ್ನು ವಿಮರ್ಷಿಸುವ ಕೆಲಸ ಪಕ್ಷ ಮಾಡಲಿದೆ.
ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಲೋಕಸಭೆಯೊಂದಿಗೆ ವಿಧಾನಸಭೆ ಚುನಾವಣೆ ಕೂಡಾ ನಡೆಯಿತು. ಸಿಕ್ಕಿಂ ಮತ್ತು ಅರುಣಾಚಲದ ಫಲಿತಾಂಶಗಳು ಹೊರಬಿದ್ದಿದ್ದು, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಈಗ ಉಳಿದ ಕ್ಷೇತ್ರಗಳ ಫಲಿತಾಂಶ ಕುತೂಹಲ ಮೂಡಿಸಿದೆ.
4) ಬಿಜೆಪಿ ಮತ್ತು ಮೈತ್ರಿ ತಂತ್ರಗಳು
2019ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತು. ಈ ವೇಳೆ ಅದರ ಮಿತ್ರಪಕ್ಷಗಳು ತನ್ನನ್ನು ತಾವು ಅತಿಯಾಗಿ ಭಾವಿಸಿದವು. ಇದು ಎನ್‌ಡಿಎ ಮೈತ್ರಿ ಪ್ರಭಾವ ಕುಗ್ಗುವಿಕೆಗೆ ಕಾರಣವಾಯಿತು. ಈ ಬಾರಿ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಒಗ್ಗೂಡಿ ಹೋರಾಟಕ್ಕಿಳಿದಿದೆ. ಇದೇ ವೇಳೆ ಬಿಜೆಪಿ ಕೂಡಾ ಕೆಲವು ಹಳೆಯ ಮತ್ತು ಹೊಸ ಪಕ್ಷಗಳನ್ನು ಮೈತ್ರಿಗೆ ಸೇರಿಸಿಕೊಂಡು ಫಲಿತಾಂಸಕ್ಕೆ ಸಜ್ಜಾಗಿದೆ. ಬಿಹಾರದಲ್ಲಿ ಜೆಡಿಯು, ಕರ್ನಾಟಕದಲ್ಲಿ ಜೆಡಿಎಸ್, ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ಜನಸೇನಾ ಪಕ್ಷ ಹಾಗೂ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನಾ ಜೊತೆಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಪಕ್ಷ ಯಶಸ್ವಿಯಾಯ್ತು. ಆದರೆ, ಬಿಹಾರದಲ್ಲಿ ಬಿಜೆಡಿ ಮತ್ತು ಪಂಜಾಬ್‌ನಲ್ಲಿ ಅಕಾಲಿದಳದೊಂದಿಗೆ ಮೈತ್ರಿ ಪ್ರಯತ್ನ ವಿಫಲವಾಯ್ತು.
ಚುನಾವಣೆ ಬಂದಂತೆ ಮೈತ್ರಿಯಲ್ಲಿ ಬದಲಾವಣೆಯಾಗುತ್ತಿದೆ. ಆದರೆ, ಈ ಎಲ್ಲಾ ಮೈತ್ರಿ ತಂತ್ರಗಳು ಫಲಿತಾಂಶದಲ್ಲಿ ಫಲಕೊಡಬೇಕಿದೆ. ಮಹಾರಾಷ್ಟ್ರದಲ್ಲಿ ಮೈತ್ರಿಪಕ್ಷಗಳೇ ಒಂದಾಗಿ ಬಿಜೆಪಿಯನ್ನು ಕೆಳಗಿಳಿಸಲಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಆದರೆ, ಬಿಜೆಪಿ ಇದನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
5) ಕಲ್ಯಾಣ ರಾಜಕಾರಣ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನ್ಯಾಯ ಖಾತರಿಗಳ ಸುತ್ತ ಕಾಂಗ್ರೆಸ್ ಪ್ರಚಾರ ನಡೆಸಿದರೆ, ಬಿಜೆಪಿಯು ಸಂಪ್ರದಾಯದಂತೆ ಮೋದಿಯವರ ಭರವಸೆಗಳೊಂದಿಗೆ ಪ್ರಚಾರಕ್ಕಿಳಿಯಿತು. ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಸೇರಿದಂತೆ ಕಲ್ಯಾಣ ಕಾರ್ಯಕ್ರಮದ ಭರವಸೆ ನೀಡಿ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯ್ತು. ಅತ್ತ ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆಯ ಜೊತೆ ಜೊತೆಯಲ್ಲಿ, ನ್ಯಾಯ ಗ್ಯಾರಂಟಿಯನ್ನು ಮತದಾರರ ಮುಂದಿಡಲು ಆರಂಭಿಸಿತ್ತು. ನಿರುದ್ಯೋಗ ಮತ್ತು ಬೆಲೆ ಏರಿಕೆಯನ್ನು ಕಾಂಗ್ರೆಸ್ ಚುನಾವಣಾ ಅಸ್ತ್ರವಾಗಿ ಬಳಸುತ್ತಿರುವ ನಡುವೆ, ನ್ಯಾಯ ಗ್ಯಾರಂಟಿ ಕೂಡಾ ಚರ್ಚೆಯ ವಿಷಯವಾಗುತ್ತಿದೆ.
ಅಂತಿಮವಾಗಿ ಇಂದು ಯಾರ ಭರವಸೆಗಳು ಮತದಾರರನ್ನು ಸೆಳೆದಿವೆ ಎಂಬುದು ಸ್ಪಷ್ಟವಾಗುತ್ತಿದೆ.