Kannada News  /  Nation And-world  /  63 Passengers Put On No Fly List In Last One Year: Govt To Lok Sabha
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

No Fly List: ವಿಮಾನದಲ್ಲಿ ನಿಯಮ ಉಲ್ಲಂಘನೆ: ಕಳೆದೊಂದು ವರ್ಷದಲ್ಲಿ ‘ನೋ ಫ್ಲೈ ಲಿಸ್ಟ್’ಗೆ 63 ಪ್ರಯಾಣಿಕರ ಸೇರ್ಪಡೆ

07 February 2023, 11:41 ISTHT Kannada Desk
07 February 2023, 11:41 IST

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕಳೆದೊಂದು ವರ್ಷದಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ನೊ ಫ್ಲೈ ಲಿಸ್ಟ್‌ಗೆ ಸೇರಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ.

ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕಳೆದೊಂದು ವರ್ಷದಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ನೋ ಫ್ಲೈ ಲಿಸ್ಟ್‌ಗೆ ಸೇರಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ. ನೋ ಫ್ಲೈ ಲಿಸ್ಟ್‌ಗೆ ಸೇರಿಸಲಾದ ಪ್ರಯಾಣಿಕರು ನಿರ್ದಿಷ್ಟ ಅವಧಿಯವರೆಗೆ ವಿಮಾನದಲ್ಲಿ ಹಾರಾಟ ನಡೆಸುವಂತಿಲ್ಲ.

ಟ್ರೆಂಡಿಂಗ್​ ಸುದ್ದಿ

ಏರ್‌ಲೈನ್‌ನ ಆಂತರಿಕ ಸಮಿತಿಯು ಶಿಫಾರಸು ಮಾಡಿದಂತೆ ಕಳೆದ ಒಂದು ವರ್ಷದಿಂದ ಒಟ್ಟು 63 ಪ್ರಯಾಣಿಕರನ್ನು "ನೋ ಫ್ಲೈ ಲಿಸ್ಟ್" ನಲ್ಲಿ ಇರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಡಿಜಿಸಿಎ ಗಮನಕ್ಕೆ ಬಂದಿರುವ ಎರಡು ಮೂತ್ರ ವಿಸರ್ಜನೆಯ ಘಟನೆಗಳೂ ಇಲ್ಲಿ ಸೇರಿವೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ, ಜನರಲ್ (ನಿವೃತ್ತ) ವಿಕೆ ಸಿಂಗ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

"ನೋ ಫ್ಲೈ ಲಿಸ್ಟ್" ನಲ್ಲಿ ಇರಿಸಲಾದ ಹೆಚ್ಚಿನ ಪ್ರಯಾಣಿಕರು ಮಾಸ್ಕ್​​ಗಳನ್ನು ಧರಿಸದಿರುವುದು ಅಥವಾ ಸಿಬ್ಬಂದಿ ಸದಸ್ಯರ ಸೂಚನೆಗಳನ್ನು ಪಾಲಿಸದಿರುವಿಕೆಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ಎಂದು ಕೇಂದ್ರ ಸರ್ಕಾರ ಉಲ್ಲೇಖಿಸಿದೆ.

ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಂಸದ ಡಾ.ಜಾನ್ ಬ್ರಿಟ್ಟಾಸ್ ಮತ್ತು ಬಿಜೆಪಿ ಸಂಸದ ಬ್ರಿಜ್ ಲಾಲ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ, ಈ ಪ್ರಯಾಣಿಕರನ್ನು ಡಿಜಿಸಿಎಯ ನಾಗರಿಕ ವಿಮಾನಯಾನ ಅಗತ್ಯತೆ (ಸಿಎಆರ್) ಸೆಕ್ಷನ್​ 3 ರ ಅಡಿಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ನೊ-ಫ್ಲೈ ಲಿಸ್ಟ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ನಾಗರಿಕ ವಿಮಾನಯಾನ ಸಚಿವಾಲಯವು 8 ಸೆಪ್ಟೆಂಬರ್ 2017 ರಂದು ಅಧಿಕೃತವಾಗಿ ನೋ-ಫ್ಲೈ ಲಿಸ್ಟ್​ ಅನ್ನು ರಚಿಸಿತು. 2017 ರಿಂದ ನಿರ್ದಿಷ್ಟ ಅವಧಿಗೆ 143 ಪ್ರಯಾಣಿಕರನ್ನು 'ನೋ ಫ್ಲೈ ಲಿಸ್ಟ್' ನಲ್ಲಿ ಇರಿಸಲಾಗಿದೆ. ಈ ಪೈಕಿ ಕಳೆದೊಂದು ವರ್ಷದಲ್ಲೇ 63 ಪ್ರಯಾಣಿಕರನ್ನು ಈ ಲಿಸ್ಟ್​ಗೆ ಸೇರಿಸಲಾಗಿದೆ.

ನವೆಂಬರ್ 2017 ರಲ್ಲಿ, ಹೈಜಾಕ್ ಬೆದರಿಕೆಯ ಆರೋಪದಡಿ ಮುಂಬೈನ ಆಭರಣ ವ್ಯಾಪಾರಿ ಬಿರ್ಜು ಕಿಶೋರ್ ಸಲ್ಲಾ ಎಂಬಾತನನ್ನು ಮೊದಲ ಬಾರಿ 'ನೋ ಫ್ಲೈ ಲಿಸ್ಟ್' ಗೆ ಸೇರಿಸಲಾಗಿತ್ತು. ಈತ ಹೆದರಿಸಿದ್ದರಿಂದ ಅಹಮದಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ತಿರುಗಿಸಲಾಗಿತ್ತು.

ನಾಗರಿಕ ವಿಮಾನಯಾನ ಅಗತ್ಯತೆಗಳನ್ನು (ಸಿಎಆರ್) ಅನುಸರಿಸದ ಕಾರಣ, ಡಿಜಿಸಿಎ ಜನವರಿ 2023 ರಲ್ಲಿ ಏರ್ ಇಂಡಿಯಾಕ್ಕೆ ಎರಡು ಶೋಕಾಸ್ ನೋಟಿಸ್‌ಗಳನ್ನು ನೀಡಿದೆ ಮತ್ತು ಘಟನೆಗಳ ವರದಿಯ ವಿಳಂಬಕ್ಕಾಗಿ ವಿಮಾನಯಾನ ಸಂಸ್ಥೆಗೆ ದಂಡ ವಿಧಿಸಿದೆ ಎಂದು ವಿಕೆ ಸಿಂಗ್ ತಿಳಿಸಿದ್ದಾರೆ. ಇದು ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದೆ.

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದ (AI-102) ಬಿಸಿನೆಸ್ ಕ್ಲಾಸ್‌ನಲ್ಲಿ ಶಂಕರ್ ಮಿಶ್ರಾ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಪ್ಯಾಂಟ್​ ಜಿಪ್​ ಅನ್ನು ಬಿಚ್ಚಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನು. ಆದರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವಿಮಾನ ಇಳಿಯುತ್ತಿದ್ದಂತೆಯೇ ಯಾವುದೇ ವಿಚಾರಣೆ ಕೂಡ ಇಲ್ಲದೆ ನಿರ್ಗಮಿಸಲು ಅವಕಾಶ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದರು.

ವಿಮಾನದಲ್ಲಿ ತಮಗಾದ ಕಟ್ಟ ಅನುಭವ ಹಾಗೂ ಏರ್ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯದ ಕುರಿತಂತೆ ಟಾಟಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಮಹಿಳೆ ಬರೆದ ಪತ್ರದ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿತ್ತು.

ಜನವರಿ 4 ರಂದು ದೆಹಲಿಯಲ್ಲಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು ಮತ್ತು ಎರಡು ದಿನಗಳ ನಂತರ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಶಂಕರ್ ಮಿಶ್ರಾ ಅವರನ್ನು ‘ನೊ ಫ್ಲೈ ಲಿಸ್ಟ್‌’ಗೆ ಸೇರಿಸಲಾಗಿತ್ತು. ಇವರನ್ನು 'ಅಶಿಸ್ತಿನ ಪ್ರಯಾಣಿಕ' ಎಂಬ ಪಟ್ಟಿಗೆ ಸೇರಿಸಲಾಗಿದ್ದು, 4 ತಿಂಗಳ ಕಾಲ ವಿಮಾನದಲ್ಲಿ ಸಂಚರಿಸಲು ನಿಷೇಧಿಸಲಾಗಿದೆ.

ಘಟನೆ ಸಂಬಂಧ ತಕ್ಷಣದ ಕ್ರಮ ಕೈಗೊಂಡಿದ್ದ ಡಿಜಿಸಿಎ, ಏರ್​ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಿತ್ತು. ಅಲ್ಲದೇ 1937 ರ ವಿಮಾನಯಾನ ನಿಯಮಗಳ 141 ರೂಲ್​ ಅಡಿಯಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕಾಗಿ ಮೂರು ತಿಂಗಳ ಅವಧಿಗೆ ಪೈಲಟ್-ಇನ್-ಕಮಾಂಡ್​ನ ಪರವಾನಗಿಯನ್ನು ಅಮಾನತುಗೊಳಿಸಿತ್ತು.