ಕನ್ನಡ ಸುದ್ದಿ  /  Nation And-world  /  7 Rowdies Reportedly Killed In Gang Wars In Bihar And Rajasthan

Gang War: ಬಿಹಾರ ಮತ್ತು ರಾಜಸ್ಥಾನದಲ್ಲಿ ಗ್ಯಾಂಗ್​ವಾರ್​: ಗುಂಡಿನ ದಾಳಿಯಲ್ಲಿ 7 ರೌಡಿಗಳು ಸಾವು

ಬಿಹಾರ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ನಡೆದ ಎರಡು ಪ್ರತ್ಯೇಕ ಗ್ಯಾಂಗ್​ವಾರ್​ಗಳಲ್ಲಿ ಗುಂಡಿನ ದಾಳಿಗೆ ಒಟ್ಟು 7 ಮಂದಿ ರೌಡಿಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ಬಿಹಾರ ಮತ್ತು ರಾಜಸ್ಥಾನದಲ್ಲಿ ಗ್ಯಾಂಗ್​ವಾರ್
ಬಿಹಾರ ಮತ್ತು ರಾಜಸ್ಥಾನದಲ್ಲಿ ಗ್ಯಾಂಗ್​ವಾರ್

ಕತಿಹಾರ್/ಸಿಕಾರ್‌: ಬಿಹಾರ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ನಡೆದ ಎರಡು ಪ್ರತ್ಯೇಕ ಗ್ಯಾಂಗ್​ವಾರ್​ಗಳಲ್ಲಿ ಗುಂಡಿನ ದಾಳಿಗೆ ಒಟ್ಟು 7 ಮಂದಿ ರೌಡಿಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ಬಿಹಾರದಲ್ಲಿ ಐವರ ಹತ್ಯೆ

ಬಿಹಾರದ ಕತಿಹಾರ್​ನಲ್ಲಿ ರೌಡಿಗಳ ನಡುವೆ ನಡೆದ ಗಲಾಟೆಯಲ್ಲಿ ಐವರು ಮೃತಪಟ್ಟಿದ್ದಾರೆ. ಕುಖ್ಯಾತ ರೌಡಿಗಳಾದ ಪಿಕು ಯಾದವ್ ಮತ್ತು ಮೋಹನ ಠಾಕೂರ್ ಗ್ಯಾಂಗ್‌ಗಳು ಇವಾಗಿದ್ದು, ಬಿಹಾರ್​​ನ ಕತಿಹಾರ್ ಮತ್ತು ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಈ ಗ್ಯಾಂಗ್​ಗಳು ಸಕ್ರಿಯವಾಗಿವೆ.

ಕತಿಹಾರ್​ನ ಬರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೋಹನ ಚಂದ್‌ಪುರ ಗ್ರಾಮದಲ್ಲಿ ಈ ಎರಡು ಗ್ಯಾಂಗ್‌ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಪಿಕು ಯಾದವ್ ಗ್ಯಾಂಗ್‌ನ ಕನಿಷ್ಠ 40 ಶಸ್ತ್ರಸಜ್ಜಿತರು ಮೋಹನ ಠಾಕೂರ್ ಗ್ಯಾಂಗ್‌ನ 10 ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಇದಕ್ಕೆ ಮೋಹನ ಠಾಕೂರ್ ಕಡೆಯವರೂ ಪ್ರತಿದಾಳಿ ನಡೆಸಿದ್ದಾರೆ.

ನಂತರ ಮೋಹನ ಠಾಕೂರ್ ತಂಡದ ಸದಸ್ಯರು ಸ್ಥಳದಿಂದ ಬಕಿಯಾ ಗ್ರಾಮದ ಕಡೆಗೆ ಪರಾರಿಯಾಗಲು ಯತ್ನಿಸಿದ್ದಾರೆ. ಮೃತ ಐದು ಮಂದಿ ಮೋಹನ ಠಾಕೂರ್ ತಂಡದವರು ಎಂದು ಹೇಳಲಾಗಿದೆ. ಘರ್ಷಣೆಯ ಬಳಿಕ ಓರ್ವನ ಮೃತದೇಹ ಮಾತ್ರ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜಸ್ಥಾನ ಗ್ಯಾಂಗ್​ವಾರ್​ನಲ್ಲಿ ಇಬ್ಬರು ಸಾವು

ರಾಜಸ್ಥಾನದ ಸಿಕಾರ್‌ನಲ್ಲಿ ಶನಿವಾರ ನಡೆದ ಗ್ಯಾಂಗ್ ವಾರ್ ಶೂಟೌಟ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಇವರಲ್ಲಿ ಒಬ್ಬನನ್ನು ರಾಜು ಥೇಟ್ ಎಂದು ಗುರುತಿಸಲಾಗಿದ್ದು, ವೀರ್ ತಾಜ್ ಸೇನಾ ಗ್ಯಾಂಗ್‌ಗೆ ಸೇರಿದ ಕ್ರಿಮಿನಲ್ ಎಂದು ಪೊಲೀಸರು ಹೇಳಿದ್ದಾರೆ. ಇನ್ನೊಬ್ಬನ್ನು ತಾರಾಚಂದ್ ಜಾತ್ ಎಂದು ಗುರುತಿಸಲಾಗಿದೆ.

ರಾಜು ಥೇಟ್ ಹತ್ಯೆಯ ಹೊಣೆಯನ್ನು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗುಂಪು ಹೊತ್ತುಕೊಂಡಿದೆ. ಫೇಸ್‌ಬುಕ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗುಂಪಿನ ರೋಹಿತ್ ಗೋಡಾರಾ ಎಂಬ ಬಳಕೆದಾರ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ನಮ್ಮ ತಂಡಗಳು ಅವರನ್ನು ಹಿಂಬಾಲಿಸುತ್ತಿವೆ, ಆರೋಪಿಗಳು ಹರಿಯಾಣ ಗಡಿಯತ್ತ ಹೊರಟಿದ್ದಾರೆ ಎಂದು ಶಂಕಿಸಲಾಗಿದೆ. ಅವರನ್ನು ಬಂಧಿಸಿದಾಗ ವಿಷಯ ತಿಳಿಸಲಾಗುವುದು ಎಂದು ರಾಜಸ್ಥಾನ ಡಿಜಿಪಿ ಉಮೇಶ್ ಮಿಶ್ರಾ ಎಎನ್‌ಐಗೆ ತಿಳಿಸಿದ್ದಾರೆ. ನಮಗೆ ಲಭ್ಯವಿರುವ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಗಳ ಪ್ರಕಾರ, ನಾಲ್ಕು ಜನರು ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಕಾರ್​ ಎಸ್ಪಿ ಕುನ್ವರ್ ರಾಷ್ಟ್ರದೀಪ್ ತಿಳಿಸಿದ್ದಾರೆ.