ಕನ್ನಡ ಸುದ್ದಿ  /  Nation And-world  /  76 Samples Of New Covid Variant Xbb1.16 Found In India: Insacog Data

Covid variant XBB1.16: ಭಾರತದಲ್ಲಿ 76 ಜನರಲ್ಲಿ ಹೊಸ ಕೋವಿಡ್‌ ಉಪತಳಿ XBB1.16 ಪತ್ತೆ, ಕರ್ನಾಟಕದಲ್ಲಿಯೇ ಅತ್ಯಧಿಕ 30 ಪ್ರಕರಣಗಳು!

COVID-19: ಇತ್ತೀಚೆಗೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ ಇದೇ ಉಪತಳಿ ಅಥವಾ ಹೊಸ ತಳಿ ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

Covid variant XBB1.16: ಭಾರತದಲ್ಲಿ 76 ಜನರಲ್ಲಿ ಹೊಸ ಕೋವಿಡ್‌ ರೂಪಾಂತರಿ XBB1.16 ಪತ್ತೆ (PTI)
Covid variant XBB1.16: ಭಾರತದಲ್ಲಿ 76 ಜನರಲ್ಲಿ ಹೊಸ ಕೋವಿಡ್‌ ರೂಪಾಂತರಿ XBB1.16 ಪತ್ತೆ (PTI) (HT_PRINT)

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು, ಇವುಗಳಲ್ಲಿ ಹೊಸ ಮಾದರಿಯ ಎಕ್ಸ್‌ಬಿಬಿ.1.16 (COVID-19's XBB.1.16 variant) ಉಪತಳಿ ಪ್ರಕರಣಗಳು ಕೂಡ ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 76 ಪ್ರಕರಣಗಳಲ್ಲಿ ಹೊಸ ಕೊರೊನಾ ತಳಿ XBB1.16 ಪತ್ತೆಯಾಗಿರುವುದಾಗಿ INSACOG ಮಾಹಿತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಈ ಹೊಸ ತಳಿಯು ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಪತ್ತೆಯಾದ ಒಟ್ಟು 76 ಪ್ರಕರಣಗಳಲ್ಲಿ ಕರ್ನಾಟಕದಲ್ಲಿಯೇ 30 ಪ್ರಕರಣಗಳು ಪತ್ತೆಯಾಗಿಎ. ಉಳಿದಂತೆ ಮಹಾರಾಷ್ಟ್ರದಲ್ಲಿ 29, ಪಾಂಡಿಚೇರಿಯಲ್ಲಿ 7, ದೆಹಲಿ 5, ತೆಲಂಗಾಣದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಗುಜರಾತ್‌, ಹಿಮಾಚಲ ಪ್ರದೇಶ, ಒಡಿಸ್ಸಾದಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಇಂಡಿಯನ್‌ ಸಾರ್ಸ್‌ ಕೋವ್‌ 2 ಜಿನೊಮಿಕ್ಸ್‌ ಕನ್ಸರ್ಟಿಯಂ (INSACOG) ಅಂಕಿಅಂಶಗಳಿಂದ ತಿಳಿದುಬಂದಿದೆ.

ಮೊದಲ ಬಾರಿಗೆ XBB 1.16 ಕೊರೊನಾ ರೂಪಾಂತರಿಯು ಈ ವರ್ಷದ ಜನವರಿಯಲ್ಲಿ ಪತ್ತೆಯಾಗಿತ್ತು. ಇಬ್ಬರಲ್ಲಿ XBB 1.16 ಪಾಸಿಟಿವ್‌ ಆಗಿತ್ತು. ಆದರೆ, ಫೆಬ್ರವರಿ ತಿಂಗಳಲ್ಲಿ ಒಟ್ಟು 59 ಜನರಲ್ಲಿ ಈ ರೂಪಾಂತರಿ ಪತ್ತೆಯಾಗಿತ್ತು. ಮಾರ್ಚ್‌ನಲ್ಲಿ ಇದೀಗ 15 ಸ್ಯಾಂಪಲ್‌ಗಳಲ್ಲಿ XBB 1.16 ಸೋಂಕು ಇರುವುದು ಪತ್ತೆಯಾಗಿದೆ.

ಇತ್ತೀಚೆಗೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ ಇದೇ ರೂಪಾಂತರಿ ಅಥವಾ ಹೊಸ ತಳಿ ಕಾರಣವಾಗಿರಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

"ಕೋವಿಡ್ ಪ್ರಕರಣಗಳ ಹೆಚ್ಚಳವು ಎಕ್ಸ್‌ಬಿಬಿ 1.16 ರೂಪಾಂತರದಿಂದ ಪ್ರೇರಿತವಾಗಿರುವಂತೆ ಕಾಣಿಸುತ್ತಿದೆ. ಆದರೆ, ಇನ್‌ಫ್ಲೂಯೆನ್ಜಾ ಪ್ರಕರಣಗಳಿಗೆ ಎಚ್3ಎನ್2 ಕಾರಣ" ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

"ಈ ಎರಡು ಕಾಯಿಲೆಗಳಿಗೂ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವಿಕೆ ತಡೆಯಬಹುದು. ಹೆಚ್ಚಿನ ಪ್ರಕರಣಗಳಲ್ಲಿ ತೀವ್ರವಾದ ತೊಂದರೆ ಇರುವುದಿಲ್ಲ. ಹೀಗಾಗಿ, ಸದ್ಯಕ್ಕೆ ಭಯ ಪಡುವ ಅಗತ್ಯವಿಲ್ಲ" ಎಂದು ಮೇದಾಂತದ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಮೆಡಿಸಿನ್‌ನ ಅಧ್ಯಕ್ಷರು ಮತ್ತು ಏಮ್ಸ್‌ನ ಮಾಜಿ ನಿರ್ದೇಶಕರಾದ ಗುಲೇರಿಯಾ ಹೇಳಿದ್ದಾರೆ.

ದೇಶದಲ್ಲಿ ನಿನ್ನೆ ( ಮಾರ್ಚ್ 17, ಶುಕ್ರವಾರ) ಕಳೆದ 126 ದಿನಗಳಿಗಿಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಶುಕ್ರವಾರ ವರದಿಯಾದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 800 ದಾಟಿದೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 5,389 ಕ್ಕೆ ತಲುಪಿದೆ.

ಶುಕ್ರವಾರವಷ್ಟೇ 843 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,46,94,349 ಆಗಿದೆ. ನಿನ್ನೆ ಒಂದೇ ದಿನ ನಾಲ್ವರು ವೈರಸ್ ತಗುಲಿ ಸಾವನ್ನಪ್ಪಿದ್ದಾರೆ. ಇವರನ್ನು ಒಳಗೊಂಡಂತೆ ದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 5,30,799 ಕ್ಕೆ ತಲುಪಿದೆ.

ನಿನ್ನೆ ಬೆಂಗಳೂರಿನಲ್ಲಿ 77 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಒಬ್ಬರು, ಜಾರ್ಖಂಡ್‌ನಲ್ಲಿ ಒಬ್ಬರು ಮತ್ತು ಕೇರಳದಲ್ಲಿ ಇಬ್ಬರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ, ಭಾರತದಲ್ಲಿ ಕೋವಿಡ್ 19 ನಿಂದ ಚೇತರಿಕೆಯ ಪ್ರಮಾಣ ಶೇ.98.90 ರಷ್ಟು ಇದೆ.