ಹೊಂಡಕ್ಕೆ ಉರುಳಿ ಬಿದ್ದ ಸ್ಕಾರ್ಪಿಯೋ: ಸ್ಥಳದಲ್ಲೇ 8 ಮಂದಿ ದುರ್ಮರಣ
ಸ್ಕಾರ್ಪಿಯೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ 8 ಮಂದಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಪೂರ್ನಿಯಾ (ಬಿಹಾರ): ವೇಗವಾಗಿ ಬಂದ ಸ್ಕಾರ್ಪಿಯೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ 8 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಪೂರ್ನಿಯಾ ಜಿಲ್ಲೆಯ ರೌತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರು ಕಿಶನ್‌ಗಂಜ್‌ನ ನುನಿಯಾ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮವನ್ನ ಮುಗಿಸಿ ಕಿಶನ್ಗಂಜ್ಗೆ ಹಿಂದಿರುವಾಗ ಕಾಂಜಿಯಾ ಮಿಡಲ್ ಸ್ಕೂಲ್ ಬಳಿ ಘಟನೆ ಸಂಭವಿಸಿದೆ. ಕಾರಿನಲ್ಲಿ ಒಟ್ಟು ಹತ್ತು ಜನರಿದ್ದರು. ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ರಕ್ಷಣಾ ಪಡೆ ಸಿಬ್ಬಂದಿ ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
15 ಮಂದಿ ಬಲಿ
ನಿನ್ನೆ ದಕ್ಷಿಣ ಆಫ್ರಿಕಾದ ಟ್ಶ್ವಾನೆ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ಮಂದಿ ಬಲಿಯಾಗಿದ್ದಾರೆ. ಮೆಟ್ರೋಪಾಲಿಟನ್ ಮಾರ್ಗದಲ್ಲಿ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಇನ್ನೂ 37 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ 37 ಮಂದಿಯ ಪೈಕಿ ಏಳು ಜನರಿಗೆ ಗಂಭೀರ ಗಾಯಗಳಾಗಿವೆ, ಆದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಒಂದೇ ಕುಟುಂಬದ 8 ಮಂದಿ ಸಾವು
ಇತ್ತೀಚೆಗಷ್ಟೇ (ಜೂನ್ 7 ರಂದು) ಟ್ರಕ್ ಹಾಗೂ ಎಸ್ಯುವಿ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಳಿ ನಡೆದಿತ್ತು. ಘಟನೆಯಲ್ಲಿ ಸಾವನ್ನಪ್ಪಿರುವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು ಕಾರಿನಲ್ಲಿದ್ದವರು ಮದುವೆ ಸಮಾರಂಭವೊಂದಕ್ಕೆ ಭಾಗವಹಿಸಲು ಗುಡಾ ಮಲಾನಿಗೆ ತೆರಳುತ್ತಿದ್ದರು ಎನ್ನಲಾಗಿದೆ.