8 ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ; 3 ವರ್ಷಗಳ ಹಿಂದೆ ನಡೆದಿತ್ತು ಪ್ರೇಮ ವಿವಾಹ
ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರೀತಿಸಿ ಮದುವೆಯಾದರೂ ಪತಿಯೇ ತನ್ನ ಪತ್ನಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಆಂದ್ರಪ್ರದೇಶ: ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರೀತಿಸಿ ಮದುವೆಯಾದರೂ ಪತಿಯೇ ತನ್ನ ಪತ್ನಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿರುವುದಷ್ಟೇ ಅಲ್ಲದೇ ತಾನೇ ಕೊಲೆ ಮಾಡಿರುವುದು ಎಂದು ಒಪ್ಪಿಕೊಂಡಿದ್ದಾನೆ. ಪತ್ನಿ ಜತೆಗೆ ಇನ್ನೂ ಒಂದು ಜೀವದ ಬಲಿ ತೆಗೆದುಕೊಂಡಿದ್ದಾನೆ. ಯಾಕೆಂದರೆ ಆತನ ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಳು ಎಂದು ವರದಿಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಪೊಲೀಸರ ಪ್ರಕಾರ ಮಹಿಳೆಯನ್ನು 27 ವರ್ಷದ ಅನುಷಾ ಎಂದು ಗುರುತಿಸಲಾಗಿದ್ದು, ಆರೋಪಿ ಜ್ಞಾನೇಶ್ವರ್ ಸೋಮವಾರ ಬೆಳಿಗ್ಗೆ ತನ್ನ ಪತ್ನಿ ಅನುಷಾ ಜತೆ ಜಗಳವಾಡಿದ್ದ. ನಂತರ ಆ ವ್ಯಕ್ತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ತಿಳಿದಾಗ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಷ್ಟು ಹೊತ್ತಿಗಾಗಲೇ ಅವಳು ಕೊನೆಯುಸಿರೆಳೆದಿದ್ದಳು ಎಂದು ವರದಿಯಾಗಿದೆ.
ಜ್ಞಾನೇಶ್ವರ್ ಪೊಲೀಸರ ಮುಂದೆ ಶರಣಾಗಿದ್ದಾನೆ.ಆ ವ್ಯಕ್ತಿ ಆಂಧ್ರಪ್ರದೇಶದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಜಾಯಿಂಟ್ ನಡೆಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಹೇಳುವಂತೆ ದಂಪತಿಗಳು ಪ್ರೇಮ ವಿವಾಹವಾಗಿದ್ದು, ಆಗಾಗ ಭಿನ್ನಾಭಿಪ್ರಾಯಗಳಿಂದಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಈ ಬಾರಿಯೂ ಅದೇ ರೀತಿ ಯಾವುದೇ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಆದರೆ, ಆ ಜಗಳ ಕೊಲೆಯವರೆಗೂ ಮುಟ್ಟಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
ಬ್ಯಾಡ್ಮಿಂಟನ್ ತರಬೇತಿಗೆ ಆಗಮಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ನಗ್ನ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದ ತರಬೇತುದಾರನನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ತಮಿಳುನಾಡಿನ ಸುರೇಶ್ ಬಾಲಾಜಿ ಆರೋಪಿ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ, ಆರೋಪಿಯ ವಿರುದ್ಧ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಈತನ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿ ಸೇರಿದಂತೆ ಎಂಟು ಬಾಲಕಿಯರ ನಗ್ನ ಫೋಟೊಗಳು ಹಾಗೂ ವಿಡಿಯೊಗಳು ಮೊಬೈಲ್ ನಲ್ಲಿ ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನೂ ಕೊಲೆ ಮಾಡಲಾಗಿದೆ. ಹೀಗೆ ದಿನದಿಂದ ದಿನಕ್ಕೆ ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇನ್ನು ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಹೀಗೆ ಸಾಕಷ್ಟು ಅಪರಾದಗಳು ನಡೆಯುತ್ತಿದ್ದು, ಇದಕ್ಕೆಲ್ಲ ಮುಕ್ತಿ ಯಾವಾಗ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ವಿಭಾಗ