SIM card: ಇನ್ಮುಂದೆ ಹೊಸ ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯ; ಸಿಮ್‌ ಖರೀದಿಸುವಾಗ ಎಚ್ಚರವಿರಲಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sim Card: ಇನ್ಮುಂದೆ ಹೊಸ ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯ; ಸಿಮ್‌ ಖರೀದಿಸುವಾಗ ಎಚ್ಚರವಿರಲಿ

SIM card: ಇನ್ಮುಂದೆ ಹೊಸ ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯ; ಸಿಮ್‌ ಖರೀದಿಸುವಾಗ ಎಚ್ಚರವಿರಲಿ

ಸೈಬರ್‌ ಅಪರಾಧಗಳನ್ನು ತಡೆಯುವ ಸಲುವಾಗಿ ಇದೀಗ ಸರಕಾರವು ಹೊಸ ಸಿಮ್‌ ಕಾರ್ಡ್‌ ಪಡೆಯಲು ಆಧಾರ್‌ ಕಾರ್ಡ್‌ ಆಧರಿತ ಬಯೋಮೆಟ್ರಿಕ್‌ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ನಕಲಿ ಸಿಮ್‌ಗಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.

SIM card: ಇನ್ಮುಂದೆ ಹೊಸ ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯ
SIM card: ಇನ್ಮುಂದೆ ಹೊಸ ಸಿಮ್‌ ಕಾರ್ಡ್‌ ಪಡೆಯಲು ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯ (REUTERS)

ಹೊಸ ಸಿಮ್‌ ಕಾರ್ಡ್‌ ಪಡೆಯಲು ಇನ್ಮುಂದೆ ಆಧಾರ್‌ ಕಾರ್ಡ್‌ ಆಧರಿತ ಬಯೋಮೆಟ್ರಿಕ್‌ ದೃಢೀಕರಣ ಮಾಡುವುದು ಕಡ್ಡಾಯವಾಗಿದೆ. ನಕಲಿ ಸಿಮ್‌ಗಳ ಮೂಲಕ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರವು ಈ ಹೊಸ ನಿಯಮ ತಂದಿದೆ. ಇನ್ನು ಮುಂದೆ ಹೊಸ ಸಿಮ್‌ ಕಾರ್ಡ್‌ಗಳನ್ನು ನೀಡುವಾಗ ವ್ಯಕ್ತಿಗಳ ಗುರುತನ್ನು ದೃಢೀಕರಣ ಮಾಡುವುದನ್ನು ಖಚಿತಪಡಿಸಿಕೊಳ್ಳಿ ಎಂದು ದೂರಸಂಪರ್ಕ ಇಲಾಖೆಗೆ ಪ್ರಧಾನ ಮಂತ್ರಿಗಳ ಕಚೇರಿಯು ನಿರ್ದೇಶನ ನೀಡಿದೆ.

ಸೈಬರ್‌ ಅಪರಾಧಗಳು ಹೆಚ್ಚಾಗಿ ನಕಲಿ ಸಿಮ್‌ ಕಾರ್ಡ್‌ಗಳ ಮೂಲಕ ನಡೆಯುತ್ತದೆ.ಸಾಕಷ್ಟು ಜನರಿಗೆ ಅಪರಿಚಿತ ಸಂಖ್ಯೆಗಳಿಂದ ವಂಚಕರು ಕರೆ ಮಾಡಿ ಹಣಕಾಸು ವಂಚನೆಗಳನ್ನು ಮಾಡುತ್ತಿದ್ದಾರೆ. ಸೈಬರ್‌ ಅರೆಸ್ಟ್‌ ಇತ್ಯಾದಿಗಳ ಮೂಲಕ ಜನರಿಂದ ಲಕ್ಷಾಂತರ ರೂಪಾಯಿ ಕಸಿದುಕೊಳ್ಳುತ್ತಿದ್ದಾರೆ. ಇಂತಹ ಆನ್‌ಲೈನ್‌ ವಂಚನೆ, ಮೊಬೈಲ್‌ ವಂಚನೆ ತಪ್ಪಿಸುವ ಸಲುವಾಗಿ ಸರಕಾರ ನಾನಾ ಕ್ರಮ ಕೈಗೊಳ್ಳುತ್ತಿದೆ. ಸೈಬರ್‌ ಅಪರಾಧಿಗಳನ್ನು ಪತ್ತೆಹಚ್ಚಲು ಸಿಮ್‌ ಕಾರ್ಡ್‌ಗಳ ಬೆನ್ನೆತ್ತಿ ಹೋದಾಗ ಕ್ರಿಮಿನಲ್‌ಗಳು ನಕಲಿ ಸಿಮ್‌ ಕಾರ್ಡ್‌ಗಳನ್ನು ಬಳಸುತ್ತಿರುವುದು ತಿಳಿದುಬಂದಿದೆ. ಇಂತಹ ಸಮಯದಲ್ಲಿ ನಿಜವಾದ ವಂಚಕರನ್ನು ಪತ್ತೆಹಚ್ಚುವುದು ಸವಾಲಾಗಿರುತ್ತದೆ. ಇದೇ ಕಾರಣಕ್ಕೆ ಹೊಸ ಸಿಮ್‌ ಕಾರ್ಡ್‌ಗಳನ್ನು ನೀಡುವಾಗ ಕಡ್ಡಾಯವಾಗಿ ಆಧಾರ್‌ ಆಧರಿತ ಬಯೋಮೆಟ್ರಿಕ್‌ ದೃಢೀಕರಣ ಮಾಡುವಂತೆ ಸೂಚಿಸಲಾಗಿದೆ.

ನಕಲಿ ಸಿಮ್‌ಗಳ ಹಾವಳಿ

ಮೊಬೈಲ್‌ ಸಿಮ್‌ ಕಾರ್ಡ್‌ ಪಡೆಯಲು ಗ್ರಾಹಕರು ಶಾಪ್‌ಗಳಿಗೆ ಹೋದಾಗ ಅಲ್ಲಿ ಗ್ರಾಹಕರ ಹೆಸರಿನಲ್ಲಿ ಕೆಲವರು ಹೆಚ್ಚುವರಿ ಸಿಮ್‌ಗಳನ್ನು ಪಡೆಯಬಹುದು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಮ್‌ ಕಾರ್ಡ್‌ ಪಡೆಯಬಹುದು. ಹೀಗಾಗಿ, ಗ್ರಾಹಕರು ಆದಷ್ಟು ನಂಬಿಕಸ್ಥ ಎನಿಸುವ ಮೊಬೈಲ್‌ ಶಾಪ್‌ನಿಂದ ಸಿಮ್‌ ಪಡೆಯಬೇಕು. ಸಾಧ್ಯವಾದ ಮಟ್ಟಿಗೆ ಟೆಲಿಕಾಂ ನೆಟ್‌ವರ್ಕ್‌ ಸಂಸ್ಥೆಗಳ ಅಧಿಕೃತ ಸೆಂಟರ್‌ಗಳಿಂದ ಸಿಮ್‌ ಕಾರ್ಡ್‌ ಪಡೆಯುವುದು ಹೆಚ್ಚು ಸುರಕ್ಷಿತವಾಗಿದೆ.

ಆಧಾರ್‌ ಕಾರ್ಡ್‌ ಆಧರಿತ ಬಯೋಮೆಟ್ರಿಕ್‌ ದೃಢೀಕರಣದಿಂದ ಈ ರೀತಿಯ ನಕಲಿ ಸಿಮ್‌ಗಳ ಹಾವಳಿ ತುಸು ಕಡಿಮೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಹೆಚ್ಚು ತಿಳಿವಳಿಕೆ ಇಲ್ಲದವರು ಮೊಬೈಲ್‌ ಸಿಮ್‌ ಪಡೆಯಲು ಹೋದಾಗ ಅವರ ಹೆಸರಿನಲ್ಲಿ ಶಾಪ್‌ನವರು ಹಲವು ಸಿಮ್‌ ಕಾರ್ಡ್‌ ಪಡೆಯುವಂತಹ ಘಟನೆಗಳು ಆಧಾರ್‌ ಕಾರ್ಡ್‌ ಆಧರಿತ ಬಯೋಮೆಟ್ರಿಕ್‌ ದೃಢೀಕರಣದ ಬಳಿಕವೂ ಮುಂದುವರೆಯಬಹುದು. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ ಕಾರ್ಡ್‌ಗಳು ಇವೆ ಎಂದು tafcop.sancharsaathi.gov.in ವೆಬ್‌ಸೈಟ್‌ ಮೂಲಕ ತಿಳಿದುಕೊಳ್ಳಬಹುದು. ನೀವು ಬಳಸದೆ ಇರುವ ಸಿಮ್‌ ಕಾರ್ಡ್‌ಗಳನ್ನು ಇಲ್ಲೇ ಡಿ ಆಕ್ಟಿವೇಟ್‌ ಮಾಡಬಹುದು.

ಸಿಮ್‌ ಖರೀದಿಸುವಾಗ ಎಚ್ಚರವಿರಲಿ

  • ಅಧಿಕೃತ ಮೊಬೈಲ್‌ ಸೇವಾ ಸೆಂಟರ್‌ಗಳಿಂದ ಅಂದರೆ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ಐಡಿಯಾ ಇತ್ಯಾದಿ ಸೆಂಟರ್‌ಗಳಿಂದ ಸಿಮ್‌ ಖರೀದಿಸಲು ಆದ್ಯತೆ ನೀಡಿ.
  • ನಂಬಿಕಸ್ಥ ಎನಿಸುವಂತಹ ಮೊಬೈಲ್‌ ಶಾಪ್‌ಗಳಿಂದ ಮಾತ್ರ ಸಿಮ್‌ ಖರೀದಿಸಿ. ಅಪರಿಚಿತ ಊರುಗಳಲ್ಲಿ ಸಿಮ್‌ ಖರೀದಿಸುವಾಗ ತುಸು ಹೆಚ್ಚೇ ಎಚ್ಚರವಹಿಸಿ.
  • ಸಿಮ್‌ ಖರೀದಿಸುವಾಗ ಒಂದಕ್ಕಿಂತ ಹೆಚ್ಚು ಬಾರಿ ನಿಮ್ಮನ್ನು ಆಧಾರ್‌ ಕಾರ್ಡ್‌ ಆಧರಿತ ಬಯೋಮೆಟ್ರಿಕ್‌ ದೃಢೀಕರಣ ಮಾಡಿದರೆ ಕೆಲವು ದಿನಗಳ ಬಳಿಕ tafcop ವೆಬ್‌ಸೈಟ್‌ನಲ್ಲಿ ಪರಿಶೀಲನೆ ನಡೆಸಿ.
  • tafcop.sancharsaathi.gov.in ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರಿನಲ್ಲಿ ಇರುವ ಸಿಮ್‌ ಕಾರ್ಡ್‌ಗಳ ವಿವರ ಪಡೆಯಿರಿ. ನೀವು ಬಳಸದೆ ಇರುವ ಸಿಮ್‌ಗಳನ್ನು ಇಲ್ಲೇ ಡಿ ಆಕ್ಟಿವೇಟ್‌ ಮಾಡಿ.
  • ಮೊಬೈಲ್‌ ಕಳ್ಳತನವಾದರೆ, ಸಿಮ್‌ ಕಾರ್ಡ್‌ ಕಳೆದುಕೊಂಡರೆ ಆ ಸಿಮ್‌ ಕಾರ್ಡ್‌ ಡಿ ಆಕ್ಟಿವೇಟ್‌ ಮಾಡಲು ಮರೆಯಬೇಡಿ. ಕೆಲವರು ಒಂದು ಸಿಮ್‌ ಕಾರ್ಡ್‌ ಕಳೆದುಕೊಂಡಾಗ ಹೊಸ ನಂಬರ್‌ನ ಹೊಸ ಸಿಮ್‌ ಖರೀದಿಸುತ್ತಾರೆ. ಎಲ್ಲಾದರೂ ನಿಮ್ಮ ಹಳೆಯ ಸಿಮ್‌ ಕಾರ್ಡ್‌ ವಂಚಕರ, ಭಯೋತ್ಪಾದಕರ, ಸಮಾಜಘಾತುಕರ ಕೈಗೆ ಸಿಕ್ಕರೆ ಅಪಾಯ.

ಇದನ್ನೂ ಓದಿ: Sanchar Saathi: ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್‌ ನಂಬರ್‌ಗಳಿವೆ? ಒಂದೇ ನಿಮಿಷದಲ್ಲಿ ನಿಮ್ಮದಲ್ಲದ ಸಿಮ್‌ಗಳನ್ನು ಹೀಗೆ ನಿಷ್ಕ್ರೀಯಗೊಳಿಸಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.