ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ; ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೀರ್ಮಾನ
Aadhaar Voter ID Linking: ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಣೆ ಕ್ರಮಗಳು ಒಂದೊಂದಾಗಿ ನಡೆಯುತ್ತಿದೆ. ಸದ್ಯ ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಮಹತ್ವದ ತೀರ್ಮಾನವನ್ನು ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

Aadhaar Voter ID Linking: ಮತದಾರರ ಗುರುತಿನ ಚೀಟಿ (EPIC) ಯನ್ನು ಆಧಾರ್ ಜತೆಗೆ ಜೋಡಿಸುವುದು ಸೇರಿ ಹಲವು ಮಹತ್ವದ ತೀರ್ಮಾವನ್ನು ಭಾರತದ ಚುನಾವಣಾ ಆಯೋಗದ ಉನ್ನತ ಮಟ್ಟದ ಸಮಿತಿ ಮಂಗಳವಾರ (ಮಾರ್ಚ್ 18) ತೆಗೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಯಿತು. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಸಂವಿಧಾನ ಬದ್ಧವಾಗಿರಲಿದೆ. ಅದೇ ರೀತಿ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿರುತ್ತದೆ ಎಂದು ಭಾರತದ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಆಧಾರ್ - ವೋಟರ್ ಐಡಿ ಜೋಡಣೆ; ಕಾನೂನು ಚೌಕಟ್ಟಿನಲ್ಲೇ ನಡೆಯಲಿದೆ ಪ್ರಕ್ರಿಯೆ
ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಜೋಡಣೆ ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನು ಚೌಕಟ್ಟಿನಲ್ಲೇ ನಡೆಯಲಿದೆ. ಈ ಪ್ರಕ್ರಿಯೆಯು ಸಂವಿಧಾನದ 326 ನೇ ವಿಧಿ ಮತ್ತು ಜನ ಪ್ರಾತಿನಿಧ್ಯ ಕಾಯ್ದೆ, 1950 ರ ಸೆಕ್ಷನ್ 23 (4), 23 (5) ಮತ್ತು 23 (6) ಗೆ ಅನುಗುಣವಾಗಿರುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಆಯೋಗವು, ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆಯಾಗಿದ್ದು, ಅದು ಪೌರತ್ವದ ದಾಖಲೆ ಅಲ್ಲ ಎಂದು ಹೇಳಿದೆ. ಆದ್ದರಿಂದ, ಆಧಾರ್‌ನೊಂದಿಗೆ ಮತದಾರರ ಗುರುತಿನ ಚೀಟಿ ಲಿಂಕ್ ಮಾಡುವ ಪ್ರಕ್ರಿಯೆಯು ಭಾರತೀಯ ನಾಗರಿಕರು ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿರುವುದನ್ನು ಖಚಿತಪಡಿಸುತ್ತದೆ ಎಂದು ಭಾರತದ ಚುನಾವಣಾ ಆಯೋಗ ವಿವರಿಸಿದೆ.
ಸಂವಿಧಾನದ ಪ್ರಕಾರ, ಮತದಾನದ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ. ಆಧಾರ್ ಎಂಬುದು ವ್ಯಕ್ತಿಯ ಗುರುತನ್ನು ಮಾತ್ರ ಸಾಬೀತುಪಡಿಸುತ್ತದೆ. ಅದು ಆ ವ್ಯಕ್ತಿಯ ಪೌರತ್ವದ ದಾಖಲೆ ಅಲ್ಲ. ಆದ್ದರಿಂದ, ಈ ಪ್ರಕ್ರಿಯೆಯನ್ನು ಕಾನೂನು ವ್ಯಾಪ್ತಿಯಲ್ಲಿ ಇಡಲಾಗುವುದು ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಸಿವಿಲ್ ತೀರ್ಪಿಗೆ ಅನುಗುಣವಾಗಿ ಮುಂದುವರಿಯುತ್ತದೆ ಎಂದು ಭಾರತದ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ತಾಂತ್ರಿಕ ತಜ್ಞರೊಂದಿಗೆ, ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ
ಚುನಾವಣಾ ಆಯೋಗ ಮತ್ತು ಆಧಾರ್ ಕಾರ್ಡ್ ನೀಡುವ ಯುಐಡಿಎಐನ ತಾಂತ್ರಿಕ ತಜ್ಞರು ಶೀಘ್ರದಲ್ಲೇ ಈ ಬಗ್ಗೆ ಕೆಲಸ ಪ್ರಾರಂಭಿಸಲಿದ್ದಾರೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಸೈಬರ್ ಭದ್ರತೆ ಮತ್ತು ಡೇಟಾ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ಇದರಿಂದ ಪೌರತ್ವಕ್ಕೆ ಸಂಬಂಧಿಸಿದ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದು ಭಾರತದ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಚುನಾವಣಾ ಸುಧಾರಣೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ. ಮುಂಬರುವ ಚುನಾವಣೆಗಳನ್ನು ಹೆಚ್ಚು ಪಾರದರ್ಶಕ ಮತ್ತು ಅಂತರ್ಗತವಾಗಿಸುವುದಕ್ಕೆ ಚುನಾವಣಾ ಆಯೋಗವು ಹಲವಾರು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು 2025 ರ ಏಪ್ರಿಲ್ 30 ರೊಳಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಕೋರಿದೆ. ಇದಲ್ಲದೆ, 2025 ರ ಮಾರ್ಚ್ 31 ರವರೆಗೆ ಚುನಾವಣಾ ನೋಂದಣಿ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗುವುದು. ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಮತ್ತು ಪಾರದರ್ಶಕತೆ ಇರುವಂತೆ ರಾಜಕೀಯ ಪಕ್ಷಗಳ ಕಾಳಜಿ ಮತ್ತು ಸಲಹೆಗಳನ್ನು ಈ ಸಭೆಗಳಲ್ಲಿ ಪರಿಗಣಿಸಲಾಗುವುದು ಎಂದು ಭಾರತದ ಚುನಾವಣಾ ಆಯೋಗವು ವಿವರಿಸಿದೆ.

ವಿಭಾಗ