Isudan Gadhvi: 'ಆಪ್' ಕಾ ಲಾಡ್ಲಾ ನಮ್ಗೆ ಬ್ಯಾಡ್ಲಾ ಅಂದ ಗುಜರಾತ್‌ ಮತದಾರ: ಹೀನಾಯ ಸೋಲುಂಡ ಸಿಎಂ ಅಭ್ಯರ್ಥಿ ಇಸುದನ್‌ ಗಧ್ವಿ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Isudan Gadhvi: 'ಆಪ್' ಕಾ ಲಾಡ್ಲಾ ನಮ್ಗೆ ಬ್ಯಾಡ್ಲಾ ಅಂದ ಗುಜರಾತ್‌ ಮತದಾರ: ಹೀನಾಯ ಸೋಲುಂಡ ಸಿಎಂ ಅಭ್ಯರ್ಥಿ ಇಸುದನ್‌ ಗಧ್ವಿ!

Isudan Gadhvi: 'ಆಪ್' ಕಾ ಲಾಡ್ಲಾ ನಮ್ಗೆ ಬ್ಯಾಡ್ಲಾ ಅಂದ ಗುಜರಾತ್‌ ಮತದಾರ: ಹೀನಾಯ ಸೋಲುಂಡ ಸಿಎಂ ಅಭ್ಯರ್ಥಿ ಇಸುದನ್‌ ಗಧ್ವಿ!

ಒಂದು ಕಡೆ ಆಪ್‌ ಗುಜರಾತ್‌ನಲ್ಲಿ ಐದು ಕ್ಷೇತ್ರಗಳನ್ನು ಗೆದ್ದು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದುಕೊಂಡಿರುವ ಖುಷಿಯಲ್ಲಿದ್ದರೆ, ಮತ್ತೊಂದೆಡೆ ತನ್ನ ಗುಜರಾತ್‌ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್‌ ಗಧ್ವಿ ಅವರ ಸೋಲಿನ ಆಘಾತವನ್ನು ಎದುರಿಸಿದೆ. ಗುಜರಾತ್‌ನ ಖಂಬಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಸುದನ್‌ ಗಧ್ವಿ, ಎದುರಾಳಿ ಅಭ್ಯರ್ಥಿ ಬಿಜೆಪಿಯ ಹರ್‌ದಾಸ್‌ಭಾಯ್‌ ಬೇರಾ ಅವರ ಕೈಯಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ.

ಇಸುದನ್‌ ಗಧ್ವಿ (ಸಂಗ್ರಹ ಚಿತ್ರ)
ಇಸುದನ್‌ ಗಧ್ವಿ (ಸಂಗ್ರಹ ಚಿತ್ರ) (PTI)

ಗಾಂಧಿನಗರ: ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆ ಹಲವು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದು, ಇದು ಬಿಜೆಪಿ ಪಾಲಿಗೆ ಐತಿಹಾಸಿಕ ವಿಜಯವಾಗಿದ್ದರೆ, ಕಾಂಗ್ರೆಸ್‌ ಪಾಲಿಗೆ ಐತಿಹಾಸಿಕ ಸೋಲಾಗಿದೆ. ಅದೇ ರೀತಿ ಗುಜರಾತ್‌ ಚುನಾವಣಾ ಅಖಾಡದಲ್ಲಿ ಅಬ್ಬರಿಸಿದ್ದ ಆಮ್‌ ಆದ್ಮಿ ಪಕ್ಷ(ಆಪ್)ದ ಪಾಲಿಗೆ, ಈ ಚುನಾವಣೆಯು ರಾಷ್ಟ್ರೀಯ ಪಕ್ಷದ ಮಾನ್ಯತೆಯ ಬಾಗಿಲು ತೆರೆದಿದೆ.

ಆದರೆ ಒಂದು ಕಡೆ ಆಪ್‌ ಗುಜರಾತ್‌ನಲ್ಲಿ ಐದು ಕ್ಷೇತ್ರಗಳನ್ನು ಗೆದ್ದು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದುಕೊಂಡಿರುವ ಖುಷಿಯಲ್ಲಿದ್ದರೆ, ಮತ್ತೊಂದೆಡೆ ತನ್ನ ಗುಜರಾತ್‌ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್‌ ಗಧ್ವಿ ಅವರ ಸೋಲಿನ ಆಘಾತವನ್ನು ಎದುರಿಸಿದೆ.

ಹೌದು ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ಮಾಜಿ ಟಿವಿ ನಿರೂಪಕ ಇಸುದನ್‌ ಗಧ್ವಿ ಸೋಲುಂಡಿದ್ದಾರೆ. ಗುಜರಾತ್‌ನ ಖಂಬಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಸುದನ್‌ ಗಧ್ವಿ, ಎದುರಾಳಿ ಅಭ್ಯರ್ಥಿ ಬಿಜೆಪಿಯ ಹರ್‌ದಾಸ್‌ಭಾಯ್‌ ಬೇರಾ ಅವರ ಕೈಯಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಹರ್‌ದಾಸ್‌ಭಾಯ್‌ ಬೇರಾ ಅವರಿಗೆ 77,305 ಮತ(ಶೇ.40.96 )ಗಳು ಲಭಿಸಿದ್ದರೆ, ಆಪ್‌ ಅಭ್ಯರ್ಥಿ ಇಸುದನ್‌ ಗಧ್ವಿ ಅವರಿಗೆ 58,467 ಮತ(ಶೇ.31.1)ಗಳು ಲಭಿಸಿವೆ. ಅಂದರೆ ಸುಮಾರು 19,000 ಮತಗಳ ಅಂತರದಿಂದ ಇಸುದನ್‌ ಗಧ್ವಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು, ಇಸುದನ್‌ ಗಧ್ವಿ ಅವರನ್ನು ಆಪ್‌ನ ಗುಜರಾತ್‌ ಮುಖ್ಯಮಂತ್ರಿ ಅಭ್ಯರ್ಥು ಎಂದು ಘೋಷಿಸಿದ್ದರು. ತಮ್ಮ ಪ್ರಚಾರ ಸಭೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸುಧಾರಿಸುವ ವಾಗ್ದಾನ ಮಾಡಿದ್ದ ಇಸುದನ್‌ ಗಧ್ವಿ, ತಾವೊಬ್ಬ ಸ್ವಚ್ಛ ರಾಜಕಾರಣಿ ಎಂದು ಬಿಂಬಿಸಿಕೊಂಡಿದ್ದರು.

ಆದರೆ ಇಸುದನ್‌ ಗಧ್ವಿ ಅವರ ವಾಗ್ದಾನಗಳಿಗೆ ಕಿವಿಗೊಡದ ಖಂಬಲಿಯಾ ಕ್ಷೇತ್ರದ ಮತದಾರರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ, ಆಪ್‌ಗೆ ಮರ್ಮಾಘಾತ ನೀಡಿದ್ದಾರೆ. ಆಪ್‌ ಇಸುದನ್‌ ಗಧ್ವಿ ಅವರ ಸೋಲನ್ನು ನಿರೀಕ್ಷಿಸಿರಲಿಲ್ಲ ಎನ್ನಲಾಗಿದೆ.

ಖಾಸಗಿ ಸುದ್ದಿ ವಾಹಿನಿಯೊಂದರ ಮಾಜಿ ಟಿವಿ ನಿರೂಪಕ ಇಸುದನ್ ಗಧ್ವಿ ಮೂಲತಃ, ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದವರು. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇಸುದನ್‌ ಗಧ್ವಿ, ಬಳಿಕ ರಾಜಕಾರಣಿಯಾಗಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದರು. ಆಪ್‌ ಸೇರಿದ ಇಸುದನ್‌ ಗಧ್ವಿ, ಈ ಬಾರಿಯ ಗುಜರಾತ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಲ್ಪಟ್ಟಿದ್ದರು.

ಇಸುದನ್‌ ಘದ್ವಿ ಅವರ ಸೋಲು ಆಪ್‌ಗೆ ಭಾರೀ ಆಘಾತ ನೀಡಿದೆ. ಚುನಾವಣೆಯಲ್ಲಿನ ತನ್ನ ನಾಯಕನ ಸೋಲು, ಆಪ್‌ಗೆ ಭಾರೀ ಮುಖಭಂಗ ಉಂಟು ಮಾಡಿದೆ. ಚುನಾವಣೆ ಸೋಲಿನ ಹೊರತಾಗಿಯೂ ತಾವು ರಾಜ್ಯದ ಜನರ ಸೇವೆಯನ್ನು ಮುಂದುವರೆಸುವುದಾಗಿ ಇಸುದನ್‌ ಗಧ್ವಿ ಘೋಷಿಸಿದ್ದಾರೆ.

ಅಲ್ಲದೇ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಜಯಗಳಿಸಿರುವ ಐವರು ಆಪ್‌ ಶಾಸಕರು, ರಾಜ್ಯದ ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದೂ ಇಸುದನ್‌ ಗಧ್ವಿ ಇದೇ ವೇಳೆ ಭರವಸೆ ನೀಡಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶ

ಬಿಜೆಪಿ:156

ಕಾಂಗ್ರೆಸ್:‌ 17

ಆಪ್:‌ 05

ಇತರ: 04

ಒಟ್ಟು: 182

ಸಂಬಂಧಿತ ಸುದ್ದಿ

Gujarat Assembly Elections 2022 Results: ಗುಜರಾತ್‌ನಲ್ಲಿ ಪ್ರಚಂಡ ವಿಜಯ; ಮತ್ತೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ತನ್ನ ಭದ್ರಕೋಟೆ ಗುಜರಾತ್‌ನಲ್ಲಿ ಅಧಿಪತ್ಯ ಮುಂದುವರೆಸಲಿದೆ. ಈ ಬಾರಿ ಭರ್ಜರಿ ಜಯ ಗಳಿಸುವ ಮೂಲಕ ಪ್ರಧಾನಿ ಮೋದಿ ಪಕ್ಷ ದಾಖಲೆ ನಿರ್ಮಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.