Adani Group market value: ಚೇತರಿಕೆ ಕಾಣದ ಅದಾನಿ ಷೇರುಗಳು; $100 ಬಿಲಿಯನ್‌ಗಿಂತ ಕಡಿಮೆಯಾದ ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯ
ಸತತವಾಗಿ ಷೇರುಗಳ ಮೌಲ್ಯ ಕುಸಿಯುತ್ತಲೇ ಇರುವ ಪರಿಣಾಮಣ ಅದಾನಿ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯ $100 ಬಿಲಿಯನ್ ಗಿಂತ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಮುಂಬೈ: ಅಮೆರಿಕದ ಶಾರ್ಟ್ ಸೆಲ್ಲರ್‌ನ ವರದಿ ಭಾರಿ ಪರಿಣಾಮ ಬೀರಿದ ಬಳಿಕ ಅದಾನಿಯ ಸಂಪತ್ತು ಕುಸಿತಕ್ಕೆ ಬ್ರೇಕ್ ಬೀಳುವಂತೆ ಕಾಣುತ್ತಿಲ್ಲ. ಹೂಡಿಕೆದಾರರಿಗೆ ಧೈರ್ಯ ತುಂಬಲು ಪರದಾಡುತ್ತಿರುವ ಅದಾನಿ ಗ್ರೂಪ್‌ನ (Adani Group) 10 ಕಂಪನಿಗಳ ಸಂಯೋಜಿತ ಈಕ್ವಿಟಿ ಮಾರುಕಟ್ಟೆ ಮೌಲ್ಯವು ಇಂದು (ಫೆ.21, ಮಂಗಳವಾರ) 100 ಬಿಲಿಯನ್ ಡಾಲರ್ ಗಿಂತ ಕಡಿಮೆಯಾಗಿದೆ.
ಜನವರಿ 24 ರಿಂದ ಈವರೆಗೆ 136 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ, ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪದ ವರದಿಯನ್ನು ಪ್ರಕಟಿಸಿತ್ತು. ಅದಾನಿ ಗ್ರೂಪ್ ಪದೇ ಪದೆ ಈ ಆರೋಪಗಳನ್ನು ನಿರಾಕರಿಸುತ್ತೇಲೇ ಬಂದಿದೆ.
ಬಿಲಿಯನೇರ್ ಗೌತಮ್ ಅದಾನಿ ಮತ್ತವರ ಕಂಪನಿಗಳು ಇದೀಗ ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಸಾಲವನ್ನು ಮರುಪಾವತಿಸಲು ಮುಂದಾಗಿವೆ. ಇದಕ್ಕಾಗಿಯೇ ಕಾನೂನು ಮತ್ತು ಕಮ್ಯೂನಿಕೇಷನ್ ತಂಡಗಳನ್ನು ನೇಮಿಸಿಕೊಂಡಿವೆ. ಯಾಕೆಂದರೆ ಹೂಡಿಕೆದಾರರ ವಿಶ್ವಾಸಗಳಿಸುವುದೇ ಇವರ ಮುಂದಿರುವ ಪ್ರಮುಖ ಗುರಿಯಾಗಿದೆ.
ಮುಂಬೈನಲ್ಲಿ ಟಾರ್ಗೆಟ್ ಇನ್ವೆಸ್ಟಿಂಗ್‌ನ ಸಂಸ್ಥಾಪಕ ಸಮೀರ್ ಕಲ್ರಾ, ಕ್ಯಾಪೆಕ್ಸ್ ಮತ್ತು ಸಾಲವು ಪ್ರಮುಖ ಕಾಳಜಿಯಾಗಿ ಉಳಿದಿದೆ ಎಂದು ಹೇಳಿದ್ದಾರೆ. ಇವು ಮೌಲ್ಯಮಾಪನಗಳ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೇಟಿಂಗ್ ಏಜೆನ್ಸಿಗಳು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಅದಾನಿ ಪೋರ್ಟ್ಸ್ & ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಸೇರಿದಂತೆ ಕೆಲವು ಕಂಪನಿಗಳ ಬಗ್ಗೆ ಇರುವ ದೃಷ್ಟಿಕೋನವನ್ನು ಪರಿಷ್ಕರಿಸಿವೆ.
ಅದಾನಿ ಮತ್ತು ಅವರ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಆಕ್ರಮಣಕಾರಿ ಸಾಲ-ಇಂಧನದ ವಿಸ್ತರಣೆಯ ಮೇಲೆ ಆರ್ಥಿಕ ಆರೋಗ್ಯಕ್ಕೆ ಆದ್ಯತೆ ನೀಡುತ್ತಿವೆ. ಹಿಂಡೆನ್‌ಬರ್ಗ್‌ನ ವರದಿಯಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದು ಒಂದೆಡೆಯಾದರೆ, ನಗದು ಸಂರಕ್ಷಣೆ, ಸಾಲ ಮರುಪಾವತಿ ಹಾಗೂ ಷೇರುಗಳನ್ನು ಮರುಪಡೆಯುವ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಿದೆ.
ಮುಂಬೈ ಷೇರುಪೇಟೆಯಲ್ಲಿಂದು ಬೆಳಗ್ಗೆ 11:04 ರ ಹೊತ್ತಿಗೆ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಷೇರುಗಳು ಸಕರಾತ್ಮಕ ವಹಿವಾಟು ಆರಂಭಿಸಿತ್ತು. ಸದ್ಯ ಇಂದು ಮಿಶ್ರ ಪ್ರತಿಕ್ರಿಯಿ ಮೂಲಕ ವಹಿವಾಟು ಮುಗಿಸಿವೆ.
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಷೇರುಗಳು ಶೇ.3.11 ರಷ್ಟು, ಅದಾನಿ ಗ್ರೀನ್ ಶೇ.5 ರಷ್ಟು ಹಾಗೂ ಅದಾನಿ ಟೋಟಲ್ ಗ್ಯಾಸ್ ಶೇ.5 ರಷ್ಟು ಕುಸಿತ ಕಂಡವು. ಆದರೆ ಅದಾನಿ ಪವರ್ ಶೇ.4.97, ಅದಾನಿ ಪೋರ್ಟ್ಸ್ ಶೇ.0.60 ರಷ್ಟು ಚೇತರಿಕೆಯ ಹಾದಿಗೆ ಬರುವ ಮೂಲಕ ದಿನದ ವಹಿವಾಟು ಅಂತ್ಯಗೊಳಿಸಿವೆ.
ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಗೌತಮ್ ಅದಾನಿ ಸಮೂಹ ಲೆಕ್ಕಪತ್ರ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಮಾಡಿದ ಆರೋಪ ವರದಿಯನ್ನು ಪ್ರಕಟಿಸಿತ್ತು. ಈ ಒಂದೇ ಒಂದು ವರದಿಯ ಪರಿಣಾಮವಾಗಿ ಅದಾನಿ ಸಮೂಹದ ಷೇರುಗಳನ್ನು ಖರೀದಿಸಿದ್ದ ಹೂಡಿಕೆದಾರರು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದು, ಈವರೆಗೆ ಸುಮಾರು 12 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಪತ್ತು ಕರಗಿ ಹೋಗಿದೆ.
ಗೌತಮ್ ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ತಿರಸ್ಕರಿಸಿದ್ದು, ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳನ್ನು ನಿರಾಕರಿಸುತ್ತೇಲೇ ಬಂದಿದೆ. ಸದ್ಯ ಷೇರುದಾರರು ಹಾಗೂ ಹೂಡಿಕೆದಾರರಿದೆ ಅದಾನಿ ಗ್ರೂಪ್ ಮೇಲೆ ವಿಶ್ವಾಸ ಮೂಡಿಸಲು ವೆಚ್ಚ ಕಡಿತ, ಸಾಲ ಮರು ಪಾವತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಇದರ ಜೊತೆಗೆ ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ವರದಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.
ವಿಭಾಗ