Aero India 2023 day 2: ಹೆಚ್ಎಎಲ್ ನ 'ಮಾರುತ್' HLFT-42 ವಿಮಾನ ಮೇಲಿನ ಭಜರಂಗಬಲಿ ಚಿತ್ರ ತೆರವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aero India 2023 Day 2: ಹೆಚ್ಎಎಲ್ ನ 'ಮಾರುತ್' Hlft-42 ವಿಮಾನ ಮೇಲಿನ ಭಜರಂಗಬಲಿ ಚಿತ್ರ ತೆರವು

Aero India 2023 day 2: ಹೆಚ್ಎಎಲ್ ನ 'ಮಾರುತ್' HLFT-42 ವಿಮಾನ ಮೇಲಿನ ಭಜರಂಗಬಲಿ ಚಿತ್ರ ತೆರವು

ಬೆಂಗಳೂರು ಏರೋ ಶೋ ನಲ್ಲಿ ನಿನ್ನೆ (ಫೆ.13) ಹೆಚ್ಎಎಲ್ ನ ಮಾರುತ್ HLFT-42 ವಿಮಾನದ ಮೇಲೆ ರಾರಾಜಿಸಿದ್ದ ಲಾರ್ಡ್ ಹನುಮನ ಚಿತ್ರವನ್ನು ಇಂದು ತೆರವು ಮಾಡಲಾಗಿದೆ.

ಮಾರುತ್ HLFT-42 ವಿಮಾನದ ಮೇಲೆ ಹಾಕಲಾಗಿದ್ದ ಭಜರಂಗಿಬಲಿ ಚಿತ್ರ ತೆರವು
ಮಾರುತ್ HLFT-42 ವಿಮಾನದ ಮೇಲೆ ಹಾಕಲಾಗಿದ್ದ ಭಜರಂಗಿಬಲಿ ಚಿತ್ರ ತೆರವು

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಏರೋ ಇಂಡಿಯಾದಲ್ಲಿ ನಿನ್ನೆಯ (ಫೆ.13, ಸೋಮವಾರ) ಪ್ರದರ್ಶನದಲ್ಲಿ ತುಂಬಾ ಹೈಲೈಟ್ ಆಗಿದ್ದ ಹೆಚ್ಎಎಲ್ ನಿರ್ಮಾಣದ ಮಾರುತ್ HLFT-42 ವಿಮಾನದ ಮೇಲಿದ್ದ ಭಜರಂಗಿಬಲಿಯ ಚಿತ್ರವನ್ನು ತೆರವು ಮಾಡಲಾಗಿದೆ.

ಮಾರುತ್​ HLFT-42 ಯುದ್ಧ ವಿಮಾನ, ಹನುಮಾನ್​ ಅಷ್ಟೇ ಶಕ್ತಿಯುತವಾದ ವಿಮಾನವೆಂದು ಭಜರಂಗಬಲಿ ಚಿತ್ರವನ್ನು ಹಾಕಿದ್ವಿ. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಎಂದು ಹೆಚ್ಎಎಲ್​​​ ಸಿಎಂಡಿ ಸಿ.ಬಿ ಅನಂತಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ಏರ್ ಶೋ ವೇಳೆ ಪ್ರದರ್ಶನಕ್ಕೆ ಇಡಲಾಗಿದ್ದ ಹೆಚ್ಎಎಲ್ ನಿರ್ಮಾಣದ ಮಾರುತ್​ HLFT-42 ವಿಮಾನದ ಮೇಲೆ ಆಂಜನೇಯ ದೇವರ ಭಜರಂಗಬಲಿ ರೂಪದ ಚಿತ್ರವನ್ನು ಹಾಕಲಾಗಿತ್ತು.

HAL ತಯಾರಿಸಿರುವ ಮಿನಿ ವಿಮಾನಕ್ಕೆ ಅಂಜನೀಪುತ್ರನ ಬಲವನ್ನು ತೋರಿಸುವ ‘ಮಾರುತ್’ ಹೆಸರಿನ HLFT-42 ವಿಮಾನದ ಮೇಲೆ ಗದೆ ಹಿಡಿದು ಹಾರುತ್ತಿರೋ ಆಂಜನೇಯನ ಚಿತ್ರ ಮುದ್ರಣ ಮಾಡಲಾಗಿದ್ದು, ಭಜರಂಗಬಲಿ ಚಿತ್ರ ವಿಮಾನದ ಮೇಲೆ ರಾರಾಜಿಸಿತ್ತು. ಈ ವಿಮಾನ ನಿನ್ನೆ ಬೆಂಗಳೂರು ಏರ್​​ಶೋನಲ್ಲಿ ಪ್ರದರ್ಶನಗೊಂಡಿತ್ತು. ಈ ವಿಮಾನ ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಗೆ ಬಳಕೆಯಾಗಲಿದೆ.

ಏರೋ ಇಂಡಿಯಾ 2023ಗೆ ಪ್ರಧಾನಿ ನರೇಂದ್ರ ಮೋದಿಯವರು ಫೆ.13 ರಂದು ಚಾಲನೆ ನೀಡಿದ್ದಾರೆ. ಆಗಸದಲ್ಲಿ ಲೋಹದ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳುತ್ತಿರುವ ಪೇಕ್ಷಕರು ರೋಮಾಂಚಗೊಂಡಿದ್ದಾರೆ. ಫೆ.17ರ ವರೆಗೆ 14ನೇ ಆವೃತ್ತಿಯ ಬೆಂಗಳೂರು ಏರ್ ಶೋ ನಡೆಯಲಿದೆ.

ತೇಜಸ್, ಸುಖೊಯ್, ರಫೇಲ್ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ ನೋಡುಗರನ್ನು ರೋಮಾಂಚನಗಳಿಸುತ್ತಿವೆ. ಜೊತೆಗೆ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಹೆಚ್​ಎಎಲ್ ನಿರ್ಮಿಸಿದ ಹೆಲಿಕ್ಯಾಪ್ಟರ್​ಗಳು ಪ್ರದರ್ಶನವೂ ಜನರನ್ನ ಆಕರ್ಷಿಸುತ್ತಿವೆ.

ಏರ್ ಶೋಗೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಕ್ಷಿಯಾಗಿದೆ. ಇಂದು, ರಾಷ್ಟ್ರವು ಹೊಸ ಎತ್ತರವನ್ನು ಮುಟ್ಟುತ್ತಿದೆ ಮತ್ತು ಅದನ್ನು ದಾಟುತ್ತಿದೆ ಎಂದು ಪ್ರಧಾನಿ ತಮ್ಮ ಮೋದಿ ಏರೋ ಇಂಡಿಯಾ 2023ರ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನವ ಭಾರತದ ಹೊಸ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಅದನ್ನು ಕೇವಲ ಪ್ರದರ್ಶನ ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, ದೇಶವು ಈ ಗ್ರಹಿಕೆಯನ್ನು ಬದಲಾಯಿಸಿದೆ. ಇದು ಕೇವಲ ಪ್ರದರ್ಶನವಲ್ಲ, ಬದಲಿಗೆ ಭಾರತದ ಶಕ್ತಿಯಾಗಿದೆ. ಇದು ಭಾರತೀಯ ರಕ್ಷಣಾ ಉದ್ಯಮದ ವ್ಯಾಪ್ತಿ ಮತ್ತು ಆತ್ಮ ವಿಶ್ವಾಸದ ಮೇಲೆ ಕೇಂದ್ರೀಕರಿಸುತ್ತದೆ.

ಭಾರತ ವಿಶ್ವದಲ್ಲಿ ರಕ್ಷಣಾ ಕಂಪನಿಗಳಿಗೆ ಕೇವಲ ಮಾರುಕಟ್ಟೆಯಾಗಿಲ್ಲ. ಭಾರತ ಇಂದು ಸಂಭಾವ್ಯ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ. ಈ ಸಹಭಾಗಿತ್ವವು ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ರಾಷ್ಟ್ರಗಳು, ತಮ್ಮ ರಕ್ಷಣಾ ಅವಶ್ಯಕತೆಗಳಿಗಾಗಿ ವಿಶ್ವಾಸಾರ್ಹ ಪಾಲುದಾರರನ್ನು ಹುಡುಕುತ್ತಿರುವ ತಾಣವನ್ನಾಗಿ ಭಾರತವನ್ನು ಪರಿವರ್ತಿಸಿದೆ ಎಂದಿದ್ದರು.

ಸಿಎಂ ಬೊಮ್ಮಾಯಿ ಮಾತನಾಡಿ, ಏರೋ ಇಂಡಿಯಾ ಪ್ರದರ್ಶನವನ್ನು ಆಯೋಜಿಸುವುದು ಹೆಮ್ಮೆಯ ವಿಷಯವಾಗಿದೆ. ಕರ್ನಾಟಕವು ಪ್ರತಿ ವರ್ಷ ಅದನ್ನು ಆಯೋಜಿಸುವುದು ಸಂತಸದ ಸಂಗತಿ. ಈ ಕಾರ್ಯಕ್ರಮವು ರಕ್ಷಣೆ ಮತ್ತು ಏರೋಸ್ಪೇಸ್ ಉದ್ಯಮಗಳಿಗೆ ಹೊಸ ಅವಕಾಶದ ಬಾಗಿಲನ್ನು ತೆರೆಯುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ವಿಮಾನದ ನಿರ್ಮಾಣ ಕಾರ್ಯದಲ್ಲಿ ಬಳಸುವ ಎಲ್ಲಾ ಬಿಡಿ ಭಾಗಗಳನ್ನು ತಯಾರಿಸಲಾಗುತ್ತದೆ. ಆದ್ದರಿಂದ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ನಿರ್ಮಿಸಿದ ವಿಮಾನವನ್ನು ನೋಡಬೇಕು ಎಂಬುದು ತಮ್ಮ ಹೆಬ್ಬಕೆಯಾಗಿದೆ. ಈ ಮಹತ್ವಾಕಾಂಕ್ಷೆಯ ಕನಸು ಈಡೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮುಖ್ಯಮಂತ್ರಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದ್ದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.