ಭಾರತ ಪಾಕಿಸ್ತಾನ ಕದನ, ಆಪರೇಷನ್ ಸಿಂದೂರ್: ಇಂದು ರಾತ್ರಿ 8ಕ್ಕೆ ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ
ಕಾಶ್ಮೀರದಲ್ಲಿ ಕಳೆದ ತಿಂಗಳು ಪ್ರವಾಸಿಗರ ಮೇಲೆ ದಾಳಿ ನಡೆದ ನಂತರ ಪಾಕಿಸ್ತಾನದ ಉಗ್ರಗಾಮಿಗಳ ವಿರುದ್ದ ಭಾರತ ದಾಳಿ ಆರಂಭಿಸಿದ್ದು, ಆನಂತರದ ಎಲ್ಲಾ ಬೆಳವಣಿಗೆಗಳ ಕುರಿತು ವಿವರಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಭಾರತ ಉದ್ದೇಶಿಸಿ ಮಾತನಾಡುವರು.

ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ನಂತರ ಭಾರತವು ಪಾಕಿಸ್ತಾನದ ಉಗ್ರರ ವಿರುದ್ದ ಆರಂಭಿಸಿರುವ ಆಪರೇಷನ್ ಸಿಂದೂರ್ ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಯುದ್ದದ ವಾತಾವರಣದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮೇ 12ರ ಸೋಮವಾರ ರಾತ್ರಿ 8ಕ್ಕೆ ಮಾತನಾಡಲಿದ್ದಾರೆ. ಸತತ ಹತ್ತು ದಿನದಿಂದ ಭಾರತವು ಈಗಾಗಲೇ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ, ವಾಯುಸೇನೆಗಳ ಮೇಲೆ ಧ್ವಂಸ ಸೇರಿದಂತೆ ಹಲವು ವಿಚಾರದಲ್ಲಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಅದರಲ್ಲೂ ಮೂರು ದಿನದ ಹಿಂದಿನ ಕದನ ವಿರಾಮ ಘೋಷಣೆ ನಂತರದ ಬೆಳವಣಿಗೆಗಳ ಕುರಿತು ಪ್ರಧಾನಿ ವಿವರಿಸುವ ನಿರೀಕ್ಷೆಯಿದೆ.
ಪಹಲ್ಗಾಮ್‌ನಲ್ಲಿ ಪತ್ನಿ ಹಾಗೂ ಮಕ್ಕಳ ಎದುರು ಭಾರತೀಯದ ಪ್ರವಾಸಿಗರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ತುರ್ತು ಮರಳಿದ್ದರು. ಅಲ್ಲಿಂದ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರು, ಹಿರಿಯ ಸಚಿವರ ಸಭೆ ನಡೆಸಿದ್ದರು. ಸರ್ವ ಪಕ್ಷಗಳ ಸಭೆಯನ್ನು ನಡೆಸಲಾಗಿತ್ತು.
ಇದಾದ ನಂತರ ಭಾರತವು ಪಾಕಿಸ್ತಾನದ ಮೇಲೆ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡಬಹುದು. ಅದರಲ್ಲೂ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಸೂಚನೆ ಇತ್ತು. ಭಾರತವು ಇದಕ್ಕಾಗಿ ಸನ್ನದ್ದವಾಗಬೇಕು ಎಂದು ಎಲ್ಲಾ ಕಡೆಯೂ ಅಣಕು ಕಾರ್ಯಾಚರಣೆಗಳು ನಡೆದಿದ್ದವು.
ಅಣಕು ಕಾರ್ಯಾಚರಣೆ ನಡೆದ ದಿನವೇ ಭಾರತವು ಪಾಕಿಸ್ತಾನದ ಉಗ್ರರ ಅಡಗು ದಾಣಗಳನ್ನೇ ಗುರಿಯಾಗಿಟ್ಟುಕೊಂಡು ಆಪರೇಷನ್ ಸಿಂದೂರ್ ಎನ್ನುವ ಹೆಸರಿನಲ್ಲಿ ದಾಳಿ ಮಾಡಿತ್ತು. ಈ ವೇಳೆ ಹಲವು ಉಗ್ರರು, ಅವರ ಕುಟುಂಬದ ಸದಸ್ಯರು ಹತರಾಗಿದ್ದರು.
ಆ ನಂತರ ಪಾಕಿಸ್ತಾನದಿಂದ ಅಲ್ಲಲ್ಲಿ ದಾಳಿಗಳು ನಡೆದಿದ್ದವು. ಈಗಾಗಲೇ ಭಾರತದ ಕೆಲವು ಸೇನಾ ಸಿಬ್ಬಂದಿಯೂ ಹತರಾಗಿದ್ದಾರೆ. ಭಾರತವೂ ಪಾಕಿಸ್ತಾನದ ಪ್ರಮುಖ ವಾಯು ನೆಲೆಗಳನ್ನು ಧ್ವಂಸಗೊಳಿಸಿದೆ. ಅಲ್ಲದೇ ಕ್ರಿಕೆಟ್ ಮೈದಾನಕ್ಕೂ ದಾಳಿ ಮಾಡಿದೆ. ಭಾರತವು ತಕ್ಕ ಉತ್ತರವನ್ನು ಪಾಕಿಸ್ತಾನಕ್ಕೆ ನೀಡಿದೆ. ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರ, ಸೇನಾ ನಡೆಗೆ ಭಾರೀ ಆಕ್ರೋಶವೂ ವ್ಯಕ್ತವಾಗಿದೆ.
ಇದರ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಎರಡೂ ದೇಶಗಳು ಕದನ ವಿರಾಮ ಘೋಷಬೇಕು ಎನ್ನುವ ಒಪ್ಪಂದ ಮಾಡಿದರು. ಇದಕ್ಕೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿದವು. ಇದಾದ ದಿನವೇ ಮತ್ತೆ ಪಾಕಿಸ್ತಾನ ದಾಳಿ ನಡೆಸಿದ್ದು ಭಾರತವನ್ನು ಕೆರಳಿಸಿದೆ. ಈ ಕಾರಣದಿಂದ ಭಾರತ ಮತ್ತೆ ದಾಳಿಯನ್ನು ಆರಂಭಿಸಿದೆ.
ಯಾವುದೇ ಕಾರಣಕ್ಕೂ ನಮ್ಮ ಸೇನಾಪಡೆಗಳ ಕಾರ್ಯಾಚರಣೆ ನಿಲ್ಲೋದಿಲ್ಲ. ಈಗಾಗಲೇ ಒಂದು ವಾರದಿಂದಲೂ ಸೇನಾ ಪಡೆಗಳು ಪಾಕಿಸ್ತಾನದ ಭಯೋತ್ಪಾದಕರ ಚಟುವಟಿಕೆ ವಿರುದ್ದ ಕಾರ್ಯಾಚರಣೆವನ್ನು ಮುಂದುವರೆಸುತ್ತೇವೆ. ಈಗಾಗಲೇ ಆಪರೇಷನ್ ಸಿಂದೂರ್ ಸಹಿತ ಎಲ್ಲಾ ರೀತಿಯ ಸೇನಾ ಕಾರ್ಯಾಚರಣೆಗಳು ಮುಂದುವರೆಸುವ ನಿರ್ಧಾರ ಆಗಿರುವುದರಿಂದ ಎಲ್ಲರೂ ಸಕ್ರಿಯರಾಗಿ ಭಾಗಿಯಾಗಲಿದ್ದಾರೆ ಎಂದು ಭಾರತದ ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಭಾರತದ ನಿಲುವು ಬಹಿರಂಗಗೊಂಡಿದೆ.
ಈ ಎಲ್ಲಾ ಬೆಳವಣಿಗೆಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನಿತ್ಯ ಸಭೆಗಳನ್ನು ನಡೆಸಿ ಸ್ಪಷ್ಟ ಸೂಚನೆಗಳನ್ನು ಸಚಿವರು, ವಿದೇಶಾಂಗ, ಸೇನೆ ಸಹಿತ ವಿವಿಧ ಇಲಾಖೆಗಳ ಪ್ರಮುಖರಿಗೆ ನೀಡುತ್ತಲೇ ಇದ್ದಾರೆ. ಪ್ರತಿ ಕ್ಷಣದ ಮಾಹಿತಿಯನ್ನು ಪಡೆದು ಸಕ್ರಿಯರಾಗಿದ್ದಾರೆ ಮೋದಿ. ಕಳೆದ ಮೂರು ವಾರದಿಂದ ನಡೆದಿರುವ ಬೆಳವಣಿಗೆ, ಭಾರತದ ನಿಲುವು, ಭಯೋತ್ಪಾದನೆ, ಆಪರೇಷನ್ ಸಿಂದೂರ್ ಸಹಿತ ಎಲ್ಲಾ ವಿಚಾರಗಳ ಕುರಿತು ಪ್ರಧಾನಿ ಮೋದಿ ಉತ್ತರಿಸುವ ನಿರೀಕ್ಷೆಯಿದೆ. ಭಾರತದ ಹೋರಾಟ, ಪ್ರತ್ಯುತ್ತರ ಹೇಗಿರಲಿದೆ ಎನ್ನುವುದನ್ನು ತಮ್ಮ ಭಾಷಣದಲ್ಲಿ ತಿಳಿಸುವ ಸಾಧ್ಯತೆಗಳಿವೆ.