Agniveer Bharti 2023: ಐಟಿಐ, ಡಿಪ್ಲೊಮಾ ಓದಿರುವವರೂ ಅಗ್ನಿವೀರರಾಗಬಹುದು, ಬದಲಾದ ಅಗ್ನಿಪಥ ನಿಯಮಗಳನ್ನು ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Agniveer Bharti 2023: ಐಟಿಐ, ಡಿಪ್ಲೊಮಾ ಓದಿರುವವರೂ ಅಗ್ನಿವೀರರಾಗಬಹುದು, ಬದಲಾದ ಅಗ್ನಿಪಥ ನಿಯಮಗಳನ್ನು ತಿಳಿದುಕೊಳ್ಳಿ

Agniveer Bharti 2023: ಐಟಿಐ, ಡಿಪ್ಲೊಮಾ ಓದಿರುವವರೂ ಅಗ್ನಿವೀರರಾಗಬಹುದು, ಬದಲಾದ ಅಗ್ನಿಪಥ ನಿಯಮಗಳನ್ನು ತಿಳಿದುಕೊಳ್ಳಿ

ಐಟಿಐ ಮತ್ತು ಪಾಲಿಟೆಕ್ನಿಕ್‌ನಲ್ಲಿ ಪದವಿ ಹೊಂದಿರುವವರನ್ನೂ ಭಾರತೀಯ ಸೇನೆಯು ತಾಂತ್ರಿಕ ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಿದೆ.

Chilika (OdAgniveer Bharti 2023: ಐಟಿಐ, ಡಿಪ್ಲೊಮಾ ಓದಿರುವವರೂ ಅಗ್ನಿವೀರರಾಗಬಹುದು, ಬದಲಾದ  ಅಗ್ನಿಪಥ ನಿಯಮಗಳನ್ನು ತಿಳಿದುಕೊಳ್ಳಿ (ANI Photo)
Chilika (OdAgniveer Bharti 2023: ಐಟಿಐ, ಡಿಪ್ಲೊಮಾ ಓದಿರುವವರೂ ಅಗ್ನಿವೀರರಾಗಬಹುದು, ಬದಲಾದ ಅಗ್ನಿಪಥ ನಿಯಮಗಳನ್ನು ತಿಳಿದುಕೊಳ್ಳಿ (ANI Photo) (ANI Picture Service)

ಭಾರತೀಯ ಸೇನೆಗೆ ಅಗ್ನಿವೀರ್‌ ನೇಮಕಾತಿ ಯೋಜನೆಯ ಮೂಲಕ ಸೇರಿ ಒಂದಿಷ್ಟು ವರ್ಷ ದೇಶಸೇವೆ ಮಾಡಲು ಬಯಸುವ ಯುವಜನತೆಗೆ ಇತ್ತೀಚೆಗೆ ಭಾರತೀಯ ಸೇನೆಯು ಅಗ್ನಿಪಥ್‌ ಯೋಜನೆಯ ನೇಮಕಾತಿ ನಿಯಮಗಳನ್ನು ಬದಲಾವಣೆ ಮಾಡಿತ್ತು. ಶತ್ರು ಸೈನಿಕರ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಸೇನೆಯ ತಾಂತ್ರಿಕ ವಿಭಾಗಗಳಲ್ಲಿಯೂ ದೇಶದ ಯುವಜನತೆಗೆ ಅಗ್ನಿವೀರ ನೇಮಕಾತಿ ವಿಧಾನದ ಮೂಲಕ ಕಾರ್ಯನಿರ್ವಹಿಸಲು ಇನ್ನು ಮುಂದೆ ಸಾಧ್ಯವಿದೆ.

ಐಟಿಐ ಮತ್ತು ಪಾಲಿಟೆಕ್ನಿಕ್‌ನಲ್ಲಿ ಪದವಿ ಹೊಂದಿರುವವರನ್ನೂ ಭಾರತೀಯ ಸೇನೆಯು ತಾಂತ್ರಿಕ ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಿದೆ. ಈಗಾಗಲೇ ವೃತ್ತಿಪರ ತರಬೇತಿ ಪಡೆದಿರುವ ಅಭ್ಯರ್ಥಿಗಳು, ಸೇನೆಯಲ್ಲಿ ಟ್ರೈನಿಂಗ್‌ ಪೀರಿಯಡ್‌ ಮಾಡುವಂತಿಲ್ಲ. ಇದು ತರಬೇತಿ ಸಮಯವನ್ನು ಉಳಿಸುತ್ತದೆ.

ಸಾಮಾನ್ಯವಾಗಿ ಅಗ್ನಿವೀರ್‌ ಹುದ್ದೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಟೆಕ್ನಿಕಲ್‌ ವಿಭಾಗಗಳಿಗೆ ಅರ್ಜಿ ಸಲ್ಲಿಸುವವರು 12ನೇ ತರಗತಿ ಉತ್ತೀರ್ಣರಾಗಿರಬೇಕು ಎಂದು ಫೆಬ್ರವರಿ 16ರಂದು ಸೇನೆ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, 12ನೇ ತರಗತಿಯಲ್ಲಿ ಕನಿಷ್ಠ ಶೇ.60ರಷ್ಟು ಅಂಕ ಗಳಿಸಿದವರು ಅಗ್ನಿವೀರ್‌ ಕ್ಲರ್ಕ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 8ನೇ ತರಗತಿ ಓದಿದವರು ಅಗ್ನಿವೀರ್‌ ಟ್ರೇಡ್ಸ್‌ ಮ್ಯಾನ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹೊಸ ನಿಯಮಗಳು ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ ಸಂಸ್ಥೆಗಳಿಂದ ಪದವಿ ಪಡೆದಿರುವವರಿಗೆ ಸೇನೆಯಲ್ಲಿ ನುರಿತ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಈ ಎಲ್ಲ ಬದಲಾವಣೆಗಳು ಭಾರತೀಯ ಸೇನೆಯಲ್ಲಿ ಸೈನಿಕರಾಗುವ ನಿರೀಕ್ಷೆಯಲ್ಲಿರುವ ಯುವಜನತೆಗೆ ಅವಕಾಶ ನೀಡುತ್ತದೆ.

ಕೇಂದ್ರ ಸರಕಾರವು 2022ರಲ್ಲಿ ಭಾರತೀಯ ಸೇನೆಗೆ ಸೈನಿಕರನ್ನು ನೇಮಕ ಮಾಡುವ ಅಗ್ನಿವೀರ್‌ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ ಭೂ, ವಾಯು, ನೌಕೆ ಮೂರು ಸೇನಾ ಪಡೆಗಳಿಗೂ ನಾಲ್ಕು ವರ್ಷಗಳ ಅವಧಿಗೆ ನಿಯೋಜಿತ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ.

ಈ ಕಾರ್ಯಕ್ರಮದಡಿ ನೇಮಕಗೊಂಡ ಶೇ.25ರಷ್ಟು ಸೈನಿಕರನ್ನು ನಾಲ್ಕು ವರ್ಷಗಳ ನಂತರ ಕಾಯಂ ಮಾಡಿಕೊಳ್ಳಲಾಗುವುದು ಎಂದು ಸೇನೆ ತಿಳಿಸಿತ್ತು. ಯೋಜನೆ ಜಾರಿಗೆ ಬಂದ ಕೂಡಲೇ, ದೇಶಾದ್ಯಂತ ವ್ಯಾಪಕವಾದ ಪ್ರತಿಭಟನೆಗಳು ನಡೆದವು. ಇದು ಭಾರತೀಯ ಸಶಸ್ತ್ರ ಪಡೆಗಳ ಬಲಕ್ಕೆ ಧಕ್ಕೆ ತರಲಿದೆ ಎಂದು ಹಲವರು ಆರೋಪಿಸಿದ್ದರು. ಆದರೆ, ಅಗ್ನಿಪಥ ಯೋಜನೆ ಜಾರಿಯಾಗಿ ಈಗಾಗಲೇ ಒಂದು ಹಂತದ ನೇಮಕಾತಿ ಪ್ರಕ್ರಿಯೆಗಳೂ ಮುಗಿದಿವೆ. ಈಗಾಗಲೇ ಈ ವರ್ಷದ ಅಗ್ನಿಪಥ ರಾರ‍ಯಲಿಗಳ ಅಧಿಸೂಚನೆಗಳೂ ಹೊರಬಿದ್ದಿವೆ. ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿ ಸೇನಾ ನೇಮಕ ಕಚೇರಿ ವತಿಯಲ್ಲಿ ಏಪ್ರಿಲ್‌ 17ರಿಂದ ರಾಲಿಗಳು ಶುರುವಾಗಲಿವೆ.

ಭಾರತೀಯ ಸೇನೆಯ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ಅಧಿಸೂಚನೆ ಪ್ರಕಟಿಸಿದ ಬೆನ್ನಲ್ಲೇ ಬೆಂಗಳೂರು ನೇಮಕಾತಿ ವಲಯದ ಪ್ರಧಾನ ಕಚೇರಿಯ ಹೆಚ್ಚುವರಿ ಮಹಾನಿರ್ದೇಶಕ ಮೇಜರ್‌ ಜನರಲ್‌ ಪಿ. ರಮೇಶ್‌ ನೇಮಕ ವಿಧಾನದ ಕುರಿತು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆನ್‌ಲೈನ್‌ ಸಾಮಾನ್ಯ ಪರೀಕ್ಷೆ ಬಳಿಕವೇ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಬಾರಿ ನೇಮಕಾತಿ ಪ್ರಕ್ರಿಯೆಗೆ ಮೊದಲ ಹಂತದಲ್ಲಿ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು. ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ’’ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು.

ಆಸಕ್ತ ಅಭ್ಯರ್ಥಿಗಳು ತಮ್ಮ ಆಧಾರ್‌ಕಾರ್ಡ್‌ ಅಥವಾ 10ನೇ ತರಗತಿಯ ಅಂಕಪಟ್ಟಿಯ ಪ್ರಮಾಣಪತ್ರ ಬಳಸಿ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್‌ ಸಾಮಾನ್ಯ ಪ್ರವೇಶ ಪರೀಕ್ಷೆ ದೇಶದಾದ್ಯಂತ 176 ಸ್ಥಳಗಳಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿದ ಐದು ಪರೀಕ್ಷಾ ಸ್ಥಳಗಳಲ್ಲಿ ಒಂದನ್ನು ಹಂಚಿಕೆ ಮಾಡಲಾಗುವುದು" ಎಂದು ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.