Agniveer Recruitment 2025: ಭಾರತೀಯ ಸೇನೆ ಸೇರಬೇಕೆಂಬ ಆಸೆಯಿದೆಯೇ, ಅಗ್ನಿವೀರ್ ನೇಮಕ ಪ್ರಕ್ರಿಯೆ ಶುರು, ಅರ್ಜಿ ಸಲ್ಲಿಸಲು ಏಪ್ರಿಲ್ 10 ಕಡೆ
Agniveer Recruitment 2025: ಭಾರತೀಯ ಸೇನೆಯ ಅಗ್ನಿವೀರ್ ನೇಮಕ ಪ್ರಕ್ರಿಯೆಗೆ ಅರ್ಜಿ ಸ್ವೀಕರಿಸುವ ಆನ್‌ಲೈನ್ ಚಟುವಟಿಕೆ ಶುರುವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಲಾಶವಿದೆ.

Agniveer Recruitment 2025: ಭಾರತೀಯ ಸೇನೆಗೆ ಸೇರಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕನಸು ಕಾಣುವ ಯುವಕರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು 2025ರ ನೇಮಕಾತಿ ಪ್ರಕ್ರಿಯೆಯೂ ಶುರುವಾಗಿದೆ. ಅಗ್ನಿವೀರ್ ಹುದ್ದೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 12 ರಿಂದ ಪ್ರಾರಂಭಗೊಂಡಿವೆ. ಈ ಹುದ್ದೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10 ರವರೆಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಡಿಯಲ್ಲಿ, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್, ಅಗ್ನಿವೀರ್ ಟ್ರೇಡ್ಸ್‌ಮನ್, ಸೈನಿಕ್ ಟೆಕ್ನಿಕಲ್ ನರ್ಸಿಂಗ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ. ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಜೂನ್ನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ ಭೇಟಿ ನೀಡಿ.
ಏನೇನು ಅರ್ಹತೆ
ಅಗ್ನಿವೀರ್ ಜನರಲ್ ಡ್ಯೂಟಿ (ಜಿಡಿ) ಹುದ್ದೆಗಳಿಗೆ ಅಭ್ಯರ್ಥಿಯು ಶೇ. 45 ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರಬೇಕು. ಇದಲ್ಲದೇ ಅಭ್ಯರ್ಥಿಯು ಲಘು ಮೋಟಾರು ವಾಹನ ಚಾಲನಾ ಪರವಾನಗಿಯನ್ನು ಹೊಂದಿದ್ದರೆ, ಅವರಿಗೆ ಚಾಲಕ ಹುದ್ದೆಗೆ ಆದ್ಯತೆ ನೀಡಲಾಗುವುದು. ಅಗ್ನಿವೀರ್ ತಾಂತ್ರಿಕ ಹುದ್ದೆಗಳಿಗೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ಕಡ್ಡಾಯ ವಿಷಯಗಳಾಗಿದ್ದು, ಶೇ. 50 ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈ ಶಿಕ್ಷಣ ಇದ್ದವರು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು
ಈ ನೇಮಕಾತಿಗಾಗಿ, ಎಲ್ಲಾ ವರ್ಗಗಳ (ಸಾಮಾನ್ಯ, ಒಬಿಸಿ, ಎಸ್‌ಸಿ, ಎಸ್‌ಟಿ, ಇಡಬ್ಲ್ಯೂಎಸ್) ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಇದನ್ನು ಆನ್‌ಲೈನ್ ಮಾರ್ಗದ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು, ಪ್ರಮಾಣಪತ್ರಗಳು, ಸ್ಕ್ಯಾನ್ ಮಾಡಿದ ಸಹಿ, ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ) ಅಗತ್ಯವಿದೆ. ಈ ಅಂಶವನ್ನು ಕಡ್ಡಾಯವಾಗಿ ಅರ್ಹ ಅಭ್ಯರ್ಥಿಗಳು ಗಮನಿಸಬೇಕು ಎಂದು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೀಗೆ
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಆನಂತರ ಆಯ್ಕೆ ಪ್ರಕ್ರಿಯೆಗಳು ಶುರುವಾಗಲಿದೆ. ಅರ್ಜಿ ಸಲ್ಲಿಸಿದವರನ್ನು ಆಧರಿಸಿ ಭಾರತದ ನಾನಾ ಭಾಗಗಳಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
