PM Kisan: ಇಂದು ಪಿಎಂ ಕಿಸಾನ್ 14ನೇ ಕಂತಿನ ಹಣ ಬಿಡುಗಡೆ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೀಗೆ
PM Kisan 14th instalment: ಕೇಂದ್ರ ಸರ್ಕಾರ ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 14ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು (ಜುಲೈ 27, ಗುರುವಾರ) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ 14ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಲಕ್ಷಾಂತರ ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.
NPCI ಲಿಂಕ್ ಮಾಡಿದ ಬ್ಯಾಂಕ್ ಖಾತೆ
ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ಗೆ ಲಿಂಕ್ ಮಾಡಿದ್ದರೆ ನೀವು ಸ್ಥಳೀಯ ಅಂಚೆ ಕಛೇರಿಯನ್ನು ಸಂಪರ್ಕಿಸಬೇಕು. ಈ ಬಾರಿಯ ಕಂತಿನ ಹಣ ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)ನಲ್ಲಿ ಹೊಸ (DBT ಸಕ್ರಿಯಗೊಳಿಸಿದ) ಖಾತೆಯನ್ನು ತೆರೆಯಬೇಕು. ಏಕೆಂದರೆ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಎನ್‌ಪಿಸಿಐ ಲಿಂಕ್ ಮಾಡಲು ಭಾರತ ಅಂಚೆ ಇಲಾಖೆಗೆ ಅನುಮತಿ ನೀಡಿದೆ.
ಇ-ಕೆವೈಸಿ (e-KYC) ಅಪ್ಡೇಟ್ ಹೇಗೆ?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು 14 ನೇ ಕಂತಿನ ಹಣವನ್ನು ಪಡೆಯಲು ತಮ್ಮ e-KYC ಅನ್ನು ಪೂರ್ಣಗೊಳಿಸಿರಬೇಕು. ಫಲಾನುಭವಿಗಳು ತಮ್ಮ ಆಧಾರ್ಗೆ ಸಂಖ್ಯೆ ಹಾಗೂ ಆಧಾರ್ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ಇ-ಕೆವೈಸಿ ಅಪ್ಡೇಟ್ ಮಾಡಿಸಬಹುದು. ಅಥವಾ PMKISAN GOI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮುಖ ಚಹರೆ ತೋರಿಸಿ ಇ-ಕೆವೈಸಿ ಅಪ್ಡೇಟ್ ಮಾಡಬಹುದು.
ಪಿಎಂ-ಕಿಸಾನ್ ಪೋರ್ಟಲ್ನಲ್ಲಿ ಇ-ಕೆವೈಸಿ ಅಪ್ಡೇಟ್
ಹಂತ 1: ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ (https://pmkisan.gov.in) ಭೇಟಿ ನೀಡಿ
ಹಂತ 2: ಇ-ಕೆವೈಸಿ (E-KYC) ಮೇಲೆ ಕ್ಲಿಕ್ ಮಾಡಬೇಕು
ಹಂತ 3: ಆಧಾರ್ ಸಂಖ್ಯೆ ನಮೂದಿಸಬೇಕು
ಹಂತ 4: ಆ ಬಳಿಕ ಕ್ಯಾಪ್ಚಾ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ
ಹಂತ 5: ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ
ಹಂತ 6: Get OTP ಕ್ಲಿಕ್ ಮಾಡಿ
ಹಂತ 7: ನಿಮ್ಮ ಮೊಬೈಲ್ಗೆ ಬಂದ ಒಟಿಪಿ (One Time Password) ನಂಬರ್ ಅನ್ನು ನಮೂದಿಸಿ.
ಫಲಾನುಭವಿಗಳ ಪಟ್ಟಿಯನ್ನು ರೈತರು ಹೇಗೆ ಪರಿಶೀಲಿಸಬಹುದು?
ಹಂತ 1: ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಫಲಾನುಭವಿಗಳ ಪಟ್ಟಿಯ (Beneficiary list) ಮೇಲೆ ಕ್ಲಿಕ್ ಮಾಡಿ.
ಹಂತ 3: ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ನಮೂದಿಸಿ. ಬಳಿಕ Get report (ವರದಿ ಪಡೆಯಿರಿ) ಮೇಲೆ ಕ್ಲಿಕ್ ಮಾಡಿ
ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈ ಹಣ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ. 2018 ಡಿಸೆಂಬರ್ 1ರಂದು ಪಿಎಂ ಕಿಸಾನ್ ಯೋಜನೆ ಆರಂಭಿಸಲಾಗಿತ್ತು. ಪಿಎಂ ಕಿಸಾನ್ ಯೋಜನೆಯ ಮೊದಲ ಕಂತಿನ ಹಣ 2019, ಫೆಬ್ರುವರಿ 24ರಂದು ಬಿಡುಗಡೆ ಮಾಡಲಾಗಿತ್ತು. ಇಲ್ಲಿಯವರೆಗೆ ಒಟ್ಟು 13 ಕಂತು ಹಣ ಬಿಡುಗಡೆಯಾಗಿದೆ. 2023ರ ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶ ಕಾರ್ಯಕ್ರಮದ ವೇಳೆ 13ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು.