ಕರ್ನಲ್‌ ಸೋಫಿಯಾ ಖುರೇಷಿ ಕುರಿತ ಡೀಪ್‌ಫೇಕ್‌ ವಿಡಿಯೋ ಪ್ರಸಾರ ತಡೆ: ಪಿಐಎಲ್‌ ತಿರಸ್ಕರಿಸಿದ ಸುಪ್ರೀಂಕೋರ್ಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕರ್ನಲ್‌ ಸೋಫಿಯಾ ಖುರೇಷಿ ಕುರಿತ ಡೀಪ್‌ಫೇಕ್‌ ವಿಡಿಯೋ ಪ್ರಸಾರ ತಡೆ: ಪಿಐಎಲ್‌ ತಿರಸ್ಕರಿಸಿದ ಸುಪ್ರೀಂಕೋರ್ಟ್‌

ಕರ್ನಲ್‌ ಸೋಫಿಯಾ ಖುರೇಷಿ ಕುರಿತ ಡೀಪ್‌ಫೇಕ್‌ ವಿಡಿಯೋ ಪ್ರಸಾರ ತಡೆ: ಪಿಐಎಲ್‌ ತಿರಸ್ಕರಿಸಿದ ಸುಪ್ರೀಂಕೋರ್ಟ್‌

ಆಪರೇಷನ್‌ ಸಿಂದೂರ್‌ ನಂತರ ಗಮನ ಸೆಳೆದಿರುವ ಕರ್ನಾಟಕದ ಸೊಸೆ ಕರ್ನಲ್‌ ಸೋಫಿಯಾ ಖುರೇಷಿ ಅವರ ಮೇಲಿನ ಎಐ ಡೀಪ್‌ಫೇಕ್‌ ವಿಡಿಯೋಗಳ ಪ್ರಸಾರ ತಡೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಕರ್ನಲ್‌ ಸೋಫಿಯಾ ಖುರೇಷಿ ಕುರಿತ ಎಐ ವಿಡಿಯೋಗಳ ಪ್ರಸಾರ ತಡೆ ಪಿಐಎಲ್‌ ಅನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.
ಕರ್ನಲ್‌ ಸೋಫಿಯಾ ಖುರೇಷಿ ಕುರಿತ ಎಐ ವಿಡಿಯೋಗಳ ಪ್ರಸಾರ ತಡೆ ಪಿಐಎಲ್‌ ಅನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ದೆಹಲಿ: ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ನಂತರ ದಿನ ಬೆಳಗಾಗುವುದರಲ್ಲಿ ಪ್ರವರ್ಧ ಮಾನಕ್ಕೆ ಬಂದ ಭಾರತದ ಸೇನಾ ಅಧಿಕಾರಿ ಹಾಗೂ ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಕೃತಕ ಬುದ್ದಿಮತ್ತೆ ಬಳಸಿ( ಎಐ) ರಚಿಸಿದ ಡೀಪ್‌ಫೇಕ್ ವೀಡಿಯೊಗಳ ಪ್ರಸಾರವನ್ನು ತಡೆಯುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿದಾರರಾದ ನರೇಂದ್ರ ಕುಮಾರ್ ಗೋಸ್ವಾಮಿ ಸಲ್ಲಿಸಿದ ಪಿಐಎಲ್ ಅನ್ನು ಒಪ್ಪದ ಸುಪ್ರೀಂ ಕೋರ್ಟ್‌ ಈ ಕುರಿತು ದೆಹಲಿಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.ಈಗಾಗಲೇ ಕರ್ನಲ್‌ ಸೋಫಿಯಾ ಅವರ ಕುರಿತು ಸಾಕಷ್ಟು ಡೀಪ್‌ಫೇಕ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದನ್ನು ತಡೆಯುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಭಾರತದ ಭದ್ರತೆ ಹಾಗೂ ಸುರಕ್ಷತೆಯಂತ ಹುದ್ದೆಯಲ್ಲಿ ಕೆಲಸ ಮಾಡುವ ಸೇನಾ ಅಧಿಕಾರಿಗಳ ಇಂತಹ ಸೂಕ್ಷ್ಮ ವಿಷಯವನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಮಾದರಿ ಕಾನೂನನ್ನು ಸಿದ್ಧಪಡಿಸಲು 'ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತಜ್ಞರ ಸಮಿತಿ'ಯನ್ನು ಸ್ಥಾಪಿಸಬೇಕೆಂದು ಅರ್ಜಿದಾರರಾದ ನರೇಂದ್ರ ಕುಮಾರ್ ಗೋಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದರು.

ಇಂತಹ ಪ್ರಕರಣವು ಗಂಭೀರ ಎಂಬ ರೀತಿಯಲ್ಲಿ ದೂರುದಾರ ಗೋಸ್ವಾಮಿಯ ಪರವಾಗಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಅಭಿಪ್ರಾಯ ವ್ಯಕ್ತಪಡಿಸಿದರೂ ಈ ಅರ್ಜಿಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳುವುದನ್ನು ನಿರಾಕರಿಸಿತು.

ಈಗಾಗಲೇ ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ನಡೆಸುತ್ತಿದೆ.ಒಂದೆರಡು ವರ್ಷಗಳಿಂದ ವಿಚಾರಣೆ ಮುಂದುವರಿದಿದೆ. ನಾವು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡರೆ, ಹೈಕೋರ್ಟ್ ಬಾಕಿ ಇರುವ ಪ್ರಕರಣದ ವಿಚಾರಣೆಯನ್ನು ನಿಲ್ಲಿಸುತ್ತದೆ. ವರ್ಷಗಳಲ್ಲಿ ನಡೆದಿರುವ ದೆಹಲಿ ಹೈಕೋರ್ಟ್‌ನ ಎಲ್ಲಾ ಕಠಿಣ ಪರಿಶ್ರಮ ವ್ಯರ್ಥವಾಗುತ್ತದೆ. ನೀವು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸುವುದು ಸೂಕ್ತ. ಈಗಾಗಲೇ ವಿಚಾರಣೆ ನಡೆದಿರುವ ಅರ್ಜಿಗಳ ಜತೆಗೆ ನಿಮ್ಮ ಅರ್ಜಿಯನ್ನು ಸೇರಿಸಿಕೊಳ್ಳಬಹುದು ಎಂದು ಪೀಠವು ಸೂಚನೆ ನೀಡಿತು.

ನಾವು ಇದನ್ನು ಗಂಭೀರ ಸಮಸ್ಯೆ ಎಂದು ಹೇಳುತ್ತಿಲ್ಲ. ಆದರೆ ಕಾನೂನು ಪರಿಮಿತಿಯೊಳಗೆ ವಿಚಾರಣೆ ಒಂದು ಕಡೆ ನಡೆದಿರುವಾಗ ಮತ್ತೊಂದು ನ್ಯಾಯಾಲಯದಲ್ಲಿ ನಡೆಯುವುದು ಬೇಡ ಎನ್ನುವುದಷ್ಟೇ ನಮ್ಮ ಸೂಚನೆ. ದೆಹಲಿ ಹೈಕೋರ್ಟ್ ಕೂಡ ಅರ್ಜಿದಾರರಿಗೆ ವಿಚಾರಣೆಗೆ ಅವಕಾಶ ನೀಡುವಂತೆ ಮತ್ತು ಈ ವಿಷಯದ ಕುರಿತು ಅವರ ಸಲಹೆಗಳನ್ನು ಆಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆಯಲ್ಲಿ ತಿಳಿಸಿತು.

ಭಾರತದಲ್ಲಿ ಸೈಬರ್ ಅಪರಾಧಿಗಳು ಸೈಬರ್ ಅಪರಾಧ ನಿಯಂತ್ರಣ ಅಧಿಕಾರಿಗಳಿಗಿಂತ ಎಷ್ಟು ವೇಗವಾಗಿದ್ದಾರೆ ಎಂದರೆ, ದೂರುದಾರರು ನ್ಯಾಯಾಲಯದಿಂದ ಹೊರ ಹೋಗುವುದಕ್ಕಿಂತ ಮುನ್ನವೇ ಹೊಸ ವೀಡಿಯೊ ಅಪ್‌ಲೋಡ್ ಮಾಡುವ ಹಂತಕ್ಕೆ ಹೋಗಿದ್ದಾರೆ.ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ ಎನ್ನುವ ಅಭಿಪ್ರಾಯವನ್ನು ನ್ಯಾಯಮೂರ್ತಿಗಳು ವ್ಯಕ್ತಪಡಿಸಿದರು.

‘ಆಪರೇಷನ್ ಸಿಂಧೂರ’ದ ಬಗ್ಗೆ ಮಾಹಿತಿ ನೀಡಿದ ತಂಡದ ಭಾಗವಾಗಿದ್ದ ಖುರೇಶಿ ಅವರು ಡೀಪ್‌ಫೇಕ್ ವೀಡಿಯೊ ಪ್ರಸರಣದಿಂದ ತಾನು ವಿಚಲಿತನಾಗಿದ್ದೇನೆ ಎಂದು ಗೋಸ್ವಾಮಿ ಹೇಳಿದ್ದರು. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಖುರೇಶಿ ಅವರ ಹಲವು ವೀಡಿಯೊಗಳನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸೋಫಿಯಾ ಖುರೇಷಿ ಭಾರತೀಯ ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದು , ಪ್ರಸ್ತುತ ಕರ್ನಲ್ ಹುದ್ದೆಯನ್ನು ಹೊಂದಿದ್ದಾರೆ . ಸಣ್ಣ ವಯಸ್ಸಿನಲ್ಲಿಯೇ ಸೇನೆಯನ್ನು ಸೇರಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಕರ್ನಾಟಕದ ಬೆಳಗಾವಿಯ ಕೊಣ್ಣೂರಿನವರಾದ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರನ್ನು ವಿವಾಹವಾಗಿದ್ದಾರೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.