Video: ಲತಾ ಮಂಗೇಶ್ಕರ್ ಧ್ವನಿಯಲ್ಲಿ ರಾಮ್ ಆಯೇಂಗೆ ಹಾಡು; ಎಐ ಸದ್ಬಳಕೆ ಹೀಗಿರಬೇಕು ಎಂದ ನೆಟ್ಟಿಗರು
Lata Mangeshkar Ram Aayenge: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಿಂದಿಯ ಜನಪ್ರಿಯ ಹಾಡು ರಾಮ್ ಆಯೇಂಗೇ ಹಾಡು ಹಾಡಿದರೆ ಹೇಗಿರುತ್ತದೆ? ಎಐ ತಂತ್ರಜ್ಞಾನವು ಇದನ್ನು ಸಾಧ್ಯವಾಗಿಸಿದೆ. ಈ ವಿಡಿಯೋದಲ್ಲಿ ಮಂಗೇಶ್ಕರ್ ಅವರ ಧ್ವನಿಯನ್ನು ಮತ್ತೊಮ್ಮೆ ಕೇಳುವ ಅವಕಾಶ ಸಿಗುತ್ತಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂಪನ್ನಗೊಂಡಿದೆ. ಬಾಲರಾಮನಾಗಿ ಮಂದಿರದ ಗರ್ಭಗುಡಿಯಲ್ಲಿ ರಾಮನು ವಿರಾಜಮಾನನಾಗಿದ್ದಾನೆ. ವಿಶೇಷ ದಿನದಂದು ಶ್ರೀರಾಮನಿಗೆ ವಿಶೇಷ ಗೌರವ ಸಂದಿದೆ. ದೇಶ ಕಂಡ ಶ್ರೇಷ್ಠ ಗಾಯಕಿ, ಭಾರತದ ನೈಟಿಂಗೇಲ್ ಎಂದೇ ಹೆಸರು ಪಡೆದ ಲತಾ ಮಂಗೇಶ್ಕರ್ ಅವರು ರಾಮನ ಹಾಡನ್ನು ಹಾಡಿದ್ದಾರೆ. ‘ಅರೇ, ಇದು ಹೇಗೆ ಸಾಧ್ಯ’ ಎಂದು ನೀವು ಯೋಚಿಸುತ್ತಿರಬಹುದು. ಇಲ್ಲೊಂದು ವಿಶೇಷ ಚಿಂತನೆ ಇದೆ.
ಮಂಗೇಶ್ಕರ್ ಅವರು ನಮ್ಮನ್ನಗಲಿ ಎರಡು ವರ್ಷಗಳು ಸಮೀಪಿಸುತ್ತಿದೆ.ಈ ನಡುವೆ ರಾಮಮಂದಿರ ಪ್ರಾಣಪ್ರತಿಷ್ಠೆ ದಿನದಂದು ಲತಾ ಅವರು ಹಾಡಿರುವ 'ರಾಮ್ ಆಯೇಂಗೇ' ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದ ಹಾಗೆ ಈ ಹಾಡನ್ನು ಮಂಗೇಶ್ಕರ್ ಅವರು ಹಾಡಿದ್ದಲ್ಲ. ಬದಲಾಗಿ ಥೇಟ್ ಲತಾ ಮಂಗೇಶ್ಕರ್ ಅವರೇ ಹಾಡಿರುವಂತೆ ಭಾಸವಾಗುವಂತೆ ಎಐ ತಂತ್ರಜ್ಞಾನ ಬಳಸಿ ರಚಿಸಲಾದ ಹಾಡು ಇದು.
ರಾಮ್ ಆಯೇಂಗೆ ಹಾಡಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆವೃತ್ತಿಯು ಇಂದು ಮನೆ-ಮನಗಳಲ್ಲಿಯೂ ಮೊಳಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿರುವ ಈ ಹಾಡಿನ ಮೂಲಕ ಯೂಟ್ಯೂಬ್ ಬಳಕೆದಾರರೊಬ್ಬರು ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಮತ್ತೆ ಕೇಳಿಸಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ಈ ಹಾಡಿನ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ | Ayodhya Ram Mandir: ನಮ್ಮ ಬಾಲರಾಮ ಇನ್ನು ಟೆಂಟ್‌ನಲ್ಲಿರಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ; ಅಯೋಧ್ಯೆಯಿಂದ ಪ್ರಧಾನಿ ಮೋದಿ ಮಾತು
ಡಿಜೆ ಎಂಆರ್‌ಎ ಎಂಬ ಚಾನೆಲ್‌ನ ಯೂಟ್ಯೂಬ್ ಬಳಕೆದಾರೊಬ್ಬರು ತಮ್ಮ ಚಾನೆಲ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಆವೃತ್ತಿಯು 'ಓಪನ್ ಸೋರ್ಸ್ ಉಪಕರಣಗಳು ಮತ್ತು ಧ್ವನಿ ಎಂಜಿನಿಯರಿಂಗ್‌ನ ಸಮ್ಮಿಶ್ರಣವಾಗಿದೆ' ಎಂದು ಅವರು ವಿಡಿಯೋ ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಈ ಎಐ ಆವೃತ್ತಿಯನ್ನು 'ಸಂಗೀತದ ಮೇಲಿನ ಅತೀವ ಪ್ರೀತಿಯಿಂದ ರಚಿಸಲಾಗಿದೆ. ನಮ್ಮನ್ನು ಅಗಲಿರುವ ಸಂಗೀತ ಕಲಾವಿದೆಗೆ ಗೌರವಾರ್ಥವಾಗಿ, ಯಾವುದೇ ಲಾಭದ ಉದ್ದೇಶವಿಲ್ಲದೆ ರಚಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
ಜನವರಿ 21ರಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈವರೆಗೆ 18 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ವಿಡಿಯೋ ಪಡೆದಿದೆ. ಅಲ್ಲದೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೋವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.
ಯೂಟ್ಯೂಬ್ ಬಳಕೆದಾರರ ಕಾಮೆಂಟ್ ಹೀಗಿವೆ
ವಿಡಿಯೋ ವೀಕ್ಷಿಸಿದ ನೆಟ್ಟಿಗರು ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಲತಾ ಮಂಗೇಷ್ಕರ್ ಅವರ ಧ್ವನಿಯಲ್ಲಿ ಮಾಧುರ್ಯವಿದೆ. ಅದು ಇಂದಿನ ಯಾವುದೇ ಗಾಯಕರ ಧ್ವನಿಯಲ್ಲಿ ಕಂಡುಬರುವುದಿಲ್ಲ” ಎಂದು ಯೂಟ್ಯೂಬ್ ಬಳಕೆದಾರರೊಬ್ಬರು ಬರೆದಿದ್ದಾರೆ.
“ನನಗೆ ರೋಮಾಂಚನವಾಗಿದೆ” ಎಂದು ಮತ್ತೊಬ್ಬ ಬಳಕೆದಾರ ಹೇಳಿಕೊಂಡಿದ್ದಾರೆ. "ಅದ್ಭುತ ಮತ್ತು ಧನ್ಯವಾದಗಳು. ಇದು ಕೃತಕ ಬುದ್ಧಿಮತ್ತೆಯ ನಿಜವಾದ ಬಳಕೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ | ಮನೆ-ಮನಗಳಲ್ಲೂ ವಿರಾಜಮಾನನಾದ ಬಾಲರಾಮ; ಶ್ರೀರಾಮನನ್ನು ಭಾರತ ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಪನ್ನಗೊಂಡಿದೆ. ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲರಾಮನಾಗಿ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಬಾಲರಾಮನ ಸುಂದರ ಪ್ರತಿಮೆಯ ಪ್ರಾಣ ಪ್ರತಿಷ್ಠಾ ಮಹೋತ್ಸವ ಜನವರಿ 22ರ ಸೋಮವಾರ ಮಧ್ಯಾಹ್ನ 12.29 ರಿಂದ 12.30ರ ನಡುವಿನ 84 ಸೆಕೆಂಡ್‌ಗಳ ಅವಧಿಯಲ್ಲಿ ನೆರವೇರಿತು.