ಎಐ ನಿರ್ಮಿತ ಪೋಪ್ ಡೊನಾಲ್ಡ್ ಟ್ರಂಪ್ ಚಿತ್ರಕ್ಕೆ ವ್ಯಾಪಕ ಆಕ್ರೋಶ, ಟೀಕೆಗೆ ಹೆದರಿ ಸ್ಪಷ್ಟೀಕರಣ ನೀಡಬೇಕಾಗಿ ಬಂತು ಶ್ವೇತಭವನ
ರೋಮ್‌ನ ಕ್ಯಾಥೋಲಿಕ್ ಚರ್ಚ್‌ಗೆ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೇ ವೇಳೆ, ಎಐ ನಿರ್ಮಿತ ಪೋಪ್ ಡೊನಾಲ್ಡ್ ಟ್ರಂಪ್ ಚಿತ್ರವನ್ನು ಸ್ವತಃ ಅಮೆರಿಕ ಅಧ್ಯಕ್ಷ ಹಂಚಿಕೊಂಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವೈಟ್‌ಹೌಸ್ ಕೂಡ ಇದನ್ನು ರೀಟ್ವೀಟ್ ಮಾಡಿದ್ದು ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿದೆ.

ಪೋಪ್ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನದೇ ಎಐ ನಿರ್ಮಿತ ಪೋಪ್ ಚಿತ್ರವನ್ನು ಪೋಪ್ ಡೊನಾಲ್ಡ್ ಟ್ರಂಪ್ ಎಂದು ಟ್ರೂತ್ ಸೋಷಿಯಲ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅವರ ಈ ನಡೆ ಪಾದ್ರಿಗಳು, ಕ್ಯಾಥೋಲಿಕರು, ಇಟಾಲಿಯನ್ನರು ಸೇರಿ ಕ್ರಿಶ್ಚಿಯನ್ನರ ಆಕ್ರೋಶಕ್ಕೆ ಕಾರಣವಾಯಿತು. ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಅಮೆರಿಕ ಅಧ್ಯಕ್ಷರ ಈ ತಮಾಷೆಯ ನಡೆ ಕ್ರಿಶ್ಚಿಯನ್ ಸಮುದಾಯದವರಿಗೆ ಸಹ್ಯವಾಗಲಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಎಐ ನಿರ್ಮಿತ ಪೋಪ್ ಡೊನಾಲ್ಡ್ ಟ್ರಂಪ್ ಚಿತ್ರ ಶೇರ್ ಮಾಡಿದ ಅಮೆರಿಕದ ಅಧ್ಯಕ್ಷ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್‌ನಲ್ಲಿ ಪೋಪ್ ವೇಷದಲ್ಲಿರುವ ತನ್ನದೇ ಎಐ ಚಿತ್ರವನ್ನು ಶುಕ್ರವಾರ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ವೈಟ್ ಹೌಸ್ ಕೂಡ ಎಕ್ಸ್‌ನಲ್ಲಿ ರೀಪೋಸ್ಟ್ ಮಾಡಿತ್ತು. ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾದ ಬಳಿಕ ಅಧಿಕೃತ ಸಂತಾಪ ಸೂಚಕ ಅವಧಿಯಲ್ಲಿ ವೈಟ್‌ಹೌಸ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರೀತಿ ವರ್ತಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಡೊನಾಲ್ಡ್ ಟ್ರಂಪ್ ಅವರು ಕ್ಯಾಥೋಲಿಕ್ ಕ್ರಿಶ್ಚಿಯನ್ ಅಲ್ಲ. ಅವರು ಪ್ರೈಬೆಟೇರಿಯನ್ ಎಂದು ಹೇಳಲಾಗುತ್ತಿದ್ದು, ಅನಿಶ್ಚಿತ ಪ್ರೊಟೆಸ್ಟೆಂಟ್ ಎಂದೂ ಗುರುತಿಸಿಕೊಂಡಿದ್ದಾರೆ.
ಪೋಪ್ ಆಯ್ಕೆ ಸಮಿತಿಯ ಸಭೆಯಲ್ಲೂ ಚರ್ಚೆಗೆ ಗ್ರಾಸವಾಯಿತು ಟ್ರಂಪ್ ಇಮೇಜ್
ಎಐ ನಿರ್ಮಿತ ಚಿತ್ರದಲ್ಲಿ ಡೊನಾಲ್ಡ್ ಟ್ರಂಪ್ ಬಿಷಪ್ ಅವರ ಟೋಪಿ ಬಿಳಿ ಕಸೋಕ್, ಕತ್ತಿನಲ್ಲಿ ಶಿಲುಬೆಯ ಸರ ಧರಿಸಿ, ಬಿಳಿ ನಿಲುವಂಗಿ ಧರಿಸಿ ಪೋಪ್ ರೀತಿಯಲ್ಲೇ ಪೋಸ್ ಕೊಟ್ಟ ದೃಶ್ಯವಿದೆ. ಈ ಇಮೇಜ್ ಶನಿವಾರ ವ್ಯಾಟಿಕನ್‌ನಲ್ಲಿ ನಡೆದ ಕಾನ್‌ಕ್ಲೇವ್‌ನ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ಪೋಪ್ ಫ್ರಾನ್ಸಿಸ್ ಅವರ ನಿಧನವೇ ಕ್ಯಾಥೋಲಿಕ್ ಚರ್ಚ್‌ಗೆ ಹಾಗೂ ಅವರ ಅನುಯಾಯಿಗಳಿಗೆ ಮಾತ್ರವಲ್ಲ, ಅವರ ಜೀವನಾದರ್ಶಗಳಿಂದ ಪ್ರಭಾವಿತರಾದವರಿಗೆ ಒಂದು ದೊಡ್ಡ ಹೊಡೆತವಾಗಿತ್ತು. ಪೋಪ್ ಫ್ರಾನ್ಸಿಸ್ ವಿಚಾರದಲ್ಲಿ ಧರ್ಮಾಸಕ್ತರಲ್ಲದ ಇಟಾಲಿಯನ್ನರಿಗೂ ಗೌರವವಿತ್ತು. ಡೊನಾಲ್ಡ್ ಟ್ರಂಪ್ ಅವರ ಕೀಳು ಅಭಿರುಚಿಯನ್ನು ಇಟಲಿ, ಸ್ಪೇನ್‌ಗಳಲ್ಲಿ ಖಂಡನೆ ವ್ಯಕ್ತವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಇಟಲಿಯ ಮಾಜಿ ಪ್ರಧಾನ ಮಂತ್ರಿ, ಮ್ಯಾಟಿಯೊ ರೆನ್ಜಿ ಅವರು ಎಕ್ಸ್ ಮೇಲೆ ಟ್ರಂಪ್ ಅವರ ನಡೆಯನ್ನು ಟೀಕಿಸಿದರು, “ಇದು ನಂಬುವವರನ್ನು ಅಪರಾಧ ಮಾಡುತ್ತದೆ, ಸಂಸ್ಥೆಗಳನ್ನು ಅವಮಾನಿಸುತ್ತದೆ ಮತ್ತು ಬಲಪಂಥೀಯ ಪ್ರಪಂಚದ ನಾಯಕನು ಕೋಡಂಗಿಯನ್ನು ಆನಂದಿಸುತ್ತಾನೆ ಎಂದು ತೋರಿಸುತ್ತದೆ. ಏತನ್ಮಧ್ಯೆ, ಯುಎಸ್ ಆರ್ಥಿಕತೆಯು ಆರ್ಥಿಕ ಹಿಂಜರಿತಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಡಾಲರ್ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಸಾರ್ವಭೌಮತ್ವಿಗಳು ಎಲ್ಲೆಡೆಯೂ ಹಾನಿಗೊಳಗಾಗುತ್ತಾರೆ.
ಟ್ರಂಪ್ ಅವರ ನಡೆಯನ್ನು ಟೀಕಿಸಿದ ಇಟಲಿಯ ಮಾಜಿ ಪ್ರಧಾನ ಮಂತ್ರಿ, ಮ್ಯಾಟಿಯೊ ರೆನ್ಜಿ, “ಅಮೆರಿಕದ ಆರ್ಥಿಕತೆ ಹಿಂಜರಿತದ ಕಾರಣ ಅಪಾಯದಲ್ಲಿದೆ. ಡಾಲರ್ ಮೌಲ್ಯ ಕಳೆದುಕೊಳ್ಳುತ್ತಿದೆ. ಸರ್ವಾಧಿಕಾರಿಗಳಿಗೆ ಹಾನಿ ಉಂಟಾಗುತ್ತಿರುವ ಈ ಹೊತ್ತಿನಲ್ಲಿ ಈ ಇಮೇಜ್ ನಂಬುವವರ ನಂಬಿಕೆ ಮೇಲೆ ಘಾಸಿ ಮಾಡುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ಅವಮಾನಿಸುತ್ತದೆ. ಬಲಪಂಥೀಯ ನಾಯಕನ ಅವಿವೇಕತನವನ್ನು ತೋರಿಸುತ್ತದೆ" ಎಂದು ಟೀಕಿಸಿದರು.
ಇನ್ನೊಂದೆಡೆ ವ್ಯಾಟಿಕನ್ ವಕ್ತಾರ ಮೆಟ್ಟಿಯೋ ಬ್ರೂನಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕ್ರಿಶ್ಚಿಯನ್ನರ ಆಕ್ರೋಶಕ್ಕೆ ಬೆದರಿದ ವೈಟ್‌ಹೌಸ್ ಸ್ಪಷ್ಟೀಕರಣ
ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಪೋಪ್ ಫ್ರಾನ್ಸಿಸ್ ಬಗ್ಗೆ ಅಪಾರ ಗೌರವ ಇದೆ. ಪೋಪ್ ಫ್ರಾನ್ಸಿಸ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಮತ್ತು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ಹೋಗಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯಾಥೋಲಿಕ್ ಧರ್ಮಗುರುಗಳ ಬಗ್ಗೆ ಅಪಾರ ನಂಬಿಕೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಪ್ರತಿಪಾದಕರೂ ಹೌದು ಎಂದು ವೈಟ್ ಹೌಸ್ ಪ್ರೆಸ್ ಸೆಕ್ರೆಟರಿ ಕೆರೋಲಿನ್ ಲೀವಿಟ್ ಹೇಳಿದ್ಧಾಗಿ ಎಪಿ ವರದಿಮಾಡಿದೆ.