ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ; ಅಹಮಬಾದ್‌ನಲ್ಲಿ ನಡೆದ ದುರಂತ, 8 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ; ಅಹಮಬಾದ್‌ನಲ್ಲಿ ನಡೆದ ದುರಂತ, 8 ಮುಖ್ಯ ಅಂಶಗಳು

ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ; ಅಹಮಬಾದ್‌ನಲ್ಲಿ ನಡೆದ ದುರಂತ, 8 ಮುಖ್ಯ ಅಂಶಗಳು

ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ಧಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಗುರುವಾರ (ಜೂನ್ 12) ಅಪರಾಹ್ನ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ ಅಪಾಯಕ್ಕೀಡಾಗಿದೆ. ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. ನಮಗೆ ತಿಳಿದ ಇದುವರೆಗಿನ 8 ಅಂಶಗಳ ವಿವರ ಇಲ್ಲಿದೆ.

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಇಂದು (ಜೂನ್ 12) ಮಧ್ಯಾಹ್ನ ಟೇಕಾಫ್ ಆದ ವಿಮಾನ ಐದೇ ನಿಮಿಷಕ್ಕೆ ಪತನವಾಗಿದ್ದು, 242 ಪ್ರಯಾಣಿಕರ ಜೀವ ಅಪಾಯಕ್ಕೆ ಸಿಲುಕಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಇಂದು (ಜೂನ್ 12) ಮಧ್ಯಾಹ್ನ ಟೇಕಾಫ್ ಆದ ವಿಮಾನ ಐದೇ ನಿಮಿಷಕ್ಕೆ ಪತನವಾಗಿದ್ದು, 242 ಪ್ರಯಾಣಿಕರ ಜೀವ ಅಪಾಯಕ್ಕೆ ಸಿಲುಕಿದೆ. (PTI)

ಅಹಮಬಾದ್: ಲಂಡನ್‌ನ ಗಟ್‌ವಿಕ್ ಏರ್‌ಪೋರ್ಟ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಗುರುವಾರ ಅಪರಾಹ್ನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ ಅಪಾಯಕ್ಕೆ ಸಿಲುಕಿದೆ. ಏರ್‌ ಇಂಡಿಯಾ ಈ ಕಳವಳಕಾರಿ ವಿಚಾರವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದೆ. ದುರಂತಕ್ಕೀಡಾದ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅಪರಾಹ್ನ 1.38ಕ್ಕೆ ಹಾರಾಟ ಶುರುಮಾಡಿತ್ತು.

ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ

ಬೋಯಿಂಗ್ ಬಿ787 ವಿಮಾನವು (AI171) ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗಾಟ್‌ವಿಕ್‌ಗೆ ಗುರುವಾರ (ಜೂನ್ 12) ಅಪರಾಹ್ನ 1.38ಕ್ಕೆ ಹೊರಟಿತ್ತು. ಹಾರಾಟ ಆರಂಭಿಸಿದ ಐದೇ ನಿಮಿಷಕ್ಕೆ ವಿಮಾನ ನಿಲ್ದಾಣದ ಸಮೀಪವೇ ಇರುವ ಮೇಘನಿನಗರ ಪ್ರದೇಶದಲ್ಲಿ ಪತನವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ ಎಂದು ಏರ್ ಇಂಡಿಯಾ ಎಕ್ಸ್‌ ಖಾತೆಯ ಮೂಲಕ ಅಪ್ಡೇಟ್ ಮಾಡಿದೆ.

ಅಹಮಬಾದ್‌ ವಿಮಾನ ದುರಂತ; 8 ಮುಖ್ಯ ಅಂಶಗಳು

1) ವಿಮಾನ ದುರಂತದ ಕಾರಣ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಗ್ನಿಶಾಮಕ ಸೇವೆ, ಅಂಬುಲೆನ್ಸ್ ಸೇರಿ ತುರ್ತು ಸೇವೆಗಳ ಸಿಬ್ಬಂದಿ ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

2) ವಿಮಾನದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 242 ಜನ ಇದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ, 7 ಪೋರ್ಚುಗೀಸ್ ಪ್ರಜೆಗಳು ವಿಮಾನದಲ್ಲಿದ್ದರು. ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎಂದು ಹೇಳಲಾಗುತ್ತಿದ್ದು, ಖಚಿತವಾಗಿಲ್ಲ.

3) ವಿಮಾನ ದುರಂತ ಸ್ಥಳದಿಂದ ದಟ್ಟ ಕಪ್ಪು ಹೊಗೆ ಆಕಾಶಕ್ಕೇರಿದ್ದು, ಅದ ಫೋಟೋವನ್ನು ಪಿಟಿಐ ಸುದ್ದಿ ಸಂಸ್ಥೆ ಮೊದಲು ಶೇರ್ ಮಾಡಿದೆ. ವಿಮಾನ ನಿಲ್ದಾಣದ ಸಮೀಪ ಆಕಾಶದೆತ್ತರಕ್ಕೆ ಹೊಗೆ ಏರಿದ್ದು, ಕಳವಳ ಮೂಡಿಸಿದೆ. ವಿಮಾನ ಪತನದ ವಿಡಿಯೋಗಳು ಬಹಿರಂಗವಾಗತೊಡಗಿದ್ದು, ಒಂದು ವಿಡಿಯೋ ಇಲ್ಲಿದೆ.

4) ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಇದಾಗಿದ್ದು, ಅಹಮದಾಬಾದ್‌ನಿಂದ ಲಂಡನ್‌ನ ಗಾಟ್‌ವಿಕ್‌ಗೆ ಹೋಗುತ್ತಿತ್ತು. ವಿಮಾನವು ವೈದ್ಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಪತನವಾಗಿದ್ದು ಇದುವರೆಗೆ ಯಾವುದೇ ಸಾವು ನೋವಿನ ಮಾಹಿತಿ ಬಹಿರಂಗವಾಗಿಲ್ಲ.

5) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ನಾಗರಿಕ ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ನೇರ ಮಾತುಕತೆ ನಡೆಸಿದ್ದು, ಅಹಮದಾಬಾದ್‌ ವಿಮಾನ ಅಪಘಾತದ ಮಾಹಿತಿ ಪಡೆದುಕೊಂಡಿದ್ದು, ಫಾಲೋಅಪ್ ಮಾಡುತ್ತಿದ್ದಾರೆ.

6) ನಾಗರಿಕ ವಿಮಾನ ಯಾನ ಸಚಿವರ ಕಚೇರಿಯ ಹೇಳಿಕೆ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಘಾತದ ಪ್ರಾಥಮಿಕ ಮಾಹಿತಿ ನೀಡಿದ ಸಚಿವರು ಖುದ್ದಾಗಿ ವಿಮಾನ ಅಪಘಾತ ಸ್ಥಳಕ್ಕೆ ತೆರಳುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಹಾಗೂ ಇನ್ನಿತರ ತುರ್ತು ಅಗತ್ಯಗಳ ಮೇಲೆ ಸಚಿವರೇ ನಿಗಾ ಇರಿಸಿದ್ದಾರೆ.

7) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯ ಗೃಹ ಸಚಿವ, ಅಹಮದಾಬಾದ್ ಪೊಲೀಸ್ ಆಯುಕ್ತರ ಜತೆಗೆ ಮಾತನಾಡಿದ್ದು, ಕೇಂದ್ರೀಯ ನೆರವನ್ನು ಖಾತ್ರಿ ಪಡಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಹೇಳಿದೆ.

8) ತುರ್ತಾಗಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಹೇಳಿದ್ದು, ಸಮರೋಪಾದಿಯಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.