ಯುಎಇ ಹೆಣ್ಮಕ್ಕಳ ಅಲ್ ಅಯ್ಯಾಲ ಸ್ವಾಗತ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿ, ವಿಡಿಯೋ ವೈರಲ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸದ ವೇಳೆ ಸಿಕ್ಕ ಸ್ವಾಗತದ ವಿಡಿಯೋ ವೈರಲ್ ಆಗಿದೆ. ಯುಎಇ ಹೆಣ್ಮಕ್ಕಳ ಅಲ್ ಅಯ್ಯಾಲ ಸ್ವಾಗತ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಚ್ಚರಿಗೊಂಡಿರುವುದು ಗಮನಸೆಳೆದಿದೆ. ಏನಿದು ಅಲ್-ಅಯ್ಯಾಲ? ಇಲ್ಲಿದೆ ವಿವರ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸ ಕೈಗೊಂಡು ಅಲ್ಲಿಗೆ ತಲುಪಿದ ವೇಳೆ ಅವರಿಗೆ ಅಲ್ಲಿ ಸಿಕ್ಕ ಸ್ವಾಗತದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ, ಯುಎಇ ಹೆಣ್ಮಕ್ಕಳು ಕೂದಲು ಹರಡಿ ತಲೆ ಅಲ್ಲಾಡಿಸುತ್ತ ನೃತ್ಯ ಮಾಡಿ ಸ್ವಾಗತಿಸಿದ ಪರಿ ಕಂಡು ಸ್ವತಃ ಡೊನಾಲ್ಡ್ ಟ್ರಂಪ್ ಅಚ್ಚರಿಗೊಂಡು, ಏನಿದು ಎಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜೈಯದ್ ಅಲ್ ನಹ್ಯಾನ್ ಅವರನ್ನು ನಿಲ್ಲಿಸಿ ಕೇಳಿದ ದೃಶ್ಯ ವಿಡಿಯೋದಲ್ಲಿದೆ. ಯುಎಇ ಹೆಣ್ಮಕ್ಕಳು ಕೂದಲು ಹರಡಿ ತಲೆ ಅಲ್ಲಾಡಿಸುತ್ತ ಮಾಡಿದ ನೃತ್ಯದ ಈಗ ಜಗತ್ತಿನ ಗಮನಸೆಳದಿದೆ. ಇದು ಅಲ್ಲಿನ ಸಾಂಪ್ರದಾಯಿಕ ನೃತ್ಯ ಅಲ್ ಅಯ್ಯಾಲ ಎಂಬುದು ಬಹಿರಂಗವಾಗಿದೆ.
ಡೊನಾಲ್ಡ್ ಟ್ರಂಪ್‌ಗೆ ಸ್ವಾಗತ ಕೋರಿದ ವೈರಲ್ ವಿಡಿಯೋದಲ್ಲಿ ಏನಿದೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಇ ಅಧ್ಯಕ್ಷರ ಅರಮನೆಯಾದ ಕಾಸ್ರ್ ಅಲ್ ವಟನ್‌ನಲ್ಲಿ ಎರಡು ಸಾಲು ಹೆಣ್ಮಕ್ಕಳ ನಡುವೆ ನಡೆದು ಹೋಗುತ್ತಾರೆ. ಆಗ ಅಲ್ಲಿ, ಡ್ರಮ್ ಬಡಿತಕ್ಕೆ ಅನುಗುಣವಾಗಿ ಬಿಳಿ ನಿಲುವಂಗಿ ಧರಿಸಿದ ಹೆಣ್ಮಕ್ಕಳು ಉದ್ದ, ಕಪ್ಪು ಕೂದಲು ಹರಡಿ ತಲೆ ಅಲ್ಲಾಡಿಸುತ್ತಾ ಕುಣಿಯುತ್ತಾ ಅಮೆರಿಕ ಅಧ್ಯಕ್ಷರನ್ನು ಬರಮಾಡಿಕೊಳ್ಳುತ್ತಾರೆ. ಅವರ ಹಿಂದೆ ಪುರಷರು ನಿಂತಿರುವುದು ಕಂಡುಬರುತ್ತದೆ. ಈ ವಿಡಿಯೋ ವೈರಲ್ ಆಗಿದೆ.
ಏನಿದು ಅಲ್ ಅಯ್ಯಾಲ
ಯುನೆಸ್ಕೋ ವರದಿ ಪ್ರಕಾರ, ಅಲ್ ಅಯ್ಯಾಲ ಎಂಬುದು ವಾಯವ್ಯ ಒಮಾನ್‌ನ ಜನಪ್ರಿಯ ಸಾಂಪ್ರದಾಯಿಕ ನೃತ್ಯ ಪ್ರಾಕಾರ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉದ್ದಗಲಕ್ಕೂ ಇದು ಬಳಕೆಯಲ್ಲಿದೆ. ಇದು ಡ್ರಮ್ ಬಡಿತ, ಹಾಡು ಮತ್ತು ನೃತ್ಯಗಳನ್ನು ಒಳಗೊಂಡ ಸಾಂಪ್ರದಾಯಿಕ ನೃತ್ಯವಾಗಿದೆ. ಎರಡು ಸಾಲು ಮಹಿಳೆಯರು ಈ ನೃತ್ಯ ಮಾಡುತ್ತಿರಬೇಕಾದರೆ ಇವರ ಹಿಂಬದಿಯಲ್ಲಿ ಪುರುಷರು ಖಡ್ಗ ಅಥವಾ ಬಿದುರಿನ ಬೆತ್ತ ಹಿಡಿದು ನಿಂತಿರುತ್ತಾರೆ. ಒಂದು ರೀತಿಯ ಯುದ್ಧ ಸನ್ನಿವೇಶದ ಚಿತ್ರಣ ಇದರಲ್ಲಿದೆ. ಹಾಡು ಮತ್ತು ಡ್ರಮ್ ಬಡಿತಕ್ಕೆ ಅನುಗುಣವಾಗಿ ಹೆಣ್ಮಕ್ಕಳು ತಲೆಗೂದಲು ಹರಡಿ ಅತ್ತಿಂದಿತ್ತ, ಇತ್ತಿಂದತ್ತ ಅಲ್ಲಾಡಿಸುತ್ತ ನೃತ್ಯ ಮಾಡುವುದು ವಿಶೇಷ. ಯುಎಇನಲ್ಲಿ ಮಹಿಳೆಯರು ಕೂಡ ಈ ನೃತ್ಯ ಭಾಗವಾಗಿದ್ದು, ಸಾಂಪ್ರದಾಯಿಕ ಬಿಳಿ ನಿಲುವಂಗಿ ಧರಿಸಿ ಭಾಗವಹಿಸುತ್ತಾರೆ. ಇಲ್ಲಿದೆ ನೋಡಿ ವೈರಲ್ ವಿಡಿಯೋ
ಅಲ್ ಅಯ್ಯಾಲ ನೃತ್ಯವನ್ನು ಯಾವಾಗ ಮಾಡ್ತಾರೆ?
ಯುನೈಟೆಡ್ ಅರಬ್ ಎಮಿರೇಟ್ಸ್‌ಗಳಲ್ಲಿ ಸಾಮಾನ್ಯವಾಗಿ ಮದುವೆ ಸಂದರ್ಭಗಳಲ್ಲಿ ಅಲ್ - ಅಯ್ಯಾಲ ಎಂಬ ಸಾಂಪ್ರದಾಯಿಕ ನೃತ್ಯಗಳನ್ನು ಮಾಡ್ತಾರೆ. ಒಮಾನ್ ಸುಲ್ತಾನೇಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳಲ್ಲಿ ಹಬ್ಬಗಳ ಸಂದರ್ಭದಲ್ಲೂ ಜನ ಈ ಅಲ್ ಅಯ್ಯಾಲ ನೃತ್ಯ ಮಾಡುತ್ತಾರೆ. ಅಲ್ ಅಯ್ಯಾಲ ನೃತ್ಯದಲ್ಲಿ ಎಲ್ಲ ವಯೋಮಾನದವರು, ಪುರುಷರು ಮತ್ತು ಮಹಿಳೆಯರು ಹಾಗೂ ಸಮಾಜದ ಎಲ್ಲ ಸ್ತರದ ಜನರೂ ಭಾಗವಹಿಸುತ್ತಾರೆ ಎಂದು ವರದಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಲ್ಫ್ ಭಾಗದ ಮೂರು ದೇಶಗಳ ಪ್ರವಾಸ ಕೈಗೊಂಡು ಸೌದಿ ಅರೇಬಿಯಾದಿಂದ ಪ್ರವಾಸ ಶುರುಮಾಡಿದ್ದರು. ಅಲ್ಲಿಂದ ಅವರು ಕತಾರ್ ದೇಶಕ್ಕೆ ಭೇಟಿ ನೀಡಿದರು. ಅದಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ್ದರು. ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಡೊನಾಲ್ಡ್ ಟ್ರಂಪ್ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಯುನೈಟೆಡ್ ಅರಬ್ ಎಮಿರೇಟ್ಸ್ ಜತೆಗೆ 200 ಶತಕೋಟಿ ಡಾಲರ್ ವಹಿವಾಟಿನ ಡೀಲ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ಇದಲ್ಲದೇ ಎರಡೂ ದೇಶಗಳ ನಡುವೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸಹಕಾರ ವೃದ್ಧಿಯ ವಿಚಾರಕ್ಕೂ ಸಹಮತ ವ್ಯಕ್ತವಾಗಿದೆ.