Micronations: ಜಗತ್ತಿನ ಮೈಕ್ರೋನೇಷನ್‌ಗಳ ಬಗ್ಗೆ ಕುತೂಹಲ ಹುಟ್ಟಿಸಿದ ನಿತ್ಯಾನಂದನ ಕೈಲಾಸ: ಹೇಗಿದೆ ಈ ವಿಚಿತ್ರ ದೇಶಗಳ ವಿನ್ಯಾಸ?
ಸ್ವಯಂ-ಘೋಷಿತ ದೇವಮಾನವ ನಿತ್ಯಾನಂದ ಸ್ಥಾಪಿಸಿದ ದೇಶ ಎಂದು ಕರೆಯಲ್ಪಡುವ ಕೈಲಾಸದ ಪ್ರತಿನಿಧಿಗಳು, ಕಳೆದ ತಿಂಗಳು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಪ್ರಮುಖ ಸಭೆಯಲ್ಲಿ ಭಾಗವಹಿಸಿದ್ದರು. ಕೈಲಾಸದಂತೆ ಜಗತ್ತಿನ ಇತರೆಡೆಯೂ ಹಲವು ದೇಶಗಳಿದ್ದು, ಇದನ್ನು ಮೈಕ್ರೋನೇಷನ್ಸ್ ಎಂದು ಕರೆಯಲಾಗುತ್ತದೆ. ಜಗತ್ತಿನ ವಿವಿಧ ಭಾಗಗಳಲ್ಲಿರುವ ಮೈಕ್ರೋನೇಷನ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ..
ಸ್ವಯಂ-ಘೋಷಿತ ದೇವಮಾನವ ನಿತ್ಯಾನಂದ ಸ್ಥಾಪಿಸಿದ ದೇಶ ಎಂದು ಕರೆಯಲ್ಪಡುವ ಕೈಲಾಸದ ಪ್ರತಿನಿಧಿಗಳು, ಕಳೆದ ತಿಂಗಳು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಪ್ರಮುಖ ಸಭೆಯಲ್ಲಿ ಭಾಗವಹಿಸಿದ್ದರು. ಈ ಘಟನೆ ನಡೆದ ಬಳಿಕ ಕೈಲಾಸ ದೇಶದ ಬಗ್ಗೆ, ಜಾಗತಿಕವಾಗಿ ನೆಟ್ಟಿಗರ ಆಸಕ್ತಿ ಹೆಚ್ಚಿದೆ. ಕೈಲಾಸದಂತೆ ಜಗತ್ತಿನ ಇತರೆಡೆಯೂ ಹಲವು ದೇಶಗಳಿದ್ದು, ಇದನ್ನು ಮೈಕ್ರೋನೇಷನ್ಸ್ ಎಂದು ಕರೆಯಲಾಗುತ್ತದೆ. ಜಗತ್ತಿನ ವಿವಿಧ ಭಾಗಗಳಲ್ಲಿರುವ ಮೈಕ್ರೋನೇಷನ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ..
ಬಿಬಿಸಿ ಪ್ರಕಾರ ನಿತ್ಯಾನಂದ ಈಕ್ವೆಡಾರ್ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿದ್ದು, ಅಲ್ಲಿ ಅವರು ಕೈಲಾಸ ದೇಶವನ್ನು ಸ್ಥಾಪಿಸಿದ್ಧಾರೆ.
ಒಂದು ಕಾಲದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದ ನಿತ್ಯಾನಂದನನ್ನು, 2010ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅತ್ಯಾಚಾರ ಮತ್ತು ಅಪಹರಣದ ಆರೋಪ ಕೂಡ ನಿತ್ಯಾನಂದನ ಮೇಲಿದೆ. ಆದರೆ ಭಾರತದಿಂದ ಪಲಾಯನಗೈದ ನಿತ್ಯಾನಂದ ಈಕ್ವೆಡಾರ್ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ, ಕೈಲಾಸ ದೇಶವನ್ನು ನಿರ್ಮಿಸಿದ್ದಾನೆ.
ಮೈಕ್ರೋನೇಷನ್ಸ್ ಎಂದರೇನು?
ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ, ಮೈಕ್ರೊನೇಷನ್‌ಗಳು ಸ್ವತಂತ್ರ ಸಾರ್ವಭೌಮ ರಾಜ್ಯಗಳು ಎಂದು ಹೇಳಿಕೊಳ್ಳುವ ಸ್ವಯಂ-ಘೋಷಿತ ಘಟಕಗಳಾಗಿವೆ. ಆದರೆ ಇವುಗಳು ಜಗತ್ತಿನ ಇತರ ದೇಶಗಳಿಂದ ಮತ್ತು ವಿಶ್ವಸಂಸ್ಥೆಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿರುವುದಿಲ್ಲ.
ಅವುಗಳನ್ನು ಸಾಮಾನ್ಯವಾಗಿ ತಾತ್ವಿಕ ಪ್ರಯೋಗ, ರಾಜಕೀಯ ಪ್ರತಿಭಟನೆ, ಕಲಾತ್ಮಕ ಅಭಿವ್ಯಕ್ತಿ ಅಥವಾ ವಿನೋದಕ್ಕಾಗಿ ರಚಿಸಲಾಗಿದೆ. ಈ ಪೈಕಿ ಹಲವು ದೇಶಗಳು ತಮ್ಮದೇ ಆದ ಕರೆನ್ಸಿ, ಸಂವಿಧಾನ ಮತ್ತು ಸೈನ್ಯವನ್ನು ಹೊಂದಿವೆ.
ಗೂಗಲ್ ಮ್ಯಾಪ್ಸ್ ಪ್ರಕಾರ ಪ್ರಪಂಚದಲ್ಲಿ ಸುಮಾರು 80 ಮೈಕ್ರೊನೇಷನ್‌ಗಳಿವೆ. ಈ ಪೈಕಿ ಕೆಲವು ಮೈಕ್ರೋನೇಷನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ..
ಲಿಬರ್‌ಲ್ಯಾಂಡ್: 2015ರಲ್ಲಿ ಜೆಕ್ ರಾಜಕಾರಣಿ ಮತ್ತು ಕಾರ್ಯಕರ್ತ ವಿಟ್ ಜೆಡ್ಲಿಕಾ ಸ್ಥಾಪಿಸಿದ ದೇಶ ಇದಾಗಿದ್ದು, ಕೈಲಾಸದಂತೆಯೇ ಲಿಬರ್‌ಲ್ಯಾಂಡ್ ಕೂಡ ತನ್ನದೇ ಆದ ವೆಬ್‌ಸೈಟ್ ಹೊಂದಿದೆ. ಈ ದೇಶ ಕ್ರೊಯೇಷಿಯಾ ಮತ್ತು ಸೆರ್ಬಿಯಾ ನಡುವಿನ ಪ್ರದೇಶದಲ್ಲಿ ಅಸ್ತಿತ್ವ ಹೊಂದಿದೆ. ಲಿಬರ್‌ಲ್ಯಾಂಡ್‌ನಲ್ಲಿ ಇಬ್ಬರು ಉಪರಾಷ್ಟ್ರಪತಿ ಮತ್ತು ಐವರು ಮಂತ್ರಿಗಳಿದ್ದು, ಈ ದೇಶದ ಆಡಳಿತ ಭಾಷೆ ಇಂಗ್ಲಿಷ್ ಆಗಿದೆ.
ಸೀಲ್ಯಾಂಡ್: 1967ರಲ್ಲಿ ಮಿಲಿಟರಿ ಕೋಟೆಯ ಮೇಲೆ ಸ್ಥಾಪಿಸಲಾದ ಈ ಮೈಕ್ರೋನೇಷನ್, ಇಂಗ್ಲೆಂಡ್ ಕರಾವಳಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದೆ. ರಫ್ಸ್ ಟವರ್ ಎಂದು ಕರೆಯಲ್ಪಡುವ ಈ ಕೋಟೆಯನ್ನು ಬ್ರಿಟಿಷರು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಿರ್ಮಿಸಿದರು. ಆದರೆ ಯುದ್ಧವು ಕೊನೆಗೊಂಡ ಕೆಲವು ವರ್ಷಗಳ ನಂತರ, ರಾಯ್ ಬೇಟ್ಸ್ ತನ್ನ ರೇಡಿಯೊ ಸ್ಟೇಷನ್ ಅನ್ನು ಇಲ್ಲಿ ಸ್ಥಾಪಿಸಿದ. ನಂತರ ಆತ ಈ ಕೋಟೆ ದ್ವೀಪವನ್ನು "ಸೀಲ್ಯಾಂಡ್" ನ ಸ್ವತಂತ್ರ ರಾಜ್ಯವೆಂದು ಘೋಷಿಸಿದ. ಅದರ ವೆಬ್‌ಸೈಟ್ ಪ್ರಕಾರ ಸೀಲ್ಯಾಂಡ್‌ನ ಜನಸಂಖ್ಯೆಯು 70 ಆಗಿದೆ.
ಸ್ನೇಕ್ ಹಿಲ್ ಆಫ್ ಪ್ರಿನ್ಸಿಪಾಲಿಟಿ: ತೆರಿಗೆ ಪಾವತಿಸಲು ಸಾಧ್ಯವಾಗದೇ ರಾಷ್ಟ್ರವನ್ನು ತೊರೆದ ಕೆಲವು ಆಸ್ಟ್ರೇಲಿಯನ್ ನಿವಾಸಿಗಳು, 2003 ರಲ್ಲಿ ಈ ರಾಷ್ಟ್ರವನ್ನು ಸ್ಥಾಪಿಸದರು. ಪ್ರಿನ್ಸಿಪಾಲಿಟಿಯ ಅಧಿಕೃತ ಬ್ಲಾಗ್ ಪ್ರಕಾರ, ಆಸ್ಟ್ರೇಲಿಯಾ ಸರ್ಕಾರವು "ದುರದೃಷ್ಟಕರ ಭೂಮಿ"ಯಾಗಿದ್ದು, ಜನರ ಎಲ್ಲಾ ಹಣವನ್ನು ಕಸಿದುಕೊಳ್ಳುವ "ದುಷ್ಟ ರಾಷ್ಟ್ರ"ವಾಗಿದೆ. ರಾಜಕುಮಾರಿ ಹೆಲೆನಾ ಅವರು ಸ್ನೇಕ್ ಹಿಲ್‌ನ ರಾಜ್ಯ ಮುಖ್ಯಸ್ಥೆಯಾಗಿದ್ದು, ತಮ್ಮ ಪತಿ ಪ್ರಿನ್ಸ್ ಪಾಲ್ ಅವರ ಮರಣದ ನಂತರ ಸಿಂಹಾಸವೇರಿದ್ದಾರೆ.
ಎಲ್ಲೋರ್ ಸಾಮ್ರಾಜ್ಯ: ಮೈಕ್ರೊನೇಷನ್ ಎಲ್ಲೋರ್ ಸಾಮ್ರಾಜ್ಯವು ರೋಸ್ಕಿಲ್ಡ್ ಫ್ಜೋರ್ಡ್‌ನಲ್ಲಿದೆ. ಡ್ಯಾನಿಶ್ ದ್ವೀಪದ ಜಿಲ್ಯಾಂಡ್‌ನಲ್ಲಿ ಈ ದೇಶವಿದ್ದು, ಅದರ ವೆಬ್‌ಸೈಟ್ ಪ್ರಕಾರ ಎಲ್ಲೋರ್ 'L' ಆಕಾರದಲ್ಲಿದೆ. ಪೂರ್ವ-ಪಶ್ಚಿಮದಲ್ಲಿ 300 ಮೀ ಮತ್ತು ಉತ್ತರ-ದಕ್ಷಿಣ ದಿಕ್ಕಿನಲ್ಲಿ 200 ಕಿ.ಮೀ. ವ್ಯಾಪ್ತಿಯನ್ನು ಈ ದೇಶ ಹೊಂದಿದೆ. 1944ರಿಂದ ಈ ದೇಶ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದೆ.
ರಜನೀಶ್‌ಪುರಂ: ಒರೆಗಾನ್‌ನ ವಾಸ್ಕೋ ಕೌಂಟಿಯಲ್ಲಿ, ಭಾರತೀಯ ಆಧ್ಯಾತ್ಮಿಕ ಗುರು ರಜನೀಶ್ ಅವರ ಪ್ರಯತ್ನದ ಫಲವಾಗಿ ಈ ದೇಶ ಹುಟ್ಟಿಕೊಂಡಿದೆ. ರಜನೀಶ್‌ಪುರಂ ತನ್ನದೇ ಆದ ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿತ್ತು. ಇದನ್ನು 1981 ಮತ್ತು 1988ರ ನಡುವೆ ನಗರವಾಗಿ ಅಮೆರಿಕದೊಂದಿಗೆ ಸಂಯೋಜಿಸಲಾಯಿತು.
ವಿಭಾಗ