India-China Border Clash: ಇದು ಮೋದಿ ಸರ್ಕಾರ, ಭಾರತದ ಒಂದಿಂಚು ಭೂಮಿ ಪರರ ಪಾಲಾಗದು: ಅಮಿತ್ ಶಾ ಘರ್ಜನೆ
ತವಾಂಗ್ ಘರ್ಷಣೆ ಬಗ್ಗೆ ವಿಪಕ್ಷಗಳು ಸದನದಲ್ಲಿ ನಡೆದುಕೊಂಡ ಬಗೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತವಾಂಗ್ ಘರ್ಷಣೆಯನ್ನು ನೆಪ ಮಾಡಿಕೊಂಡು ವಿಪಕ್ಷಗಳು ಕಲಾಪವನ್ನು ಹಾಳು ಮಾಡಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ. ಭಾರತದ ಒಂದಿಂಚು ಭೂಮಿ ಪರರ ಪಾಲಾಗುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡದು ಎಂದು ಅಮಿತ್ ಶಾ ಇದೇ ವೇಳೆ ಭರವಸೆ ನೀಡಿದರು.
ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ತವಾಂಗ್ ಘರ್ಷಣೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನಕ್ಕೆ ನೀಡಿರುವ ಉತ್ತರದಿಂದ ತೃಪ್ತರಾಗದ ವಿಪಕ್ಷಗಳು, ಸಭಾತ್ಯಾಗ ನಡೆಸಿ ತಮ್ಮ ಅಸಮಾಧಾನವನ್ನು ಹೊರಹಾಕಿವೆ.
ಈ ಮಧ್ಯೆ ತವಾಂಗ್ ಘರ್ಷಣೆ ಬಗ್ಗೆ ವಿಪಕ್ಷಗಳು ಸದನದಲ್ಲಿ ನಡೆದುಕೊಂಡ ಬಗೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತವಾಂಗ್ ಘರ್ಷಣೆಯನ್ನು ನೆಪ ಮಾಡಿಕೊಂಡು ವಿಪಕ್ಷಗಳು ಕಲಾಪವನ್ನು ಹಾಳು ಮಾಡಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ. ಸಂಸತ್ತಿನ ಆವರಣದಲ್ಲಿ ಮಾತನಾಡಿದ ಅಮಿತ್ ಶಾ, ಭಾರತದ ಒಂದಿಂಚು ಭೂಮಿ ಪರರ ಪಾಲಾಗುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡದು ಎಂದು ದೇಶಕ್ಕೆ ಭರವಸೆ ನೀಡಿದರು.
ಪ್ರತಿಪಕ್ಷ ಕಾಂಗ್ರೆಸ್ ತವಾಂಗ್ ಘರ್ಷಣೆಯ ಕಾರಣಕ್ಕೆ ಸಭಾತ್ಯಾಗ ನಡೆಸಿರುವುದಾಗಿ ಹೇಳುತ್ತಿದೆ. ಆದರೆ ಪ್ರಶ್ನಾವಳಿ ಸಮಯದಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯಡಿ, ರಾಜೀವ್ ಗಾಂಧಿ ಪ್ರತಿಷ್ಠಾನದ (ಆರ್‌ಜಿಎಫ್) ಪರವಾನಗಿ ರದ್ದುಪಡಿಸುವ ವಿಚಾರವಾಗಿ ಚರ್ಚಿಸಲು ಸಿದ್ಧವಿಲ್ಲದ ಕಾಂಗ್ರೆಸ್ ಸಭಾತ್ಯಾಗ ನಡೆಸಿದೆ ಎಂದು ಅಮಿತ್ ಶಾ ಇದೇ ವೇಳೆ ಗಂಭೀರ ಆರೋಪ ಮಾಡಿದರು.
2005-07ರ ಅವಧಿಯಲ್ಲಿ ಚೀನಾದ ರಾಯಭಾರ ಕಚೇರಿಯು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಬರೋಬ್ಬರಿ 1.35 ಕೋಟಿ ರೂ. ದೇಣಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯಡಿ, ರಾಜೀವ್ ಗಾಂಧಿ ಪ್ರತಿಷ್ಠಾನದ (ಆರ್‌ಜಿಎಫ್) ಪರವಾನಗಿ ರದ್ದುಪಡಿಸಲು ಕೇಂದ್ರ ಗೃಹ ಇಲಾಖೆ ನಿರ್ಧರಿಸಿತ್ತು. ನಾನು ಈ ಕುರಿತು ಸದನಕ್ಕೆ ಉತ್ತರ ನೀಡಲು ಬಯಸಿದ್ದೆ ಎಂದು ಅಮಿತ್ ಶಾ ಇದೇ ವೇಳೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಏತಕ್ಕಾಗಿ ಸಭಾತ್ಯಾಗ ಮಾಡಿದ್ದು ಎಂಬುದನ್ನು ದೇಶದ ಜನತೆಗೆ ತಿಳಿಸಲಿ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ತವಾಂಗ್ ಘರ್ಷಣೆಯನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಮಿತ್ ಶಾ ಇದೇ ವೇಳೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತವಾಂಗ್ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಘರ್ಷಣೆಯಲ್ಲಿ ಭಾರತೀಯ ಸೈನಿಕರಿಗೆ ಗಂಭೀರ ಗಾಯಗಳಾಗಿಲ್ಲ ಮತ್ತು ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೂ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು, ಕಲಾಪವನ್ನು ಹಾಳು ಮಾಡುವ ಉದ್ದೇಶದಿಂದ ಗದ್ದಲ್ಲ ಎಬ್ಬಿಸಿದವು ಎಂದು ಅಮಿತ್ ಶಾ ಕಿಡಿಕಾರಿದರು.
ದೇಶದ ಗಡಿಗಳು ಸುರಕ್ಷಿತವಾಗಿದ್ದು, ಯಾರೂ ಭಯಪಡಬೇಕಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭಾರತದ ಒಂದಿಂಚು ಭೂಮಿಯನ್ನೂ ಬೇರೆಯವರಿಗೆ ಬಿಟ್ಟು ಕೊಡುವುದಿಲ್ಲ. ಚೀನಾದ ಗಡಿ ಕ್ಯಾತೆಗಳನ್ನು ನಮ್ಮ ದಿಟ್ಟ ಸೇನೆ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಮಿತ್ ಶಾ ಇದೇ ವೇಳೆ ಗಟ್ಟಿ ಧ್ವನಿಯಲ್ಲಿ ಹೇಳಿದರು.
ಸಂಬಂಧಿತ ಸುದ್ದಿ
India-China Border Clash: ಏನ್ಮಾಡೋದು ಮೋದಿ ಸರ್ಕಾರಕ್ಕೆ ಕಿವಿಯೇ ಇಲ್ಲ: ತವಾಂಗ್ ಗಡಿ ಘರ್ಷಣೆ ಬಗ್ಗೆ ಖರ್ಗೆ ಹೇಳಿದ್ದೇನು?
ಅರುಣಾಚಲ ಪ್ರದೇಶದ ತವಾಂಗ್ ಬಳಿಯ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆದ, ಭಾರತ-ಚೀನಾ ಯೋಧರ ನಡುವಿನ ಘರ್ಷಣೆ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಘಟನೆಯ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ವಿಪಕ್ಷಗಳ ಮಾತು ಕೇಳಲು ಸಿದ್ಧವಿಲ್ಲ ಎಂದು ಕಿಡಿಕಾರಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.