Amit Shah: 'ಪೊಳ್ಳು ಭರವಸೆಗಳನ್ನು ಗುಜರಾತ್ ತಿರಸ್ಕರಿಸಿದೆ': ಗೆಲುವು ಸನಿಹವಾಗುತ್ತಿದ್ದಂತೆ ಅಮಿತ್ ಶಾ ವಾಗ್ದಾಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amit Shah: 'ಪೊಳ್ಳು ಭರವಸೆಗಳನ್ನು ಗುಜರಾತ್ ತಿರಸ್ಕರಿಸಿದೆ': ಗೆಲುವು ಸನಿಹವಾಗುತ್ತಿದ್ದಂತೆ ಅಮಿತ್ ಶಾ ವಾಗ್ದಾಳಿ

Amit Shah: 'ಪೊಳ್ಳು ಭರವಸೆಗಳನ್ನು ಗುಜರಾತ್ ತಿರಸ್ಕರಿಸಿದೆ': ಗೆಲುವು ಸನಿಹವಾಗುತ್ತಿದ್ದಂತೆ ಅಮಿತ್ ಶಾ ವಾಗ್ದಾಳಿ

“ಗುಜರಾತ್ ರಾಜ್ಯವು ಪೊಳ್ಳು ಭರವಸೆಗಳನ್ನು ನೀಡುವವರನ್ನು ತಿರಸ್ಕರಿಸುತ್ತದೆ. ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ಅನುಸರಿಸುವವರನ್ನು ಅಪ್ಪಿಕೊಳ್ಳುತ್ತದೆ” ಎಂದು ಶಾ ಹೇಳಿದ್ದಾರೆ. ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಸಿಆರ್ ಪಾಟೀಲ್ ಸೇರಿದಂತೆ ಪಕ್ಷದ ನಾಯಕತ್ವಕ್ಕೆ ಶಾ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (ANI)

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವು ಖಚಿತವಾಗುತ್ತಿದ್ದಂತೆ, ಪಕ್ಷದ ಸಂಭ್ರಮ ಜೋರಾಗಿದೆ. ಹೊಸ ಸರ್ಕಾರದ ಪದಗ್ರಹಣಕ್ಕೂ ಮುಹೂರ್ತ ನಿಗದಿಯಾಗಿದೆ. ಗೆಲುವಿನ ನಡುವೆ ಪ್ರತಿಪಕ್ಷಗಳ ಸೋಲಿಗೆ ಟೀಕೆಯೂ ಆರಂಭವಾಗಿದೆ. ಚುನಾವಣೆಯಲ್ಲಿ ಬಹುಮತದತ್ತ ಮುನ್ನಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್‌ ಪಕ್ಷದತ್ತ ಟೀಕೆಗಳ ಸುರಿಮಳೆಗೈದಿದ್ದಾರೆ. 'ಪೊಳ್ಳು ಭರವಸೆಗಳನ್ನು ನೀಡುವವರನ್ನು ರಾಜ್ಯವು ತಿರಸ್ಕರಿಸಿದೆ' ಎಂದು ಟ್ವೀಟ್ ಮಾಡಿದ್ದಾರೆ.

“ಗುಜರಾತ್ ರಾಜ್ಯವು ಪೊಳ್ಳು ಭರವಸೆಗಳನ್ನು ನೀಡುವವರನ್ನು ತಿರಸ್ಕರಿಸುತ್ತದೆ. ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ಅನುಸರಿಸುವವರನ್ನು ಅಪ್ಪಿಕೊಳ್ಳುತ್ತದೆ” ಎಂದು ಶಾ ಹೇಳಿದ್ದಾರೆ. ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಸಿಆರ್ ಪಾಟೀಲ್ ಸೇರಿದಂತೆ ಪಕ್ಷದ ನಾಯಕತ್ವಕ್ಕೆ ಶಾ ಅಭಿನಂದನೆ ಸಲ್ಲಿಸಿದ್ದಾರೆ.

“ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ಗೆಲುವು ಬಿಜೆಪಿಗೆ ಅಭೂತಪೂರ್ವ ಜನಾದೇಶವನ್ನು ನೀಡಿದೆ. ಮಹಿಳೆಯರು, ಯುವಕರು ಮತ್ತು ರೈತರು ಪ್ರತಿಯೊಂದು ಜನಸಮೂಹವೂ ಬಿಜೆಪಿ ಜತೆಗಿದೆ ಎಂಬುದು ಖಾತ್ರಿಯಾಗಿದೆ. ಗುಜರಾತ್ ಯಾವಾಗಲೂ ಇತಿಹಾಸ ನಿರ್ಮಿಸುವ ಕೆಲಸ ಮಾಡಿದೆ,” ಎಂದು ಹೊಗಳಿದ್ದಾರೆ.

“ಕಳೆದ ಎರಡು ದಶಕಗಳಿಂದ ಮೋದಿಜಿಯವರ ನಾಯಕತ್ವದಲ್ಲಿ, ಬಿಜೆಪಿ ಅಭಿವೃದ್ಧಿಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇಂದು ರಾಜ್ಯದ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ಈ ಹಿಂದಿನ ವಿಜಯದ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಈ ಐತಿಹಾಸಿಕ ವಿಜಯಕ್ಕಾಗಿ ನಾನು ಗುಜರಾತ್ ಜನತೆಗೆ ವಂದನೆ ಸಲ್ಲಿಸುತ್ತೇನೆ,” ಎಂದು ಶಾ ಘೋಷಿಸಿದ್ದಾರೆ.

ಅತ್ತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡಾ ಗುಜರಾತ್‌ನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದು 'ಐತಿಹಾಸಿಕ' ಗೆಲುವು, 'ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಬದ್ಧತೆಯ' ಪ್ರತಿಬಿಂಬ ಎಂದು ಟ್ವೀಟ್ ಮಾಡಿದ್ದಾರೆ.

ಅತ್ತ ಗೆಲುವು ಖಚಿತವಾಗುತ್ತಿದ್ದಂತೆಯೇ, ಹಾಲಿ ಸಿಎಂ ಭೂಪೇಂದ್ರ ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷ ಘೋಷಿಸಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತಾ ಶಾ ಸೇರಿದಂತೆ ಪಕ್ಷದ ಹಿರಿಯರು ಸಿಎಂಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಸಿಎಂ ಪಟೇಲ್ ಟ್ವೀಟ್ ಮಾಡಿದ್ದು, “ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಅಭಿನಂದಿಸಿದ್ದಾರೆ. ಇದು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಬಿಜೆಪಿ ಸರ್ಕಾರದ ಮೇಲೆ ಜನರ ಅಚಲ ನಂಬಿಕೆಯ ಗೆಲುವು. ಧನ್ಯವಾದಗಳು ಗುಜರಾತ್”, ಎಂದು ಹೇಳಿದ್ದಾರೆ

ಗುಜರಾತ್‌ನ ಒಟ್ಟು 182 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಹಾದಿಯಲ್ಲಿದೆ. ಮಧ್ಯಾಹ್ನ 3.30ರ ಟ್ರೆಂಡ್‌ ಪ್ರಕಾರ ಕೇಸರಿ ಪಕ್ಷವು 61 ಸ್ಥಾನಗಳನ್ನು ಗೆದ್ದಿದೆ. ಇದೇ ವೇಳೆ 96 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ಸಾಂಪ್ರದಾಯಿಕ ಎದುರಾಳಿಯಾಗಿರುವ ಕಾಂಗ್ರೆಸ್ ಇದುವರೆಗೆ ಕೇವಲ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಡಿಸೆಂಬರ್ 1 ಮತ್ತು 5ರಂದು ಗುಜರಾತ್ ವಿಧಾನಸಭೆಗೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಎಕ್ಸಿಟ್ ಪೋಲ್‌ಗಳು ಕೂಡಾ ಪ್ರಧಾನಿ ಮೋದಿ ಪಕ್ಷಕ್ಕೆ ಬಹುಮತ ನೀಡಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.