ಆಂಧ್ರದ ಲೋಕಲ್ ಚುನಾವಣೆಗೆ ಸ್ಪರ್ಧಿಸಬೇಕಾದರೆ 2ಕ್ಕಿಂತ ಹೆಚ್ಚು ಮಕ್ಕಳಿರಬೇಕಂತೆ; ಮಕ್ಕಳ ನೀತಿ ಪರಿಶೀಲಿಸುತ್ತಿದೆ ಚಂದ್ರಬಾಬು ನಾಯ್ದು ಸರ್ಕಾರ
Andhra Child Policy: ಎರಡು ಮಕ್ಕಳ ನೀತಿ ವಿಚಾರ ಈಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಆಂಧ್ರದ ಲೋಕಲ್ ಚುನಾವಣೆಗೆ ಸ್ಪರ್ಧಿಸಬೇಕಾದರೆ 2ಕ್ಕಿಂತ ಹೆಚ್ಚು ಮಕ್ಕಳಿರಬೇಕು ಎಂದು ಸರ್ಕಾರ ಹೇಳತೊಡಗಿದೆ. ಇದಕ್ಕೆ ಸಂಬಂಧಿಸಿದ ಮಕ್ಕಳ ನೀತಿಯನ್ನು ಚಂದ್ರಬಾಬು ನಾಯ್ದು ಸರ್ಕಾರ ಪರಿಶೀಲಿಸುತ್ತಿದೆ.

Andhra Child Policy: ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸುವ ಮೂರು ದಶಕಗಳ ಹಳೆಯ ಕಾನೂನನ್ನು ಆಂಧ್ರ ವಿಧಾನಸಭೆ ರದ್ದುಗೊಳಿಸಿದ ಕೆಲವೇ ತಿಂಗಳ ನಂತರ ಅವರು ಇದನ್ನು ಹೇಳಿದ್ದಾರೆ. ವಯೋವೃದ್ಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಕ್ಕಳ ಸಂಖ್ಯೆ ಕಡಿಮೆ ಇದೆ. ಇದರಲ್ಲಿ ಸಮತೋಲ ಕಾಣಬೇಕು. ತೆಲುಗರು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಚಂದ್ರಬಾಬು ನಾಯ್ಡು ಕಳೆದ 10 ವರ್ಷಗಳಿಂದ ಪ್ರತಿಪಾದಿಸುತ್ತ ಬಂದಿದ್ದಾರೆ.
ಆಂಧ್ರದ ಲೋಕಲ್ ಚುನಾವಣೆಗೆ ಸ್ಪರ್ಧಿಸಬೇಕಾದರೆ 2ಕ್ಕಿಂತ ಹೆಚ್ಚು ಮಕ್ಕಳಿರಬೇಕಂತೆ
ಇತ್ತೀಚೆಗೆ ತಿರುಪತಿ ಸಮೀಪದ ನಾರಾವರಿಪಲ್ಲೆ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, "ಎರಡಕ್ಕಿಂತ ಹೆಚ್ಚು ಮಕ್ಕಳಿಲ್ಲದ ಜನರಷ್ಟೇ ಸ್ಥಳೀಯ ಸಂಸ್ಥೆ ಮತ್ತು ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ನೀಡುವ ಶಾಸನವನ್ನು ಈ ಹಿಂದೆ ಹೊಂದಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಡಿಮೆ ಮಕ್ಕಳು ಇರುವಂಥವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೇಳುತ್ತೇನೆ. ಭವಿಷ್ಯದಲ್ಲಿ ನೀವು ಸರಪಂಚ್, ಪುರಸಭೆ ಸದಸ್ಯ ಅಥವಾ ಮೇಯರ್ ಆಗಬೇಕು ಎಂದರೆ ನಿಮಗೆ 2ಕ್ಕಿಂತ ಹೆಚ್ಚು ಮಕ್ಕಳಿರಬೇಕು. ಈ ಪ್ರಸ್ತಾವಿತ ನಿಯಮಗಳ ಪರಿಶೀಲನೆ ನಡೆಸಿ ಅಂತಿಮಗೊಳಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಈ ಹೇಳಿಕೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ನೆರೆ ರಾಜ್ಯ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಇದೇ ರೀತಿ ಹೇಳಿಕೆ ನೀಡಿರುವುದು ರಾಜಕೀಯ ಚರ್ಚೆಗೂ ಕಾರಣವಾಗಿದೆ.
2ಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ಹಲವು ಅನುಕೂಲ
ಆಂಧ್ರ ಪ್ರದೇಶ ವಿಧಾನಸಭೆ 2024ರ ನವೆಂಬರ್‌ನಲ್ಲಿ ಮೂರು ದಶಕ ಹಳೆಯ 2 ಮಕ್ಕಳ ನೀತಿಯನ್ನು ರದ್ದುಗೊಳಿಸಿತು. ಇದಾದ ಬಳಿಕ, 2ಕ್ಕಿಂತ ಹೆಚ್ಚು ಮಕ್ಕಳು ಇರುವಂತಹ ಕುಟುಂಬಕ್ಕೆ ಹಲವು ಅನುಕೂಲ ನೀಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ಇಂತಹ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಕ್ಕಿ ವಿತರಣೆಯೂ ಸೇರಿದೆ.
ಪಂಚಾಯತ್ ಮತ್ತು ಮುನ್ಸಿಪಲ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಸೇರಿದಂತೆ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಹಲವು ಅನುಕೂಲಗಳನ್ನು ನೀಡಲಿದ್ದೇನೆ ಎಂದು ಹೇಳಿದ ನಾಯ್ಡು, ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಹೆಚ್ಚಿನ ಸಬ್ಸಿಡಿ ಅಕ್ಕಿಯನ್ನು ನೀಡುವ ಪ್ರಸ್ತಾವನೆ ಪರಿಶೀಲಿಸುತ್ತಿರುವುದಾಗಿ ಹೇಳಿದರು. ಪ್ರಸ್ತುತ ಪ್ರತಿ ಕುಟುಂಬಕ್ಕೆ 25 ಕೆಜಿ ಸಬ್ಸಿಡಿ ಅಕ್ಕಿ ಮಿತಿ ಇದ್ದು, ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಸಿಗುತ್ತಿದೆ.
ನವ ಪೀಳಿಗೆ ಕುಸಿತ: ಭಾರತಕ್ಕಿದು ಎಚ್ಚರಿಕೆ ಘಂಟೆ
ಜಪಾನ್, ಕೊರಿಯಾ ಮತ್ತು ಅನೇಕ ಯುರೋಪ್ ರಾಷ್ಟ್ರಗಳು ಕುಟುಂಬ ಯೋಜನೆ ನೀತಿಯನ್ನು ಪ್ರೋತ್ಸಾಹಿಸಿವೆ. ಅಲ್ಲಿ ಒಟ್ಟು ಫಲವತ್ತತೆ ದರವು ತೀರಾ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಈ ದೇಶಗಳು ಇಂದು ವಯಸ್ಸಾದ ಜನಸಂಖ್ಯೆ ಹೆಚ್ಚಳದ ಬಗ್ಗೆ ಕಾಳಜಿಯೊಂದಿಗೆ ಹೋರಾಡುತ್ತಿವೆ ಮತ್ತು ಭಾರತೀಯರನ್ನು ತಮ್ಮ ದೇಶಗಳಿಗೆ ಬಂದು ನೆಲೆಸುವಂತೆ ಆಹ್ವಾನಿಸುತ್ತಿವೆ ಎಂಬುದರ ಕಡೆಗೆ ಗಮನಸೆಳೆದ ಚಂದ್ರಬಾಬು ನಾಯ್ಡು ಇದು ಭಾರತಕ್ಕೆ ಎಚ್ಚರಿಕೆ ಘಂಟೆ ಎಂದಿದ್ದಾರೆ.
"ಇದು ಭಾರತಕ್ಕೂ ಎಚ್ಚರಿಕೆಯ ಘಂಟೆಯಾಗಿದೆ. ಕಡಿಮೆ ಮಕ್ಕಳಿರುವ ಕುಟುಂಬ ಯೋಜನೆ ಪರಿಕಲ್ಪನೆಯನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ಸೀಮಿತ ಸಂಖ್ಯೆಯ ಮಕ್ಕಳನ್ನು ಹೊಂದಲು ಕುಟುಂಬಗಳನ್ನು ನಿರ್ಬಂಧಿಸುತ್ತಿದ್ದೇವೆ. ಮುಂದೆ ಭಾರತವೂ ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಆ ಹೊತ್ತಿಗೆ ಎಚ್ಚರವಾಗುವ ಬದಲು ಈಗಲೇ ಸಮತೋಲನ ಕಂಡುಕೊಂಡರೆ ಒಳಿತು. ಇದು 2047ರ ಹೊತ್ತಿಗೆ ಫಲ ನೀಡಬಹುದು ಎಂದು ಅವರು ಹೇಳಿದ್ದಾರೆ.
ಎರಡು ಮಕ್ಕಳ ನೀತಿಯನ್ನು ಎಲ್ಲಾ ದಕ್ಷಿಣ ಭಾರತದ ರಾಜ್ಯಗಳು ಅನುಸರಿಸುತ್ತವೆ. ಹೀಗಾಗಿ ಈ ರಾಜ್ಯಗಳಲ್ಲಿ ಒಟ್ಟು ಫಲವತ್ತತೆ ದರ 1.73 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ 2.1 ಕ್ಕಿಂತ ಕಡಿಮೆಯಾಗಿದೆ. ಆದರೆ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಜಾರ್ಖಂಡ್‌ಗಳ ಒಟ್ಟು ಫಲವತ್ತತೆ ದರ 2.4 ಇದ್ದು, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.
