ಲೋಕಸಭೆ ಚುನಾವಣೆ 2024; ಪಕ್ಷದ ಪ್ರಚಾರಕ್ಕೆ ಕಾಂಡೋಮ್ ಬಳಕೆ, ವೈಎಸ್‌ಆರ್ ಕಾಂಗ್ರೆಸ್, ಟಿಡಿಪಿ ನಡುವೆ ವಿಡಿಯೋ ಸಮರ
ಲೋಕಸಭೆ ಚುನಾವಣೆ 2024ರ ಕಾವು ಏರತೊಡಗಿದ್ದು, ಆಂಧ್ರಪ್ರದೇಶದಲ್ಲಿ ಪಕ್ಷದ ಪ್ರಚಾರಕ್ಕೆ ಕಾಂಡೋಮ್ ಬಳಕೆ ಆಗುತ್ತಿರುವುದು ಗಮನಸೆಳೆದಿದೆ. ಇದೇ ವಿಚಾರವಾಗಿ ವೈಎಸ್‌ಆರ್ ಕಾಂಗ್ರೆಸ್, ಟಿಡಿಪಿ ನಡುವೆ ವಿಡಿಯೋ ಸಮರ ನಡೆದಿದೆ.
ಲೋಕಸಭೆ ಚುನಾವಣೆ 2024ರ ಕಾವು ಏರತೊಡಗಿದ್ದು, ಆಂಧ್ರಪ್ರದೇಶದಲ್ಲಿ ಪ್ರಚಾರಕ್ಕೆ ಕಾಂಡೋಮ್ ಬಳಕೆಯಾಗಿರುವುದು ಗಮನಸೆಳೆದಿದೆ. ಈ ವಿಚಾರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್‌ಸಿಪಿ ) ಮತ್ತು ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ವಿಡಿಯೋ ವಾರ್ ನಡೆದಿದೆ.
ಎರಡೂ ಪಕ್ಷಗಳು ಕಾಂಡೋಮ್ಗಳನ್ನು ಪ್ರದರ್ಶಿಸುವ ವಿಡಿಯೋಗಳನ್ನು ಫೆ 21 ರಂದು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿವೆ. ಇದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅದರಲ್ಲಿ ಕಾಂಡೋಮ್ ಪ್ಯಾಕೆಟ್ ಮೇಲೆ ಪಕ್ಷಗಳ ಹೆಸರು, ಚಿಹ್ನೆಗಳು ಮುದ್ರಿತವಾಗಿದ್ದು, ವೈರಲ್ ಆಗಿದೆ.
ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯ ಟ್ವೀಟ್‌ನಲ್ಲಿರುವುದೇನು
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಎಕ್ಸ್ ಖಾತೆಯಲ್ಲಿ ಡೆಕ್ಕನ್ 24X7 ಖಾತೆಯ ಟ್ವೀಟ್ ಮರುಟ್ವೀಟ್ ಆಗಿದ್ದು, ಅದಕ್ಕೆ , "ಅಂತಿಮವಾಗಿ ತಮ್ಮ ಪಕ್ಷದ ಪ್ರಚಾರಕ್ಕೆ ಜನರಿಗೆ ಕಾಂಡೋಮ್ ವಿತರಿಸುವ ಮಟ್ಟಕ್ಕೆ ಬಂತು ತೆಲುಗುದೇಶಂ ಪಾರ್ಟಿ. ಇದೆಂತಹ ಪ್ರಚಾರದ ಹುಚ್ಚು. ಮುಂದೆ ವಯಾಗ್ರಾವನ್ನೂ ಹಂಚುತ್ತಾರೋನೋ, ಕನಿಷ್ಠ ಅಷ್ಟಕ್ಕಾದರೂ ನಿಲ್ಲಿಸುತ್ತಾರೋ ಏನೋ, ಅಥವಾ ಇನ್ನೂ ಕೆಳಮಟ್ಟಕ್ಕೆ ಇಳಿಯುತ್ತಾರೋ ಗೊತ್ತಿಲ್ಲ ಎಂದು ಸ್ಟೇಟಸ್ ಅಪ್ಡೇಟ್ ಮಾಡಿದೆ. ಇದರಲ್ಲಿ, ಟಿಡಿಪಿ, ಚಂದ್ರಬಾಬು ನಾಯ್ಡು, ಲೋಕೇಶ್ ನಾರಾ, ಪವನ್ ಕಲ್ಯಾಣ್ ಅವರನ್ನು ಟ್ಯಾಗ್ ಮಾಡಲಾಗಿದೆ.
ವೈಎಸ್‌ಆರ್‌ಸಿಪಿ ಎಂದು ಬರೆದ ಕಾಂಡೋಮ್ ಪ್ಯಾಕೆಟ್ ವಿಡಿಯೋ ಶೇರ್ ಮಾಡಿದ ಟಿಡಿಪಿ
ಟಿಡಿಪಿಯು ತನ್ನ ಪ್ರಚಾರದ ಭಾಗವಾಗಿ ಜನರಿಗೆ ಕಾಂಡೋಮ್‌ಗಳನ್ನು ವಿತರಿಸುತ್ತಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಟೀಕಿಸಿ ವಿಡಿಯೋ ಶೇರ್ ಮಾಡಿದ ಬೆನ್ನಿಗೆ, ಮತ್ತೊಂದು ವಿಡಿಯೋ ಶೇರ್ ಮಾಡಿ ಟಿಡಿಪಿ ತಿರುಗೇಟು ನೀಡಿದೆ.
ಆ ವಿಡಿಯೋದಲ್ಲಿ ವೈಎಸ್‌ಆರ್‌ಸಿಪಿ ಎಂದು ಬರೆದ ಕಾಂಡೋಮ್ ಪ್ಯಾಕೆಟ್ ಇದ್ದು, ಹೀಗೆ ಸಿದ್ಧಂ! ಸಿದ್ಧಂ ಎಂದು ಕೂಗುತ್ತಿದ್ದುದು ಇದಕ್ಕೇನಾ, ಇಂತಹ ಕೀಳುಮಟ್ಟದ ಪ್ರಚಾರದ ಬದಲು ಶವ ಮೇಲೆ ಬಿಸಾಕಿದ ನಾಣ್ಯಗಳನ್ನು ಹೆಕ್ಕಿಕೊಳ್ಳಬಹುದಲ್ಲ ಎಂದು ವೈಎಸ್‌ಆರ್‌ಸಿಪಾರ್ಟಿ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷವು ಫೆಬ್ರವರಿ 21 ರಂದು ಸಂಜೆ 4 ಗಂಟೆಗೆ ವಿಡಿಯೋವನ್ನು ಟ್ವೀಟ್ ಮಾಡಿದೆ. ಅದೇ ದಿನ ಸಂಜೆ 6 ಗಂಟೆ ಸುಮಾರಿಗೆ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಟಿಡಿಪಿ ಆರೋಪಕ್ಕೆ ಪ್ರತ್ಯುತ್ತರ ನೀಡಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರನ್ನು ಆಕರ್ಷಿಸಲು ಭಾರತದಾದ್ಯಂತ ರಾಜಕೀಯ ಪಕ್ಷಗಳು ಪ್ರಚಾರ ನಡೆಸುತ್ತಿರುವ ಸಮಯದಲ್ಲಿ ಈ ಆರೋಪಗಳು ಬಂದಿವೆ.
ಸೋಷಿಯಲ್ ಮೀಡಿಯಾದಲ್ಲಿ ಎರಡೂ ಪಕ್ಷಗಳ ಟ್ವೀಟ್‌ಗಳಿಗೆ ಭರ್ಜರಿ ಕಾಮೆಂಟ್
ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ ಮತ್ತು ತೆಲುಗು ದೇಶಂ ಪಾರ್ಟಿ ಮಾಡಿರುವ ಟ್ವೀಟ್‌ಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಕಾಮೆಂಟ್‌ಗಳು ಕಂಡುಬಂದಿವೆ. ಬಹುತೇಕ ಪ್ರತಿಕ್ರಿಯೆಗಳು ಬೈಗುಳಗಳಿಂದ ಕೂಡಿದ್ದರೆ, ಇನ್ನು ಕೆಲವು ಹಾಸ್ಯಭರಿತವಾಗಿವೆ. ಇನ್ನು ಕೆಲವು ಲೇವಡಿ ಮಾಡುವಂತೆ ಇವೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷ ರೀಟ್ವೀಟ್ ಮಾಡಿದ ವಿಡಿಯೋ 45 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದರೆ, ಟಿಡಿಪಿ ಶೇರ್ ಮಾಡಿದ ವಿಡಿಯೋಕ್ಕೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)