Tirupati Temple: ತಿರುಪತಿ ಭಕ್ತಾದಿಗಳ ಗಮನಕ್ಕೆ; ನಾಳೆ ಅರ್ಜಿತ ಸೇವಾ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿರುವ ಟಿಟಿಡಿ
Arjitha Seva Tickets: ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಅರ್ಜಿತ ಸೇವೆಗೆ ಆನ್ಲೈನ್ ಟಿಕೆಟ್‌ಗಳ ಕೋಟಾವನ್ನು ನಾಳೆ (ಜುಲೈ 18) ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬಿಡುಗಡೆ ಮಾಡಲಿದೆ.
ತಿರುಮಲ (ಆಂಧ್ರಪ್ರದೇಶ): ಅಕ್ಟೋಬರ್ ತಿಂಗಳಲ್ಲಿ ನಡೆಯುವ ತಿರುಪತಿ ತಿಮ್ಮಪ್ಪನ ಅರ್ಜಿತ ಸೇವೆಗೆ ಆನ್ಲೈನ್ ಟಿಕೆಟ್‌ಗಳ ಕೋಟಾವನ್ನು ನಾಳೆ (ಜುಲೈ 18, ಮಂಗಳವಾರ) ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬಿಡುಗಡೆ ಮಾಡಲಿದೆ.
ಶ್ರೀವಾರಿಯ ವಿಶೇಷ ದರ್ಶನ ಮಾಡಲಿಚ್ಛಿಸುವ ಭಕ್ತಾದಿಗಳು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ https://www.tirumala.org/ ಟಿಕೆಟ್ ಬುಕ್ ಮಾಡಬಹುದಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಟಿಕೆಟ್ ಬುಕಿಂಗ್ಗೆ ಪೋರ್ಟಲ್ ತೆರೆಯಲಾಗುತ್ತದೆ ಹಾಗೂ ಜುಲೈ 20 (ಗುರುವಾರ) ಟಿಕೆಟ್ ಬುಕಿಂಗ್ಗೆ ಕೊನೆಯ ದಿನವಾಗಿದೆ.
ಟಿಟಿಡಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಅಕ್ಟೋಬರ್ ತಿಂಗಳ ಸುಪ್ರಭಾತಂ, ತೋಮಾಲ, ಅರ್ಚನ, ಅಷ್ಟದಳ ಪದ್ಮಾರಾಧನೆ ಮತ್ತು ಎಲೆಕ್ಟ್ರಾನಿಕ್ ಡಿಪ್ ಟಿಕೆಟ್‌ಗಳು ಭಕ್ತರಿಗೆ ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಲಕ್ಕಿ ಡಿಪ್‌ಗಾಗಿ ಟಿಕೆಟ್‌ಗಳನ್ನು ಪಡೆಯುವ ಭಕ್ತರು, ಸಾಧ್ಯವಾದಷ್ಟು ಬೇಗ ಹಣವನ್ನು ಪಾವತಿಸುವ ಮೂಲಕ ಅವುಗಳನ್ನು ಅಂತಿಮಗೊಳಿಸಬೇಕು ಎಂದು ಟಿಟಿಡಿ ಕೋರಿದೆ.
ಇತರ ಸೇವೆಗಳ ಟಿಕೆಟ್ ಬಿಡುಗಡೆ ದಿನಾಂಕ
ಟಿಟಿಡಿಯು ಕಲ್ಯಾಣೋತ್ಸವ, ಅರ್ಜಿತ ಬ್ರಹ್ಮೋತ್ಸವ, ಊಂಜಲ್ ಸೇವೆ, ಸಹಸ್ರದೀಪಾಲಂಕರ ಸೇವೆಯ ಟಿಕೆಟ್‌ಗಳನ್ನು ಜುಲೈ 21 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ. ಅಕ್ಟೋಬರ್ ತಿಂಗಳ ಅಂಗಪ್ರದಕ್ಷಿಣಂ ಸೇವಾ ಕೋಟಾವನ್ನು ಜುಲೈ 24 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.
ಪ್ರತಿ ರಾಜ್ಯದಲ್ಲಿ ತಿರುಪತಿ ಬಾಲಾಜಿ ದೇಗುಲ
ವಿಶ್ವದ ಶ್ರೀಮಂತ ದೇವಾಲಯ ಟ್ರಸ್ಟ್ ಎಂದು ಪರಿಗಣಿಸಲ್ಪಟ್ಟಿರುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಮುಂಬರುವ ವರ್ಷಗಳಲ್ಲಿ ಎಲ್ಲ ರಾಜ್ಯಗಳಲ್ಲಿ ವೆಂಕಟೇಶ್ವರ ದೇವಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಬಾಲಾಜಿ ದೇವಾಲಯ ನಿರ್ಮಾಣಕ್ಕೆ ಟಿಟಿಡಿ ಭೂಮಿ ಪೂಜೆ ನೆರವೇರಿಸಿದೆ. ನವಿಮುಂಬಯಿನಲ್ಲಿ ದೇವಸ್ಥಾನದ ಟ್ರಸ್ಟ್‌ಗೆ ಮಹಾರಾಷ್ಟ್ರ ಸರ್ಕಾರ 600 ಕೋಟಿ ರೂಪಾಯಿ ಮೌಲ್ಯದ 10 ಎಕರೆ ಜಮೀನು ಮಂಜೂರು ಮಾಡಿದೆ. ಹಾಗೆಯೇ ಟಿಟಿಡಿ ಟ್ರಸ್ಟ್ ಗುಜರಾತ್‌ನ ಗಾಂಧಿನಗರ, ಛತ್ತೀಸ್‌ಗಢದ ರಾಯ್‌ಪುರ ಮತ್ತು ಬಿಹಾರದಲ್ಲಿ ದೇವಾಲಯಗಳನ್ನು ನಿರ್ಮಿಸಲು ಯೋಜಿಸುತ್ತಿದೆ.