ತಿರುಪತಿ ಕಾಲ್ತುಳಿತ: ಬಳ್ಳಾರಿ ಮಹಿಳೆ ಸೇರಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ, 41ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ಕುರಿತ ಈವರೆಗಿನ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಪತಿ ಕಾಲ್ತುಳಿತ: ಬಳ್ಳಾರಿ ಮಹಿಳೆ ಸೇರಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ, 41ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ಕುರಿತ ಈವರೆಗಿನ ವಿವರ

ತಿರುಪತಿ ಕಾಲ್ತುಳಿತ: ಬಳ್ಳಾರಿ ಮಹಿಳೆ ಸೇರಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ, 41ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ಕುರಿತ ಈವರೆಗಿನ ವಿವರ

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ, ಬಳ್ಳಾರಿ ಮಹಿಳೆ ಸೇರಿ ಸಾವನ್ನಪ್ಪಿದರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ವೈಕುಂಠ ದ್ವಾರ ಸರ್ವದರ್ಶನ ಟೋಕನ್ ವಿತರಣೆ ವೇಳೆ ಈ ಘಟನೆ ನಡೆದಿದ್ದು 41ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ ಎನ್ನಲಾಗುತ್ತಿದೆ. ಮೃತರು ಕರ್ನಾಟಕ, ತಮಿಳುನಾಡು ಹಾಗೂ ವಿಶಾಖಪಟ್ಟಣ ಮೂಲದವರು ಎನ್ನಲಾಗುತ್ತಿದೆ.

ತಿರುಪತಿ ಕಾಲ್ತುಳಿತ
ತಿರುಪತಿ ಕಾಲ್ತುಳಿತ

ಆಂಧ್ರಪ್ರದೇಶ: ವಿಶ್ವಪ್ರಸಿದ್ಧ ತಿರುಪತಿ ವೆಂಕಟರಮಣ ದೇಗುಲದಲ್ಲಿ ನಿನ್ನೆ (ಜನವರಿ 8) ರಾತ್ರಿ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ 6 ಮಂದಿ ಸಾವನ್ನಪ್ಪಿದ್ದು, 41 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ವೈಕುಂಠ ಏಕಾದಶಿ (ಜನವರಿ 10) ಹಿನ್ನೆಲೆ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಟೋಕನ್ ವಿತರಣಾ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ವೈಕುಂಠ ಏಕಾದಶಿ ಹಿನ್ನೆಲೆ 2 ದಿನಗಳ ಮುಂಚಿತವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ತಿರುಪತಿಗೆ ಭೇಟಿ ನೀಡಿದ್ದರು. ಅಲ್ಲದೇ ಟೋಕನ್ ವಿತರಣಾ ಕೌಂಟರ್‌ಗಳ ಮುಂದೆ ಸಾವಿರಾರು ಜನರು ನಿಂತಿದ್ದರು.

ನಿಜಕ್ಕೂ ಅಲ್ಲಿ ಆಗಿದ್ದೇನು?

ವೈಕುಂಠ ಏಕಾದಶಿ ನಿಮಿತ್ತ ತಿರುಪತಿಯ 94 ಕೇಂದ್ರಗಳಲ್ಲಿ ಸರ್ವದರ್ಶನಂ ಟೋಕನ್‌ ನೀಡಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಇಂದು (ಜನವರಿ 9) ಮುಂಜಾನೆ 5 ಗಂಟೆಗೆ ಟೋಕನ್ ವಿತರಣೆ ಆರಂಭವಾಗಿತ್ತು, ಆದರೆ ಟೋಕನ್ ವಿತರಣಾ ಕೇಂದ್ರಗಳ ಮುಂದೆ ನಿನ್ನೆ (ಜನವರಿ 8) ಬೆಳಿಗ್ಗೆ 5 ಗಂಟೆಯಿಂದಲೇ ಜನರು ಕ್ಯೂನಲ್ಲಿ ನಿಂತಿದ್ದರು. ರಾಮನಾಯ್ದು ಶಾಲೆಯ ಟೋಕನ್‌ ಕೇಂದ್ರದ ಬಳಿ ನಿಂತಿದ್ದ ಮಹಿಳೆಯೊಬ್ಬರು ಅಸ್ವತ್ಥರಾಗುತ್ತಾರೆ. ಆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಗೇಟ್ ತೆರೆಯಲಾಗುತ್ತದೆ. ಆ ಹೊತ್ತಿಗೆ ಏಕಾಏಕಿ ಜನರು ಎಲ್ಲಿ ನುಗ್ಗಲು ಆರಂಭಿಸಿದರು, ಇದರಿಂದ ಕಾಲ್ತುಳಿತ ಉಂಟಾಯಿತು ಎಂದು ಎಂದು ಪೊಲೀಸರು ಹೇಳುತ್ತಾರೆ.

ಘಟನೆಯಲ್ಲಿ ಮೃತಪಟ್ಟವರ ವಿವರ

ಕಾಲ್ತುಳಿತದಲ್ಲಿ ವಿಶಾಖಪಟ್ಟಣ ಜಿಲ್ಲೆಯ ನರಸೀಪಟ್ಟಣದ ಬುಡ್ಡೇತಿ ನಾಯ್ಡು ಬಾಬು, ರಜಿನಿ, ಲಾವಣ್ಯ, ವಿಶಾಖಪಟ್ಟಣದ ಶಾಂತಿ ಮತ್ತು ಬಳ್ಳಾರಿಯ ಶಾಂತಿ ಮೃತಪಟ್ಟಿದ್ದು, ಇದಕ್ಕೂ ಮುನ್ನ ತಮಿಳುನಾಡಿನ ಸೇಲಂನ ಮಲ್ಲಿಕಾ ಸಾವನ್ನಪ್ಪಿದ್ದರು.ಇದಲ್ಲದೇ ತಿರುಪತಿಯ ಮೂರು ಭಾಗಗಳಲ್ಲಿ ಭಕ್ತರ ನಡುವೆ ಮಾರಾಮಾರಿ ನಡೆದಿದ್ದು, ತಮಿಳುನಾಡಿನ ಸೇಲಂನ ಭಕ್ತರೊಬ್ಬರು ಶ್ರೀನಿವಾಸಂನಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 41ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಗಾಯಾಳುಗಳನ್ನು ರುಯಾ ಹಾಗೂ ಸ್ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಕಂಟ್ರೋಲ್ ರೂಮ್ ವ್ಯವಸ್ಥೆ

ತಿರುಪತಿಯಲ್ಲಿ ಗಾಯಾಳುಗಳ ವಿವರಕ್ಕಾಗಿ ಕಂಟ್ರೋಲ್ ರೂಂ ತೆರೆಯಲಾಗಿದೆ. ತಿರುಪತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸಂಖ್ಯೆ: 08772236007 ರಲ್ಲಿ ವಿವರಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.

ಬಾರದ ಅಂಬ್ಯಲೆನ್ಸ್‌, ರಕ್ಷಣಾ ವೈಫಲ್ಯದ ಕೊರತೆ

ತಿರುಪತಿ ಕಾಲ್ತುಳಿತ ಘಟನೆ ಕುರಿತು ಜಿಲ್ಲಾ ಎಸ್‌ಪಿ ಮುಖ್ಯಮಂತ್ರಿ ಚಂದ್ರಬಾಬು ಅವರಿಗೆ ವರದಿ ನೀಡಿದ್ದಾರೆ. ಅವರ ಪ್ರಕಾರ ಸ್ಥಳದಲ್ಲಿದ್ದ ಡಿಎಸ್‌ಪಿ ವೈಫಲ್ಯದಿಂದ ಈ ಅವಘಡ ಸಂಭವಿಸಿದ್ದು, ಘಟನೆ ನಡೆದು 20 ನಿಮಿಷಗಳಾದರೂ ಆ್ಯಂಬುಲೆನ್ಸ್ ಚಾಲಕರು ಬಾರದೇ ಇದ್ದುದರಿಂದ ಅಪಘಾತದ ತೀವ್ರತೆ ಇನ್ನಷ್ಟು ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ತಿರುಪತಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ‘ತಿರುಪತಿಯಲ್ಲಿ ನಡೆದ ಕಾಲ್ತುಳಿತದ ಘಟನೆ ನಿಜಕ್ಕೂ ದುಃಖಕರ. ಘಟನೆಯಲ್ಲಿ ಸಾವ‌ನ್ನಪ್ಪಿದವರ ನೋವಿನಲ್ಲಿ ನಾನು ಭಾಗವಾಗಿದ್ದೇನೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರಪ್ರದೇಶ ಸರ್ಕಾರ ಎಲ್ಲಾ ರೀತಿಯ ನೆರವನ್ನೂ ನೀಡಲಿದೆ‘ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನೆರವಿಗೆ ರಾಹುಲ್ ಗಾಂಧಿ ಮನವಿ

ಈ ಘಟನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ತಿರುಪತಿಯಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣ ನಿಜಕ್ಕೂ ದುಃಖಕರ ಸಂಗತಿ. ಮೃತರ ಕುಟುಂಬಗಳಿಗೆ ತನ್ನ ಸಂತಾಪ. ಗಾಯಾಳು ಬಹಳ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಕಾಂಗ್ರೆಸ್‌ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಈ ಸಮಯದಲ್ಲಿ ಸಹಾಯಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ವೈಫಲ್ಯ ಕಾರಣ: ಟಿಟಿಡಿ ಮಾಜಿ ಅಧ್ಯಕ್ಷ

‘ಸರ್ಕಾರದ ವೈಫಲ್ಯವೇ ಕಾಲ್ತುಳಿತಕ್ಕೆ ಕಾರಣ‘ ಎಂದು ಟಿಟಿಡಿ ಮಾಜಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ. ಟಿಟಿಡಿಯನ್ನು ರಾಜಕೀಯ ಕೇಂದ್ರವನ್ನಾಗಿ ಪರಿವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು. ಅವರು ಅಧಿಕಾರಕ್ಕೆ ಬಂದ ನಂತರ ಭಕ್ತರ ಹಿತಾಸಕ್ತಿಯನ್ನು ಗಾಳಿಗೆ ತೂರಿ ಶ್ರೀವಾರಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ, ಶ್ರೀವೆಂಕಟೇಶ್ವರನ ಭಕ್ತರು ತುಳಿದು ಸಾಯುವುದು ಸಾಮಾನ್ಯ ಸಂಗತಿಯಲ್ಲ‘ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಘಟನೆಯಲ್ಲಿ ಅಸ್ವಸ್ಥರಾದವರನ್ನು ಇವತ್ತು ಸಂಜೆ ವೇಳೆಗೆ ಡಿಸ್ಚಾರ್ಜ್‌ ಮಾಡಲಾಗುತ್ತದೆ. ಘಟನೆಯಲ್ಲಿ ಗಾಯಗೊಂಡ ಮೂವರಲ್ಲಿ ಇಬ್ಬರಿಗೆ ಚಿಕಿತ್ಸೆ ಮುಂದುವರಿಸಲಾಗುವುದು. ಪ್ರಾಣ ಕಳೆದುಕೊಂಡವರನ್ನು ಬಿಟ್ಟು ಬೇರೆಯವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ರುಯಾ ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.

ಕಂಬನಿ ಮಿಡಿದು, ಸಂತಾಪ ಸೂಚಿಸಿದ ಜಗನ್‌ಮೋಹನ್ ರೆಡ್ಡಿ

ಕಾಲ್ತುಳಿತದಲ್ಲಿ ಮರಣ ಹೊಂದಿದ ವಿಚಾರವಾಗಿ ಬಗ್ಗೆ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಬೇಕು‘ ಎಂದು ಸರ್ಕಾರಕ್ಕೆ ಮನವಿ ಮಾಡಿದದ್ದಾರೆ. ‘ವೈಕುಂಠ ಏಕಾದಶಿ ದರ್ಶನಕ್ಕೆ ಬಂದಿದ್ದ ಭಕ್ತರು ಪ್ರಾಣ ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ. ಕೂಡಲೇ ಅಲ್ಲಿನ ಪರಿಸ್ಥಿತಿ ಸುಧಾರಿಸಲು ತಕ್ಷಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು‘ ಆಗ್ರಹಿಸಿದರು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.