ಕನ್ನಡ ಸುದ್ದಿ  /  Nation And-world  /  Anji Khad Bridge: Indias First Cable Stayed Rail Bridge Connecting Jammu And Kashmir To Be Ready Soon

Anji Khad Bridge: ಎಂಜಿನಿಯರಿಂಗ್‌ ಅದ್ಭುತ! ಶಿಖರದ ತುದಿಯಲ್ಲಿ ಭಾರತದ ಮೊದಲ ತೂಗು ರೈಲು ಸೇತುವೆ, ಅಚ್ಚರಿಯ ಅಂಜಿ ಖಾಡ್‌ ಬ್ರಿಡ್ಜ್‌

ಭಾರತದ ಮೊದಲ ಕೇಬಲ್‌ ಬೆಂಬಲಿತ ಅಂಜಿ ಖಾಡ್ ಸೇತುವೆ (Anji Khad Bridge) ಇನ್ನು ಕೆಲವೇ ದಿನಗಳಲ್ಲಿ ಅಂದರೆ, ಮೇ 2023ಕ್ಕೆ ಸಿದ್ಧವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬಳಿಕ ತೂಗು ರೈಲು ಸೇತುವೆ ಮೇಲೆ ಭಾರತದ ರೈಲುಗಳು ಸಂಚರಿಸಲಿವೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳನ್ನು ಸಂಪರ್ಕಿಸುವ ಭಾರತದ ಮೊದಲ ಕೇಬಲ್ ಬೆಂಬಲಿತ ತೂಗು ರೈಲು ಸೇತುವೆ ಇದಾಗಿದೆ.

Anji Khad Bridge: ಭಾರತದ ಮೊದಲ ತೂಗು ರೈಲು ಸೇತುವೆ, ಅಚ್ಚರಿಯ ಅಂಜಿ ಖಾಡ್‌ ಬ್ರಿಡ್ಜ್‌
Anji Khad Bridge: ಭಾರತದ ಮೊದಲ ತೂಗು ರೈಲು ಸೇತುವೆ, ಅಚ್ಚರಿಯ ಅಂಜಿ ಖಾಡ್‌ ಬ್ರಿಡ್ಜ್‌

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳನ್ನು ಸಂಪರ್ಕಿಸುವ ಭಾರತದ ಮೊದಲ ಕೇಬಲ್‌ಗಳಲ್ಲಿ ತೂಗುವ ಅಂಜಿ ಖಾಡ್ ಸೇತುವೆ ಮೇ 2023 ರ ವೇಳೆಗೆ ಸಿದ್ಧವಾಗಲಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕತ್ರಾ ಮತ್ತು ರಿಯಾಸಿಯನ್ನು ಸಂಪರ್ಕಿಸುವ ಸೇತುವೆಯನ್ನು ಎಂಜಿನಿಯರಿಂಗ್ ಅದ್ಭುತ ಎಂದು ಕರೆಯಲಾಗುತ್ತಿದೆ. ಕಾಶ್ಮೀರವನ್ನು ಭಾರತದ ಇತರೆ ಪ್ರದೇಶಗಳಿಗೆ ರೈಲು ಮೂಲಕ ಸಂಪರ್ಕಿಸುವಲ್ಲಿ ಈ ಲಿಂಕ್‌ ಒಂದು ಪ್ರಮುಖ ಕೊಂಡಿಯಾಗಲಿದೆ. ಅಂದಹಾಗೆ, ಈ ಎಂಜಿನಿಯರಿಂಗ್‌ ಅದ್ಭುತಕ್ಕೆ ಹಲವು ಸಾವಿರ ಕೋಟಿ ರೂ. ವ್ಯಯಿಸಲಾಗಿದೆ. ಈ ತೂಗು ರೈಲು ಮಾರ್ಗಕ್ಕೆ 37,000 ಕೋಟಿ ರೂ. ಮತ್ತು ಸೇತುವೆಗೆ 400 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಎಂಜಿನಿಯರಿಂಗ್‌ ಅದ್ಭುತ

80 ಕಿಮಿಜಮ್ಮುವಿನಿಂದ ರಸ್ತೆ ಮಾರ್ಗವಾಗಿ ದೂರ
725 ಮೀಟರ್‌ಅಂಜಿ ಬ್ರಿಡ್ಜ್‌ ಮೂಲಕ ಸಾಗಿದರೆ ದೂರ
473 ಮೀಟರ್‌ಸಂಪೂರ್ಣ ಕೇಬಲ್‌ಗಳಿಂದಲೇ ಇರುವ ಮಾರ್ಗ
331 ಮೀಟರ್‌ರಿವರ್‌ ಬೆಡ್‌ನಿಂದ ಎತ್ತರ
96ಬಳಸಲಾದ ಕೇಬಲ್‌ಗಳು

ಈ ಸೇತುವೆಯು ಮುಂಬಯಿಗರಿಗೆ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ (Bandra Worli Sea Link) ನೆನಪಿಸಬಹುದು. ಅದು, ದೇಶದ ಮೊದಲ ಕೇಬಲ್‌ ಮೇಲೆ ತೂಗುವ ರಸ್ತೆಯಾಗಿದೆ. ಇದೀಗ ಅಂಜಿ ಖಾಡ್ ಸೇತುವೆಯು ದೇಶದ ಮೊದಲ ಕೇಬಲ್‌ ಮೇಲೆ ತೂಗುವ ರೈಲು ಮಾರ್ಗವಾಗಿದೆ. ಕರ್ನಾಟಕ ಸೇರಿದಂತೆ ವಿವಿಧೆಡೆ ನದಿಗಳನ್ನು ದಾಟಲು ಕೇಬಲ್‌ಗಳನ್ನು ಬಳಸಿ ತೂಗು ಸೇತುವೆ ಮಾಡಲಾಗುತ್ತದೆ. ಬೆಂಗಳೂರಿನ ಕೆಆರ್‌ ಪುರದಲ್ಲಿ ತೂಗುಸೇತುವೆ ರಸ್ತೆ ಪ್ರಮುಖ ಆಕರ್ಷಣೆ.

ಅಂದಹಾಗೆ, ಅಂಜಿ ಖಾಡ್ ಸೇತುವೆ ಹಲವು ದಾಖಲೆಗಳಿಗೆ, ಹಿರಿಮೆಗಳಿಗೆ ಪಾತ್ರವಾಗಲಿದೆ. ಇದು ಚೆನಾಬ್ ನದಿಯ ಮೇಲೆ ಇರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಆಗಲಿದೆ. 1,315-ಮೀ ಕಮಾನಿನ ಸೇತುವೆಯು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಎತ್ತರವಾಗಿರುತ್ತದೆ. ಇದು ಚೆನಾಬ್ ನದಿಪಾತ್ರದಿಂದ 331 ಮೀ ಎತ್ತರದಲ್ಲಿದೆ.

ಅಂಜಿ ಸೇತುವೆಯು ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಹಳಿಯ (USBRL)ಭಾಗವಾಗಿದೆ. ಇದೇ ಮೇ ತಿಂಗಳಿನಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ತಿಗೊಂಡರೂ ಅಧಿಕೃತವಾಗಿ ಕಾರ್ಯಾರಂಭ ಮಾಡಲು ಸಮಯ ಬೇಕಿದೆ. ಇದು ಫೆಬ್ರವರಿ 2024 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ನಿಮಗೆ ಗೊತ್ತೆ, ಈ ತೂಗು ರೈಲ್ವೆ ಸೇತುವೆಯು ಭಾರತ ಉಪಖಂಡದಲ್ಲಿ ಕೈಗೊಂಡ ಅತ್ಯಂತ ಕಷ್ಟಕರ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಚಂಡಮಾರುತ ಮತ್ತು ಬಲವಾದ ಗಾಳಿಯನ್ನು ತಡೆದುಕೊಳ್ಳುವಂತೆ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಧಿಕ ಎತ್ತರದ ಪ್ರದೇಶದಲ್ಲಿ ಇಂತಹ ಸೇತುವೆ ನಿರ್ಮಿಸುವುದು ಭೂವಿಜ್ಞಾನದ ಪ್ರಕಾರ ಸವಾಲಿನ ಸಂಗತಿಯಾಗಿದೆ. ಭಾರತೀಯ ರೈಲ್ವೆಯು 272 ಕಿಮೀ ರೈಲು ಸಂಪರ್ಕವನ್ನು ಮೂರು ಉಪವಿಭಾಗಗಳಾಗಿ ವಿಂಗಡಿಸಿದೆ.

"ಭೂಕಂಪನ ಪ್ರವೃತ್ತಿಯ ಜತೆಗೆ ಭೌಗೋಳಿಕ ದೋಷ ರೇಖೆಗಳು, ತಿರುವುಗಳು, ಥ್ರಸ್ಟ್ಗಳು ಇರುವ ಪ್ರದೇಶದಲ್ಲಿ ಈ ಸೇತುವೆ ನೆಲೆಗೊಂಡಿದೆ. ಮುಂಬಯಿಯಲ್ಲಿರುವ ತೂಗುಸೇತುವೆ ವಿನ್ಯಾಸವನ್ನೇ ಇಲ್ಲಿ ಅಳವಡಿಸಿಕೊಂಡಿದ್ದೇವೆ" ಎಂದು ಕೊಂಕಣ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂದ್ರಾ ವರ್ಲಿ ಸೀ ಲಿಂಕ್‌ ಹೊರತುಪಡಿಸಿದರೆ ವರ್ಸೋವಾ-ಅಂಧೇರಿ-ಘಾಟ್ಕೋಪರ್ ಮೆಟ್ರೋ ಮಾರ್ಗದಲ್ಲಿ ಮತ್ತೊಂದು ಕೇಬಲ್‌ ರಸ್ತೆ ನಿರ್ಮಿಸಲಾಗುತ್ತದೆ. "ಜಮ್ಮು ಮತ್ತು ಕಾಶ್ಮೀರ ಸಂಪರ್ಕಿಸುವ ಈ ರೈಲು ತೂಗು ಸೇತುವೆಯು ಉದ್ದವಾಗಿದೆ ಮತ್ತು ಆಳವಾದ ಕಣಿವೆಗಳನ್ನು ಹೊಂದಿದೆ. ಸೇತುವೆಯ ದೀರ್ಘಾಯುಷ್ಯ ಖಾತ್ರಿಗಾಗಿ ನಾವು ಮಾರುತ ಹರಿವು, ಮಾರುತಗಳ ಹೊಡೆತ ತಡೆದುಕೊಳ್ಳುವ ಸಾಮರ್ಥ್ಯ ಇತ್ಯಾದಿ ಹಲವು ನಿಯತಾಂಕಗಳನ್ನು ಮೌಲ್ಯಮಾಪನ ಮಾಡಬೇಕಿತ್ತು. ಈ ರೈಲು ಮಾರ್ಗದಲ್ಲಿ ರೈಲುಗಳು ಗರಿಷ್ಠ `100 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ" ಎಂದು ರೈಲ್ವೆ ಇಲಾಖೆಯ ಇನ್ನೊಬ್ಬರು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಸೇತುವೆಯು ಸಾಕಷ್ಟು ದೃಢವಾಗಿದೆ. ಗಂಟೆಗೆ 213 ಕಿ.ಮೀ. ವೇಗದ ಗಾಳಿಯನ್ನು ತಡೆದುಕೊಳ್ಳಬಲ್ಲದು ಎಂದು ಹೇಳಲಾಗಿದೆ. ಎಲ್ಲಾದರೂ ಎರಡು ಕೇಬಲ್‌ಗಳು ಮಿಸ್‌ ಆದರೆ (ತುಂಡಾದರೆ) ಅಥವಾ ಸಂಪರ್ಕ ಕಳಚಿಕೊಂಡರೆ (ಡಿಸ್‌ಕನೆಕ್ಟ್‌) ರೈಲುಗಳು ಗಂಟೆಗೆ 30 ಕಿ.ಮೀ. ವೇಗದಲ್ಲಿ ಹೋಗಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಭವಿಷ್ಯದಲ್ಲಿ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಹಳಿ ಸಂಪರ್ಕಗೊಂಡ ಬಳಿಕ ವಂದೇ ಭಾರತ್‌ ರೈಲನ್ನೂ ಈ ಮಾರ್ಗದಲ್ಲಿ ಆರಂಭಿಸಲಾಗುವುದು. ಈ ಯುಎಸ್‌ಬಿಆರ್‌ಎಲ್‌ ಪ್ರಾಜೆಕ್ಟ್‌ 2024ರ ಜನವರಿ/ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಪತ್ರಿಕಾ ಸಂಪರ್ಕಾಧಿಕಾರಿ ದೀಪಕ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಈ ರೈಲು ಮಾರ್ಗದಲ್ಲಿ ಜೋಡಿ ಮಾರ್ಗಗಳು ಇರುವುದಿಲ್ಲ. ಒಂದೇ ರೈಲ್ವೆ ಹಳಿ ಇರುತ್ತದೆ. "ಈ ಸೇತುವೆಯು ನಿರ್ವಹಣೆ ಮತ್ತು ಅಗತ್ಯತೆಗಾಗಿ ಸಣ್ಣ ಕಾಲುದಾರಿಯಿಂದ ಬೆಂಬಲಿತವಾದ ಏಕೈಕ ರೈಲು ಮಾರ್ಗವನ್ನು ಹೊಂದಿರುತ್ತದೆ. ಈ ರೈಲು ಸೇತುವೆಯ ಎರಡೂ ತುದಿಗಳಲ್ಲಿ, ಈ 111 ಕಿಮೀ ರೈಲು ನೆಟ್‌ವರ್ಕ್‌ನ ಭಾಗವಾಗಿರುವ ಸುರಂಗಗಳಿವೆ" ಎಂದು ಅವರು ಮಾಹಿತಿ ನೀಡಿದ್ದಾರೆ.