ಡಿಎಂಕೆ ಸರ್ಕಾರ ಪತನ ತನಕ ಬರಿಗಾಲಲ್ಲಿ ನಡೆಯುವ ಶಪಥಗೈದ ಕೆ ಅಣ್ಣಾಮಲೈ, ಚಾವಟಿ ಬಾರಿಸಿಕೊಂಡ್ರು; ಏನಿದು ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ, 5 ಅಂಶ
K Annamalai: ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಡಿಎಂಕೆ ಸರ್ಕಾರ ಸಂವೇದನಾರಹಿತವಾಗಿ ನಿರ್ವಹಿಸುತ್ತಿರುವ ಬಗ್ಗೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಅಣ್ಣಾಮಲೈ ತೀವ್ರ ಅಸಮಾಧಾನಗೊಂಡಿದ್ದಾರೆ. ಡಿಎಂಕೆ ಸರ್ಕಾರ ಪತನ ತನಕ ಬರಿಗಾಲಲ್ಲಿ ನಡೆಯುವ ಶಪಥಗೈದ ಕೆ ಅಣ್ಣಾಮಲೈ, ಚಾವಟಿ ಬಾರಿಸಿಕೊಂಡು ಗಮನಸೆಳೆದರು. ಏನಿದು ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ, 5 ಅಂಶಗಳ ವಿವರಣೆ.
![ಕೊಯಮತ್ತೂರಿನಲ್ಲಿ ಗುರುವಾರ ಡಿಎಂಕೆ ಸರ್ಕಾರ ಪತನದ ತನಕ ಬರಿಗಾಲಲ್ಲಿ ನಡೆಯುವ ಮತ್ತು ಚಾವಟಿ ಬಾರಿಸುವ ಶಪಥಗೈದ ಕೆ ಅಣ್ಣಾಮಲೈ ಅವರು, ನುಡಿದಂತೆ ಶುಕ್ರವಾರ ಚಾವಟಿ ಬಾರಿಸಿಕೊಂಡ್ರು. ಕೊಯಮತ್ತೂರಿನಲ್ಲಿ ಗುರುವಾರ ಡಿಎಂಕೆ ಸರ್ಕಾರ ಪತನದ ತನಕ ಬರಿಗಾಲಲ್ಲಿ ನಡೆಯುವ ಮತ್ತು ಚಾವಟಿ ಬಾರಿಸುವ ಶಪಥಗೈದ ಕೆ ಅಣ್ಣಾಮಲೈ ಅವರು, ನುಡಿದಂತೆ ಶುಕ್ರವಾರ ಚಾವಟಿ ಬಾರಿಸಿಕೊಂಡ್ರು.](https://images.hindustantimes.com/kannada/img/2024/12/27/550x309/K_Annamalai_1735289438380_1735289444175.png)
K Annamalai: ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಶುಕ್ರವಾರ ಚಾವಟಿ ತಗೊಂಡು ಮೈಮೇಲೆ ಬಾರಿಸಿಕೊಂಡು ವಿಶೇಷ ಪ್ರತಿಭಟನೆ ನಡೆಸಿದರು. ಅಣ್ಣಾಮಲೈ ಅವರು ಗುರುವಾರವಷ್ಟೇ, ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಭಾವೋದ್ರಿಕ್ತರಾಗಿ ಡಿಎಂಕೆ ಸರ್ಕಾರದ ಪತನವಾಗುವ ತನಕ ಬರಿಗಾಲಿನಲ್ಲೇ ನಡೆಯುವೆ ಎಂದು ಶಪಥ ಮಾಡಿದ್ದರು. ಶುಕ್ರವಾರ ತಮ್ಮ ನಿವಾಸದ ಎದುರು ತಮ್ಮನ್ನು ತಾವೇ ಶಿಕ್ಷಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಡಿಎಂಕೆ ಸರ್ಕಾರವು ಸಂವೇದನಾರಹಿತವಾಗಿ ನಿಭಾಯಿಸುತ್ತಿರುವ ಬಗ್ಗೆ ಅಣ್ಣಾಮಲೈ ತೀವ್ರ ಅಸಮಾಧಾನಗೊಂಡಿರುವುದು ಕಂಡುಬಂತು.
1) ಮನೆ ಎದುರೇ ಕೆ ಅಣ್ಣಾಮಲೈ ಚಾವಟಿ ಬಾರಿಸಿಕೊಂಡ್ರು; ವಿಡಿಯೋ
ಹಸಿರು ಬಣ್ಣದ ಧೋತಿ ಉಟ್ಟು, ಕೈಯಲ್ಲಿ ಚಾವಟಿ ಹಿಡಿದು ಗೇಟ್ ಮುಂಭಾಗ ಬಂದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಅಣ್ಣಾಮಲೈ ಮುರುಗನನ್ನು ಪ್ರಾರ್ಥಿಸಿಕೊಂಡು ಚಾವಟಿಯಲ್ಲಿ ಬಾರಿಸಿಕೊಂಡರು. ಚಾವಟಿಯಿಂದ ಕೆಲವು ಏಟು ಹೊಡೆದುಕೊಳ್ಳುತ್ತಿದ್ದಂತೆ ಅವರ ಹಿಂದೆ ಪ್ರತಿಭಟನಾ ಪ್ಲಕಾರ್ಡ್ ಹಿಡಿದುಕೊಂಡಿದ್ದ ಬೆಂಬಲಿಗರು ಬಂದು ಅವರನ್ನು ತಡೆದರು. ಬೆಂಬಲಿಗರ ಕೈಯಲ್ಲಿರುವ ಪ್ಲಕಾರ್ಡ್‌ನಲ್ಲಿ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ವಿವರವನ್ನು ಬಹಿರಂಗ ಪಡಿಸಿದ ಸರ್ಕಾರದ ನಡೆಯನ್ನು ಖಂಡಿಸಿದ ಬರಹವಿರುವ ದೃಶ್ಯ ವಿಡಿಯೋದಲ್ಲಿದೆ. ಬಳಿಕ ಸುದ್ದಿಗಾರರ ಜತೆಗೆ ಮಾತಾನಾಡಿದ ಅಣ್ಣಾಮಲೈ, ಇದು ತಮಿಳು ಸಂಸ್ಕೃತಿ. ಏನಾದರೂ ಅನ್ಯಾಯವಾದಾಗ ನ್ಯಾಯ ಆಗ್ರಹಿಸುವುದಕ್ಕಾಗಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವ ಪದ್ಧತಿ ಇದು ಎಂದು ಹೇಳಿದರು.
2) ಡಿಎಂಕೆ ಸರ್ಕಾರ ಪತನ ತನಕ ಬರಿಗಾಲಲ್ಲಿ ನಡೆಯುವ ಶಪಥಗೈದ ಕೆ ಅಣ್ಣಾಮಲೈ
ಕೊಯಮತ್ತೂರಿನಲ್ಲಿ ಗುರುವಾರ (ಡಿಸೆಂಬರ್ 26) ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಸಂಯಮ ಕಳೆದುಕೊಂಡು ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಆರೋಪಿಸಿದ ಅಣ್ಣಾಮಲೈ, ಈ ಡಿಎಂಕೆ ಸರ್ಕಾರ ಪತನವಾಗುವ ತನಕ ತಾನು ಪಾದರಕ್ಷೆ ಧರಿಸುವುದಿಲ್ಲ, ಬರಿಗಾಲಲ್ಲೇ ನಡೆಯುವೆ ಎಂದು ಶೂ ತೆಗೆದು ತೋರಿಸಿ ಬದಿಗಿಟ್ಟ ಪ್ರಸಂಗವೂ ನಡೆಯಿತು. ಇದಲ್ಲದೇ, ಕೊಯಮತ್ತೂರಿನ ತನ್ನ ನಿವಾಸದ ಎದುರು ನಾಳೆ (ಡಿಸೆಂಬರ್ 27) ಆರು ಸಲ ಚಾವಟಿ ಬೀಸಿ ಹೊಡೆಯುವುದಾಗಿ ಶಪಥ ಮಾಡಿದ್ದರು. ಇದಲ್ಲದೇ, ರಾಜ್ಯದ 6 ಪ್ರಮುಖ ಮುರುಗನ್ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆಯುವ ಹರಕೆ ಹೊತ್ತುಕೊಂಡ ಅಣ್ಣಾಮಲೈ 48 ದಿನಗಳ ವ್ರತಾಚರಣೆ ಮಾಡುವುದಾಗಿ ಹೇಳಿದ್ದರು.
3) ಏನಿದು ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ
ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಅತ್ಯಾಚಾರದ ಭಯಾನಕ ಘಟನೆ ಡಿಸೆಂಬರ್ 25 ರಂದು ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಅಣ್ಣಾ ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಬುಧವಾರ (ಡಿಸೆಂಬರ್ 25) ಕೊಟ್ಟೂರ್‌ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 64 (ಅತ್ಯಾಚಾರಕ್ಕೆ ಶಿಕ್ಷೆ) ಪ್ರಕಾರ ಎಫ್‌ಐಆರ್ ದಾಖಲಾಗಿದೆ.
4) ಅಣ್ಣಾ ವಿವಿ ಕ್ಯಾಂಪಸ್‌ನಲ್ಲಿ ಏನು ನಡೆಯಿತು
ಅಣ್ಣಾ ವಿವಿ ಕ್ಯಾಂಪಸ್‌ನಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಸಂತ್ರಸ್ತೆ 19 ವರ್ಷದ ಯುವತಿ ಮತ್ತು ಆಕೆಯ ಸ್ನೇಹಿತ ಒಟ್ಟಿಗೆ ಕುಳಿತಿದ್ದರು. ಆಗ ಕ್ಯಾಂಪಸ್ ಒಳಗೆ ನುಗ್ಗಿದ ಇಬ್ಬರು, ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಯುವತಿ ಮೇಲೆ ಅತ್ಯಾಚಾರ ಎಸಗಿದರು. ಸಂತ್ರಸ್ತೆ ಪಿಒಎಸ್‌ಎಚ್ ಸಮಿತಿಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ಈ ಕೃತ್ಯವೆಸಗಿದವರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಅತನನ್ನು ಕೊಟ್ಟೂರ್‌ಪುರಂ ಬೀದಿ ಬದಿ ಬಿರಿಯಾನಿ ಮಾರಾಟಗಾರ ಜ್ಞಾನಶೇಖರನ್ (37) ಎಂದು ಗುರುತಿಸಲಾಗಿದೆ.
5) ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಜೊತೆಗೆ ಆರೋಪಿ ಜ್ಞಾನಶೇಖರನ್‌ಗೆ ನಂಟು ಆರೋಪ
ಈ ನಡುವೆ ಡಿಎಂಕೆ ನಾಯಕ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಜತೆಗೆ ಆರೋಪಿ ಜ್ಞಾನಶೇಖರನ್‌ಗೆ ನಂಟು ಇರುವ ಬಗ್ಗೆ ಆರೋಪ ವ್ಯಕ್ತವಾಗಿದೆ. ಆದರೆ, ಈ ಆರೋಪವನ್ನು ಕಾನೂನು ಸಚಿವ ಎಸ್ ರಘುಪತಿ ನಿರಾಕರಿಸಿದ್ದು, ಜ್ಞಾನಶೇಖರನ್ ಪಕ್ಷದ ಪ್ರಾಥಮಿಕ ಸದಸ್ಯನೂ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ (ಡಿಸೆಂಬರ್ 27) ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ಇಂದೇ ಮಧ್ಯಾಹ್ನದ ಒಳಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.
![Whats_app_banner Whats_app_banner](https://kannada.hindustantimes.com/static-content/1y/wBanner.png)