ಕನ್ನಡ ಸುದ್ದಿ  /  Nation And-world  /  Another 7.5 Magnitude Quake Hits Turkey Hours After First Killed Over 1,300

ಸಾವಿನ ಸಂಖ್ಯೆ 1,300ಕ್ಕೆ ಏರಿಕೆಯಾಗುತ್ತಿದ್ದಂತೆಯೇ ಟರ್ಕಿಯಲ್ಲಿ ಮತ್ತೊಂದು ಪ್ರಬಲ ಭೂಕಂಪ.. ರಕ್ಷಣಾ​ ತಂಡವನ್ನು ಕಳುಹಿಸುತ್ತಿರುವ ಭಾರತ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,300ಕ್ಕೆ ಏರಿಕೆಯಾಗಿದ್ದು, ಇತ್ತ ಟರ್ಕಿಯಲ್ಲಿ 7.5 ರಷ್ಟು ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ.

ಟರ್ಕಿ-ಸಿರಿಯಾದಲ್ಲಿ ಪ್ರಬಲ ಭೂಕಂಪ
ಟರ್ಕಿ-ಸಿರಿಯಾದಲ್ಲಿ ಪ್ರಬಲ ಭೂಕಂಪ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,300ಕ್ಕೆ ಏರಿಕೆಯಾಗಿದ್ದು, ಇತ್ತ ಟರ್ಕಿಯಲ್ಲಿ 7.5 ರಷ್ಟು ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ. ಮೊದಲನೆಯ ಪ್ರಬಲ ಭೂಕಂಪ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೊಮ್ಮೆ ಭೂಮಿ ಬಲವಾಗಿ ಕಂಪಿಸಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಎರಡನೇ ಭೂಕಂಪದಿಂದಾಗಿ ಟರ್ಕಿಯ ಹಲವಾರು ಪ್ರಾಂತ್ಯಗಳಲ್ಲಿ ಮತ್ತಷ್ಟು ಕಟ್ಟಡಗಳು ಧರೆಗುರುಳಿವೆ. ನೂರ್ಡಗಿ ಪಟ್ಟಣದಿಂದ ಸುಮಾರು 26 ಕಿಲೋ ಮೀಟರ್ ದೂರದಲ್ಲಿರುವ ಗಾಜಿಯಾಂಟೆಪ್‌ನಿಂದ 33 ಕಿಲೋ ಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ. ಹಾಗೆಯೇ 18 ಕಿಲೋ ಮೀಟರ್​ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ.

ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆಯು ಕಹ್ರಮನ್ಮರಸ್ ಪ್ರಾಂತ್ಯದ ಪಜಾರ್ಸಿಕ್ ಪಟ್ಟಣದಲ್ಲಿ ಕೇಂದ್ರೀಕೃತವಾಗಿ ಪೀಡಿತ ಪ್ರದೇಶಗಳಿಗೆ ಸಿಬ್ಬಂದಿಯನ್ನು ಕಳುಹಿಸುತ್ತಿದೆ. ಯುರೋಪಿಯನ್ ಒಕ್ಕೂಟವು ರಕ್ಷಣಾ ತಂಡಗಳನ್ನು ಕಳುಹಿಸುತ್ತಿದೆ ಮತ್ತು ಟರ್ಕಿಗೆ ಹೆಚ್ಚಿನ ಸಹಾಯವನ್ನು ಸಿದ್ಧಪಡಿಸುತ್ತಿದೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆಯ ಆಯುಕ್ತರು ತಿಳಿಸಿದ್ದಾರೆ.

ನೆದರ್ಲ್ಯಾಂಡ್ಸ್ ಮತ್ತು ರೊಮೇನಿಯಾದ ರಕ್ಷಣಾ ತಂಡಗಳು ಈಗಾಗಲೇ ನಮ್ಮಲ್ಲಿಗೆ ಬರುತ್ತಿವೆ. ಯುರೋಪಿಯನ್ ಒಕ್ಕೂಟದ ತುರ್ತು ಪ್ರತಿಕ್ರಿಯೆ ಸಮನ್ವಯ ಕೇಂದ್ರವು ಅವರ ನಿಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಆಯುಕ್ತ ಜಾನೆಜ್ ಲೆನಾರ್ಸಿಕ್ ಹೇಳಿದ್ದಾರೆ.

ನಾವು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಸಂಪರ್ಕಿಸಲು ಪ್ರಾರಂಭಿಸಿದ್ದೇವೆ. ನ್ಯಾಟೋ ಮತ್ತು ಯುರೋಪಿಯನ್ ಒಕ್ಕೂಟದ ಜೊತೆಗೆ, 45 ದೇಶಗಳು ನಮ್ಮ ಸಹಾಯಕ್ಕೆ ಮುಂದಾಗಿವೆ. ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಹೇಳಿದ್ದಾರೆ.

ಇಂದು ಮುಂಜಾನೆ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ತೀವ್ರತೆ ರಿಕ್ಟರ್​ ಮಾಪಕದಲ್ಲಿ 7.9 ರಷ್ಟು ದಾಖಲಾಗಿತ್ತು. ನೆರೆಯ ರಾಷ್ಟ್ರಗಳಾದ ಸೈಪ್ರಸ್ ಮತ್ತು ಲೆಬನಾನ್‌ನಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಬಹುಮಹಡಿ ಕಟ್ಟಟಗಳು ಉರುಳಿ ಬಿದ್ದಿದ್ದವು.

ಭಾರತದಿಂದ ಸಹಾಯಹಸ್ತ

ಕರ್ನಾಟಕದ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಹಲವಾರು ಜನರು ಸಾವನ್ನಪ್ಪಿರುವ ವರದಿಗಳು ಬಂದಿವೆ. ಟರ್ಕಿಯ ಸಮೀಪವಿರುವ ದೇಶಗಳಲ್ಲಿಯೂ ಸಹ ಹಾನಿಗಳನ್ನು ಶಂಕಿಸಲಾಗಿದೆ. ಭಾರತದ 140 ಕೋಟಿ ಜನರ ಸಹಾನುಭೂತಿಯು ಎಲ್ಲಾ ಭೂಕಂಪ ಪೀಡಿತ ಜನರೊಂದಿಗೆ ಇದೆ. ಭೂಕಂಪ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದರು.

ಇದರಂತೆ ಭಾರತವು ಇದೀಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ರಕ್ಷಣಾ ತಂಡಗಳು , ಶ್ವಾನ ದಳ, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳೊಂದಿಗೆ ಟರ್ಕಿಗೆ ಕಳುಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ನೇತೃತ್ವದಲ್ಲಿ ಪ್ರಧಾನಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡ ಎರಡು ಎನ್‌ಡಿಆರ್‌ಎಫ್ ತಂಡಗಳು ಭೂಕಂಪ ಪೀಡಿತ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಟರ್ಕಿಗೆ ತೆರಳಲಿವೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

IPL_Entry_Point